ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಸಾಧನೆ: ಮುಖಂಡರ ಮೇಲೆ ವರಿಷ್ಠರ ಕೆಂಗಣ್ಣು

ಮತಗಟ್ಟೆ ಸಮೀಕ್ಷೆ: ಕಾಂಗ್ರೆಸ್‌ಗೆ ಆತಂಕ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಪರಿಗಣಿಸಲಾಗಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚಲಿದೆ ಎಂಬ ಮತಗಟ್ಟೆ ಸಮೀಕ್ಷೆ ಯಿಂದ ಕಂಗೆಟ್ಟಿರುವ ಪಕ್ಷ, ಕಳಪೆ ಸಾಧನೆ ತೋರಿದ ಮುಖಂಡರ ವಿರುದ್ಧ ಕೆಂಗಣ್ಣು ಬೀರಿದೆ.

ದೆಹಲಿ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳಲು ವಿಫಲವಾದರೆ, ಛತ್ತೀಸ್‌ಗಡ ಮತ್ತು ಮಧ್ಯ ಪ್ರದೇಶದಲ್ಲಿ ಸೋಲಿನ ಸರಪಳಿ ಮುಂದುವರೆಯಲಿದೆ. ಮಿಜೋರಾಂನಲ್ಲೂ ನಿರೀಕ್ಷಿತ ಸಾಧನೆ ಪಕ್ಷ ಮಾಡಲಾರದು ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ನಾಯಕರನ್ನು ಆಘಾತಕ್ಕೀಡು ಮಾಡಿದೆ.

‘ನಾವು ತಪ್ಪು ತಿದ್ದಿಕೊಳ್ಳುತ್ತೇವೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ರೊಬ್ಬರು ಹೇಳಿದ್ದಾರೆ. ಆದರೆ,  ನಿರ್ದಿ ಷ್ಟವಾಗಿ ಪಕ್ಷ ಸೋಲಿಗೆ ಕಾರಣರಾದ ಮುಖಂಡರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ಎಐಸಿಸಿ ಯಲ್ಲಿ ಬದಲಾವಣೆಯಾಗುವುದನ್ನು ಅವರು ತಳ್ಳಿ ಹಾಕಿಲ್ಲ.

ಚುನಾವಣೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ರಾಜ ಸ್ತಾನದ ಹಿರಿಯ ಮುಖಂಡರೊಬ್ಬರು ಪ್ರಚಾರ ಸಮಿತಿ  ವಿರುದ್ಧ ಬೊಟ್ಟು ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಪಿ. ಜೋಶಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು.

ಚುನಾವಣೋತ್ತರ ಪರಿಸ್ಥಿತಿ ಕುರಿತ ವಿಶ್ಲೇಷಣೆಗೆ ಎಐಸಿಸಿ, ರಾಜಸ್ತಾನಕ್ಕೆ ಪಕ್ಷದ ಮುಖಂಡರೊಬ್ಬರನ್ನು ಕಳು ಹಿಸಿದೆ. ಈ ಸಂಬಂಧ ವಿಸ್ತೃತ ವರದಿ ಸಲ್ಲಿಸುವಂತೆ ಕೇಂದ್ರ ಮುಖಂಡರು ಸೂಚಿಸಿದ್ದಾರೆ.

ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಸೋಲಿಗೆ ಪಕ್ಷದ ಒಂದು ನಿರ್ದಿಷ್ಟ ಗುಂಪು ಕಾರಣ ಎಂದು ದೆಹಲಿ ಯ ಕೆಲವು ಮುಖಂಡರು ಆರೋಪಿ ಸಿ ದ್ದಾರೆ.   ಅಲ್ಲದೇ ಮತಗಟ್ಟೆ ಸಮೀಕ್ಷೆ ಗಳು,  ದೆಹಲಿಯಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಕೆಲವು ಮುಖಂಡರು ತಮ್ಮ ಸ್ಥಾನಕ್ಕೆ ಈಗಾ ಗಲೇ ರಾಜೀನಾಮೆ ನೀಡಿದ್ದು, ಪಕ್ಷ ದಲ್ಲಿರುವ ತಮ್ಮ ವಿರೋಧಿಗಳ ಕ್ಷೇತ್ರ ದಲ್ಲಿ ನಡೆದ ಮತದಾನದ ಅಂಕಿ ಅಂಶ ಗಳನ್ನು ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.

‘ಮತಗಟ್ಟೆ ಸಮೀಕ್ಷೆಗಳು ವೈಜ್ಞಾನಿಕವಾಗಿ ನಡೆದಿಲ್ಲ. ಆದಕಾರಣ ಅವುಗಳು ಹೇಳಿರುವಂತೆ ಫಲಿತಾಂಶ ನಿರೀಕ್ಷಿಸುವುದು ಅಸಾಧ್ಯ’ ಎಂದು ಕಾಂಗ್ರೆಸ್‌ ವಕ್ತಾರ ಭಕ್ತಚರಣ್‌ ದಾಸ್‌ ಹೇಳಿದ್ದಾರೆ.

‘ಮತಗಟ್ಟೆ ಸಮೀಕ್ಷೆಯನ್ನು ಕಾಂಗ್ರೆಸ್‌ ಒಪ್ಪುವುದಿಲ್ಲ. ಆದ್ದರಿಂದಲೇ ಈ ಕುರಿತು ಸುದ್ದಿ ವಾಹಿನಿಗಳಲ್ಲಿ ನಡೆದ ಚರ್ಚೆಯಲ್ಲಿ ಪಕ್ಷದ ಯಾವೊಬ್ಬ ಮುಖಂಡರು ಭಾಗವಹಿಸಿರಲಿಲ್ಲ’ ಎಂದಿದ್ದಾರೆ.

ಮತಗಟ್ಟೆ ಸಮೀಕ್ಷೆಯಿಂದ ಬೀಗು ತ್ತಿರುವ ಬಿಜೆಪಿ, ‘ಮತಗಟ್ಟೆ ಸಮೀಕ್ಷೆ ಕಾಂಗ್ರೆಸ್‌ ಪಕ್ಷದ ಜಂಘಾಬಲವನ್ನೇ ಉಡುಗಿಸಿದೆ’ ಎಂದು ಬಿಜೆಪಿ ಹಿರಿಯ ಮುಖಂಡ  ಜೇಟ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT