ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವಳಕಾರಿ ಬೆಳವಣಿಗೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಮೃತಸರದ ಸ್ವರ್ಣಮಂದಿರ ವಿಮೋಚನೆಗೆ ನಡೆದ `ಆಪರೇಷನ್ ಬ್ಲೂಸ್ಟಾರ್~ (1984) ಸೇನಾ ಕಾರ್ಯಾಚರಣೆ ಮುಂದಾಳತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕುಲ್ದೀಪ್ ಸಿಂಗ್ ಬ್ರಾರ್ ಅವರ ಹತ್ಯೆಗೆ ಲಂಡನ್‌ನಲ್ಲಿ ನಡೆದ ಪ್ರಯತ್ನ ಖಂಡನೀಯ. ವಿದೇಶಗಳಲ್ಲಿ ಈಗಲೂ ಸಕ್ರಿಯವಾಗಿರುವ ಖಲಿಸ್ತಾನ್ ಪರ ಶಕ್ತಿಗಳು ಈ ದುಷ್ಕೃತ್ಯದ ಹಿಂದಿವೆ ಎಂದು ಬ್ರಾರ್ ಆರೋಪಿಸಿದ್ದಾರೆ. ಸಂತನ ಸೋಗು ಹಾಕಿಕೊಂಡು ಇಡೀ ಸ್ವರ್ಣಮಂದಿರ ಸಂಕೀರ್ಣವನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ ಉಗ್ರಗಾಮಿ ಮುಖಂಡ ಜರ್ನೈಲ್‌ಸಿಂಗ್ ಬಿಂದ್ರನ್‌ವಾಲೆಯ ಅಟ್ಟಹಾಸ ಅಡಗಿಸುವುದು ಮತ್ತು ಉಗ್ರರ ಉಪಟಳಕ್ಕೆ ಅಂತ್ಯ ಹಾಡುವುದು ಆ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ಅದಕ್ಕಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಾಕಷ್ಟು ಅಳೆದುತೂಗಿ ಸೇನಾ ಕಾರ್ಯಾಚರಣೆಗೆ ತೀರ್ಮಾನಿಸಿದ್ದರು. ಅದು ರಾಷ್ಟ್ರದ ಸಮಗ್ರತೆ, ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಎಂಬುದು ಮನದಟ್ಟಾಗಿದ್ದರಿಂದಲೇ ಆಗ ಸಾಂದರ್ಭಿಕ ಪ್ರತಿರೋಧ, ಭಾವೋದ್ರೇಕ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಒಟ್ಟಾರೆ ಸಿಖ್ ಸಮುದಾಯ ಆ ಸಂಗತಿಗೆ ಹೆಚ್ಚು ಮಹತ್ವ ನೀಡಲಿಲ್ಲ ಎಂಬುದು ನಂತರ ಪಂಜಾಬ್‌ನಲ್ಲಿ ನೆಲೆಸಿದ ಶಾಂತಿಯಿಂದ ವ್ಯಕ್ತವಾಗುತ್ತದೆ. ಆದರೆ ಇದನ್ನೂ ಸಹಿಸದ ಕೆಲ ಶಕ್ತಿಗಳು ಇಂದಿರಾ ಗಾಂಧಿಯವರನ್ನೇ ಹತ್ಯೆ ಮಾಡಿದವು. ಬ್ಲೂಸ್ಟಾರ್ ವೇಳೆ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎ.ಎಸ್. ವೈದ್ಯ ನಿವೃತ್ತಿಯ ನಂತರ ಪುಣೆಯಲ್ಲಿ ಸಿಖ್ ಮತಾಂಧರ ಗುಂಡಿಗೆ ಬಲಿಯಾದರು.  ಈ ಎಲ್ಲ ವಿದ್ಯಮಾನಗಳ ನಡುವೆಯೂ ಭಾರತದ ನೆಲದಲ್ಲಿ ಖಲಿಸ್ತಾನ್ ಪರ ಚಳವಳಿಗೆ ಅಂಥ ಬೆಂಬಲ ಸಿಕ್ಕಿಲ್ಲ. ಅದರಿಂದ ಹತಾಶಗೊಂಡ ಕೆಲವರು ವಿದೇಶಿ ನೆಲದಲ್ಲಿ ಅದರಲ್ಲೂ ವಿಶೇಷವಾಗಿ ಬ್ರಿಟನ್‌ನಲ್ಲಿ ಆಗಾಗ ತಮ್ಮ ಅಸ್ತಿತ್ವ ತೋರಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.

ಲಂಡನ್‌ನಲ್ಲಿ ಪ್ರತಿ ವರ್ಷ ಜೂನ್ 6ರಂದು ಬ್ಲೂಸ್ಟಾರ್ ಕರಾಳ ದಿನ ಆಚರಿಸಿ ಬ್ರಾರ್ ಹತ್ಯೆಗೆ ಪ್ರತಿಜ್ಞೆ ಮಾಡುತ್ತಾರೆ. 1985ರ ಜೂನ್ 23ರಂದು ಕೆನಡಾದ ಮಾಂಟ್ರಿಯಲ್‌ನಿಂದ ಲಂಡನ್ ಮಾರ್ಗವಾಗಿ ದೆಹಲಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನ `ಕನಿಷ್ಕ~ದಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ 329 ಅಮಾಯಕರ ಸಾವಿಗೆ ಕಾರಣರಾದವರು ಕೂಡ ಕೆನಡಾದಲ್ಲಿನ ಸಿಖ್ ಉಗ್ರಗಾಮಿ ತಂಡದವರು. ಇವರ ಕುಕೃತ್ಯಗಳ ಸಾಲಿಗೆ ಬ್ರಾರ್ ಮೇಲಿನ ಹಲ್ಲೆ ಹೊಸ ಸೇರ್ಪಡೆ. ಬೆರಳೆಣಿಕೆಯಷ್ಟು ದೇಶದ್ರೋಹಿ ಶಕ್ತಿಗಳು ಹೀಗೆ ವಿದೇಶದ ನೆಲದಿಂದ ಹಾವಳಿ ಮಾಡುತ್ತಿದ್ದರೂ ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಇಂಥ ಪ್ರಕರಣಗಳನ್ನು ತೀವ್ರವಾಗಿ ಪರಿಗಣಿಸಬೇಕು. ಮೊಳಕೆಯಲ್ಲೇ ಚಿವುಟಿ ಹಾಕಲು ವಿದೇಶಿ ಸರ್ಕಾರಗಳ ಮೇಲೆ ಒತ್ತಡ ತರಬೇಕು.ಬ್ರಾರ್ ಮೇಲಿನ ಹಲ್ಲೆ ಪ್ರಕರಣ `ಕ್ಷುಲ್ಲಕ~ ಎಂದು ತಳ್ಳಿಹಾಕುವಂಥದ್ದಲ್ಲ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅವರ ಭದ್ರತಾ ವ್ಯವಸ್ಥೆಯನ್ನು ತಗ್ಗಿಸಲಾಯಿತು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ಲಂಡನ್‌ನಲ್ಲಿ ಅವರ ಜೀವಕ್ಕೆ ಬೆದರಿಕೆ ಇದೆ ಎಂದು ಗೊತ್ತಿದ್ದೂ ಸೂಕ್ತ ಮುಂಜಾಗ್ರತೆ ವಹಿಸದೇ ಇರುವುದು ಸರ್ಕಾರದ ಲೋಪ ಎಂದೇ ಹೇಳಬೇಕಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT