ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸದಲ್ಲಿ ದಾಖಲೆಯ 39 ಡಿಗ್ರಿ ಉಷ್ಣಾಂಶ

ಮಲೆನಾಡಿನಲ್ಲಿ ಸುಡು ಬಿಸಿಲು: ನೀರಿಗಾಗಿ ಹಾಹಾಕಾರ
Last Updated 10 ಏಪ್ರಿಲ್ 2013, 8:24 IST
ಅಕ್ಷರ ಗಾತ್ರ

ಕಳಸ: ಹೋಬಳಿಯಾದ್ಯಂತ ಬಿಸಿಲಿನ ಬೇಗೆಯು ಜನ ಜಾನುವಾರುಗಳ ಜೊತೆಗೆ ವೃಕ್ಷ ಸಮೂಹಕ್ಕೂ ಆಘಾತ ತಂದಿದೆ. ಸೋಮವಾರ ಪಟ್ಟಣದ ಉಷ್ಣಾಂಶ 39 ಡಿಗ್ರಿಗೆ ತಲುಪಿದ್ದು ಹೋಬಳಿಯ ಇತಿಹಾಸದಲ್ಲೇ ಇದು ಅತ್ಯಧಿಕ ತಾಪಮಾನ ಎನ್ನಲಾಗುತ್ತಿದೆ.

`ನಮ್ಮ ಜೀವಮಾನದಲ್ಲಿ ಇಷ್ಟು ಬಿಸಿಲು ನೋಡಿರಲಿಲ್ಲ' ಎಂದು ಹಿರಿಯ ಜೀವಗಳು ಪರಿತ ಪಿಸಿದರೆ, `ಇದೆಲ್ಲ ಜಾಗತಿಕ ತಾಪಮಾನ ಏರಿಕೆಯ ಫಲ' ಎಂದು ಕಿರಿಯರು ನಿರ್ಲಿಪ್ತರಾಗಿ ಹೇಳು ತ್ತಿದ್ದಾರೆ.

`ಹಿಂದೆಲ್ಲಾ ತಾಪಮಾನ 35 ಡಿಗ್ರಿ ತಲುಪಿದರೆ ಮಳೆ ಗ್ಯಾರಂಟಿ ಅನ್ನಬಹುದಿತ್ತು. ಆದರೆ ಈಗ 38-39 ಡಿಗ್ರಿ ತಲುಪಿದರೂ ಮಳೆ ಇರಲಿ ಮೋಡವೇ ನಾಪತ್ತೆ' ಎಂದು ಹಳುವಳ್ಳಿಯ ಬೆಳೆಗಾರ ಹಾಸಂಗಿ ಶೈಲೇಶ್ ಹೇಳುತ್ತಾರೆ.

ತಂಪಾದ ಹವೆಗೆ ಖ್ಯಾತಿ ಪಡೆದಿರುವ ಮಲೆನಾಡಿನಲ್ಲಿ ಈಗ ಕರಾವಳಿಯ ಹವಾಮಾನ. ಕರಾವಳಿ ಸಂಸ್ಕ್ರತಿಯ ಅಪಾರ ಪ್ರಭಾವ ಇರುವ ಹೋಬಳಿಯಲ್ಲಿ ಕರಾವಳಿಯ ಬಿಸಿಲಿನ ಬಗೆ ಯದೇ ಬಿಸಿಯೂ ಅನುಭವಕ್ಕೆ ಬರುತ್ತಿರುವುದು ಅಚ್ಚರಿ.

`ಈ ಥರ ಬಿಸಿಲು ಸುಟ್ಟರೆ ತೋಟಗಳು, ಜಾನುವಾರಗಳಿಗೆ ಭಾರಿ ಕಷ್ಟ. ಕಾಫಿ ಮಿಡಿಗಳು ಕರಟಿ ಹೋದರೆ, ಅಡಿಕೆ ಹರಳೂ ಉದುರುತ್ತೆ' ಎಂದು ಕೃಷಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಫೆಬ್ರುವರಿ, ಮಾರ್ಚ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿದ್ದ ಮಳೆರಾಯ ಆನಂತರ ಸಂಪೂರ್ಣ ಮಾಯ. ಫಲವಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಈಗ ಬಿಸಿಲಿನ ಝಳ ಹೆಚ್ಚಾಗಿದೆ.  ಚಹಾ ತೋಟಗಳಲ್ಲೂ ವರ್ಷದ ಅತ್ಯಂತ ಕನಿಷ್ಠ ಪ್ರಮಾಣದ ಸೊಪ್ಪಿನ ಕಾಲ ಇದಾಗಿದೆ.

ಕುಡಿಯುವ ನೀರಿಗೂ ಹರಸಾಹಸ:  ಗುಡ್ಡದ ಒರತೆ ನೀರನ್ನು ಕುಡಿಯಲು ಬಳಸುವ ಬಹುತೇಕ ಕುಟುಂಬಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಶುರು ಆಗಿದೆ. `ಸದ್ಯದಲ್ಲೇ ಮಳೆ ಬರದಿದ್ದಲ್ಲಿ ಕುಡಿಯುವ ನೀರಿನ ಸೆಲೆಗಳು ಬತ್ತಲಿವೆ. ಆಮೇಲೆ ನಮ್ಮ ಗತಿ ಏನು?' ಒಳಬೈಲಿನ ಕೃಷಿಕ ಸತ್ಯನಾರಾಯಣ ಅವರ ಆತಂಕ ಎತ್ತರದ ಪ್ರದೇಶದಲ್ಲಿ ವಾಸ ಮಾಡುವ ಎಲ್ಲ ಜನರನ್ನು ಪ್ರತಿನಿಧಿಸುತ್ತದೆ.

ಭದ್ರಾ ನದಿಯ ಉಪನದಿಗಳೆಲ್ಲಾ ಅತ್ಯಂತ ಕ್ಷೀಣವಾಗಿ ಹರಿಯುತ್ತಿವೆ. ಅವುಗಳಿಗೆ ಚೈತನ್ಯ ತುಂಬುಬೇಕಿದ್ದ ಮಳೆಗಳು ಎಂದು ಬೀಳುವವೋ ಎಂಬ ಚಿಂತೆ ಎದುರಾಗಿದೆ.

ಅತ್ಯಂತ ಹೆಚ್ಚಿನ ತಾಪಮಾನದ ಕಾರಣಕ್ಕೆ ಮಧ್ಯಾಹ್ನದ ವೇಳೆಗೆ ಪೇಟೆಗೆ ಬರುತ್ತಿದ್ದ ಜನರ ಸಂಖ್ಯೆಯೂ ಕಡಿತವಾಗಿದೆ. ಪರಿಣಾಮವಾಗಿ ಅಂಗಡಿಗಳ ವ್ಯಾಪಾರವೂ ಕಡಿವೆುಯಾಗಿದೆ.

ಕಾಫಿ ,ಅಡಿಕೆ ಫಸಲನ್ನು ಉಳಿಸಿಕೊಳ್ಳಲು ಸ್ಪ್ರಿಂಕ್ಲರ್ ನೀರಾವರಿ ಮುಂದುವರೆಸುವ ಹರಸಾಹಸವನ್ನು ಬೆಳೆಗಾರರು ನಡೆಸಿದ್ದಾರೆ. ಆದರೆ ವಿದ್ಯುತ್‌ನ ಕಣ್ಣಾಮುಚ್ಚಾಲೆ ಬೆಳೆಗಾರರ ಪ್ರಯತ್ನಕ್ಕೆ ತಣ್ಣೀರು ಎರಚುತ್ತಲೇ ಇದೆ.

ಇನ್ನು ಜಾನುವಾರುಗಳ ಸ್ಥಿತಿಯಂತೂ ಕೆಟ್ಟ ದಾಗಿದೆ. ಮೇವಿಲ್ಲದೆ ತೋಟಗಳಿಗೆ ಲಗ್ಗೆ ಇಡುತ್ತಿರುವ ಜಾನುವಾರುಗಳಿಂದ ಕೃಷಿಕರಿಗೂ ತೊಂದರೆಗಳಾಗುತ್ತಿವೆ. ತೋಟಗಳಲ್ಲಿ ಮತ್ತು ಕಟ್ಟಡಗಳ ಕೆಲಸದಲ್ಲಿ ತೊಡಗುವ ಕಾರ್ಮಿಕರ ಕೆಲಸಕ್ಕೂ ಸುಡು ಬಿಸಿಲು ಅಡ್ಡಿಯಾಗಿ ನಷ್ಟ ಸಂಭವಿಸುತ್ತಿದೆ.

ಏರಿದ ಉಷ್ಣಾಂಶದ ಜೊತೆಗೆ ಆದ್ರತೆಯೂ ಹೆಚ್ಚಿರುವುದು ಹವಾಮಾನದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.
ಇದೇ ಬಗೆಯಲ್ಲಿ ಬಿಸಿಲು ಮತ್ತು ತಾಪಮಾನ ಹೆಚ್ಚಿದರೆ ಭವಿಷ್ಯದಲ್ಲಿ ಕೃಷಿ ಮುಂದುವರೆಸುವುದು ಹೇಗೆ ಎಂಬ ಚಿಂತೆ ಎಲ್ಲರಲ್ಲೂ ಆವರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT