ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ ಬಂಡೂರಿ: ಹೋರಾಟಕ್ಕೆ ನಿರ್ಧಾರ

Last Updated 22 ಜುಲೈ 2013, 6:41 IST
ಅಕ್ಷರ ಗಾತ್ರ

ನವಲಗುಂದ: ಉತ್ತರ ಕರ್ನಾಟಕ ಜನತೆಯ ಪ್ರಮುಖ ಬೇಡಿಕೆಯಾದ ಕಳಸಾ ಬಂಡೂರಿ ನಾಲಾ ಜೋಡಣೆಗೆ ಪಕ್ಷಾತೀತವಾಗಿ ಹೋರಾಟ ಮಾಡುವುದಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವಿವಿಧ ರೈತ ಸಂಘಟನೆಗಳು ಭಾನುವಾರ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ನಿರ್ಧಾರ ತೆಗೆದುಕೊಂಡರು.

ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ರೈತ ಸಂಘಟನೆಗಳು, ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲಾ ಜೋಡಣೆ, ರೈತರ ಸಂಪೂರ್ಣ ಸಾಲ ಮನ್ನಾ, ಬೆಳೆ ವಿಮೆ ಬಿಡುಗಡೆಗೆ ಒತ್ತಾಯ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ತಹಶೀಲ್ದಾರ್ ಮೂಲಕ ಶಾಸಕ ಎನ್. ಎಚ್. ಕೋನರಡ್ಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೋನರಡ್ಡಿ, ಈ ಭಾಗದ ರೈತರ ಜೀವನಾಡಿಯಾದ ಕಳಸಾ ಬಂಡೂರಿ ನಾಲಾ ಜೋಡಣೆಗಿರುವ ಸಮಸ್ಯೆಯನ್ನು ನಿವಾರಿಸಬೇಕಾಗಿದೆ. ಈ ವಿಷಯವಾಗಿ ಈಗಾಗಲೇ ಟ್ರಿಬ್ಯುನಲ್ ರಚಿಸಲಾಗಿದೆ. ಟ್ರಿಬ್ಯುನಲ್ ಮುಂದೆ ವಾದಿಸಿ ರಾಜ್ಯ ಸರ್ಕಾರ, ತಮ್ಮ ಪಾಲಿಗೆ ದೊರಬೇಕಾದ 54 ಟಿ.ಎಂ.ಸಿ ನೀರಿನಲ್ಲಿ  ಕುಡಿಯುವ ನೀರಿನ ಯೋಜನೆಗಾಗಿ 7.56 ಟಿ.ಎಂ.ಸಿ ನೀರನ್ನು ಬಿಡುಗಡೆ ಮಾಡಲು ಮಧ್ಯಂತರ ಆದೇಶ ಪಡೆಯಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ಸಮಸ್ಯೆಗೆ ನೀಡುವ ಪ್ರಾಮುಖ್ಯತೆಯನ್ನು ಕಳಸಾ ಬಂಡೂರಿ ನಾಲಾ ಜೋಡಣೆಗೂ ನೀಡಬೇಕು. ಕಳೆದ 5 ವರ್ಷದಿಂದ ಈ ಭಾಗದಲ್ಲಿ ಬರಗಾಲ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ್ದರೂ ಬೆಳೆ ವಿಮೆ ಬಾರದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಕೂಡಲೇ ಬೆಳೆವಿಮೆ ಬಿಡುಗಡೆ ಮಾಡಬೇಕು. ಮಳೆ ಬಾರದೆ ಒಪ್ಪೊತ್ತಿನ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿರುವುದರಿಂದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದಿರುವ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಎರಡು ತಿಂಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ವಕೀಲರಾದ ಬಿ.ಎಚ್.ದೇವರಡ್ಡಿ, ಬಿ.ವಿ. ಸೋಮಾಪುರ, ಬಿ.ಬಿ.ಗಂಗಾಧರಮಠ, ರೈತಪರ ಹೋರಾಟಗಾರರಾದ ವಿರೇಶ ಸೊಬರದಮಠ, ಶಂಕರಪ್ಪ ಅಂಬಲಿ, ಗಂಗಾಧರ ಪಾಟೀಲ ಕುಲಕರ್ಣಿ ಇತರರು ಹಾಜರಿದ್ದರು.

ಸದನದಲ್ಲಿ ಹೋರಾಟ: ಶಾಸಕ ಪುಟ್ಟಣ್ಣಯ್ಯ
ನವಲಗುಂದ: ಕಳೆದ 33 ವರ್ಷಗಳಿಂದ ರೈತರು ಜ್ವಲಂತ ಸಮಸ್ಯೆಗಳಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಆದರೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತಪರವಾದ ನೀತಿ ಜಾರಿಗೆ ತರದೆ ಇರುವುದರಿಂದ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ರೈತರ ಭದ್ರತೆಗಾಗಿ ಹೊಸ ನೀತಿ ಜಾರಿಗೆ ತರುವುದು ಅವಶ್ಯವಾಗಿದೆ ಎಂದು ಶಾಸಕ ಪುಟ್ಟಣ್ಣಯ್ಯ ಒತ್ತಾಯಿಸಿದರು.

ಅವರು ಭಾನುವಾರ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕೈಗಾರಿಕೆಗಳು ನಷ್ಟ ಅನುಭವಿಸಿದರೆ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತಾರೆ. ಆದರೆ ದೇಶದ ಬೆನ್ನೆಲುಬಾಗಿರುವ ರೈತರು ಬೆಳೆದ ಬೆಳೆ ನಾಶವಾದರೆ, ಬರಗಾಲ ಬಿದ್ದರೆ ಸಾಲ ಮನ್ನಾ ಮಾಡುವುದಿಲ್ಲ.

ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿ ತಾರತಮ್ಯ ಮಾಡಲಾಗುತ್ತಿದೆ. ದೇಶದಲ್ಲಿ ಯಾವುದೇ ಉತ್ಪನ್ನಗಳಿಗೆ ಉತ್ಪಾದಕರೇ ದರ ನಿಗದಿಪಡಿಸುತ್ತಾರೆ. ಈ ಭಾಗದ ರೈತರಿಗೆ ಕಳಸಾ ಬಂಡೂರಿ ನಾಲಾ ಜೋಡಣೆ ಅವಶ್ಯವಾಗಿದ್ದು ಈ ಕುರಿತು ಸದನದಲ್ಲಿ ಹೋರಾಟ ಮಾಡುತ್ತೇನೆ ಎಂದು ಪುಟ್ಟಣ್ಣಯ್ಯ ಭರವಸೆ ನೀಡಿದರು.

ಕೋಡಿಹಳ್ಳಿ ಭಾಷಣಕ್ಕೆ ರೈತರ ಅಡ್ಡಿ
ನವಲಗುಂದ: ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಭಾಷಣಕ್ಕೆ ರೈತರು ಅಡ್ಡಿಪಡಿಸಿದ ಘಟನೆ  ಜರುಗಿತು.

`ಕೇವಲ ರೈತ ಹುತಾತ್ಮ ದಿನಾಚರಣೆಯಂದು ಆಗಮಿಸಿ ಉದ್ದುದ್ದ ಭಾಷಣ ಮಾಡುತ್ತೀರಿ. ಆದರೆ ಕಳಸಾ ಬಂಡೂರಿ ನಾಲಾ ಜೋಡಣೆ ಹೋರಾಟಕ್ಕೆ ನೀವು ಸ್ಪಂದಿಸುತ್ತಿಲ್ಲ. ಕಾವೇರಿ ನೀರಿಗಾಗಿ ಹೋರಾಡುವಂತೆ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕಳಸಾ ಬಂಡೂರಿಗೇಕೆ ಹೋರಾಡದೆ ರೈತರಲ್ಲಿಯೇ ತಾರತಮ್ಯ ಮಾಡುತ್ತೀರಿ. ನೀವು ವೀರಗಲ್ಲಿಗೆ ಮಾಲಾರ್ಪಣೆ ಮಾಡುವುದಾಗಲಿ, ಭಾಷಣ ಮಾಡುವುದಾಗಲಿ ಬೇಡವೇ ಬೇಡ' ಎಂದು ರೈತ ಮುಖಂಡ ಎಚ್.ಕೆ. ಲಕ್ಕಣ್ಣವರ ತರಾಟೆಗೆ ತೆಗೆದುಕೊಂಡರು.

ರೈತರನ್ನು ಸಮಾಧಾನ ಪಡಿಸಿದ ಕೋಡಿಹಳ್ಳಿ ಚಂದ್ರಶೇಖರ, `ನಾನು ಪ್ರಾದೇಶಿಕ ತಾರತಮ್ಯ ಮಾಡಿಲ್ಲ. ರಾಜ್ಯದ ಎಲ್ಲ ರೈತರ ಹಿತಕ್ಕಾಗಿ ಹೋರಾಡುತ್ತಲೆ ಬಂದಿದ್ದೇನೆ' ಎಂದರು. ಆದರೂ ರೈತರು ಮೈಕ್ ಕಿತ್ತೆಸೆಯಲು ಮುಂದಾದಾಗ ಪಿಎಸ್‌ಐ ಎನ್.ಸಿ.ಕಾಡದೇವರ ಮಧ್ಯಪ್ರವೇಶಿಸಿ ರೈತರನ್ನು ಸಮಾಧಾನ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT