ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ–ಬಂಡೂರಿ ನಾಲಾ ಯೋಜನೆ ಅಧ್ಯಯನ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾದಾಯಿ ನದಿ ತಿರುವು ಯೋಜನೆಯ ವಾಸ್ತವ ಸಂಗತಿ ಕುರಿತು ಅಧ್ಯಯನ ನಡೆಸಲು ಮಹಾದಾಯಿ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯ­ಮೂರ್ತಿ ಜೆ.ಎಂ. ಪಾಂಚಾಲ್‌ ನೇತೃ­ತ್ವದ ತಂಡ ಖಾನಾಪುರ ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ ಕಳಸಾ ನಾಲಾ ಜೋಡಣೆ ಯೋಜನೆಯ ಸ್ಥಳವನ್ನು ಬುಧವಾರ ಪರಿಶೀಲಿಸಿತು.

ನ್ಯಾಯಮಂಡಳಿ ಸದಸ್ಯರಾದ ನ್ಯಾ. ವಿನಯ್‌ ಮಿತ್ತಲ್‌, ನ್ಯಾ. ಪಿ.ಎಸ್. ನಾರಾಯಣ ಮತ್ತು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ತಾಂತ್ರಿಕ ಮತ್ತು ಕಾನೂನು ತಜ್ಞರು ಸೇರಿದಂತೆ 55 ಜನರನ್ನು ಒಳಗೊಂಡ ತಂಡ ಹಳತಾರ ನಾಲಾ, ಉದ್ದೇಶಿತ ಚೆಕ್‌ಡ್ಯಾಂ ಪ್ರದೇಶ, ಕಳಸಾ– ಸುರ್ಲಾ ನಾಲಾ ಸಂಗಮ ಪ್ರದೇಶ, ಕಳಸಾ ಕಾಲುವೆ ನಿರ್ಮಾಣ ಕಾಮಗಾರಿ ನಡೆದಿರುವ ಜಾಗವನ್ನು  ಪರಿಶೀಲಿಸಿತು.

ಉತ್ತರ ಕರ್ನಾಟಕದ ಹಲವು ನಗರ ಹಾಗೂ ಪಟ್ಟಣಗಳ ಜನರ ಕುಡಿಯುವ ನೀರಿನ ಕೊರತೆ ನೀಗಿಸಲು ಕೈಗೊಂ-­ಡಿ­ರುವ ಈ ಯೋಜನೆಯ ಅಗತ್ಯವನ್ನು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನ್ಯಾಯಮಂಡ­ಳಿಗೆ ಮನವರಿಕೆ ಮಾಡಿಕೊಟ್ಟರು.

ಯೋಜನೆ ಹಸಿರು ನಿಶಾನೆ ಸಿಗುವ ಮುನ್ನವೇ ಕಾಮಗಾರಿ ಆರಂಭಿಸಿರುವ ಬಗ್ಗೆ ನ್ಯಾಯಮಂಡಳಿ ಅಧ್ಯಕ್ಷರು ಅಧಿ­ಕಾ­ರಿಗಳನ್ನು ಪ್ರಶ್ನಿಸಿದರು. ನಾಲೆಗಳ ನೀರನ್ನು ತಿರುಗಿಸಿದರೆ ಗೋವಾಕ್ಕೆ ನೀರಿನ ಕೊರತೆ ಆಗುವುದಿಲ್ಲವೇ ಎಂದು ಅವರು ಕೇಳಿದರು. ನ್ಯಾಯಮಂಡಳಿ ಮುಂದಿನ ಆದೇಶದವರೆಗೂ ನೀರನ್ನು ತಿರುಗಿಸು­ವು­ದಿಲ್ಲ ಎಂದು ರಾಜ್ಯ ಸರ್ಕಾರ ಪ್ರಮಾಣ­ಪತ್ರದಲ್ಲಿ ಭರವಸೆ ನೀಡಿರುವಂತೆ ನಡೆ­ದುಕೊಳ್ಳಬೇಕು ಎಂದೂ ಸೂಚಿಸಿದರು.

ರಾಜ್ಯದ ಅಡ್ವೊಕೇಟ್‌ ಜನರಲ್‌ ರವಿವರ್ಮಾ ಕುಮಾರ್‌, ‘ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಹರಿಯುವ ನೀರನ್ನು  ಜನರಿಗೆ ಕುಡಿಯಲು ಪೂರೈಕೆ ಮಾಡುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಂಡಿದೆ. ರಾಜ್ಯದ ಒಳಗೆ  ಕೈಗೆತ್ತಿ­ಕೊಳ್ಳುವ ಯೋಜನೆಗೆ ಪರವಾನಗಿ  ಪಡೆ­ಯುವ ಅಗತ್ಯ ಇಲ್ಲ. ಮಹಾದಾಯಿ ನದಿಯ ಸುಮಾರು 200 ಟಿಎಂಸಿ ಅಡಿ ನೀರು ಸಮುದ್ರ  ಸೇರುತ್ತಿದೆ. ಗೋವಾ ಕೇವಲ 3 ಟಿಎಂಸಿ ಬಳಸಿ­ಕೊಳ್ಳುತ್ತಿದೆ. ರಾಜ್ಯವು ಕೇವಲ 7.5 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲು ಉದ್ದೇಶಿಸಿದೆ. ಗೋವಾ ರಾಜ್ಯದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿ­ರುವ ಉತ್ತರ ಕರ್ನಾಟಕ ಪ್ರದೇಶ ಜನರಿಗೆ ಕುಡಿಯುವ ನೀರು  ಪೂರೈಕೆಗೆ ಈ ಯೋಜನೆಯ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು.

‘ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಕೇಂದ್ರ ಸರ್ಕಾರವು ಪ್ರಾಥ­ಮಿಕ ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಪ್ರಮಾಣಪತ್ರದಲ್ಲಿ ತಿಳಿಸಿರುವಂತೆಯೇ ನ್ಯಾಯಮಂಡಳಿಯ ತೀರ್ಪಿನ ಬಳಿಕವೇ ಈ ನಾಲಾಗಳ ನೀರನ್ನು ತಿರುಗಿಸ­ಲಾಗುವುದು’ ಎಂದು ಅವರು ಭರವಸೆ ನೀಡಿದರು.

ಅದ್ದೂರಿ ಸ್ವಾಗತ: ನ್ಯಾಯಮಂಡಳಿ­ಗೋವಾದಲ್ಲಿ ಮಹಾದಾಯಿ ನದಿ ಪಾತ್ರದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತ್ತು. ಬುಧವಾರ ಬೆಳಿಗ್ಗೆ ಗೋವಾದಿಂದ ಬಂದ ಈ ತಂಡವನ್ನು ರಾಜ್ಯದ ಗಡಿಯ ಚೋರ್ಲಾ ಘಾಟ್‌ನಲ್ಲಿ ಜಾನಪದ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಅಧ್ಯಕ್ಷರಿಗೆ ಮೈಸೂರು ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿ ಜಿಲ್ಲಾಡಳಿತದ ಪರವಾಗಿ ಆತ್ಮೀಯ­ವಾಗಿ ಬರಮಾಡಿ­ಕೊಂಡರು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಹಾಗೂ ಜಲ­ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ತಂಡವು 19ರಂದು ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿ, 24 ರವರೆಗೂ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT