ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಭಾರತ ಹೊಳೆಯುವುದೇ?

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಪರ್ತ್: ಬ್ಯಾಟಿಂಗ್ ಕಳೆಗುಂದಿ ಕಾಡಿದ ಕಷ್ಟಗಳು ಸಾಕಷ್ಟು. ಎರಡು ಟೆಸ್ಟ್‌ಗಳ ನಾಲ್ಕು ಇನಿಂಗ್ಸ್‌ಗಳನ್ನು ನೆನೆದರೆ ಮುದುಡಿ ಹೋಗುತ್ತದೆ ಭಾರತ ತಂಡದ ಬೆಂಬಲಿಗರ ಮನ. ಸರಣಿಯಲ್ಲಿ 0-2ರ ಹಿನ್ನಡೆ ಸಹನೀಯವಲ್ಲ. ಆದರೂ ಇನ್ನೆರಡು ಪಂದ್ಯಗಳಲ್ಲಿ ವಿಜಯ ಸಾಧ್ಯವಾಗಬಹುದಲ್ಲಾ ಎನ್ನುವ ಆಸೆ!

ನಾಯಕ ಮಹೇಂದ್ರ ಸಿಂಗ್ ದೋನಿಗೆ ಕೂಡ ಇಂಥದೇ ಕನಸು. ಅದು ನಿಜವಾಗಲೆಂದು ಹಾರೈಸುವ ಅಭಿಮಾನಿ ಮನಗಳೂ ಕೋಟಿ ಕೋಟಿ. ಶುಕ್ರವಾರ ಆರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಬೇಕು. ಅದೇ ಆಶಯ. ಹಾಗೆ  ಆದಲ್ಲಿ ಮತ್ತೆ `ಮಹಿ~ ಬಳಗದ ಮೊಗದಲ್ಲಿ ನಗೆನ ನವಿಲಿನ ನರ್ತನ.

ಇಲ್ಲಿಯವರೆಗೆ ಭಾರತದ್ದು ಆಸ್ಟ್ರೇಲಿಯಾಕ್ಕೆ ಸರಿಸಾಟಿಯಿಲ್ಲದ ಆಟ. ಬ್ಯಾಟಿಂಗ್ ಪಾಠವನ್ನೇ ಕಲಿತಿಲ್ಲ ಎನ್ನುವಂತೆ ಕ್ರೀಸ್‌ನಲ್ಲಿ ಪರದಾಟ. ಅದೇ ಸಂಕಷ್ಟಕ್ಕೆ ಕಾರಣ. ಬಲವುಳ್ಳ ಬ್ಯಾಟಿಂಗ್ ಹೂರಣವಿದ್ದರೆ ಪರ್ತ್‌ನಲ್ಲಿ ಕಟ್ಟಬಹುದು ವಿಜಯದ ತೋರಣ. ಆದರೆ ಅದೇ ಕಷ್ಟ. ಏಕೆಂದರೆ ಇಲ್ಲಿನ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಗುಣವು ಭಾರತದವರಿಗೆ ಅಚ್ಚುಮೆಚ್ಚಿನದಲ್ಲ. ಕೆಚ್ಚಿನಿಂದ ಬ್ಯಾಟಿಂಗ್ ಮಾಡುವುದು ದೋನಿ ಪಡೆಗೆ ನೀರು ಕುಡಿದಷ್ಟು ಸುಲಭವಂತೂ ಖಂಡಿತ ಅಲ್ಲ.

ಆದರೂ 2008ರಲ್ಲಿನ ಅದ್ಭುತ ಮರುಕಳಿಸಿದರೆ! ಹೀಗೆಂದು ಯೋಚಿಸುವುದಕ್ಕಂತೂ ಅವಕಾಶವಿದೆ. ಕಳೆದ ಬಾರಿ ಪರ್ತ್‌ಗೆ ಆಡಲು ಬರುವ ಹೊತ್ತಿಗೆ ಹರಭಜನ್ ಸಿಂಗ್ ಹಾಗೂ ಆ್ಯಂಡ್ರ್ಯೂ ಸೈಮಂಡ್ಸ್ ನಡುವಣ `ಮಂಕಿ~ ವಿವಾದ ಬಿರುಗಾಳಿ ಎಬ್ಬಿಸಿತ್ತು. ಅದರ ನಡುವೆಯೇ 72 ರನ್‌ಗಳ ಅಂತರದಿಂದ ಇದೇ ಅಂಗಳದಲ್ಲಿ ವಿಜಯ ಸಾಧಿಸಿತ್ತು ಭಾರತ. ಮತ್ತೊಮ್ಮೆ ಹಾಗೆ ಆಸ್ಟ್ರೇಲಿಯಾವನ್ನು ಮಣಿಸಲು ಸಾಧ್ಯವಾದರೆ ನಾಲ್ಕು ಪಂದ್ಯಗಳ ಸರಣಿಯನ್ನು `ಡ್ರಾ~ ಮಾಡಿಕೊಳ್ಳುವ ಕನಸು ಚಿಗುರೊಡೆಯುತ್ತದೆ.

ಅದಕ್ಕೆ ಅವಕಾಶ ಸಿಗದಂತೆ ಪ್ರವಾಸಿಗಳನ್ನು ನಿಯಂತ್ರಿಸುವ ಛಲ ಆತಿಥೇಯರಿಗಿದೆ. ಮೈಕಲ್ ಕ್ಲಾರ್ಕ್ ನಾಯಕತ್ವದ ಪಡೆಯು ದೊಡ್ಡ ಮೊತ್ತವನ್ನು ಪೇರಿಸಿಡುವ ಜೊತೆಗೆ ಬಲವುಳ್ಳ ಬೌಲಿಂಗ್‌ನಿಂದ ದೋನಿ ಬಳಗವನ್ನು ಕಾಡುವ ಸ್ಥಿತಿಯಲ್ಲಿಯೂ ಇದೆ. ಭಾರತ ತಂಡದವರು ಒಟ್ಟಾಗಿ ಸೇರಿಸಿರುವಷ್ಟು ಮೊತ್ತವನ್ನು ಆಸ್ಟ್ರೇಲಿಯಾದ ಒಬ್ಬ ಬ್ಯಾಟ್ಸ್‌ಮನ್ ಗಳಿಸಿರುವುದನ್ನೂ ಮರೆಯುವಂತಿಲ್ಲ. ಆದ್ದರಿಂದ ಬ್ಯಾಟಿಂಗ್ ಸುಧಾರಣೆಯ ಕಡೆಗೆ ಗಮನ ಅಗತ್ಯ. ಜೊತೆಗೆ ಬೌಲರ್‌ಗಳ ಮೇಲೆಯೂ ದೊಡ್ಡ ಹೊರೆಯಿದೆ. ಕಾಂಗರೂಗಳ ಕಾಲುಕಟ್ಟಿಹಾಕಿ ನೆಗೆಯದಂತೆ ತಡೆದರೆ ಗೆಲುವಿನ ಕಡೆಗೆ ನಡೆಯುವುದು ಸಾಧ್ಯ.

ಕ್ಲಾರ್ಕ್ (361), ಮೈಕ್ ಹಸ್ಸಿ (239) ಹಾಗೂ ರಿಕಿ ಪಾಂಟಿಂಗ್ (256) ಅವರು ಇನಿಂಗ್ಸ್ ಕಟ್ಟುವ ದಿಟ್ಟತನ ತೋರಿದ್ದಾರೆ. ದೊಡ್ಡ ಮೊತ್ತವನ್ನು ಕಲೆಹಾಕುವ ಇಂಥ ಕ್ರಿಕೆಟಿಗರು ವೇಗದ ಅಂಗಳದಲ್ಲಿ ಎದುರಾಳಿ ಬೌಲರ್‌ಗಳಿಗೆ ತಲೆಬಾಗುವುದಿಲ್ಲ. ಆದರೆ ಅದೇ ಮಟ್ಟದಲ್ಲಿ ಇಂಥ ಪಿಚ್‌ನಲ್ಲಿ ಕೆಚ್ಚಿನಿಂದ ಆಡುವ ವಿಶ್ವಾಸವನ್ನು ಭಾರತ ಕಳೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮತ್ತೆ ಹಾಗೆ ಆಗಬಾರದು ಎನ್ನುವುದೇ ಆಶಯ.

ಭಾರತದವರು ಬೆನ್ ಹಿಲ್ಫೆನ್ಹಾಸ್ ಹಾಗೂ ಪೀಟರ್ ಸಿಡ್ಲ್ ಉತ್ಸಾಹ ತಗ್ಗಿಸುವಂಥ ಆಟವಾಡಿದರೆ ಸರಣಿಯಲ್ಲಿ ರೋಚಕ ತಿರುವು ಖಂಡಿತ. ತಿರುಗಿಬಿದ್ದು ಬಾಕಿ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿ ಸಮವಾಗಿಸಿಕೊಂಡರೆ ಅದೊಂದು ಅದ್ಭುತ. ಅದಕ್ಕೆ ಪರ್ತ್ ಪಂದ್ಯವೊಂದು ಅವಕಾಶ. ಇಲ್ಲಿ ಜಯ ಕೈತಪ್ಪಿದರೆ ಸರಣಿಯಲ್ಲಿ ಪುಟಿದೇಳುವ ಕನಸೂ ನುಚ್ಚುನೂರಾಗುತ್ತದೆ. ಕಾಂಗರೂಗಳ ಎದುರು ಹಿಂದೆ ಇದೇ ಅಂಗಳದಲ್ಲಿ ಪಡೆದ ಯಶಸ್ಸು ಮತ್ತೊಮ್ಮೆ ಸಾಧ್ಯವೆಂದು ಯೋಚಿಸುತ್ತಿದ್ದಾರೆ ದೋನಿ.

ಇಂಥ ಸಕಾರಾತ್ಮಕ ಯೋಚನೆ ಹೊಂದಿರುವ ಭಾರತವನ್ನು ಇಲ್ಲಿನ ಮಾಧ್ಯಮಗಳು ಮಾತ್ರ ಕಾಡುತ್ತಿವೆ. ತಂಡದೊಳಗೆ `ಬಿರುಕು~ ಎಂದು ಗುಲ್ಲೆಬ್ಬಿಸಿವೆ. ಅದಾವುದಕ್ಕೂ ತಲೆ ಕೆಡಿಸಿಕೊಳ್ಳದ `ಮಹಿ~ ಎಂದಿನಂತೆ ತಣ್ಣಗಿದ್ದಾರೆ. ಸರಣಿಯಲ್ಲಿ ಹಿಂದಿರುವುದರಿಂದ ಒತ್ತಡ ಇದ್ದರೂ ಅದನ್ನು ಹೊರಗೆ ತೋರಿಸಿಕೊಳ್ಳದ ಅವರು ಮುಂದಿರುವ ಪಂದ್ಯದ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ. 

ಇನ್ನೊಂದೆಡೆ ಆಸ್ಟ್ರೇಲಿಯಾ ಮೂರನೇ ಪಂದ್ಯವನ್ನೂ ಗೆದ್ದು ಸರಣಿ ವಿಜಯದ ಸಂಭ್ರಮ ಪಡೆಯುವ ಕಡೆಗೆ ಚಿತ್ತ ಹರಿಸಿದೆ. ಜೇಮ್ಸ ಪ್ಯಾಟಿನ್ಸನ್ ನೆರವು ಈ ಪಂದ್ಯದಲ್ಲಿ ತಂಡಕ್ಕೆ ಸಿಗುತ್ತಿಲ್ಲ ಎನ್ನುವ ಯೋಚನೆಯೂ ಅದಕ್ಕೆ ಕಾಡುತ್ತಿಲ್ಲ. ಭಾರತದವರು ಚಡಪಡಿಸುವಂತೆ ಮಾಡಿದ್ದ ಈ ಬೌಲರ್ ಇಲ್ಲದಿದ್ದರೂ ತಮ್ಮ ಬೌಲಿಂಗ್ ಬಲವಾಗಿಯೇ ಇರುತ್ತದೆನ್ನುವ ವಿಶ್ವಾಸವನ್ನು ಕ್ಲಾರ್ಕ್ ವ್ಯಕ್ತಪಡಿಸಿದ್ದಾರೆ.

ತಂಡಗಳು ಇಂತಿವೆ
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಇಶಾಂತ್ ಶರ್ಮ, ಉಮೇಶ್ ಯಾದವ್, ಅಜಿಂಕ್ಯಾ ರಹಾನೆ, ಅಭಿಮನ್ಯು ಮಿಥುನ್, ಪ್ರಗ್ಯಾನ್ ಓಜಾ, ವೃದ್ಧಿಮಾನ್ ಷಾ ಮತ್ತು ರೋಹಿತ್ ಶರ್ಮ.

ಆಸ್ಟ್ರೇಲಿಯಾ:
ಮೈಕಲ್ ಕ್ಲಾರ್ಕ್ (ನಾಯಕ), ಡೇವಿಡ್ ವಾರ್ನರ್, ಎಡ್ ಕೋವನ್, ಶಾನ್ ಮಾರ್ಷ್, ರಿಕಿ    ಪಾಂಟಿಂಗ್, ಮೈಕಲ್ ಹಸ್ಸಿ, ಬ್ರಾಡ್ ಹಡ್ಡಿನ್, ಪೀಟರ್ ಸಿಡ್ಲ್, ಬೆನ್ ಹಿಲ್ಫೆನ್ಹಾಸ್, ರ‌್ಯಾನ್ ಹ್ಯಾರಿಸ್, ಮಿಷೆಲ್ ಸ್ಟಾರ್ಕ್ ಮತ್ತು ನಥಾನ್ ಲಿಯಾನ್.

ಅಂಪೈರ್‌ಗಳು: ಅಲೀಮ್ ದಾರ್ (ಪಾಕಿಸ್ತಾನ) ಮತ್ತು ಕುಮಾರ ಧರ್ಮಸೇನ (ಶ್ರೀಲಂಕಾ); ಮೂರನೇ ಅಂಪೈರ್: ಪಾಲ್ ರೀಫೆಲ್ (ಆಸ್ಟ್ರೇಲಿಯಾ).

ಮ್ಯಾಚ್ ರೆಫರಿ: ರಂಜನ್ ಮದುಗಲೆ (ಶ್ರೀಲಂಕಾ).
ಪಂದ್ಯ ಆರಂಭ: (ಭಾರತೀಯ ಕಾಲಮಾನ) ಬೆಳಿಗ್ಗೆ 8.00ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT