ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದುತ್ತಿರುವ ಬಂಬೂ ಬಜಾರ್!

Last Updated 4 ಜೂನ್ 2011, 6:40 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯ ಬಂಬೂ ಬಜಾರ್‌ನಲ್ಲಿ ನೀಲಗಿರಿ ತೊಲೆಗಳ ವ್ಯಾಪಾರವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ 120ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ರಾಜ್ಯದ ನೀಲಗಿರಿ ತೊಲೆಗಳ ವ್ಯಾಪಾರ ಮಾರುಕಟ್ಟೆಗಳಾಗಿರುವ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ರಾಯಚೂರು, ಸಿಂಧನೂರು, ರಾಣೆಬೆನ್ನೂರು ಕೇಂದ್ರಗಳ ಪೈಕಿ ವಾಣಿಜ್ಯ ನಗರಿ ದಾವಣಗೆರೆ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿ ಹೊರರಾಜ್ಯಗಳಲ್ಲೂ ಗಮನ ಸೆಳೆದಿದೆ.

ನಗರದಲ್ಲಿ ನೀಲಗಿರಿ ತೊಲೆಗಳ ಮಾರಾಟ ಮಾಡುವ 70ಕ್ಕೂ ಹೆಚ್ಚು ಬೃಹತ್ ಮಳಿಗೆಗಳಿದ್ದು, ತಲೆತಲಾಂತರದಿಂದ ಬಿದಿರಿನಿಂದ ಮಾಡುವ ಕೈಕಸುಬಿನ ಜತೆಗೆ ನೀಲಗಿರಿ ತೊಲೆಗಳ ಮಾರಾಟವನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡು ಬಂದಿರುವ ಮೇದಾರ ಸಮುದಾಯದ 50ಕ್ಕೂ ಹೆಚ್ಚು ಕುಟುಂಬಗಳು ಬಂಬೂ ಬಜಾರ್‌ನಲ್ಲಿ ನೆಲೆಸಿವೆ.

ಈ ಕುಟುಂಬಗಳು 100ಕ್ಕೂ ಹೆಚ್ಚು ತೊಲೆಗಳ ಮಾರಾಟದ ಸಣ್ಣ ಮಳಿಗೆಗಳನ್ನು ಹೊಂದಿದ್ದು, ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿವೆ. ಮಂಡ್ಯ, ಶಿವಮೊಗ್ಗ, ಸಾಗರ, ಸೊರಬ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ ಕಡೆಗಳಿಂದ ನಗರದ ಮಾರುಕಟ್ಟೆಗೆ ನೀಲಗಿರಿ ತೊಲೆಗಳ ಸರಬರಾಜು ಮಾಡಲಾಗುತ್ತಿದೆ. ನಿತ್ಯ 10 ಲಾರಿ ಲೋಡ್‌ನಷ್ಟು ವಹಿವಾಟು ನಡೆಯುತ್ತದೆ. ಹಾಗಾಗಿ, ನಗರದಲ್ಲಿ ದಿನವೊಂದಕ್ಕೆ ್ಙ 25 ಲಕ್ಷಕ್ಕೂ ಹೆಚ್ಚು ವ್ಯಾಪಾರ ನಡೆಯುತ್ತದೆ. ಆದರೆ, ನೀಲಗಿರಿ ನಿಷೇಧದಿಂದಾಗಿ ಈ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.

ನೀಲಗಿರಿ ನಿಷೇಧ ಕೇವಲ ವ್ಯಾಪಾರಿಗಳ ಬದುಕಿನ ಮೇಲಷ್ಟೇ ಅಲ್ಲದೇ ಅಕೇಶಿಯಾವನ್ನು ಸಹ ಸರ್ಕಾರ ಭಾಗಶಃ ನಿಷೇಧಗೊಳಿಸಿರುವುದು ನಗರದಲ್ಲಿರುವ 60ಕ್ಕೂ ಹೆಚ್ಚು ಸಾಮಿಲ್‌ಗಳು ಹಾಗೂ ಗೃಹೋಪಯೋಗಿ ಸಾಮಾನುಗಳನ್ನು ತಯಾರಿಸುವ ಸಾವಿರಾರು ಅಂದರೆ ರಾಜ್ಯದಲ್ಲಿನ ಲಕ್ಷಾಂತರ ಬಡಗಿ ಕುಟುಂಬಕ್ಕೂ ಇದರ ಬಿಸಿ ಮುಟ್ಟಿದ್ದು, ಈಗಾಗಲೇ ವ್ಯಾಪಾರ ವಹಿವಾಟು ಕುಂಟುವಂತೆ ಮಾಡಿದೆ.

`ಟೀಕ್, ತೇಗ, ಬೀಟೆ, ಹೊನ್ನೆಯ ಮರದ ಮುಟ್ಟು ತುಂಬಾ ದುಬಾರಿ. ಮಧ್ಯಮ ವರ್ಗದ ಜನರು ಅಕೇಸಿಯಾ ಕೊಂಡರೆ; ಬಡ ಜನತೆ ನೀಲಗಿರಿಯನ್ನೇ ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಹೆಂಚಿನ ಮನೆ ನಿರ್ಮಾಣದಲ್ಲಿ ನೀಲಗಿರಿ ಮುಟ್ಟನ್ನೇ ಹೆಚ್ಚಾಗಿ ಬಳಸುವುದರಿಂದ ಈ ಭಾಗದಲ್ಲಿ ನೀಲಗಿರಿಗೆ ಅತ್ಯಧಿಕ ಬೇಡಿಕೆ ಇದೆ.

ಉತ್ಕೃಷ್ಟ ಗುಣಮಟ್ಟದ ನೀಲಗಿರಿ ಮರ, ತೊಲೆಗಳು ಇಲ್ಲಿನ ಮಾರುಕಟ್ಟೆಯಲ್ಲಿ ಸುಲಭ ದರದಲ್ಲಿ ದೊರಕುವುದರಿಂದ ಸಹಜವಾಗಿ ವಹಿವಾಟು ಹೆಚ್ಚಿದೆ. ಸದ್ಯ ಸರ್ಕಾರದ ನಿಷೇಧ ನೀತಿ ಬಡ ವ್ಯಾಪಾರಿಗಳು ಕಂಗಾಲಾಗುವಂತೆ ಮಾಡಿದೆ~ ಎನ್ನುತ್ತಾರೆ ಮೇದಾರ ಸಮಾಜ ಸಂಘದ ಕಾರ್ಯದರ್ಶಿ ಕುಮಾರಸ್ವಾಮಿ.
ಬೃಹತ್ ಕಟ್ಟಡ ನಿರ್ಮಾಣದಲ್ಲಿ ಸೆಂಟ್ರಿಂಗ್ ಹಾಕಲು ತೊಲೆಗಳು ಅತ್ಯಗತ್ಯ.

ಹಾಗಾಗಿ, ಬೆಂಗಳೂರು, ಬೆಳಗಾವಿ ಮಾರುಕಟ್ಟೆಯನ್ನು ಹೊರತುಪಡಿಸಿದರೆ, ಉತ್ಕೃಷ್ಟ ನೀಲಗಿರಿ ತೊಲೆಗಳಿಗಾಗಿ ಕಟ್ಟಡ ನಿರ್ಮಿಸುವ ಗುತ್ತಿಗೆದಾರರು ದಾವಣಗೆರೆ ಬಂಬೂ ಬಜಾರ್‌ನ ಮಾರುಕಟ್ಟೆಯನ್ನು ಬಹುವಾಗಿ ಆಶ್ರಯಿಸಿದ್ದಾರೆ. ಆದರೀಗ ನೀಲಗಿರಿ ನಿಷೇಧ ಮತ್ತು ಅಕೇಶಿಯಾ ಭಾಗಶಃ ನಿಷೇಧ ಹಿನ್ನೆಲೆಯಲ್ಲಿ ಸದಾ ಜನಸಂದಣಿಯಿಂದ ತುಂಬಿರುತ್ತಿದ್ದ ಸ್ಥಳೀಯ ಮಾರುಕಟ್ಟೆ `ಬಂಬೂ ಬಜಾರ್~ ಕಳೆಗುಂದತೊಡಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT