ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದು ಹೋಗುತ್ತಿರುವ ಜನಪರ ಕಾಳಜಿ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪಕ್ಷಾಂತರ, ಹಗರಣ, ಲೈಂಗಿಕ ದೌರ್ಜನ್ಯ, ಅಪಹರಣ, ಗಲಭೆ, ದೊಂಬಿ, ಹೊಡೆದಾಟ, ಪ್ರತಿಭಟನೆ ಇವೆಲ್ಲವೂ ಯಾವುದೇ ಸಮಾಜದಲ್ಲಿ ಕಂಡುಬರುವ ಸ್ವಾಭಾವಿಕ ವಿದ್ಯಮಾನಗಳು. ಈ ಎಲ್ಲಾ ಸಮಸ್ಯೆಗಳನ್ನು ಮೀರಿದ ಆದರ್ಶ ಸಮಾಜವನ್ನು ನಿರ್ಮಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಒಂದು ಸಮಾಜದಲ್ಲಿ ಇವೆಲ್ಲವೂ ಇದ್ದರೆ ಸಹಿಸಿಕೊಳ್ಳಲು ಸಾಧ್ಯ, ಕಾರಣ ಸುಧಾರಣೆಯ ಭರವಸೆ.

 ಈ ಸುಧಾರಣೆಯ ಸೂತ್ರ ಇರುವುದು ಆಳ್ವಿಕರ ಆಡಳಿತಾವಸ್ಥೆಯಲ್ಲಿ ಮತ್ತು ವ್ಯವಸ್ಥೆಯನ್ನು ರಕ್ಷಿಸಲು ಸಾಂವಿಧಾನಾತ್ಮಕವಾಗಿ ರಚಿತವಾಗಿರುವ ಶಾಸನ ಸಭೆಗಳಲ್ಲಿ. ಜನಸಾಮಾನ್ಯರ ಆದರ್ಶಪ್ರಾಯ ಸಮಾಜದ ಕನಸನ್ನು ನನಸಾಗಿಸುವ ಗುರುತರ ಹೊಣೆಗಾರಿಕೆ ಈ ಶಾಸನಸಭೆಗಳ ಮೇಲಿರುತ್ತದೆ. ಹಾಗಾಗಿಯೇ ಈ ಸಭೆಯಲ್ಲಿ ಆಸೀನರಾಗುವವರನ್ನು ಚುನಾಯಿತ ಪ್ರತಿನಿಧಿಗಳು ಎಂದು ಗೌರವಪೂರ್ವಕವಾಗಿ ಕರೆಯಲಾಗುತ್ತದೆ. ಭಾರತದ ಸಾಮಾಜಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಈ ಪ್ರತಿನಿಧಿಗಳ ಆಯ್ಕೆಗೆ ಶೈಕ್ಷಣಿಕ ಅಥವಾ ಬೌದ್ಧಿಕ ಸಾಮರ್ಥ್ಯದ ಪರಿಮಿತಿಗಳನ್ನು  ವಿಧಿಸಲಾಗಿಲ್ಲ.

ಆದರೂ ದೇಶದ ಜನಸಾಮಾನ್ಯರ ನಾಡಿಮಿಡಿತಗಳನ್ನು ಗ್ರಹಿಸಿ, ಸಾಮಾಜಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗಳ ಚೌಕಟ್ಟಿನಲ್ಲಿ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಮಟ್ಟಿಗೆ ಶಾಸನಸಭೆಗಳಿಗೆ ಆಯ್ಕೆಯಾಗುವವರು ಸಮರ್ಥರಾಗಿರುತ್ತಾರೆ ಎಂದು ಸಂವಿಧಾನ ಅಪೇಕ್ಷಿಸುತ್ತದೆ. ಈ ಜನಪರ ಕಾಳಜಿಗಳನ್ನು ಅಂತರ್ಗತ ಮಾಡಿಕೊಳ್ಳಲು ಯಾವುದೇ ಡಾಕ್ಟರೇಟ್ ಪದವಿಯ ಅವಶ್ಯಕತೆ ಇಲ್ಲ ಎಂದು ಸಂವಿಧಾನ ಕರ್ತೃಗಳು ಭಾವಿಸಿದ್ದರೂ ತಪ್ಪೇನಿಲ್ಲ.

ಸ್ವತಂತ್ರ ಭಾರತದ ಇತಿಹಾಸದ ಅನೇಕ ಸಂದರ್ಭಗಳಲ್ಲಿ ಹಲವು ರಾಜಕಾರಣಿಗಳು ಈ ಭರವಸೆಯನ್ನು ಸಾಕಾರಗೊಳಿಸಿರುವ ನಿದರ್ಶನಗಳೂ ಹೇರಳವಾಗಿವೆ. ಚುನಾಯಿತ ಪ್ರತಿನಿಧಿಗಳಲ್ಲಿ ಮೂಲಭೂತವಾಗಿ ಇರಬೇಕಾದ್ದು ಜನಪರ ಕಾಳಜಿ, ಸಂವಿಧಾನ ಬದ್ಧತೆ ಮತ್ತು ಕರ್ತವ್ಯವನ್ನು ನಿಭಾಯಿಸುವ ನಿಷ್ಠಾವಂತ ಮನೋಭಾವ. ಇವುಗಳನ್ನು ಬೆಳೆಸಿಕೊಳ್ಳಲು ಔಪಚಾರಿಕ ಶಿಕ್ಷಣ ಅವಶ್ಯಕತೆ ಇರುವುದೂ ಇಲ್ಲ.

ನಮ್ಮ ಜನಪ್ರತಿನಿಧಿಗಳು ತಮ್ಮ ಮೂಲಭೂತ ಆದ್ಯತೆ ಮತ್ತು ಕರ್ತವ್ಯಗಳನ್ನೇ ಸಂಪೂರ್ಣ ಮರೆತಿದ್ದಾರೆ. ಸಾಂವಿಧಾನಿಕ ಪ್ರಜ್ಞೆ ಇರಲಿ, ಸಾಮುದಾಯಿಕ ಪ್ರಜ್ಞೆಯನ್ನೂ ಕಳೆದುಕೊಂಡಿದ್ದಾರೆ. ಸಮಸ್ತ ಜನತೆ ತಮ್ಮೆಲ್ಲಾ ಆಕ್ರೋಶಗಳನ್ನೂ ಒಡಲಲ್ಲಿ  ಬಚ್ಚಿಟ್ಟುಕೊಂಡು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ತಮ್ಮನ್ನು ಏಕೆ ಚುನಾಯಿಸಿದ್ದಾರೆ ಎಂದು ಒಂದು ಕ್ಷಣವಾದರೂ ಯೋಚಿಸಿದರೆ ನಮ್ಮ ಪ್ರತಿನಿಧಿಗಳಿಗೆ ಜ್ಞಾನೋದಯವಾಗಬಹುದು. ಆದರೆ ಆಲೋಚನೆ ಮಾಡುವ ಮನೋಭಾವವನ್ನೇ ಕಳೆದುಕೊಂಡಿರುವ ರಾಜಕೀಯ ನಾಯಕರು ದುರಾಲೋಚನೆಯ ಮಾರ್ಗ ಹಿಡಿದಿದ್ದಾರೆ. ಹಾಗಾಗಿ ಜನಸಾಮಾನ್ಯರ ಬೇಕು ಬೇಡಗಳೇನು, ಆದ್ಯತೆಗಳೇನು, ಮೂಲಭೂತ ಅಗತ್ಯತೆಗಳೇನು ಎಂದು ಆಲೋಚಿಸುವ ಪರಂಪರೆಯೇ ನಶಿಸಿ ಹೋಗಿದೆ. ಪ್ರಜೆಗಳ ಆದ್ಯತೆಗಳೇ ಪ್ರಭುಗಳ ಕರ್ತವ್ಯ ಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾಧನಗಳಾಗಬೇಕಾದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತದ್ವಿರುದ್ಧ ಸನ್ನಿವೇಶವನ್ನು ಕಾಣುತ್ತಿದ್ದೇವೆ. ಪರಿಣಾಮ ಪ್ರಜಾಪ್ರತಿನಿಧಿಗಳ ಕಾರ್ಯಕ್ಷೇತ್ರವಾದ ಶಾಸನಸಭೆಗಳಲ್ಲಿ ಪ್ರಜೆಗಳೂ ಇಲ್ಲದೆ ಪ್ರತಿನಿಧಿಗಳೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ನೇರ ಚಿತ್ರಣವನ್ನು ಕರ್ನಾಟಕದ ವಿಧಾನಸಭೆ ಮತ್ತು ದೇಶದ ಸಂಸತ್ತಿನಲ್ಲಿ ಕಾಣುತ್ತಿದ್ದೇವೆ. ಎರಡೂ ಸಂದರ್ಭಗಳಲ್ಲಿ  ಕಾಣುತ್ತಿರುವುದು ಭ್ರಷ್ಟಾಚಾರ ಹಗರಣಗಳ ವಿರಾಟ್ ಸ್ವರೂಪ. ತಮ್ಮ ಅನೈತಿಕ ರಾಜಕಾರಣದ ಮೂಲಕ ಭ್ರಷ್ಟತೆಯ ವಿಶ್ವರೂಪ ದರ್ಶನವನ್ನೇ ಭಾರತೀಯರಿಗೆ ನೀಡಿರುವ ರಾಜಕಾರಣಿಗಳು ಪರಸ್ಪರ ಪೈಪೋಟಿಯ ಮೇಲೆ ಲೂಟಿ ಮಾಡಿರುವುದು ದೇಶದ ಜನತೆಯ ಕಣ್ಣೆದುರಿಗಿರುವ ಸತ್ಯ. ಇಲ್ಲಿ ನ್ಯಾಯಾನ್ಯಾಯಗಳ, ಸತ್ಯಾಸತ್ಯತೆಗಳ ಪರಾಮರ್ಶೆ ಮಾಡಬೇಕಿರುವುದು ಸಾರ್ವಭೌಮ ಪ್ರಜೆಗಳೇ ಹೊರತು ಪ್ರತಿನಿಧಿಗಳಲ್ಲ. ಪ್ರಜೆಗಳ ಈ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ಇರುವ ಸಾಂವಿಧಾನಿಕ ಅಂಗಗಳು ಎಲ್ಲೋ ಒಂದೆಡೆ ನಿಷ್ಕ್ರಿಯತೆಯತ್ತ ಸಾಗುತ್ತಿರುವ ವಿಷಮ ಸಂದರ್ಭದಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದಾದರೂ ಯಾರು? ಉದಾರವಾದದ ಹೊಳೆಯಲ್ಲಿ ಹರಿಯುತ್ತಿರುವ ಬೃಹತ್ ಪ್ರಮಾಣದ ಬಂಡವಾಳಕ್ಕೆ ಎಲ್ಲವನ್ನೂ ಕೊಳ್ಳುವ, ವಶೀಕರಣಕ್ಕೊಳಪಡಿಸುವ ಸಾಮರ್ಥ್ಯ ಇದೆ. ಇದರ ಪ್ರಾತ್ಯಕ್ಷಿಕೆಯನ್ನು ಭಾರತದ ರಾಜಕಾರಣದಲ್ಲಿ ಕಾಣುತ್ತಿದ್ದೇವೆ.

ಇದರ ನೇರ ಪರಿಣಾಮವೇ ಸಂಸತ್ ಮತ್ತು ವಿಧಾನಸಭೆಗಳ ಅಧಿವೇಶನದ ಬಲಿ. ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ನೆಲೆಯಲ್ಲಿ ಅಧಿವೇಶನವನ್ನು ತಡೆಗಟ್ಟುವ ಪಕ್ಷವೇ ಕರ್ನಾಟಕದಲ್ಲಿ ಹಗರಣಗಳ ಕೂಪ ಸೃಷ್ಟಿಸಿವೆ. ಅಲ್ಲಿ ತಮ್ಮ ಭ್ರಷ್ಟತೆಯನ್ನು ಸಮರ್ಥಿಸಿಕೊಳ್ಳುವ ಪಕ್ಷ ಇಲ್ಲಿ ಗಾಂಧೀಜಿಯ ಅಪರಾವತಾರದಂತೆ ವರ್ತಿಸುತ್ತದೆ. ಮತ್ತೊಂದೆಡೆ ಶಾಸನಸಭೆಯ ಅತ್ಯುನ್ನತ ಸ್ಥಾನವಾದ ಸ್ಪೀಕರ್ ಪದವಿಯೂ ಪಕ್ಷ ರಾಜಕಾರಣಕ್ಕೆ ಬಲಿಯಾಗಿರುವುದರಿಂದ ಪಕ್ಷಾತೀತವಾಗಿರಬೇಕಾದ ಉನ್ನತ ಪೀಠ ಸ್ವಜನಪಕ್ಷಪಾತದ ತವರಾಗಿ ಪರಿಣಮಿಸಿದೆ. ಕರ್ನಾಟಕ ವಿಧಾನಸಭೆಯಲ್ಲಿ ಸದಸ್ಯರ ಅಮಾನತು ಪ್ರಕರಣಗಳೇ ಈ ಬೆಳವಣಿಗೆಗೆ ಪ್ರತ್ಯಕ್ಷ ಸಾಕ್ಷಿ. ಈ ಅನಿಷ್ಟ ಪರಂಪರೆಗೆ ಕಡಿವಾಣ ಹಾಕುವ ಅಧಿಕಾರ ಹೊಂದಿರುವ ನ್ಯಾಯಾಂಗವೂ ಅಸಹಾಯಕವಾಗಿದೆಯೇನೋ ಎನಿಸುವ ಪರಿಸ್ಥಿತಿ       ನಿರ್ಮಾಣವಾಗಿದೆ.

ಅಂತಿಮವಾಗಿ ಶಿಕ್ಷಿತರು ಯಾರು? ದೇಶದ ಪ್ರಜೆಗಳೇ ಅಲ್ಲವೇ? ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ ದೇಶದ ಪ್ರಜೆಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಚರ್ಚೆಯೇ ನಡೆದಿಲ್ಲ. ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆಯೇ ಮುಂತಾದ ವಿಷಯಗಳ ಪ್ರಸ್ತಾಪವೇ ಆಗುತ್ತಿಲ್ಲ. ಪರಸ್ಪರ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸುವಲ್ಲೇ ಕಾಲಹರಣವಾಗುತ್ತಿದೆ. ಆದರೆ ಪ್ರಜೆಗಳಿಗೆ ತಿಳಿದಿರುವ ಪರಮ ಸತ್ಯ ಒಂದಿದೆ. ಅದೇನೆಂದರೆ ಈ ದೇಶದಲ್ಲಿ ಯಾವುದೇ ರಾಜಕಾರಣಿಗೂ ಶಿಕ್ಷೆಯಾಗುವುದಿಲ್ಲ! ಹಾಗಿದ್ದ ಮೇಲೆ ಅಧಿವೇಶನವನ್ನು ಬಹಿಷ್ಕರಿಸುವ ಈ ಸರ್ಕಸ್ಸಿನಲ್ಲಿ ಬಲಿಯಾದವರು ಯಾರು?  ಪ್ರಜೆಗಳೇ ಅಲ್ಲವೇ? ಅಪರಾಧಿಗೆ ಶಿಕ್ಷೆಯಾಗದಿದ್ದರೂ ಸರಿ ನಿರಪರಾಧಿಗೆ ಶಿಕ್ಷೆಯಾಗಕೂಡದು ಎಂದು ನ್ಯಾಯ ಸಂಹಿತೆ ಹೇಳುತ್ತದೆ. ಆದರೆ ಇಲ್ಲಿನ ಆಳ್ವಿಕರು ಈ ಸಂಹಿತೆಯನ್ನೇ ಧಿಕ್ಕರಿಸುತ್ತಿದ್ದಾರೆ. ಪ್ರಜೆಗಳೂ ಮೌನ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT