ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಹೋಗುವವರೆಗೆ ನಾದದ ನದಿಯಲ್ಲಿ...

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹಾಡಿನ ಹಂಗಿಲ್ಲದೆ ಸಂಗೀತ ವಾದ್ಯದ ನಾದದಿಂದಲೇ ಹೆಸರುಗಿಟ್ಟಿಸಿಕೊಂಡ ಬ್ಯಾಂಡ್‌ ‘ಅನ್‌ಟಿಲ್‌ ವಿ ಲಾಸ್ಟ್‌’ (ಕಳೆದುಹೋಗುವವರೆಗೆ).
ಮನೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಮೆಲ್ಲನೆ ಮಾಧುರ್ಯದ ಹಾಡಿಗೆ ಗಿಟಾರ್‌ ತಂತಿ ಮೀಟಿದ ಕೇತನ್‌ ನಿಧಾನವಾಗಿ ತಂಡ ಕಟ್ಟಿದರು. ತಮ್ಮತನದ ಮೂಲಕ ಸದ್ದು ಮಾಡಬೇಕು ಎಂಬುದು ಈ ಸಂಗೀತಗಾರನ ಬಯಕೆ. ಹೆಚ್ಚು ಮಾಧುರ್ಯ, ಸ್ವಲ್ಪ ರಾಕ್‌ನ ಸ್ಪರ್ಶವಿರುವ ಈ ಬ್ಯಾಂಡ್ ಶುರುವಾಗಿ ಎರಡು ವರ್ಷವಾಗಿದೆ. ಪೂರ್ಣಪ್ರಮಾಣದ ತಂಡವಾಗಿ ರೂಪುಗೊಂಡದ್ದು ಒಂಬತ್ತು ತಿಂಗಳ ಹಿಂದೆ. ಬ್ಯಾಂಡ್ ಸದಸ್ಯರು ತಮ್ಮ ನೆನಪಿನಲ್ಲಿ ಹುದುಗಿರುವ ಕೆಲವು ಕಥನಗಳನ್ನು ಹಂಚಿಕೊಂಡಿದ್ದಾರೆ.

ಒಂದು ಸಂಜೆ ನಗರದಲ್ಲಿ ‘ಅನ್‌ಟಿಲ್‌ ವಿ ಲಾಸ್ಟ್’ ತಂಡದಿಂದ ಸಂಗೀತ ಕಾರ್ಯಕ್ರಮವಿತ್ತು. ಎಲ್ಲರೂ ಒಟ್ಟಿಗೆ ಕುಳಿತು ರೂಂನಲ್ಲಿ ಅಭ್ಯಾಸ ಮಾಡುತ್ತಿದ್ದರು. ತುರ್ತು ಕೆಲಸದ ಮೇಲೆ ಕೇತನ್‌ ಹೊರಗಡೆ ಹೋದರು. ಉಳಿದವರೆಲ್ಲಾ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು. ಹತ್ತು ಹದಿನೈದು ನಿಮಿಷದಲ್ಲಿ ಫೋನ್‌ ಕರೆಯೊಂದು ಬಂತು; ಕೇತನ್‌ಗೆ ಆ್ಯಕ್ಸಿಡೆಂಟ್‌ ಆಗಿದೆ ಎಂದು. ಸಂಜೆ ಇರುವ ಕಾರ್ಯಕ್ರಮ ಮರೆತು ಉಳಿದವರು ಆಸ್ಪತ್ರೆಗೆ ಹೋದರು. ಕೇತನ್‌ಗೆ ಮೊಣಕಾಲು ಮೂಳೆ ಪೆಟ್ಟಾಗಿತ್ತು. ಇಷ್ಟಾದರೂ ಸಂಜೆ ಕಾರ್ಯಕ್ರಮ ನಡೆದಿತ್ತು. ಕಾಲು ನೋವಿನಲ್ಲೂ ಕೇತನ್‌ ಗಿಟಾರ್‌ ಅಂದು ಮತ್ತಷ್ಟು ಮಾಧುರ್ಯದ ಹಾಡುಗಳನ್ನು ಹೊಮ್ಮಿಸಿತ್ತು.

ಹಾಡಿಲ್ಲ, ಬರೀ ಕಿವಿಗಡಚಿಕ್ಕುವ ಉಪಕರಣಗಳ ಶಬ್ದ ಎಂಬ ಬೇಸರದಿಂದಲೇ ಒಂದಿಷ್ಟು ಮಂದಿ ವೇದಿಕೆಯ ಮುಂದೆ ಕುಳಿತಿದ್ದರು. ಇವರೇನೋ ಹೊಸತನ್ನು ಮಾಡುತ್ತಿದ್ದಾರೆ ಎಂದು ಪುಟಾಣಿಗಳು ಅಲ್ಲಿ ಸೇರಿದ್ದರು. ಒಂದು ಪರದೆ ಹರಿಬಿಟ್ಟು, ಅದರಲ್ಲಿ ಮಳೆ ಹನಿ ಹರಿಯುವ ಚಿತ್ರಣ ತೋರಿಸಿದರು. ನಿಧಾನವಾಗಿ ಗಿಟಾರ್‌ ತನ್ನ ಕೆಲಸ ಶುರುವಿಟ್ಟುಕೊಂಡಿತು. ಮಳೆ ಹಾಡಿನ ಲಹರಿ ನಿಧಾನವಾಗಿ ಅಲ್ಲಿದ್ದವರ ಮನಸ್ಸನ್ನು ತೋಯಿಸಿತು. ಚಿಣ್ಣರು ಕುತೂಹಲದಿಂದ ಕಣ್ಣರಳಿಸಿದರು. ಹಿರಿಯರು ಬಂದು ‘ತುಂಬಾ ಚೆನ್ನಾಗಿದೆ. ಇಷ್ಟು ಚೆನ್ನಾಗಿ ನುಡಿಸುತ್ತೀರಿ ಎಂದು ಗೊತ್ತಿರಲಿಲ್ಲ’ ಎಂದು ಹೇಳಿದಾಗ ತಂಡದವರ ಕಣ್ಣಲ್ಲಿ ಖುಷಿಯ ಕಂಬನಿ ಹನಿಗೂಡಿತ್ತು.

                        ***
ಬ್ಯಾಂಡ್ ಕಟ್ಟಬೇಕು ಎಂಬ ಯೋಚನೆ ಇಲ್ಲದ ಈ ಗೆಳೆಯರ ಬಳಗ ತಂಡ ಕಟ್ಟಿದ ಖುಷಿಯಲ್ಲಿದೆ. ಅಂದಹಾಗೆ ತಂಡವನ್ನು ಶುರುಮಾಡಿದ್ದು ಕೇತನ್‌ ಮತ್ತು ಭಾರ್ಗವ್‌. ಹೆಚ್ಚಿನ ಓದಿಗಾಗಿ ಭಾರ್ಗವ್‌ ಸಿಂಗಪುರಕ್ಕೆ ಹೋದರು. ರಜಾದಿನಗಳಲ್ಲಿ ಶೋ ಇದ್ದರೆ ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬಿಡುವಿನ ವೇಳೆಯಲ್ಲಿ ಫೋನ್‌ ಮಾಡಿ, ತಮಗೆ ಹೊಳೆದ ಹೊಸ ಟ್ಯೂನ್‌ಗಳ ಬಗ್ಗೆ ತಂಡಕ್ಕೆ ಮಾಹಿತಿ ನೀಡುತ್ತಾರೆ. ಕೇತನ್‌ ತಂಡದಲ್ಲಿ ಮೂರು ಮಂದಿ ಕಲಾವಿದರು ಇದ್ದಾರೆ.

ಕೇತನ್‌ (ಗಿಟಾರಿಸ್ಟ್‌) ಚೈತನ್ಯ (ಗಿಟಾರಿಸ್ಟ್‌), ರ್‍ಯಾಲ್‌ಸ್ಟನ್‌ (ಡ್ರಮ್ಸ್‌), ಅಂಜನ್‌ (ಬೇಸ್‌ ಗಿಟಾರಿಸ್ಟ್‌). ಈ ತಂಡದ ಜತೆಗಾರರು.
ತಂಡಕ್ಕೆ ಹಾಡುಗಾರರು ಬೇಕು ಅನಿಸಲಿಲ್ಲ. ಗಿಟಾರ್‌, ಡ್ರಮ್ಸ್‌ನಲ್ಲಿಯೇ ಎಲ್ಲರ ಮನಸೆಳೆಯುತ್ತೇವೆ ಎಂದು ಈ ತಂಡದವರ ಆತ್ಮವಿಶ್ವಾಸದ ಮಾತು. ‘ತಂಡದಲ್ಲಿ ಯಾಕೆ ಹಾಡುಗಾರರು ಇಲ್ಲ ಎಂಬ ಪ್ರಶ್ನೆಯನ್ನು ನಾವು ಸಾಕಷ್ಟು ಬಾರಿ ಎದುರಿಸಿದ್ದೇವೆ. ಗಿಟಾರ್‌ ತಂತಿಯಲ್ಲಿ ಸಂಗೀತದ ಸುಧೆ ಹರಿಸುವುದು ನಮ್ಮ ಆಸೆ. ನಮ್ಮ ಸುತ್ತಮುತ್ತಲಿರುವ ಪರಿಸರವೇ ನಮಗೆ ಸ್ಫೂರ್ತಿ. ಧೋ ಸುರಿಯುವ ಮಳೆ, ಮಧ್ಯಾಹ್ನದ ಮಟಮಟ ಬಿಸಿಲು, ಮುಸ್ಸಂಜೆಯ ತಂಗಾಳಿ ಇವುಗಳನ್ನೆಲ್ಲಾ ಅನುಭವಿಸುತ್ತೇವೆ. ಆ ಕ್ಷಣದಲ್ಲಿ ಮನಸ್ಸಿನಲ್ಲಿ ಹುಟ್ಟಿಕೊಂಡ ರಾಗವನ್ನು ಗಿಟಾರ್‌ ತಂತಿಯಲ್ಲಿ ಮೀಟುತ್ತೇವೆ ಎನ್ನುತ್ತಾರೆ ಅಂಜನ್.

ಮೊದಲ ಬಾರಿಗೆ ಚೆನ್ನೈನಲ್ಲಿ ಹಾಡಿ ಅಲ್ಲಿದ್ದವರಿಗೆ ಸಂಗೀತದ ರಸದೌತಣ ಬಡಿಸಿ ಬಂದಿದ್ದು ಈ ಬ್ಯಾಂಡ್‌ನ ಅಗ್ಗಳಿಕೆ. ಅಂದು ಚೆನ್ನೈನ ಜನ ತೋರಿದ ಪ್ರೀತಿ, ಪ್ರೋತ್ಸಾಹ ಈಗಲೂ ನಮ್ಮ ಮನದಲ್ಲಿ ಇದೆ ಎಂಬುದು ತಂಡದಲ್ಲಿ ಒಬ್ಬರಾದ ಚೈತನ್ಯ ಅವರ ಮಾತು.

ತಂಡದ ಹೆಸರಿನ ಹಿಂದಿರುವ ಗುಟ್ಟೇನು ಎಂದರೆ ಈ ತಂಡದ ಹುಡುಗರು ಗಂಭೀರವಾಗಿ ಮಾತನಾಡುತ್ತಾರೆ. ಅಭಿವೃದ್ಧಿ, ಬದಲಾವಣೆ ಹೆಸರಿನಲ್ಲಿ ಎಲ್ಲವನ್ನೂ ಮರೆಯುತ್ತೀದ್ದೇವೆ. ಎಲ್ಲಿಯವರೆಗೆ ಈ ಅಭಿವೃದ್ಧಿಯ ಇರುತ್ತದೆ ಎಂಬ ಪ್ರಶ್ನೆ ಬಂದಾಗ ಇದಕ್ಕೆ ಉತ್ತರ ಇಲ್ಲ. ನಮ್ಮನ್ನು ನಾವು ಯೋಚನೆಗೆ ಹಚ್ಚಿಕೊಳ್ಳುತ್ತಿಲ್ಲ. ಎಲ್ಲಿಯತನಕ ನಾವು ಯೋಚನೆಗೆ ತೆರೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಏನೂ ಸಾಧನೆ ಮಾಡಲು ಆಗುವುದಿಲ್ಲ ಎನ್ನುವುದು ಇವರ ಯೋಚನೆ.

ಕಾರ್ಯಕ್ರಮ ನೀಡುವಾಗ ಈ ತಂಡದವರ ರಿಹರ್ಸಲ್ ಜೋರಾಗಿ ನಡೆಯುತ್ತದಂತೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಶೋ ನೀಡಿರುವ ಈ ತಂಡದವರು ಕಾರ್ಯಕ್ರಮಕ್ಕೂ ಮೊದಲು ಹತ್ತು ಗಂಟೆ ಅಭ್ಯಾಸ ಮಾಡುತ್ತಾರಂತೆ.

ಸ್ಪರ್ಧೆಯ ಗೀಳಿಗೆ ಅಂಟಿಕೊಳ್ಳದ ಈ ತಂಡ ಸಂಗೀತವೆಂದರೆ ಸ್ಪರ್ಧೆ ಅಲ್ಲ ಎಂದು ನಂಬಿದೆ. ಸಂಗೀತವನ್ನು ಆಲಿಸಿದವರಿಗೆ ಖುಷಿ ನೀಡಬೇಕು ಎಂಬುದಷ್ಟೇ ಉದ್ದೇಶ.

ಓದು, ಕೆಲಸದ ಜತೆಗೆ ಸಂಗೀತವನ್ನು ನೆಚ್ಚಿಕೊಂಡಿರುವ ಈ ತಂಡ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ.
ಸಂಪರ್ಕಕ್ಕೆ: 98448 27863.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT