ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಿ ಕಳ್ಳಿ.. ಮಿಂಚುಳ್ಳಿ...

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಸಾಮಿ ನಾವೇನೂ ಮಾಡಿಲ್ಲ ಸಾಮಿ. ನಮ್ಮವರನ್ನ ಬುಟ್ಟುಬುಡಿ ಸಾಮಿ...~ ದಂಡುಪಾಳ್ಯದ `ಲಕ್ಷ್ಮಿ~ ಪಾತ್ರಧಾರಿ ಪೂಜಾಗಾಂಧಿ ಚಿತ್ರದಲ್ಲಾಡುವ ಡೈಲಾಗ್‌ನ ಒಂದು ಝಲಕ್ ಇದು. ಹರಕಲು ಸೀರೆ, ಕಪ್ಪು ತುಟಿ, ಪೇಲವ ಕಣ್ಣುಗಳ ಆ `ಅಪರಾಧಿ~ ಮೊದಲು ಮಾತನಾಡಿದ್ದು ತಮ್ಮ ಮೇಕಪ್ ಕುರಿತು.

ಅಪರಾಧಿಗಳನ್ನು ಸಹಜವಾಗಿ ಚಿತ್ರಿಸಬೇಕು ಎಂಬ ಕಾರಣಕ್ಕೆ ಮೇಕಪ್ ಕೂಡ ನೈಸರ್ಗಿಕವಾಗಿತ್ತು. ಹುಬ್ಬು ತೀಡುವಂತಿರಲಿಲ್ಲ. ಕೆನ್ನೆಕೆಂಪು ಬಳಿದುಕೊಳ್ಳುವಂತಿರಲಿಲ್ಲ. ಚಪ್ಪಲಿ ಹಾಕುವಂತಿರಲಿಲ್ಲ. ನೆರಳು ಸೂಸುವ ಕೊಡೆಗಳಿರಲಿಲ್ಲ. ರಸ್ತೆ ಬದಿಯ ದೂಳು ಕಲಾವಿದರ ಅಂದ ಹೆಚ್ಚಿಸುವ ಪೌಡರ್ ಆಗಿತ್ತು! ಪೂಜಾ ಕೂಡ ಇದಕ್ಕೆ ಹೊರತಾಗಿರಲಿಲ್ಲ.
ಇಂಥ ಮೇಕಪ್‌ನಲ್ಲೇ ಕಾಫಿ ಕುಡಿಯಲೆಂದು ಮೈಸೂರಿನ ಕೆಫೆ ಒಂದಕ್ಕೆ ಭೇಟಿ ನೀಡುವ ಅನಿವಾರ್ಯತೆ ಎದುರಾಯಿತು. ಕಾರು ಕೈಕೊಟ್ಟದ್ದರಿಂದ ನಡೆದೇ ಹೋಗುವ ಸ್ಥಿತಿ. ಅರೆ, ಪೂಜಾ ಅವರನ್ನು ಯಾರೂ ಗುರುತಿಸುತ್ತಲೇ ಇಲ್ಲ. ಒಳ್ಳೆಯದಾಯಿತು ಎಂದು ಕೆಫೆಗೆ ನುಗ್ಗಿದರೆ ಅಲ್ಲಿನ ಹುಡುಗಿಯೊಬ್ಬಳು ದುರುದುರು ನೋಡುತ್ತಿದ್ದಾಳೆ.

ಹಾಗೆ ಆಕೆ ನೋಡಿದ್ದು ಇವರು ಪೂಜಾ ಇರಬಹುದು ಎಂದಲ್ಲ. ಇಂಥ ಸಾಮಾನ್ಯರೂ ಕಾಫಿ ಕುಡಿಯಲು ಇಷ್ಟು ದೊಡ್ಡ ಕೆಫೆಗೆ ಬರಬಹುದೇ ಎಂಬ ಆಕ್ಷೇಪದ ದೃಷ್ಟಿಯಲ್ಲಿ! ಪೂಜಾ ತಮ್ಮನ್ನು ತಾವು ಪರಿಚಯಿಸಿಕೊಂಡ ನಂತರವೇ ವಾತಾವರಣ ತಿಳಿಯಾಯಿತು.

ನಿರ್ದೇಶಕ ಶ್ರೀನಿವಾಸರಾಜು ಪಾತ್ರ ಮಾಡಬೇಕೆಂದಾಗ ಪೂಜಾ ದಿಢೀರನೆ ಒಪ್ಪಲಿಲ್ಲ. ದಿನಗಟ್ಟಲೆ ಯೋಚಿಸಿದರು. ಇಮೇಜ್ ಹಾಳಾಗಬಹುದೆಂಬ ಆತಂಕ ಅವರಿಗಿತ್ತು. ಎರಡು ವಾರಗಳ ಸತತ ಯೋಚನೆಯ ಬಳಿಕ ಅವರು ಹಸಿರು ನಿಶಾನೆ ತೋರಿದರು.

ಅದಾದ ಬಳಿಕ ತಾವು ಮಾಡಬೇಕಾದ ಲಕ್ಷ್ಮಿ ಎನ್ನುವವಳ ಬಗೆಗೆ ಬಂದ ಪತ್ರಿಕಾ ವರದಿಗಳು, ವಿಡಿಯೋ ತುಣುಕುಗಳನ್ನು ಗಮನವಿಟ್ಟು ನೋಡುವ ಕೆಲಸ. ಆದರೆ ಕಾರಣಾಂತರಗಳಿಂದ ಜೈಲಿನಲ್ಲಿರುವ ಲಕ್ಷ್ಮಿಯನ್ನು ಪೂಜಾ ಭೇಟಿ ಮಾಡಲಾಗಲಿಲ್ಲ.ನಿರ್ದೇಶಕರು ಅಪರಾಧಿಗಳನ್ನು ಸಂಧಿಸಿದ್ದರು. ಅವರ ಸಲಹೆ ಮೇರೆಗೆ ಪೂಜಾ ಪಾತ್ರಕ್ಕೆ ಜೀವ ತುಂಬಿದರು.

ಪಾತ್ರಕ್ಕೆ ಪೂಜಾ ಅವರನ್ನೇ ಆಯ್ಕೆ ಮಾಡಿದ್ದೇಕೆ? ನಿರ್ದೇಶಕರ ಪ್ರಕಾರ ಅವರ ಮುಗ್ಧ ಮುಖವೇ ಇದಕ್ಕೆ ಕಾರಣ. ಲಕ್ಷ್ಮಿಯನ್ನು ಅಧ್ಯಯನ ಮಾಡಿದ್ದ ನಿರ್ದೇಶಕರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ರಮ್ಯಾ ಮತ್ತೊಂದು ಪೂಜಾ. ಸಾಕಷ್ಟು ಅಳೆದು ತೂಗಿ ನೋಡಿದ ನಂತರ ಪೂಜಾ ಓಕೆ ಆದರು. ಒಂದೇ ಬಾರಿಗೆ ಎರಡು ಮೂರು ಭಾವನೆಗಳನ್ನು ಹೊಮ್ಮಿಸುವ ಶಕ್ತಿ ಪೂಜಾ ಅಭಿನಯಕ್ಕಿತ್ತು. ಅವರ ಆಯ್ಕೆಗೆ ಇದೂ ಒಂದು ಮುಖ್ಯ ಕಾರಣ. 

ಇಡೀ ಚಿತ್ರದಲ್ಲಿ ಪೂಜಾಗೆ ಇರುವುದು ಕೇವಲ ಎರಡು ಎರಡೂವರೆ ನಿಮಿಷದಷ್ಟು ಸಂಭಾಷಣೆ ಮಾತ್ರ.    

  
ಅಕ್ಷರಗಳ ಲೆಕ್ಕದಲ್ಲಿ ಹೇಳುವುದಾದರೆ ಕೇವಲ ಒಂದು ಪುಟದಷ್ಟು ಮಾತುಗಳಿವೆ. ತಮ್ಮ ಪಾತ್ರಕ್ಕೆ ಪೂಜಾ ತಮ್ಮದೇ ದನಿ ನೀಡಿದ್ದಾರೆ. ಕೋಲಾರ ಸೀಮೆಯ ತೆಲುಗು ಮಿಶ್ರಿತ ಕನ್ನಡವನ್ನು ಅವರು ಆಡಬೇಕಿತ್ತು. ಅದಕ್ಕಾಗಿ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ತುಣುಕು ಡೈಲಾಗ್‌ಗಳನ್ನೇ ನಾಲ್ಕೈದು ಬಾರಿ ಒಪ್ಪಿಸುತ್ತಿದ್ದರು. ಗಂಟೆಗಟ್ಟಲೆ ಸ್ಟುಡಿಯೊದಲ್ಲಿ ಡಬ್ ಮಾಡಿದರು. ಇಷ್ಟಾದರೂ ಡೈಲಾಗ್‌ಗಳನ್ನು ಅಂದುಕೊಂಡಂತೆ ಒಪ್ಪಿಸಲಾಗಲಿಲ್ಲವೇನೊ ಎಂಬ ಆತಂಕ ಅವರೊಳಗಿದೆ.

ಚಿತ್ರೀಕರಣ ನಡೆದದ್ದೆಲ್ಲಾ ಗುಟ್ಟಾಗಿ. ಹೊರವಲಯಗಳಲ್ಲೇ ಹೆಚ್ಚು ಶೂಟಿಂಗ್. ಹಗಲಿಗಿಂತ ಹೆಚ್ಚಾಗಿ ರಾತ್ರಿಯೇ ಕಲಾವಿದರು ಮೇಕಪ್ ಹಚ್ಚಿದ್ದು. ಅದೆಷ್ಟೋ ಕೊಲೆಗಳಿಗೆ ಸಾಕ್ಷಿಯಾಗಿದ್ದ ತಣ್ಣನೆ ರಕ್ತದ `ಲಕ್ಷ್ಮಿ~ಗೆ ಮೈಸೂರಿನ ಹೊರವಲಯದಲ್ಲಿರುವ ಒಂದು ಮರ ಕಂಡರೆ ಅದೇಕೋ ಭೀತಿ.

ಅದರ ಗಾತ್ರ, ಎತ್ತರ ರಾತ್ರಿಯ ಮಬ್ಬು ಬೆಳಕಲ್ಲಿ ಅದು ಕಾಣುತ್ತಿದ್ದ ಪರಿ... `ಲಕ್ಷ್ಮಿ~ ಆ ಮರದ ಬಳಿಗೆ ಒಬ್ಬರೇ ಹೋದವರೇ ಅಲ್ಲ. `ಎರಡು ಮೂರು ಗಂಟೆಯ ಸಪ್ಪಟು ಸರಿರಾತ್ರಿಯಲ್ಲಿ ಯಾರಿಗೆ ತಾನೇ ಒಂಟಿಮರದ ಬಳಿ ಹೋಗಲು ಧೈರ್ಯ ಇದ್ದೀತು?~ ಎಂದರು ಪೂಜಾ.

ಚಿತ್ರದಲ್ಲಿರುವ ಬಹಳಷ್ಟು ಕಲಾವಿದರು ರಂಗಭೂಮಿ ಹಿನ್ನೆಲೆ ಉಳ್ಳವರು. ಅವರ ನಡುವೆ ಪೂಜಾ ಹೇಗೆ ಪೈಪೋಟಿ ನಡೆಸಿದರು? ಪೂಜಾ ಅವರಿಂದ ಕಲಿತದ್ದೇ ಹೆಚ್ಚಂತೆ. ಮಕರಂದ್ ದೇಶಪಾಂಡೆ ಅಂತಹ ಕಲಾವಿದರು ಮಾರ್ಗದರ್ಶನ ನೀಡಿದರಂತೆ.
ಪೂಜಾ ಚಿತ್ರದಲ್ಲಿ ಹೆಚ್ಚು ಮೈ ತೋರಿಸಿರುವ ಬಗ್ಗೆ ಮಾತು ಹೊರಳಿತು. `ಅದು ಕೇವಲ ಗ್ಲಾಮರ್‌ಗಾಗಿ ಮಾಡಿದ್ದಲ್ಲ.

ಪೊಲೀಸ್‌ಠಾಣೆಯಲ್ಲಿ ಲಕ್ಷ್ಮಿ ಅನುಭವಿಸಿದ ಶಿಕ್ಷೆಯನ್ನು ತೋರಿಸಲು ಮಾಡಿದ್ದು~ ಎಂದರಾಕೆ. ಆ ದೃಶ್ಯಕ್ಕಾಗಿ ನಿರ್ದೇಶಕರು ಐದು ಬಾರಿ ಯತ್ನಿಸಿದ್ದರು. ದೃಶ್ಯ ವಿವಾದಗಳಿಗೆ ಕಾರಣವಾದಾಗ ಪೂಜಾ ನಿರ್ದೇಶಕರ ಬಳಿ ಅಳಲು ತೋಡಿಕೊಂಡರಂತೆ. ಈಗ ಅವರಲ್ಲಿ ದೃಶ್ಯದ ಬಗ್ಗೆ ಅಳುಕಿಲ್ಲ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ತೃಪ್ತಿ ಇದೆ.

ಚಿತ್ರದ `ಕಳ್ಳಿ ಕಳ್ಳಿ~ ಹಾಡನ್ನು ಚಿತ್ರೀಕರಿಸಲು ನಿರ್ದೇಶಕರು ನಡೆಸಿದ ಹೆಣಗಾಟ ಅಷ್ಟಿಷ್ಟಲ್ಲ. ಹಾಡಿಗೊಂದಿಷ್ಟು ಲವಲವಿಕೆ ಬೇಕಿತ್ತು. ಲಕ್ಷ್ಮಿಯ ಪ್ರಭಾವಳಿಯಲ್ಲಿ ಸಿಲುಕಿದ್ದ ಪೂಜಾ ಎಷ್ಟು ಯತ್ನಿಸಿದರೂ ಹಾಡಿಗೆ ಹೆಜ್ಜೆ ಹಾಕುತ್ತಿಲ್ಲ. ಸರಿ ಚಿತ್ರೀಕರಣ ಅಲ್ಲಿಗೇ ನಿಂತಿತು. ಮರುದಿನವೇ ಅವರು ಹಾಡಿಗೆ ಹೊಂದಿಕೊಂಡದ್ದು.

ಚಿತ್ರದ ಪಾತ್ರಕ್ಕಾಗಿ ಪ್ರಶಸ್ತಿ ನಿರೀಕ್ಷಿಸುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಪೂಜಾ ನಕ್ಕರು. `ಪ್ರಶಸ್ತಿ ಬರುತ್ತದೆ ಎಂದುಕೊಂಡಿಲ್ಲ. ಬಂದರೆ ಚೆನ್ನಾಗಿರುತ್ತೆ ಅಷ್ಟೇ. ಪ್ರಶಸ್ತಿಗಿಂತ ಪ್ರೇಕ್ಷಕರು ಒಪ್ಪಿಕೊಳ್ಳುವುದು ಮುಖ್ಯ~ ಎಂದರು. 
 
ಬೀಡಿ ಮತ್ತು ಮಸಾಲೆ

`ದಂಡುಪಾಳ್ಯ~ ಚಿತ್ರದಲ್ಲಿ ಪೂಜಾ ಬೀಡಿ ಸೇದುವ ಸನ್ನಿವೇಶವಿದೆ. ಬೀಡಿ ಏನು, ಬೀಡಿಯ ಹೊಗೆ ಕಂಡರೂ ಆಗದವರು ಅವರು. ಆದರೆ ಪಾತ್ರ ಕೇಳಬೇಕಲ್ಲ? ಬೀಡಿ ತುಟಿಗಿಟ್ಟರು. ಘಾಟು, ಕೆಟ್ಟ ವಾಸನೆ. ಕೆಮ್ಮಿ, ಕ್ಯಾಕರಿಸಿ ದೃಶ್ಯ ಪೂರೈಸಿದಾಗ ಹೋದ ಜೀವ ಬಂದಂಥ ಸ್ಥಿತಿ. ಅವರು ಹೆಚ್ಚು ಮೋಜು ಅನುಭವಿಸಿದ ದೃಶ್ಯ ಹಂದಿಯನ್ನು ಹೆಗಲ ಮೇಲೆ ಎತ್ತಿಕೊಂಡದ್ದು.

ನಿರ್ದೇಶಕರು ಅದರ ಕಾಲುಗಳನ್ನು ಕಟ್ಟಿರಲಿಲ್ಲ. ಅದು ಸುಮ್ಮನಿರುವ ಹಂದಿಯಲ್ಲ. ಕ್ಷಣಕ್ಷಣಕ್ಕೂ ಕೊಸರಾಡುವ, ಒಂದೇ ಸಮನೆ ಕಿರುಚುವ, ಕೋರೆ ಹಲ್ಲುಗಳಿಂದ ದಾಳಿ ಮಾಡುವ ಅದರ ಭಾರ ಮೂವತ್ತು ಕೇಜಿಗೂ ಹೆಚ್ಚು. ಭಯದಿಂದ ಕಂಗಾಲಾಗಿದ್ದ ಅದು ಎಷ್ಟೋ ಬಾರಿ ಪೂಜಾ ಹೆಗಲಿಂದ ಜಿಗಿದದ್ದೂ ಇದೆ.

ಲಕ್ಷ್ಮಿ ಹಂದಿ ಮಾಂಸಕ್ಕೆ ಮಸಾಲೆ ಅರೆಯುವ ದೃಶ್ಯ ಇದೆ. ಅದರಲ್ಲಿ ಒಂದು ಸಂಭಾಷಣೆ ಹೀಗಿದೆ: ನಮ್ಮ ಲಕ್ಷ್ಮಿ ಮುಖ ನೋಡಿದರೆ ಎಲ್ಲಾ ಹಂದಿಗಳು ಬಂದು ಬಂದು ಮಸಾಲೆ ಅರೆಸಿಕೊಳ್ಳುತ್ತವೆ. ನಿರ್ದೇಶಕರು ಈ ಸಂಭಾಷಣೆ ಹೇಳಿದ್ದೇ ತಡ ಬಿದ್ದು ಬಿದ್ದು ನಕ್ಕರು, ದೃಶ್ಯಕ್ಕೆ ಕಟ್ ಕೂಡ ಹೇಳದೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT