ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್‌ಮಂಜನ ಕಳವಳ

Last Updated 27 ಜನವರಿ 2011, 18:30 IST
ಅಕ್ಷರ ಗಾತ್ರ

‘ಕೋಮಲು ಮಸ್ತು ಕಮಾಲು..’
ಹಾಡು ಅನುರಣಿಸುತ್ತಿತ್ತು. ಕೋಮಲ್ ಮುಖದಲ್ಲಿ ಆತಂಕದ ಗೆರೆ!
ತಮ್ಮ ನಿರ್ಮಾಣದ ‘ಕಳ್‌ಮಂಜ’ ಚಿತ್ರವನ್ನು ಫೆಬ್ರುವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಕೋಮಲ್ ಸಹಜವಾಗಿಯೇ ತಲ್ಲಣಗೊಂಡಿದ್ದರು. ಮುಕ್ತ ಮನಸ್ಸಿನಿಂದ ತಮ್ಮ ಏಳುಬೀಳುಗಳನ್ನು ಹೇಳಿಕೊಳ್ಳುತ್ತಾ ಮಾತನಾಡಿದ ಅವರ ಗಂಟಲು ಪದೇ ಪದೇ ಒಣಗತೊಡಗಿತು.

ಚಿತ್ರದ ಹಾಡುಗಳ ಪ್ರದರ್ಶನ ಮಾಡಿದ ಅವರು ಚಿತ್ರಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಕರೆದಿದ್ದರಂತೆ. ಆದರೆ, ‘ಯಾರೂ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಾರೆವ್ಹಾ’ ಚಿತ್ರದ ಸೋಲು ಭಯ ಹುಟ್ಟಿಸಿದೆ. ಈ ಚಿತ್ರ ಯಶಸ್ಸಾಗದಿದ್ದರೆ ತಾವು ನಿರ್ಮಾಣ ಮಾಡುವ ಕೆಲಸಕ್ಕೆ ಮತ್ತೆ ಕೈ ಹಾಕುವುದಿಲ್ಲ’ ಎನ್ನುತ್ತಾ ಒಮ್ಮೆ ನೀರು ಗುಟುಕರಿಸಿದರು.

‘ಕಡಿಮೆ ಚಿತ್ರಗಳಲ್ಲಿ ನಟಿಸಿ ಮಾಡಿದ ಹಣವನ್ನು ಸುರಿದು ಎಲ್ಲೂ ಕೊರತೆಯಾಗದಂತೆ ಚಿತ್ರ ಮಾಡಿದ್ದೇನೆ. ಅದರ ಯಶಸ್ಸು ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ. ಇದೇ ನನ್ನ ಮೊದಲ ಅಥವಾ ಕೊನೆಯ ಚಿತ್ರವಾಗಲಿದೆ’ ಎಂದು ಹೇಳಿದ ಅವರು, ರಾಜ್ಯದಾದ್ಯಂತ ಒಟ್ಟು 80 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರ ಒಂದೇ ಥಿಯೇಟರ್‌ನಲ್ಲಿ ಬಿಡುಗಡೆಯಾದರೆ ಸಣ್ಣ ಚಿತ್ರ ಎಂದು ಜನ ತಿಳಿಯುತ್ತಾರೆ. ಅದರಿಂದ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಕಡಿಮೆ ಬಾಡಿಗೆಯ ಚಿತ್ರಮಂದಿರಗಳನ್ನೇ ಅವರು ಹುಡುಕಿದ್ದಾರಂತೆ. ಅಲ್ಲದೇ ಬೆಂಗಳೂರಿಗಿಂತ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡಿದ್ದಾರಂತೆ.

ವಿಶ್ವಕಪ್ ಆರಂಭವಾಗುತ್ತಿರುವ ಆತಂಕ ಇದ್ದರೂ ಅವರು ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಬಿಜಿಯಾಗಿದ್ದಾರೆ. ಬೆಂಗಳೂರಿನಿಂದ ಬೀದರ್‌ತನಕ ಜಾಹೀರಾತು ಗಾಡಿ ಸಂಚರಿಸಲಿದ್ದು, ಅದು ಎಂ.ಜಿ.ರಸ್ತೆಯಲ್ಲಿ ಒಂದು ದಿನ ನಿಲ್ಲಲಿದೆಯಂತೆ. ಹೋರ್ಡಿಂಗ್‌ಗಳಿಗೂ ಸಾಕಷ್ಟು ಖರ್ಚು ಮಾಡಿರುವ ಕೋಮಲ್ ಜನರಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದ್ದಾರೆ.

ಪ್ರಚಾರ ಮಾಡದ ಕಾರಣ ಕೆಲವು ಸಿನಿಮಾಗಳು ಎಂದು ಬಿಡುಗಡೆಯಾದವು ಎಂದು ಜನರಿಗೆ ಗೊತ್ತಿರುವುದಿಲ್ಲ. ಅದನ್ನು ಟಿವಿಯಲ್ಲಿ ನೋಡಿ ಚಿತ್ರ ಚೆನ್ನಾಗಿದೆ. ಯಾಕೆ ಓಡಲಿಲ್ಲ? ಎಂದು ಕೆಲವೊಮ್ಮೆ ಪ್ರಶ್ನಿಸುತ್ತಾರೆ. ಆ ಪ್ರಶ್ನೆಯನ್ನು ಎದುರಿಸಬಾರದು ಎಂಬ ಉದ್ದೇಶದಿಂದ ಕೋಮಲ್ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರಂತೆ.

‘ಎರಡು ವರ್ಷಗಳ ಹಿಂದೆ ಎಮಿಲ್‌ಗೆ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿದ್ದು ಈ ಕಷ್ಟಕಾಲದಲ್ಲಿ ಸಹಾಯವಾಯಿತು. ಅವರು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ’ ಎಂದು ಹೇಳಿದ ಕೋಮಲ್- ಚಿತ್ರಕ್ಕಾಗಿ 80 ಸಾವಿರ ಅಡಿ ರೀಲು ಖರ್ಚಾಯಿತು, ಅದನ್ನು 13 ಸಾವಿರಕ್ಕೆ ಇಳಿಸಬೇಕಾಯಿತು ಎಂದು ಮಾಹಿತಿ ನೀಡಿದರು.

‘ನಡೆಯುವ ಎಲ್ಲಾ ಘಟನೆಗೆ ನಾನೇ ಕಾರಣನಾದರೂ ನನಗೇನೂ ಗೊತ್ತಿರುವುದಿಲ್ಲ. ಅದಕ್ಕೇ ನಾನು ‘ಕಳ್‌ಮಂಜ’. ಚಿತ್ರಕ್ಕೆ ಸೆನ್ಸಾರ್ ಯು ಪ್ರಮಾಣ ಪತ್ರ ನೀಡಿದೆ. ಚಿತ್ರದಲ್ಲಿ ತಿರುವುಗಳು, ಹಾಸ್ಯ, ಪ್ರೇಮ ಎಲ್ಲಾ ಇದೆ’ ಎಂದು ಚಿತ್ರದ ಬಗ್ಗೆ ಭರವಸೆಯ ಮಾತನಾಡಿದ ಕೋಮಲ್- ಮತ್ತೆ ನೀರು ಗುಟುಕರಿಸಿದರು.

ಸಂಗೀತ ನಿರ್ದೇಶಕ ಎಮಿಲ್- ಹಾಡುಗಳು ಚೆನ್ನಾಗಿ ಬರುವುದಕ್ಕೆ ಸಹಕರಿಸಿದ ಗೀತರಚನೆಕಾರರು ಮತ್ತು ಗಾಯಕರಿಗೆ ವಂದಿಸಿದರು. ಚಿತ್ರದ ನಿರ್ದೇಶಕ ರಮೇಶ್ ಪ್ರಭಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT