ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಇಂಚಲ ಸರಸ್ವತಿ ಪುತ್ರ: ದೊಡ್ಡರಂಗೇಗೌಡ

Last Updated 6 ಜುಲೈ 2012, 9:05 IST
ಅಕ್ಷರ ಗಾತ್ರ

ಬೆಳಗಾವಿ: `ಸಮತೋಲನ ಸಾಹಿತ್ಯ ನೀಡಿದ ದೊಡ್ಡ ಕವಿ ಎಸ್.ಡಿ.ಇಂಚಲ ಅವರು ಕೇವಲ ಕಾವ್ಯ ಮಾತ್ರ ಬರೆಯದೇ, ಕಾವ್ಯಾರಾಧನೆ ಮಾಡಿರುವ ಸರಸ್ವತಿ ಪುತ್ರರು~ ಎಂದು ಕವಿ, ವಿಧಾನ ಪರಿಷತ್ ಸದಸ್ಯ ದೊಡ್ಡರಂಗೇಗೌಡ ವರ್ಣಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಎಸ್.ಡಿ. ಇಂಚಲ ಕಾವ್ಯ ಪ್ರತಿಷ್ಠಾನ ಗುರುವಾರ ಆಯೋಜಿಸಿದ್ದ ಎಸ್.ಡಿ.ಇಂಚಲ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಚಲ ಅವರು ನವೋದಯ ಕವಿ, ಸಮನ್ವಯ ಕವಿಯ ಸಾಲಿಗೆ ಸೇರುತ್ತಾರೆ.
 
ಅವರ ಕಾವ್ಯಗಳಲ್ಲಿ ಕನ್ನಡಾಭಿಮಾನ ಉಕ್ಕಿ ಬರುತ್ತದೆ. ಪ್ರಕೃತಿಯ ಬಗ್ಗೆ ಮುಕ್ತ ಕಂಠದಿಂದ ಬರೆದಿರುವ ಅವರು, ನಾಡು- ನುಡಿಗೆ ಆದರ್ಶ ಕನ್ನಡಿಗರಾಗಿ ಸೇವೆ ಸಲ್ಲಿಸಿದ್ದಾರೆ. ವಿನಯಶೀಲರಾಗಿ ಬರೆದಿರುವ ಅವರು, ಹಿರಿಯರ ಬಗ್ಗೆ ಮುಗ್ಧ ಮಗುವಿನ ಹಾಗೆ ಬರೆದಿದ್ದಾರೆ ಎಂದರು.

ಸಹಜ ಕವಿಯಾಗಿರುವ ಇಂಚಲ ಅವರು, ಸಂತನಾಗಿ, ದಾರ್ಶನಿಕನಾಗಿ ಕಾವ್ಯ ರಚಿಸಿದ್ದಾರೆ. ಸಾಮಾಜಿಕ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರ ಬರವಣಿಗೆ ಇದೆ ಎಂದು ಬಣ್ಣಿಸಿದರು.ಅಭಿನಂದನ ಭಾಷಣ ಮಾಡಿದ ರಾಜಕೀಯ ವಿಶ್ಲೇಷಕ ಪ್ರೊ. ಆರ್.ವಿ.ಹೊರಡಿ, ಕವಿ ಆಗಬೇಕಾದವರಿಗೆ ಮೊದಲು ಮಿಡಿಯುವ ಹೃದಯ, ಮನಸ್ಸು, ಸಾಮಾಜಿಕ ಪ್ರಜ್ಞೆ, ಸಂವೇದನಾಶೀಲತೆ, ರಾಷ್ಟ್ರಾಭಿಮಾನ ಇರಬೇಕು.

ಆದರೆ ಇತ್ತಿತ್ತಲಾಗಿ ಯಾರು ಬೇಕಾದರೂ ಕಾವ್ಯ ಬರೆಯುತ್ತಾರೆ. ಇಂಥವರ ಕಾವ್ಯಗಳಲ್ಲಿ ಭಾವ, ಸೂಕ್ತ ಭಾಷೆ, ಹೊಸ ವಿಚಾರ ಇರುವುದಿಲ್ಲ. ಜನರನ್ನು ಜಾಗೃತಗೊಳಿಸುವ ಕಾವ್ಯ ಇಂದು ಮೂಡಿಬರಬೇಕಾದ ಅಗತ್ಯವಿದೆ. ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸುವ ಕವಿತೆಗಳು ಹೆಚ್ಚಾಗಿ ಬರಬೇಕಿವೆ ಎಂದರು.

ಪ್ರಶಸ್ತಿ ಪಡೆದಿರುವ ಅನಸೂಯಾ ಕಾಂಬಳೆ ಅವರ ಕೃತಿಯಲ್ಲಿ ಹೊಸ ವಿಚಾರಗಳಿವೆ ಎಂದ ಅವರು, ಎಸ್.ಡಿ.ಇಂಚಲ ಅವರೊಂದಿಗಿದ್ದ ತಮ್ಮ ಒಡನಾಟವನ್ನು ಸ್ಮರಿಸಿದರು.ಪ್ರೊ. ಬಿ.ಎಸ್.ಗವಿಮಠ ಅವರು ಬರೆದಿರುವ ಹಾಗೂ ಆದಿತ್ಯ ಪ್ರಕಾಶನ ಪ್ರಕಟಿಸಿರುವ ಮುಕ್ತ ಮುಕ್ತ ಪುಸ್ತಕವನ್ನು ಪತ್ರಕರ್ತ ಡಾ. ಸರಜೂ ಕಾಟ್ಕರ್ ಬಿಡುಗಡೆ ಮಾಡಿ, ಬೆಳಗಾವಿಯ ಸಮಗ್ರ ಚಿತ್ರಣ ಪುಸ್ತಕದಲ್ಲಿದೆ ಎಂದರು.

ಮರಾಠಿ ಭಾಷಿಕ ಸಂಘ- ಸಂಸ್ಥೆಗಳಿಗೆ ನೋಂದಾಯಿತವಾಗದಿದ್ದರೂ ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಮರಾಠಿ ಪರ ಕಾರ್ಯಕ್ರಮಗಳಿಗಾಗಿ ಮೂರು ಕೋಟಿ ರೂಪಾಯಿ ಪ್ರತಿ ವರ್ಷ ಸಹಾಯಧನ ನೀಡುತ್ತದೆ. ಆದರೆ ಕರ್ನಾಟಕ ಸರ್ಕಾರ ಇಂಥ ಸಂಘ- ಸಂಸ್ಥೆಗಳಿಗೆ ಯಾವುದೇ ರೀತಿಯ ಸಹಾಯ ನೀಡುತ್ತಿಲ್ಲ. ಆದ್ದರಿಂದ ಸರ್ಕಾರ ಸಹಾಯಧನ ನೀಡುವಂತೆ ಒತ್ತಡ ತರಬೇಕು ಎಂದು ದೊಡ್ಡರಂಗೇಗೌಡರಲ್ಲಿ ಮನವಿ ಮಾಡಿದರು.
ಡಾ. ಅನಸೂಯಾ ಕಾಂಬಳೆ ಅವರಿಗೆ ಎಸ್.ಡಿ.ಇಂಚಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 5000 ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ.

ಡಾ. ಗುರುದೇವಿ ಹುಲೆಪ್ಪನವರಮಠ ಮುಕ್ತ ಮುಕ್ತ ಕೃತಿ ಪರಿಚಯಿಸಿದರು. ಡಾ. ಬಿ.ಎಸ್.ಗವಿಮಠ ಅಧ್ಯಕ್ಷತೆ ವಹಿಸಿದ್ದರು. ನಾಗನೂರು ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಇಂಚಲ ವೇದಿಕೆಯಲ್ಲಿದ್ದರು.ನಯನಾ ಗಿರಿಗೌಡರ ಪ್ರಾರ್ಥಿಸಿದರು. ಡಾ. ಬಸವರಾಜ ಜಗಜಂಪಿ ಸ್ವಾಗತಿಸಿದರು. ಸಿ.ಬಿ.ಮಠಪತಿ ನಿರೂಪಿಸಿದರು. ಡಾ. ರಾಮಕೃಷ್ಣ ಮರಾಠೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT