ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಬದಲಾವಣೆಗೆ ಹೊಂದಿಕೊಳ್ಳಲೇಬೇಕು:ಗುಲ್ಜಾರ್

Last Updated 9 ಜುಲೈ 2012, 9:05 IST
ಅಕ್ಷರ ಗಾತ್ರ

ಮಂಗಳೂರು: `ಕವಿಯೊಬ್ಬ ಜಗತ್ತಿನ ಆಗುಹೋಗುಗಳಿಗೆ ತಕ್ಷಣ ಸ್ಪಂದಿಸುತ್ತಿರಬೇಕು. ಬದಲಾವಣೆಗೆ ಹೊಂದಿಕೊಳ್ಳದೆ ಹೋದರೆ ಆತ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಸಾಧ್ಯವಿಲ್ಲ~ ಎಂದು ಖ್ಯಾತ ಕವಿ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಅಭಿಪ್ರಾಯಪಟ್ಟರು.

ಕೊಂಕಣಿ ಕವಿತೆಗಳ ಉತ್ತೇಜನಕ್ಕಾಗಿ ಸ್ಥಾಪನೆಗೊಂಡ ಕವಿತಾ ಟ್ರಸ್ಟ್ ವತಿಯಿಂದ ಭಾನುವಾರ ಇಲ್ಲಿನ ಎಸ್‌ಡಿಎಂ ಕಾಲೇಜಿನಲ್ಲಿ ಹಮ್ಮಿಕೊಂಡ ಕವನಗಳ ಬಗೆಗಿನ ಜೇಮ್ಸ ಮತ್ತು ಶೋಭಾ ಮೆಂಡೋನ್ಸಾ ದತ್ತಿ ಉಪನ್ಯಾಸದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

`ಕವಿಯ ಭಾವನೆಗಳಿಗೆ ತಡೆ ಒಡ್ಡುವುದು ಕಷ್ಟ, ಆದರೆ ಸಿನಿಮಾ ಹಾಡುಗಳನ್ನು ರಚಿಸುವಾಗ ಆತನ ಭಾವನೆಗಳನ್ನು ನಿರ್ದಿಷ್ಟ ಪದಗಳಿಗೆ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ ಮತ್ತು ನಿರ್ದಿಷ್ಟ ಅವಧಿಯೊಳಗೆ ಅದನ್ನು ಬರೆದು ಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.

ಬದಲಾಗುತ್ತಿರುವ ಜಗತ್ತಿನೊಂದಿಗೆ ಕವಿಯೂ ಬದಲಾಗದಿದ್ದರೆ ಆತನ ಅಸ್ತಿತ್ವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಸಾಧ್ಯವಿಲ್ಲ~ ಎಂದು ಅವರು ಹೇಳಿದರು.

ಆರಂಭದಲ್ಲಿ ಕವನ ಎಂದರೆ ಪ್ರಾಸ ಎಂಬಷ್ಟರ ಮಟ್ಟಿಗೆ ಪ್ರಾಸಕ್ಕೆ ಮಹತ್ವ ಇತ್ತು. ಬರಬರುತ್ತ ಪ್ರಾಸ ಮಾಯವಾಗಿ ಗದ್ಯವೇ ಪದ್ಯವಾಗಿ ಬದಲಾಯಿತು. ಭಾವನೆಗಳನ್ನು ವ್ಯಕ್ತಪಡಿಸುವಕ್ಕೆ ಇದು ಬಹಳ ಅನುಕೂಲವಾಗಿ ಪರಿಣಮಿಸಿತು. ಇಂದು ಗದ್ಯವನ್ನು ಪದ್ಯವಾಗಿ, ಪದ್ಯವನ್ನು ಗದ್ಯವಾಗಿ ಬದಲಿಸಿಕೊಂಡು ಸಂತೋಷಪಡಲು ಸಾಧ್ಯವಾಗಿರುವುದು ಇದೇ ಕಾರಣಕ್ಕೆ. ಭಾವನೆಗಳನ್ನು ತಟ್ಟಿ ಮನಸ್ಸನ್ನು ಸಂತೋಷಪಡಿಸುವುದೇ ಕವನದ ಉದ್ದೇಶವಾಗಿದ್ದಾಗ ಈ ಎಲ್ಲ ಬದಲಾವಣೆಗಳೂ ವ್ಯವಸ್ಥೆಗೆ ಸರಿಯಾಗಿ ಒಗ್ಗಿಕೊಳ್ಳುತ್ತವೆ~ ಎಂದು ಗುಲ್ಜಾರ್ ನುಡಿದರು.

ಚಿತ್ರಕ್ಕೆ ಸಾಹಿತ್ಯ ರಚಿಸುವಾಗ ಹೆಚ್ಚಾಗಿ ದೃಶ್ಯ, ಸನ್ನಿವೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕವನ ರಚಿಸಲಾಗಿರುತ್ತದೆ ಎಂದ ಅವರು, ಕವನಗಳನ್ನು ಭಾಷಾಂತರ ಮಾಡುವಾಗ ಸಹ ಕವಿಯ ಭಾವನೆಗಳನ್ನು ಸರಿಯಾಗಿ ಗ್ರಹಿಸುವುದು ಅಗತ್ಯ ಎಂದರು.

ಕೊಂಕಣಿ ಸಹಿತ ದೇಶದ ವಿವಿಧ ಭಾಷೆಗಳಿಂದ ಹಿಂದಿ, ಉರ್ದು ಕವಿಗಳು ಕಲಿಯಬೇಕಾದ ಅದೆಷ್ಟೋ ಸಂಗತಿಗಳಿವೆ ಎಂದು ಹೇಳಿದರು.

ಭಾಷೆಗಿಂತಲೂ ಕವನದಲ್ಲಿ ಮೂಡುವ ಭಾವನೆಯೇ ಹೆಚ್ಚು ಮಹತ್ವದ್ದಾಗಿರುತ್ತದೆ, ಒಬ್ಬೊಬ್ಬರ ಅನುಭವ, ಗ್ರಹಿಕೆಗಳು ಭಿನ್ನವಾಗಿರುವುದರಿಂದ ಅವರು ರಚಿಸುವ ಕವನಗಳು ಸಹ ಭಿನ್ನವಾಗಿಯೇ ಇರುತ್ತದೆ, ಇದನ್ನು ಓದುವಾಗ, ಕೇಳುವಾಗ ವಿಭಿನ್ನ ಅನುಭವ ಉಂಟಾಗುತ್ತದೆ ಎಂದರು.

ಬಳಿಕ ಗುಲ್ಜಾರ್ ಅವರೊಂದಿಗೆ ಮುಕ್ತ ಸಂವಾದ ನಡೆಯಿತು. ಇದೇ ಸಂದರ್ಭದಲ್ಲಿ ಮೆಲ್ವಿನ್ ರಾಡ್ರಿಗಸ್ ಅವರ ಕವನ ಸಂಕಲನವೊಂದನ್ನು ಗುಲ್ಜಾರ್ ಅವರು ಬಿಡುಗಡೆ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT