ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಸಮಯ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಿನಿ ಸಾಹಿತಿಯಾಗಿ ಚಿತ್ರರಂಗದಲ್ಲಿ ದಶಕದ ಯಾನ ಪೂರೈಸಿರುವ ಕವಿರಾಜ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣಗಳೂ ಸಾಕಷ್ಟು. ಬರೆದ ಹಾಡುಗಳ ಸಂಖ್ಯೆ 800ರ ಅಂಚಿಗೆ ತಲುಪಿದೆ. ಫಿಲ್ಮ್‌ಫೇರ್ ಪ್ರಶಸ್ತಿಯೂ ಮುಡಿಗೇರಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಲೇಖನಿಗೆ ಬಿಡುವಿಲ್ಲದ ಕೆಲಸ. ಅವಕಾಶಗಳು ಸಾಲು ಸಾಲಾಗಿ ಅರಸಿ ಬರುತ್ತಿವೆ. ಸ್ನೇಹಿತರ ಜೊತೆಗೂಡಿ ದರ್ಶನ್ ಅಭಿನಯದ `ಬುಲ್ ಬುಲ್~ ಚಿತ್ರ ನಿರ್ದೇಶಿಸಲೂ ಕೈ ಹಾಕಿದ್ದಾರೆ. ಜೊತೆಗೆ ಇದೇ ವರ್ಷ ದಾಂಪತ್ಯ ಗೀತೆ ಹಾಡುವುದಕ್ಕೂ ಮನಸ್ಸು ಮಾಡಿದ್ದಾರೆ. 

ಮಾಧುರ್ಯಭರಿತ ಹಾಡುಗಳು ಜನರ ಮನಸಿನಲ್ಲಿ ಅಜರಾಮರವಾಗಿ ಉಳಿಯುತ್ತದೆ. ಕೆಲವೇ ದಿನ ಕೆಲವು ಜನರನ್ನು ರಂಜಿಸುವ ಹಾಡುಗಳಿಗಿಂತ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಗೀತೆಗಳನ್ನು ನೀಡಬೇಕು ಎಂಬ ಆಶಯ ಅವರದ್ದು. ಹಾಡೆಂದರೆ ಒಂಟಿ ಪಯಣದ ಹಾದಿಯಲ್ಲೂ ನೂರಾರು ಜೊತೆಗಾರರನ್ನು ನೀಡುವ ಮಾಯಾಶಕ್ತಿ ಎನ್ನುವ ಕವಿರಾಜ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ.

ಹೇಗೆನ್ನಿಸಿದೆ 10 ವರ್ಷದ ಹಾಡಿನ ಬದುಕು?
ತುಂಬಾ ಖುಷಿ ನೀಡಿದೆ. ಬರೆಯುವುದು ಹವ್ಯಾಸ ಮತ್ತು ವೃತ್ತಿ ಎರಡೂ ಆಗಿರುವುದರಿಂದ ಅದು ಎಂದೂ ಬೇಸರ ಮೂಡಿಸಿಲ್ಲ. ಆರಂಭದ ದಿನಗಳಲ್ಲಿ ಟಪ್ಪಾಂಗುಚ್ಚಿ ಹಾಡುಗಳಿಗೆ ಹೆಚ್ಚಿನ ಒಲವು ತೋರಿದ್ದೆ. ಆದರೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವುದು ಮಾಧುರ್ಯ ತುಂಬಿದ ಹಾಡುಗಳು ಮಾತ್ರ ಎಂದೆನಿಸಿದೆ. ಇದು ನನ್ನ ಅದೃಷ್ಟದ ವರ್ಷ. ಜನರಿಗೆ ಹಲವು ಹಾಡುಗಳು ಹಿಡಿಸಿವೆ. `ಆಪ್ತರಕ್ಷಕ~ದ ಗೀತೆಗೆ ಪ್ರಶಸ್ತಿಯೂ ಬಂದಿದೆ. `ಸಂಜು ವೆಡ್ಸ್ ಗೀತಾ~ ಚಿತ್ರದ `ಗಗನವೇ ಬಾಗಿ...~ ಹಾಡು ಅಪಾರ ಜನಪ್ರಿಯತೆ ಗಳಿಸಿದ ಬಳಿಕ ಜನ ಏನನ್ನು ಇಷ್ಟಪಡುತ್ತಾರೆ ಎಂಬುದು ಅರಿವಾಗಿದೆ. 

ಅಮೆರಿಕದಲ್ಲಿರುವ ಕನ್ನಡಿಗರೊಬ್ಬರು ತಮ್ಮ ಪುಟ್ಟಮಗಳು ಸಂಗೀತ ಕೇಳಿ ಆ ಹಾಡನ್ನು ಇಷ್ಟಪಟ್ಟಿದ್ದಳು. ಅದರ ಅರ್ಥ ಬಿಡಿಸಿ ಹೇಳಿದ ಬಳಿಕ ಭಾರತದಲ್ಲಿ ಪ್ರೀತಿಯೆಂದರೆ ಎಷ್ಟು ಮಹತ್ವ ನೀಡುತ್ತಾರೆ ಎಂದು ಆಶ್ಚರ್ಯ ಪಟ್ಟಿದ್ದಳು ಎಂದು ಫೋನ್ ಮೂಲಕ ತಿಳಿಸಿದಾಗ ಬದುಕು ಸಾರ್ಥಕ ಎಂದೆನಿಸಿತು.

ಹಾಗಾದರೆ ಅಂತಹ ಹಾಡುಗಳಿಗೇ ಸೀಮಿತವಾಗುತ್ತೀರಾ?
ಹಾಗೇನಿಲ್ಲ. ಗೀತ ರಚನಕಾರನಾಗಿ ನಿರ್ದೇಶಕರು ಮತ್ತು ಜನ ಬಯಸುವುದು ಎರಡನ್ನೂ ನೀಡಬೇಕು. ಮೆಲೋಡಿ ಹಾಡು ಮಾತ್ರವಲ್ಲ ಬೇರೆ ಬೇರೆ ಬಗೆಯ ಹಾಡುಗಳನ್ನು ಬಯಸುವ ವರ್ಗವೂ ಇದೆ. ಅವರನ್ನೂ ಮರೆಯುವಂತಿಲ್ಲ. ಅದಕ್ಕಾಗಿಯೇ `ಊರಿಗೊಬ್ಳೆ ಪದ್ಮಾವತಿ...~ಯಂತಹ ಹಾಡುಗಳನ್ನೂ ಬರೆಯುತ್ತೇನೆ.

ಪದಗಳಿಗೆ ಸ್ಫೂರ್ತಿ?
ಹುಟ್ಟಿ ಬೆಳೆದ ತೀರ್ಥಹಳ್ಳಿ-ಹೊಸನಗರದ ಪರಿಸರ. ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಅದರ ಘಟನೆಗಳೇ ಯಾವುದೋ ಗಳಿಗೆಯಲ್ಲಿ ಸ್ಫೂರ್ತಿ ನೀಡುತ್ತದೆ. ಏಕಾಂತದಲ್ಲಿ ಟ್ಯೂನ್ ಮೆಲುಕು ಹಾಕುತ್ತಾ ನಿದ್ರೆಗೆ ಜಾರುತ್ತೇನೆ. ನನಗೇ ಗೊತ್ತಿಲ್ಲದಂತೆ ಪದಗಳು ಮನಸಿಗೆ ಬಂದು ಥಟ್ಟನೆ ಎಚ್ಚರವಾಗುತ್ತದೆ.

`ಗಗನವೇ ಬಾಗಿ...~ ಹಾಡು ಹುಟ್ಟಿದ ಸಮಯ?
`ಸಂಜು ವೆಡ್ಸ್ ಗೀತಾ~ ಚಿತ್ರದ ನಿರ್ದೇಶಕ ನಾಗಶೇಖರ್ ಸನ್ನಿವೇಶದಲ್ಲಿ ನಾಯಕಿಯ ಭಾವ ಹೇಗಿರುತ್ತದೆ ಎಂಬುದನ್ನು ತಲೆಗೆ ಚೆನ್ನಾಗಿ ತುಂಬಿದ್ದರು. ಅದರ ಬಗ್ಗೆಯೇ ಯೋಚಿಸುತ್ತ ಈಜುಕೊಳವೊಂದರ ಬಳಿ ಕುಳಿತಿದ್ದಾಗ ಅದರ ನೀರಿನಲ್ಲಿ ಶುಭ್ರ ನೀಲಿ ಆಕಾಶದ ಪ್ರತಿಬಿಂಬ ಕಂಡಿತು. ಆಗಸವೇ ಕೆಳಗೆ ಬಂದು ನೀರಿನೊಂದಿಗೆ ಸಂಭಾಷಣೆಯಲ್ಲಿ ತೊಡಗಿದಂತೆ ಭಾಸವಾಗುತ್ತಿದ್ದ ಆ ದೃಶ್ಯ ಕಂಡು ತಟ್ಟನೆ ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ ಎಂಬ ಸಾಲು ಹೊಳೆಯಿತು.

ಚಿತ್ರರಂಗದಲ್ಲಿ ಕಹಿ ಅನುಭವ?
ವೈಯಕ್ತಿಕವಾಗಿ ಆಗಿಲ್ಲ. ಆದರೆ ಒಟ್ಟಾರೆ ಯುವ ಚಿತ್ರಸಾಹಿತಿಗಳಿಗೆ ಸರಿಯಾದ ಪ್ರೋತ್ಸಾಹ ದೊರಕುತ್ತಿಲ್ಲ ಎಂಬ ನೋವಿದೆ. ಇಂದಿನ ಟ್ರೆಂಡ್‌ಗೆ ತಕ್ಕುದಾದ ಸಾಹಿತ್ಯ ರಚನೆ ಮಾಡುತ್ತೇವೆ. ಅದರಲ್ಲಿ ಒಳ್ಳೆಯ ಸಾಹಿತ್ಯವೂ ಇವೆ, ಇಷ್ಟವಾಗದಂಥವೂ ಇವೆ. ಹೊಸಬರೆಂದ ಮಾತ್ರಕ್ಕೆ ಹಳೆಯ ತಲೆಮಾರಿನ ಚಿತ್ರಸಾಹಿತಿಗಳೊಟ್ಟಿಗೆ ಗುರುತಿಸದೆ ನಮ್ಮನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ್ಲ.

ಕನ್ನಡ ಗೀತೆಗಳಿಗೆ ಮಾರುಕಟ್ಟೆ ಇಲ್ಲವೆಂಬ ಮಾತು ಕೇಳಿಬರುತ್ತಿದೆಯಲ್ಲ?
ಖಂಡಿತವಾಗಿಯೂ ಇದೆ. ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿರುವ ಐಟಿ ಉದ್ಯೋಗಿಗಳು, ಹೊರರಾಜ್ಯದವರು, ಉತ್ತರ ಭಾರತೀಯರು ಕನ್ನಡ ಹಾಡುಗಳನ್ನು ಹೆಚ್ಚಾಗಿ ಕೇಳುವುದನ್ನು ಗಮನಿಸಿದ್ದೇನೆ. ಹಾಗೆ ನೋಡಿದರೆ ಬೇರೆ ಭಾಷೆಗಿಂತ ಇಲ್ಲಿಯೇ ಇಂಪಾದ ಸಾಹಿತ್ಯ ಮತ್ತು ಸಂಗೀತಕ್ಕೆ ಆದ್ಯತೆ ನೀಡುವ ಹಾಡುಗಳು ಹೆಚ್ಚು ಬರುತ್ತಿರುವುದು. ಆಡಿಯೊ ವಿಚಾರದಲ್ಲೂ ಕನ್ನಡ ಬೇರೆ ಭಾಷೆಗಳೊಂದಿಗೆ ಪೈಪೋಟಿ ಎದುರಿಸುತ್ತಿದೆ. ಅದನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ಛಾತಿಯೂ ಇದೆ.

ಸತತ ಸೋಲುಗಳು ಚಿತ್ರರಂಗವನ್ನು ಕಾಡುತ್ತಿದೆಯೇ?
ಇದು ನಿರಾಶವಾದದ ಮಾತು. ನನ್ನ ಪ್ರಕಾರ ಕನ್ನಡ ಚಿತ್ರರಂಗಕ್ಕಿದು ಸುವರ್ಣಯುಗ. ಹಿಂದಿ ಸೇರಿದಂತೆ ಭಾರತದ ವಿವಿಧ ಭಾಷೆಗಳ ಚಿತ್ರಗಳು ಮಕಾಡೆ ಮಲಗುತ್ತಿರುವಾಗ ಕನ್ನಡದಲ್ಲಿ ಚಿತ್ರಗಳು ಗೆಲ್ಲುತ್ತಿವೆ. ಸೋತ ಚಿತ್ರಗಳೂ ಇವೆ. ಆದರೆ ಸೋಲು ಸಹಜ. ವಾಸ್ತವವಾಗಿ ಕನ್ನಡ ಚಿತ್ರಗಳ ಮಾರುಕಟ್ಟೆ ವಿಶಾಲವಾಗಿರದಿದ್ದರೂ ಅದರ ಮಿತಿಯಲ್ಲಿಯೇ ಗೆಲ್ಲುತ್ತಿದೆ. `ಸಂಜುವೆಡ್ಸ್ ಗೀತಾ~, `ಹುಡುಗರು~, `ಜಾನಿ ಮೇರಾ ನಾಮ್~, `ಕಿರಾತಕ~ ಹೀಗೆ ಚಿತ್ರಗಳು ಗೆಲ್ಲುತ್ತಿವೆ. ಹಾಡುಗಳೂ ಹಿಟ್ ಆಗಿವೆ. ಆದರೆ ನಮ್ಮವರ ನೆಗೆಟಿವ್ ಧೋರಣೆ ಗೆಲುವನ್ನು ಮರೆಮಾಚಿಸುತ್ತದೆ.

ಕನ್ನಡದ ಗಾಯಕರ ಅವಗಣನೆ ಆಗುತ್ತಿದೆ ಎನ್ನುವ ಆರೋಪದ ಬಗ್ಗೆ?
ನಿಜ. ಇತ್ತೀಚಿನ ದಿನಗಳಲ್ಲಿ ಸೋನು ನಿಗಂ, ಶ್ರೇಯಾ ಘೋಷಾಲ್, ಕುನಾಲ್ ಮುಂತಾದವರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ. ಆದರೆ ಹಿಂದಿನ ದಿನಗಳಿಂದಲೂ ನೋಡಿದಾಗ ಕನ್ನಡಿಗರು ಕನ್ನಡ ಚಿತ್ರ ಸಂಗೀತವನ್ನು ಎಂದೂ ಆಳಿದ್ದಿಲ್ಲ. ಎಸ್‌ಪಿಬಿ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ ಹೀಗೆ ಇವರೆಲ್ಲರೂ ಪರಭಾಷೆಯವರೇ. ಆಗ ದಕ್ಷಿಣ ಭಾರತೀಯರು, ಈಗ ಉತ್ತರ ಭಾರತೀಯರು. ಅಷ್ಟೇ ವ್ಯತ್ಯಾಸ. ಕನ್ನಡಿಗರಿಗೆ ಅವರನ್ನು ಎದುರಿಸುವ ಸಾಮರ್ಥ್ಯವಿದೆ. ಆದರೆ ಅದನ್ನು ಪ್ರದರ್ಶಿಸುತ್ತಿಲ್ಲ. ರಾಜೇಶ್‌ಕೃಷ್ಣನ್, ನಂದಿತಾ, ಶಮಿತಾರಂತಹ ಕೆಲವರು ಮಾತ್ರ ಕನ್ನಡದ ಮುಂಚೂಣಿ ಗಾಯಕರಾಗಿ ಕಾಣಿಸುತ್ತಿದ್ದಾರೆ. ಆದರೆ ಕನ್ನಡದಲ್ಲಿ ಪ್ರತಿಭಾವಂತರು ಸಾಕಷ್ಟಿದ್ದಾರೆ. ವೇದಿಕೆಯನ್ನು ಸರಿಯಾಗಿ ಬಳಸಿಕೊಂಡು ಮುಂದೆ ಬಂದರೆ ನಮ್ಮ ಚಿತ್ರರಂಗವನ್ನು ನಾವೇ ಸಂಪೂರ್ಣ ಆಳುವ ಕಾಲ ಖಂಡಿತ ಬರುತ್ತದೆ.

ಭವಿಷ್ಯದ ದಿನಗಳು?
ಗೊತ್ತಿಲ್ಲ. ಬದಲಾಗುವ ಜನರ ಮನೋಭಾವಕ್ಕೆ ತಕ್ಕಂತೆ ಹಾಡುಗಳನ್ನು ಬರೆಯುತ್ತೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT