ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆಯ ಹಕ್ಕಿ ರೆಕ್ಕೆ ಬಿಚ್ಚಿದ ಊರು ದಾವಣಗೆರೆ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದಾವಣಗೆರೆ: ಇರುವೆಯೊಂದು ತನ್ನ ಮರಿಗೆ
ನೀರೊಳೀಜು ಕಲಿಸಲೆಂದು
ಹರಿವ ತೊರೆಯ ತಡಿಗೆ ಬಂದು
ನಿಂತುಕೊಂಡಿತು.
– ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರು 14ನೇ ವಯಸ್ಸಿನಲ್ಲಿ ಬರೆದ ಪದ್ಯದ ಸಾಲುಗಳಿವು.
ಆ ವೇಳೆಗಾಗಲೇ ‘ಮರಿ ಕವಿ’ ನಿಧಾನವಾಗಿ ತನ್ನ ಬೇರೂರಲು ಆರಂಭಿಸಿದ್ದ.
ಇಂತಹ ಪ್ರತಿಭೆಯ ಸಾಹಿತ್ಯ ಕೃಷಿಗೆ ಸ್ಫೂರ್ತಿ ನೀಡಿದ್ದು ದಾವಣಗೆರೆ. ಜಿಎಸ್ಎಸ್‌ ಒಳಗಿನ ಕವಿತೆಯ ಹಕ್ಕಿ ರೆಕ್ಕಿ ಬಿಚ್ಚಿ ಹಾರಾಡಲು ಶುರುವಿಟ್ಟ ಊರು.

ಅವರು ಕವಿಯಾಗಿ ರೂಪಗೊಳ್ಳು­ತ್ತಿದ್ದ ದಿನಗಳಲ್ಲಿ ಬೆಂಬಲ ಮತ್ತು ಪೋಷಣೆ ನೀಡಿದ ಸ್ಥಳ ದಾವಣಗೆರೆ. ಪ್ರೌಢಶಾಲೆಯ ದಿನಗಳಲ್ಲಿ ಅವರಿಗೆ ಸಾಹಿತ್ಯದ ಬಗ್ಗೆ ಒಲವು ಮೂಡಿಸಿದ್ದು ಒಂದಾದರೆ, ಅವರು ಬಿಎ ಆನರ್ಸ್‌ ಮುಗಿಸಿ ಕಾಲೇಜಿನ ಉಪನ್ಯಾಸಕರಾಗಿ ಸೇರಿಕೊಂಡಿದ್ದು ದಾವಣಗೆರೆ­ಯಲ್ಲಿಯೇ.

ಬೆಳೆಯುವ ಸಿರಿ ಮೊಳಕೆಯಲ್ಲಿ... ಎನ್ನುವಂತೆ ‘ತರುಣ ಕವಿ’ಯಾಗಿ ಗುರುತಿಸಿಕೊಂಡಿದ್ದೂ ಇದೇ ಮಣ್ಣಿನಲ್ಲಿ.
‘ನಾನು ಬರೆಯಲು ಶುರು ಮಾಡಿದ್ದು ದಾವಣಗೆರೆ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ. ಆಗ ನನಗೆ 14 ವರ್ಷ ವಯಸ್ಸು’ ಎಂದು ಜಿಎಸ್‌ಎಸ್‌ ತಮ್ಮ ಆತ್ಮಕತೆ ‘ಚತುರಂಗ’ದಲ್ಲಿ ದಾಖಲಿಸಿದ್ದಾರೆ.

ಜಿಎಸ್‌ಎಸ್‌ ಅವರಿಗೆ ಪ್ರೌಢಶಾಲೆ ಹಂತದಲ್ಲಿ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಿದವರು ರೇವಣ್ಣ ಎಂಬ ಗಣಿತದ ಮೇಷ್ಟ್ರು. ಅವರು, ತಮಗೆ ಹಾಕುತ್ತಿದ್ದ ಬದಲಿ ತರಗತಿಗಳಲ್ಲಿ ಗಣಿತದ ಬದಲಿಗೆ, ಸಾಹಿತ್ಯ ಕೃತಿಗಳನ್ನು ತಂದು ಓದುತ್ತಿದ್ದರಂತೆ. ಕುವೆಂಪು ಅವರ ಕೆಲ ಕವಿತೆಗಳನ್ನು ಹೇಳುತ್ತಿದ್ದರಂತೆ. ಗಣಿತದ ಮೇಷ್ಟ್ರು ಮೂಲಕ ಪರಿಚಿತವಾದ ಕುವೆಂಪು, ಜಿಎಸ್‌ಎಸ್‌ ಅವರ ಕಾವ್ಯಾಸಕ್ತಿ ಹಾಗೂ ಕಾವ್ಯ ನಿರ್ಮಿತಿಯ ಸ್ಫೂರ್ತಿಯಾದರು.

ರೇವಣ್ಣ ಅವರು ಜಯದೇವ ಹಾಸ್ಟೆಲ್‌ನ ವಾರ್ಡನ್‌ ಆಗಿದ್ದರು. ವಿದ್ಯಾರ್ಥಿಗಳಿಗೆ ವಿಷಯ ಕೊಟ್ಟು ಬರೆದು ಓದಬೇಕು ಎನ್ನುತ್ತಿದ್ದರಂತೆ. ಆಗ, ಜಿಎಸ್‌ಎಸ್‌ ಬರೆದ ಪದ್ಯವೇ ‘ಇರುವೆಯೊಂದು ತನ್ನ ಮರಿಗೆ..’

ಏಕಾಂಗಿಯಾದೆ ಎನಿಸಿತು...: ಅವರು ಪ್ರಾಥಮಿಕ ಶಿಕ್ಷಣ ಪಡೆದದ್ದು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಕೋಟೆಹಾಳ್‌ ಗ್ರಾಮ­ಗಳಲ್ಲಿ. ಈಗಿನ ಚಿತ್ರದುರ್ಗ ಬಳಿಯ ಹೊಸದುರ್ಗ ಸಮೀಪದ ಬೆಲಗೂರಿನಲ್ಲಿ ಮಾಧ್ಯಮಿಕ ಶಾಲೆ ಪರೀಕ್ಷೆ ಕಟ್ಟಿದ್ದರು. ‘ಲೋಯರ್‌ ಸೆಕೆಂಡರಿ’ ಪರೀಕ್ಷೆ ಅಂದಿನ ದಿನಗಳಲ್ಲಿ ಮುಖ್ಯ ಹಂತವಾಗಿತ್ತು. ತಾವು ‘ಮಿಡಲ್‌ ಸ್ಕೂಲ್‌’ ಪರೀಕ್ಷೆ ಬರೆದು ಹೈಸ್ಕೂಲ್‌ಗೆ ಸೇರಿದ್ದನ್ನು ಜಿಎಸ್‌ಎಸ್‌ ಹೀಗೆ ದಾಖಲಿಸಿದ್ದಾರೆ.

‘ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಇಬ್ಬರು ಮಾತ್ರ ಪಾಸಾಗಿದ್ದೆವು. ತಡ ಮಾಡದೇ ತಂದೆ ದಾವಣಗೆರೆ ಹೈಸ್ಕೂಲಿಗೆ ಸೇರಿಸಿ, ಹೋದರು. ದಾವಣಗೆರೆ ರೈಲು­ನಿಲ್ದಾಣದ ಬಳಿ ನಿಂತ ನನಗೆ, ಏಕಾಂಗಿಯಾಗಿ ಬಿಟ್ಟೆನೆಂಬ ಭಯ ಸ್ವಲ್ಪ ಕಾಲ ದಿಗ್ಮೂಢನನ್ನಾಗಿ ಮಾಡಿತು’ ಎಂದು ಹೇಳಿಕೊಂಡಿದ್ದಾರೆ.

ಆಪತ್ತು ತಂದಿದ್ದ ಬಿಸಿಲಿನ ಕುಣಿತ!...: ಪ್ರೌಢಶಾಲೆಗೆ ಬರುವಾಗಿನ ದಿನಗಳನ್ನು ಜಿಎಸ್‌ಎಸ್‌ ಕಳೆದದ್ದು ಹೊನ್ನಾಳಿಯ ತುಂಗಭದ್ರಾ ನದಿಯ ತೀರದಲ್ಲಿ. ಕೋಟೆಹಾಳು ಹಾಗೂ ರಾಮಗಿರಿಯ ರಮ್ಯ ಗ್ರಾಮೀಣ ವಾತಾವರಣದಲ್ಲಿ. ‘ಒಂದು ರಾತ್ರಿ ನಾವಿದ್ದ ಮನೆಯ ಹೊರಗೇ ಹುಲಿಯ ಘರ್ಜನೆ ಕೇಳಿದ ನೆನಪು ಇಂದಿಗೂ ಕಿವಿಗೆ ಕಟ್ಟಿದ ಹಾಗಿದೆ’ ಎಂದು ಜಿಎಸ್‌ಎಸ್‌ ದಾಖಲಿಸಿದ್ದಾರೆ.

‘ತುಂಗಾ ನದಿ ನೀರಿನ ಮೇಲೆ ಥಳಥಳ ಹೊಳೆದು, ನನ್ನನ್ನು ಬಳಿಗೆ ಕರೆದ ಆ ಬಿಸಿಲಿನ ಕುಣಿತ ಇಂದಿಗೂ ನೆನಪಿನಲ್ಲಿದೆ’ ಎಂದು ತಂದೆ–ತಾಯಿ ಜತೆ ಇದ್ದಾಗ ನಡೆದ ಘಟನೆ, ನೀರಿನಲ್ಲಿ ಮುಳುಗಿದಾಗಿನ ಆಪತ್ತು ಹಾಗೂ ತಾಯಿ (ವೀರಮ್ಮ) ರಕ್ಷಿಸಿದ ಪ್ರಸಂಗ ಬರೆದುಕೊಂಡಿದ್ದಾರೆ.

ಮೊದಲು ಪಾಠ ಮಾಡಿದ್ದು ‘ಚಿತ್ರಾಂಗದಾ’:  1949ರಲ್ಲಿ ಬಿಎ ಆನರ್ಸ್‌ ಪ್ರಥಮ­ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಾರದಲ್ಲಿಯೇ, ದಾವಣಗೆರೆಯ ಡಿಆರ್ಎಂ ಕಾಲೇಜಿಗೆ ತಾತ್ಕಾಲಿಕ ಉಪನ್ಯಾಸಕರಾಗಿ ನೇಮಿಸಲಾಗಿದೆ ಎಂಬ ಆದೇಶ ಹೊತ್ತ ಮೈಸೂರು ವಿವಿಯ ಪತ್ರ ಮನೆ ಬಾಗಿಲಿಗೆ ಬರುತ್ತದೆ. 1949 ಜೂನ್‌ 24ರಂದು ಕೆಲಸಕ್ಕೆ ಹಾಜರಾಗಬೇಕು ಎಂಬ ಆದೇಶ ಇತ್ತಾದರೂ ಒಂದೆರಡು ದಿನ ಮೊದಲೇ ದಾವಣಗೆರೆಗೆ ಬರುತ್ತಾರೆ ಜಿಎಸ್‌ಎಸ್‌. ಅವರು ಅಂದು ‘ಸೀನಿಯರ್‌ ಇಂಟರ್‌ ಮೀಡಿಯೆಟ್‌’ ವಿದ್ಯಾರ್ಥಿಗಳಿಗೆ ಮೊದಲು ಮಾಡಿದ ಪಾಠ ಕುವೆಂಪು ಅವರ ‘ಚಿತ್ರಾಂಗದಾ’ ಕಾವ್ಯ. ಆ ವಿದ್ಯಾರ್ಥಿಗಳಲ್ಲಿ ಎಂ.ಚಿದಾನಂದ­ಮೂರ್ತಿ ಒಬ್ಬರು. ಕಚ್ಚೆಪಂಚೆ ಉಟ್ಟು, ಪಂಜಾಬು ಸ್ಲಿಪರ್‍ಸ್‌ ಹಾಕಿಕೊಂಡು ವುಲನ್ ಕೋಟು ಹಾಕಿಕೊಂಡು ತರಗತಿಗೆ ಬರುತ್ತಿದ್ದರು ಎಂದು ಹಿರಿಯರು ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT