ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಸಮಯದ ಮಾಗಿ

Last Updated 31 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ನಾಯಕ ನಟನೊಬ್ಬನ ಚೊಚ್ಚಿಲ ಸಿನಿಮಾ ಎಂದಮೇಲೆ ಹಾಡು ಕುಣಿತಕ್ಕೆ ಭರ್ಜರಿ ಅವಕಾಶ ಇರಲೇಬೇಕು. ಇದು ಗಾಂಧಿನಗರದ ನಂಬಿಕೆ. ಆದರೆ ಈಗಷ್ಟೇ ನಟನೆಯ ಕನಸುಗಳನ್ನು ಕಾಣುತ್ತಿರುವ ನಿಶಾಂತ್ ಚಿನ್ನಸ್ವಾಮಿ ಕಲಾತ್ಮಕ ಸಿನಿಮಾದ ಮೂಲಕ ಸಹೃದಯರಿಗೆ ಮುಖಾಮುಖಿ ಆಗುವ ತವಕದಲ್ಲಿದ್ದಾರೆ. ಆ ಮಟ್ಟಿಗೆ ನಿಶಾಂತ್ ಅವರದ್ದು ಭಿನ್ನದಾರಿ.

ನಿಶಾಂತ್ ಕನ್ನಡದ ಒಳ್ಳೆಯ ಕವಿಗಳಲ್ಲಿ ಒಬ್ಬರಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಮಗ. ಅಪ್ಪನ ಅಭಿರುಚಿ ಮಗನ ಸಿನಿಮಾದಲ್ಲೂ ಎದ್ದುಕಾಣುತ್ತಿದೆ. ನಟನಾಗಲೇಬೇಕೆಂದು ಹೊರಟಿರುವ ಮಗನ ಬೆನ್ನಿಗೆ ಅಪ್ಪನೂ ನಿಂತಿದ್ದಾರೆ. ಅವರ ಕುಟುಂಬದ ವತಿಯಿಂದಲೇ ಸಿನಿಮಾ ನಿರ್ಮಿಸಲಾಗುತ್ತಿದೆ. ಚಿತ್ರದ ಹೆಸರು ‘ಮಾಗಿಯ ಕಾಲ’.

‘ಮಾಗಿಯ ಕಾಲ’ ಈಶ್ವರಚಂದ್ರ ಅವರ ಕಾದಂಬರಿ ಆಧರಿತ ಸಿನಿಮಾ. ಶಿವರುದ್ರಯ್ಯನವರ ನಿರ್ದೇಶನದಲ್ಲಿ ಸಿನಿಮಾ ನಿರ್ಮಿಸಲು ಹೊರಟ ಮೂಡ್ನಾಕೂಡು ಕುಟುಂಬ ಹತ್ತಾರು ಕಥೆ ಕಾದಂಬರಿಗಳನ್ನು ತಿರುವಿಹಾಕಿದ ನಂತರ ಆಯ್ದುಕೊಂಡದ್ದು ಈಶ್ವರಚಂದ್ರರ ಕಾದಂಬರಿಯನ್ನು. ‘ಇದನ್ನೇ ಯಾಕೆ ಆಯ್ದುಕೊಂಡಿದ್ದು?’ ಎನ್ನುವ ಪ್ರಶ್ನೆಗೆ-

‘ಮಕ್ಕಳನ್ನು ಪೋಷಕರು ದತ್ತು ತೆಗೆದುಕೊಳ್ಳುವುದು ಲೋಕರೂಢಿ. ಆದರೆ, ಈಶ್ವರಚಂದ್ರರ ಕಥೆಯಲ್ಲಿ ಮಕ್ಕಳೇ ಪೋಷಕರನ್ನು ದತ್ತು ತೆಗೆದುಕೊಳ್ಳುತ್ತಾರೆ. ಈ ವಿಭಿನ್ನತೆಯೇ ನಮ್ಮೆಲ್ಲರ ಗಮನಸೆಳೆಯಿತು. ಸಂಬಂಧಗಳ ತಂತುಗಳು ಸಡಿಲವಾಗುತ್ತಿರುವ ಆಧುನಿಕ ಸಂದರ್ಭದಲ್ಲಿ, ನಂಟುಗಳ ಮರುಶೋಧಕ್ಕೆ ಒತ್ತಾಯಿಸುವ ಈ ಕಥೆ ಗಮನಸೆಳೆಯಿತು’ ಎನ್ನುವುದು ನಿಶಾಂತ್‌ರ ಸ್ಪಷ್ಟ ಉತ್ತರ.

‘ಮಾಗಿಯ ಕಾಲ’ ನಟನಾಗಿ ನಿಶಾಂತ್ ಅವರಿಗೆ ಸವಾಲೆನ್ನಿಸಿದೆ. ಹೇಳಿಕೇಳಿ ಅವರು ರಂಗಭೂಮಿಯಿಂದ ಬಂದ ಪ್ರತಿಭೆ. ಅವರ ತಂದೆ ಮೂಡ್ನಾಕೂಡು ಚಿನ್ನಸ್ವಾಮಿ ಕೂಡ ರಂಗಾಸಕ್ತರು. ಅಪ್ಪ ನಾಟಕ ಮಾಡಿಸುತ್ತಿದ್ದ ದಿನಗಳಲ್ಲಿ ಅವರ ಹಿಂದೆ ಓಡಾಡಿಕೊಂಡಿದ್ದ ಹುಡುಗನಲ್ಲೂ ಬಣ್ಣದ ಗೀಳು ಬೆಳೆದಿತ್ತು. ಆ ಆಸೆಯಿಂದಲೇ ಪಿಯುಸಿ ಮುಗಿಸಿದ ನಂತರ ಅಭಿನಯದಲ್ಲೇ ಬದುಕು ಕಟ್ಟಿಕೊಳ್ಳುವುದು ಎಂದು ನಿರ್ಧರಿಸಿ, ಆಸೆಕಂಗಳಿಂದ ಕದ ತಟ್ಟಿದ್ದು ಹೆಗ್ಗೋಡಿನ ‘ನೀನಾಸಂ’ ರಂಗಶಿಕ್ಷಣ ಕೇಂದ್ರವನ್ನು. ಅಲ್ಲಿ ಪಳಗಿದ ನಂತರ ಒಂದಷ್ಟು ನಾಟಕಗಳಲ್ಲಿ ಸಾಮು ಮಾಡಿದ್ದಾಯಿತು. ಕೊಂಚ ಆತ್ಮವಿಶ್ವಾಸ ಕುದುರಿದ ನಂತರವೇ ನಿಶಾಂತ್ ಸಿನಿಮಾಗೆ ಬಣ್ಣಹಚ್ಚಿಕೊಂಡಿದ್ದು.

ರಂಗಭೂಮಿಯಲ್ಲಿ ಇಡೀ ವೇದಿಕೆಯನ್ನೇ ಆಡಂಬೊಲದಂತೆ ಬಳಸಿಕೊಳ್ಳುವ ಅವಕಾಶ ಹಾಗೂ ಸಿನಿಮಾದಲ್ಲಿ ಫ್ರೇಮ್‌ಗಳ ಚೌಕಟ್ಟು ಅವರಿಗೆ ಬೇರೆಬೇರೆಯೇ ಅನ್ನಿಸಿದೆ. ಸದ್ಯಕ್ಕೆ ಥಾಯ್ ಚಿ ಮಾರ್ಷಲ್ ಆರ್ಟ್ ಕಲಿಯುತ್ತಿರುವ, ನಾಯಕನ ಸೌಷ್ಟವಕ್ಕೆ ತನ್ನನ್ನು ಕಟೆದುಕೊಳ್ಳುತ್ತಿರುವ ನಿಶಾಂತ್ ಕೂಡ ಕಲಾವಿದನಾಗಿ ಮಾಗಿಯ ಹಂಬಲದಲ್ಲಿದ್ದಾರೆ. ಮೊದಲ ಸಿನಿಮಾ ತೆರೆಗೆ ಸಿದ್ಧವಾಗುವ ವೇಳೆಗೆ, ಪಾತ್ರ ಎಂಥದೇ ಆದರೂ ನಿಭಾಯಿಸುವ ಆತ್ಮವಿಶ್ವಾಸ ಅವರಿಗೆ ಬಂದಿದೆ. ‘ಮಾಗಿಯ ಕಾಲ’ ಇದೇ ತಿಂಗಳು ತೆರೆಕಾಣಲು ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT