ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಶ್ಯಪ್‌ಗೆ ಮೊದಲ ಸುತ್ತಿನಲ್ಲೇ ಸೋಲು

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸೈನಾ, ಶ್ರೀಕಾಂತ್‌ಗೆ ಅಚ್ಚರಿ ಜಯ
Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಮೇಲೆ ಇಟ್ಟಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಪಿ.ಕಶ್ಯಪ್ ಅವರಿಗೆ ಸಾಧ್ಯವಾಗಲಿಲ್ಲ. ಕಾರಣ ಭಾರತದ ಈ ಆಟಗಾರ ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲು ಕಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಕೆ.ಶ್ರೀಕಾಂತ್ ಅಚ್ಚರಿ ಜಯಕ್ಕೆ ಕಾರಣರಾಗಿದ್ದಾರೆ.

ಸಿರಿ ಪೋರ್ಟ್ ಕ್ರೀಡಾ ಸಮುಚ್ಚಯದಲ್ಲಿ ಬುಧವಾರ ನಡೆದ ಪ್ರಧಾನ ಹಂತದ ಪಂದ್ಯದಲ್ಲಿ ಕಶ್ಯಪ್ 21-13, 21-23, 18-21ರಲ್ಲಿ ಇಂಡೊನೇಷ್ಯಾದ ತೌಫಿಕ್ ಹಿದಾಯತ್ ಅವರಿಗೆ ಶರಣಾದರು. ಆದರೆ ಸೋಲುವ ಮೊದಲು ಕಶ್ಯಪ್ ವೀರೋಚಿತ ಪೈಪೋಟಿ ನೀಡಿದರು.

ತೌಫಿಕ್ ಮಾಜಿ ಅಗ್ರ ರ್‍ಯಾಂಕ್ನ ಆಟಗಾರ. ಅಷ್ಟು ಮಾತ್ರವಲ್ಲದೇ, ವಿಶ್ವ ಚಾಂಪಿಯನ್ ಕೂಡ. ಈ ಆಟಗಾರ ಪ್ರತಿ ಪಾಯಿಂಟ್‌ಗಾಗಿ ತುಂಬಾ ಕಷ್ಟಪಡಬೇಕಾಯಿತು. ಅದರಲ್ಲೂ ಏಳನೇ ರ್‍ಯಾಂಕ್ನ ಆಟಗಾರ ಕಶ್ಯಪ್ ಮೊದಲ ಗೇಮ್ ಗೆದ್ದು ಭರವಸೆ ಮೂಡಿಸಿದ್ದರು.

ರೋಚಕ ಹೋರಾಟಕ್ಕೆ ಕಾರಣವಾದ ಎರಡನೇ ಗೇಮ್‌ನಲ್ಲಿ ಕೊಂಚದರಲ್ಲಿ ಹಿನ್ನಡೆ ಅನುಭವಿಸಿದರು. ಒಂದು ಹಂತದಲ್ಲಿ ಕಶ್ಯಪ್ 21-20ರಲ್ಲಿ ಮುನ್ನಡೆ ಹೊಂದಿದ್ದರು. ಕೊಂಚ ಎಚ್ಚರಿಕೆ ಆಟವಾಡಿದ್ದಲ್ಲಿ ಎದುರಾಳಿಗೆ ಆಘಾತ ನೀಡಬಹುದಿತ್ತು. ಆದರೆ ಸತತ ಮೂರು ಪಾಯಿಂಟ್ ಗೆದ್ದ ಇಂಡೊನೇಷ್ಯಾ ಆಟಗಾರ 1-1 ಸಮಬಲಕ್ಕೆ ಕಾರಣರಾದರು.

ನಿರ್ಣಾಯಕ ಗೇಮ್‌ನಲ್ಲೂ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. 18-18 ಪಾಯಿಂಟ್‌ಗೆ ಬಂದು ನಿಂತಿತ್ತು. ಆದರೆ ಮಹತ್ವದ ಹಂತದಲ್ಲಿ ಎಸಗಿದ ತಪ್ಪುನಿಂದಾಗಿ ಹೈದರಾಬಾದ್‌ನ ಆಟಗಾರ ಪಂದ್ಯ ಕಳೆದುಕೊಂಡರು. ನೆಟ್ ಬಳಿಯ ಡ್ರಾಪ್‌ಗಳ ಮೂಲಕ ಮಿಂಚಿದ ಹಿದಾಯತ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಈ ಹಿಂದೆ ಉಭಯ ಆಟಗಾರರು ಆರು ಬಾರಿ ಮುಖಾಮುಖಿಯಾಗಿದ್ದರು. ಈ ಎಲ್ಲಾ ಪಂದ್ಯಗಳಲ್ಲಿ ಕಶ್ಯಪ್ ಸೋಲು ಕಂಡಿದ್ದರು. ಈಗ ಮತ್ತೊಮ್ಮೆ ಸೋಲು ಎದುರಾಯಿತು.

ಆದರೆ ಭಾರತದ ಮತ್ತೊಬ್ಬ ಆಟಗಾರ ಕೆ.ಶ್ರೀಕಾಂತ್ ಗಮನಾರ್ಹ ಪ್ರದರ್ಶನ ತೋರಿದರು. ಅವರು 21-7, 18-21, 21-12ರಲ್ಲಿ ವಿಶ್ವದ ಆರನೇ ರ್‍ಯಾಂಕ್ನ ಆಟಗಾರ ಡೆನ್ಮಾರ್ಕ್‌ನ ಜನ್ ಒ ಜೋರ್ಗನ್ಸನ್‌ಗೆ ಆಘಾತ ನೀಡಿದರು.

45 ನಿಮಿಷ ನಡೆದ ಈ ಪೈಪೋಟಿಯಲ್ಲಿ ಶ್ರೀಕಾಂತ್ 33 ಸ್ಮ್ಯಾಷ್ ಸಿಡಿಸಿದರು. ಅವರು ಈ ಟೂರ್ನಿಯಲ್ಲಿ ಶ್ರೇಯಾಂಕ ರಹಿತ ಆಟಗಾರ. ಆದರೆ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. ಕರ್ನಾಟಕದ ಅರವಿಂದ್ ಭಟ್ ಸೋಲು ಕಂಡರು. ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದು ಅರವಿಂದ್ 9-21, 9-21ರಲ್ಲಿ ಜಪಾನ್‌ನ ಕೆನಿಚಿ ಟೋಗೊ ಎದುರು ಪರಾಭವಗೊಂಡರು.  ನಾಲ್ಕು ಬಾರಿಯ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್ 13-21, 8-21ರಲ್ಲಿ ತಮ್ಮ ದೇಶದವರೇ ಆದ ಸೌರಭ್ ವರ್ಮ ಎದುರು ಸೋಲು ಕಂಡರು.

ವಿಶ್ವದ ಎರಡನೇ ರ್‍ಯಾಂಕ್ನ ಆಟಗಾರ್ತಿ ಸೈನಾ ಅವರಿಗೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಅವರು 21-12, 21-15ರಲ್ಲಿ ಇಂಡೊನೇಷ್ಯಾದ ಬೆಲಾಟ್ರಿಕ್ಸ್ ಮನುಪುತಿ ಎದುರು ಗೆಲುವು ಸಾಧಿಸಿದರು. 33 ನಿಮಿಷದಲ್ಲಿ ಈ ಪಂದ್ಯ ಮುಗಿದು ಹೋಯಿತು.

ಆದರೆ ಸಯ್ಯಾಲಿ ಗೋಖಲೆ ಸುಲಭವಾಗಿ ಶರಣಾದರು. ಅವರು 8-21, 12-21ರಲ್ಲಿ ವಿಶ್ವದ ಎಂಟನೇ ರ್‍ಯಾಂಕ್ನ ಆಟಗಾರ್ತಿ ಥಾಯ್ಲೆಂಡ್‌ನ ರಚನಾಕ್ ಇಂಟನಾನ್ ಎದುರು ಪರಾಭವಗೊಂಡರು.

ಪುರುಷರ ವಿಭಾಗದ ಡಬಲ್ಸ್‌ನಲ್ಲಿ ತರುಣ್ ಕೋನಾ ಹಾಗೂ ಅರುಣ್ ವಿಷ್ಣು 17-21, 11-21ರಲ್ಲಿ ಥಾಯ್ಲೆಂಡ್‌ನ ಮನೀಪಾಂಗ್ ಜಾಂಗ್‌ಜಿತ್ ಹಾಗೂ ನಿಪಿತ್‌ಫಾನ್ ಎದುರು ಸೋತರು. ಮಿಶ್ರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ವಿ.ದಿಜು 19-21, 21-15, 21-16ರಲ್ಲಿ ಇಂಗ್ಲೆಂಡ್‌ನ ಕ್ರಿಸ್ ಲ್ಯಾಂಗ್ರಿಜ್ ಹಾಗೂ ಹೀದರ್ ಆಲ್ವೆರ್ ಎದುರು ಗೆದ್ದು ಎರಡನೇ ಸುತ್ತಿಗೆ ಮುನ್ನಡೆದರು. ಅಕ್ಷಯ್ ದೇವಾಲ್ಕರ್ ಹಾಗೂ ಪ್ರದ್ನ್ಯಾ ಗಾದ್ರೆ 16-21, 22-20, 21-19ರಲ್ಲಿ ಇಂಗ್ಲೆಂಡ್‌ನ ಆ್ಯಂಡ್ಯೂ ಎಲಿಸ್ ಹಾಗೂ ಲಾರೆನ್ ಸ್ಮಿತ್ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT