ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದ ಕುರುಹು ಸುಖದ ಹುಡುಕಾಟ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

`ನಂಬರ್ ಒನ್ ಪಟ್ಟದ ರೇಸಿಲ್ಲ. ಯಾರನ್ನಾದರೂ ಹಿಂದಿಕ್ಕಬೇಕೆಂಬ ಅನಿವಾರ್ಯ ಇಲ್ಲ. ನನಗಿಷ್ಟವಾದ ಪಾತ್ರಗಳು, ನನಗಿಷ್ಟವಾದ ಕೆಲಸ, ನನ್ನಿಷ್ಟದ ಪ್ರಾಜೆಕ್ಟ್. ಯಾರಿಂದಲೂ ಒತ್ತಾಯವಿಲ್ಲ. ಯಾವುದೇ ಒತ್ತಡವಿಲ್ಲ. ಬದುಕನ್ನು ಸಂತಸದಿಂದ ಅನುಭವಿಸುತ್ತಿದ್ದೇನೆ' ಎಂದು 38ರ ಹರೆಯದ ಕರಿಶ್ಮಾ ಕಪೂರ್ ಹೇಳಿದ್ದಾರೆ.
ಇತ್ತೀಚೆಗೆ ವಿಕ್ರಮ್ ಭಟ್ ನಿರ್ದೇಶನದ `ಡೇಂಜರಸ್ ಇಷ್ಕ್' ಚಿತ್ರದ ಮೂಲಕ ಬಾಲಿವುಡ್ ಮರುಪ್ರವೇಶ ಮಾಡಿರುವ ಕರಿಶ್ಮಾ ತಮ್ಮ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ವೈಯಕ್ತಿಕ ಬದುಕಿನ ಬಗ್ಗೆ ಮಾತ್ರ ಏನೂ ಕೇಳಬೇಡಿ ಎಂದು ತಾಕೀತು ಮಾಡಿಯೇ ಮಾತಿಗಿಳಿದರು ಈ `ಸೆಕ್ಸಿ' ಖ್ಯಾತಿಯ ಹುಡುಗಿ.

2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾದ ನಂತರ ಹಿರಿತೆರೆಯಿಂದ ದೂರವೇ ಉಳಿದಿದ್ದರು. ಈ ಒಂಬತ್ತು ವರ್ಷಗಳ ಅಂತರದಿಂದಾಗಿ ಯಾವತ್ತಾದರೂ ಪಶ್ಚಾತ್ತಾಪ ಪಟ್ಟಿದ್ದಿದೆಯೇ ಎಂಬ ಪ್ರಶ್ನೆಗೆ, `ಇಲ್ಲ. ಅದು ನನ್ನ ನಿರ್ಧಾರವೂ ಆಗಿತ್ತು. ನಾನು ತಾಯ್ತನವನ್ನು ಸಂಪೂರ್ಣವಾಗಿ ಅನುಭವಿಸಬೇಕೆಂದೇ ಸಿನಿಕ್ಷೇತ್ರದಿಂದ ದೂರ ಉಳಿದಿದ್ದೆ. ಇದೀಗ ಸಮೈರಾಗೆ ಏಳು ವರ್ಷಗಳಾಗಿವೆ. ಕಿಯಾನ್‌ಗೆ ಎರಡು ವರ್ಷ. ಇಬ್ಬರೂ ದೊಡ್ಡವರಾಗಿದ್ದಾರೆ ಎನಿಸುತ್ತಿದೆ. ಹಾಗಾಗಿ ಸಾಧ್ಯವಿರುವ ಪ್ರಾಜೆಕ್ಟ್‌ಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ. ಇದನ್ನು ಒಪ್ಪದಿದ್ದರೆ ಇನ್ಯಾರ ಪಾಲಿಗೆ ಎನ್ನುವ ಚಿಂತೆಯೂ ಇಲ್ಲ. ಹಾಗಾಗಿ ನನ್ನ ಬದುಕಿನ ಈ ಘಟ್ಟವನ್ನು ಆನಂದದಿಂದ ಅನುಭವಿಸುತ್ತಿದ್ದೇನೆ' ಎಂದು ಕರಿಶ್ಮಾ ಹೇಳಿದ್ದಾರೆ.

`ಅತಿ ಖುಷಿ ಕೊಡುವ ಪ್ರಸಂಗವೆಂದರೆ ಮಕ್ಕಳೊಡನೆ ಆಟವಾಡುತ್ತ ಸಮಯ ಕಳೆಯುವುದು. ಇಡೀ ದಿನವನ್ನೇ ಅವರಿಗಾಗಿ ಮೀಸಲಿಡುವುದು, ಅವರ ಹಿಂದೆ ಹಿಂದೆಯೇ ಸುತ್ತುವುದು ಸಂತೋಷ ನೀಡುತ್ತದೆ' ಎನ್ನುವ ಕರಿಶ್ಮಾ ಮದುವೆ ಮಾತ್ರ ಸಂತಸದಾಯಕವಾಗಿಲ್ಲ. ಈಗಾಗಲೇ ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದಾರೆಂಬ ಸುದ್ದಿ ಇದೆ. ಈ ಬಗ್ಗೆ ವಿಚಾರಿಸಿದರೆ ಅವರ ಮುಖ ಮತ್ತಷ್ಟು ಕೆಂಪಗಾಗುತ್ತದೆ.

`ವೈಯಕ್ತಿಕ ಜೀವನ ವೈಯಕ್ತಿಕವಾಗಿಯೇ ಇರಲಿ. ಆ ಬಗ್ಗೆ ಏನೂ ಕೇಳುವುದು ಬೇಡ. ಚರ್ಚಿಸುವುದು ಬೇಡ' ಎಂದು ಖಡಾಖಂಡಿತವಾಗಿ ಹೇಳುವ ಅವರು ಜೀವನದಲ್ಲಿ ಕೇವಲ ಹಣ ಹಾಗೂ ಹೆಸರು ಗಳಿಕೆಯೇ ಸರ್ವಸ್ವ ಅಲ್ಲ ಎಂಬುದನ್ನು ಅರಿತುಕೊಂಡಿದ್ದಾರಂತೆ. `ಕೆರಿಯರ್ ಮುಖ್ಯ. ನಮ್ಮ ಆತ್ಮತೃಪ್ತಿ, ನಮ್ಮ ಸಂತೋಷ ನಮ್ಮಂದಿಗಿದ್ದರೆ, ಹಣ ಮತ್ತು ಖ್ಯಾತಿ ನಮ್ಮನ್ನು ಅರಸಿಕೊಂಡು ಬರುತ್ತವೆ. ನಾವೇ ಅವನ್ನು ಅರಸಿ ಹೊರಟರೆ ಅಟ್ಟಿಕೊಂಡು ಓಡಬೇಕಾಗುತ್ತದೆ. ಇದೇ ರೇಸಿನಲ್ಲಿ ನಮ್ಮತನ ಕಳೆದುಕೊಳ್ಳುತ್ತೇವೆ' ಎಂದೆಲ್ಲ ತತ್ವ ನುಡಿಯುತ್ತಾರೆ.

ಒಂದು ದಶಕದವರೆಗೆ ಲೈಮ್‌ಲೈಟ್‌ನಿಂದ ದೂರವಿದ್ದಿರಿ ಅಥವಾ ದೂರವಿರಿಸಿದ್ದರು ಎಂದೆನಿಸಿದೆಯೇ ಎಂಬ ಪ್ರಶ್ನೆಗೆ, `ನನ್ನದು ದುರ್ಬಲ ವ್ಯಕ್ತಿತ್ವ ಅಲ್ಲ. ಒಳಗಿನಿಂದಲೇ ಅತಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಇರುವವಳು. ಹಾಗಾಗಿ ನನ್ನ ಕೆರಿಯರ್ ಹಾಗೂ ಕುಟುಂಬದ ಆಯ್ಕೆ ಬಂದಾಗ ಜನಪ್ರಿಯತೆಯಿಂದ ನಿರಾತಂಕವಾಗಿಯೇ ದೂರ ಉಳಿದಿದ್ದು' ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT