ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದ ಬಿಸಿಲಲ್ಲಿ ಅರಳಿದ ಅಯಾನ್

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೂರು ಮಕ್ಕಳ ತಾಯಿ. ಗಂಡನಿಗೂ ಆಕೆಗೂ ಆಗಿಬರಲಿಲ್ಲ. ದೆಹಲಿಯಿಂದ ಮುಂಬೈಗೆ 1950ರ ದಶಕದಲ್ಲಿ ಆಕೆ ಕಾಲಿಟ್ಟಾಗ ಬದುಕು ಗೋಜಲು ಗೋಜಲು. ಕೈಲಿ ಚಿಕ್ಕಾಸೂ ಇರಲಿಲ್ಲ. ಒಲ್ಲದ ಗಂಡನಿಂದ ವಿಚ್ಛೇದನ ಪಡೆದ ಮೇಲೆ ವರಿಸಲು ಇನ್ನೊಬ್ಬ ಸೂಕ್ತ ವ್ಯಕ್ತಿ ಸಿಕ್ಕರು. ಇನ್ನೊಬ್ಬ ಮಗ ಹುಟ್ಟಿದ.

ಆ ಮಗ ಬೆಳೆಯುವ ಹೊತ್ತಿಗೆ ಮೊದಲೇ ಇದ್ದ ಮೂವರು ಮಕ್ಕಳಲ್ಲಿ ಒಬ್ಬ ಆತ್ಮಹತ್ಯೆ ಮಾಡಿಕೊಂಡ. ಉಳಿದಿಬ್ಬರು ಮಕ್ಕಳು ಅಂಥ ಹಸನಾದ ಬದುಕನ್ನೇನೂ ಕಟ್ಟಿಕೊಳ್ಳಲಿಲ್ಲ. ಹೊಸ ಬಾಳು ಕೊಟ್ಟ ವ್ಯಕ್ತಿಗೆ ಹುಟ್ಟಿದ ಇನ್ನೊಬ್ಬ ಮಗ ಮಾತ್ರ ಅಮ್ಮನ ಸಿಕ್ಕುಗಳನ್ನು ಹತ್ತಿರದಿಂದ ನೋಡುತ್ತಲೇ ಬೆಳೆದ.

ಆ ತಾಯಿಯ ಹೆಸರು ಅಮೃತ್ ಮುಖರ್ಜಿ. ಆಕೆಯ ಎರಡನೇ ಪತಿಗೆ ಹುಟ್ಟಿದ ಮಗನೇ ಅಯಾನ್ ಮುಖರ್ಜಿ. ‘ಯೇ ಜವಾನಿ ಹೈ ದಿವಾನಿ’ ಹಿಂದಿ ಸಿನಿಮಾ 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಮೇಲೆ ಅಯಾನ್ ಹೆಸರಿಗೆ ಬಿ-ಟೌನ್‌ನಲ್ಲಿ ದೊಡ್ಡ ಬೆಲೆ ಬಂದಿದೆ. ಅದಕ್ಕೂ ಮೊದಲು ‘ವೇಕಪ್ ಸಿದ್’ ಹಿಂದಿ ಚಿತ್ರ ನಿರ್ದೇಶಿಸಿದ್ದ ಅಯಾನ್ ಸ್ಕ್ರಿಪ್ಟ್ ಬರೆಯಲು ಮೊದಲು ಕೂತಿದ್ದಾಗ ಇನ್ನೂ ಇಪ್ಪತ್ಮೂರರ ಹುಡುಗ.

ಅಯಾನ್ ಅಜ್ಜ ಎಸ್. ಮುಖರ್ಜಿ ಒಂದು ಕಾಲದಲ್ಲಿ ಸಿನಿಮಾ ತಯಾರಕರಾಗಿಯೇ ಹೆಸರು ಮಾಡಿದ್ದವರು. ರಿಶಿ ಕಪೂರ್, ಜಾವೆದ್ ಅಖ್ತರ್ ಮೊದಲಾದವರು ಅಯಾನ್ ಅವರನ್ನು ಗುರುತಿಸುವುದು ಮುಖರ್ಜಿ ಮೊಮ್ಮಗ ಎಂದೇ. ಆದರೆ ನಿರ್ದೇಶನದ ಅಖಾಡದಲ್ಲಿ ತಮ್ಮತನ ಮೂಡಿಸಲು ಹೊರಟಿರುವ ಹುಡುಗನಿಗೆ ತಾತನ ಹೆಸರಾಗಲೀ, ಅಮ್ಮನ ಕಷ್ಟಗಳಾಗಲೀ, ಅಣ್ಣಂದಿರ ಪರದಾಟವಾಗಲೀ ಮುಖ್ಯವಲ್ಲ.

‘ಕೆಲವರು ಬದುಕಿನಲ್ಲಿ ತಾವು ಅನುಭವಿಸಿದ್ದನ್ನೇ ಸಿನಿಮಾ ಮಾಡುತ್ತಾರೆ. ನನಗೆ ಅದು ತುಂಬಾ ಕಷ್ಟ. ಯಾಕೆಂದರೆ, ನನ್ನ ಅಮ್ಮನ ಬದುಕಿನ ಗೋಜಲುಗಳು ಎಷ್ಟಿದ್ದವೆಂದರೆ ಅವನ್ನು ಸಿನಿಮಾದಲ್ಲಿ ಮೂಡಿಸುವುದು ಸಂಕೀರ್ಣವಾದ ಕೆಲಸವಾಗುತ್ತದೆ. ಕಷ್ಟಗಳ ನಡುವೆ ಬೆಳೆದವರಿಗೆ ಬೆಳಕು ಬೇಗ ಕಾಣುತ್ತದೆ ಎಂದು ಅಜ್ಜ ಆಗಾಗ ಹೇಳುತ್ತಿದ್ದರಂತೆ. ಬಹುಶಃ ನನಗೂ ಅದಕ್ಕೇ ಬೇಗ ಬೆಳಕು ಕಂಡಿರಬೇಕು’- ಇದು ಅಯಾನ್ ಆಡುವ ತತ್ವಜ್ಞಾನಿ ಶೈಲಿಯ ಮಾತು.

ಒಂದು ವೇಳೆ ಕರಣ್ ಜೋಹರ್ ಕಣ್ಣಿಗೆ ಅಯಾನ್ ಬೀಳದೇ ಇದ್ದರೆ ಇಷ್ಟು ಬೇಗ ನಿರ್ದೇಶಕ ಆಗುತ್ತಿರಲಿಲ್ಲ. ಸ್ಕ್ರಿಪ್ಟ್ ಬರೆಯುವ ಗೀಳಿಗೆ ಬಿದ್ದ ಹುಡುಗನ ಚಿಂತನೆಗಳು ಕರಣ್‌ಗೆ ಇಷ್ಟವಾದವು. ‘ನಿನ್ನ ದೃಶ್ಯಗಳನ್ನು ನೀನೇ ನಿರ್ದೇಶಿಸು’ ಎಂದ ಅವರು, ಹುಡುಗನ ಚಿತ್ರಕ್ಕೆ ಹಣವನ್ನೂ ತೊಡಗಿಸಿದರು.

‘ವೇಕಪ್ ಸಿದ್’ ಸಿನಿಮಾ ಮಾಡಿದಾಗ ಅಯಾನ್‌ಗೆ ಹೃದಯದ ಮಾತು ಕೇಳಿದ್ದರು. ‘ಯೇ ಜವಾನಿ ಹೈ ದಿವಾನಿ’ ಮಾಡಿದಾಗ ಕಮರ್ಷಿಯಲ್ ಲೆಕ್ಕಾಚಾರ ಬೆರೆಸಿ, ಹೃದಯದ ಜೊತೆಗೆ ಮೆದುಳಿನ ಮಾತನ್ನೂ ಕೇಳಿದರು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿತು. ಅಯಾನ್ ಹೇಳಿಕೊಳ್ಳುವಂತೆ ಅಷ್ಟು ಕಡಿಮೆ ಅವಧಿಯಲ್ಲಿ 180 ಕೋಟಿ ರೂಪಾಯಿ ದೋಚಿದ ಬಾಲಿವುಡ್‌ನ ಮೂರನೇ ಚಿತ್ರ ಅದು.

ಸ್ಕ್ರಿಪ್ಟ್ ಸಿದ್ಧಪಡಿಸುವಾಗಲೇ ಅಯಾನ್ ತಮ್ಮ ನಾಯಕ-ನಾಯಕಿ ಯಾರಾಗಬೇಕು ಎಂಬುದನ್ನು ಯೋಚಿಸುತ್ತಾರೆ. ಅವರ ಪಾಲಿನ ಶಾಶ್ವತ ನಾಯಕ ರಣಬೀರ್ ಕಪೂರ್. ಬೇರೆ ನಿರ್ಮಾಪಕರ ಚಿತ್ರಗಳಿಗೆ ರಣಬೀರ್ ಸಹಿ ಹಾಕಿದಾಗಲೆಲ್ಲಾ ಅಯಾನ್‌ಗೆ ಸಂಕಟವಾಗುತ್ತದಂತೆ. ತಮ್ಮ ಚಿತ್ರಗಳಲ್ಲಿ ಮಾತ್ರ ಅವರು ನಟಿಸಬೇಕು ಎಂದು ಮನಸ್ಸು ರಚ್ಚೆ ಹಿಡಿದಾಗ, ಅದನ್ನು ಸರಿಪಡಿಸಿಕೊಳ್ಳಲು ತಮ್ಮಷ್ಟಕ್ಕೆ ತಾವು ಒದ್ದಾಡುತ್ತಾರಂತೆ.

ಆ ಸಿಟ್ಟಿನಲ್ಲೇ ಆಗತಾನೆ ಬರೆಯಲಾರಂಭಿಸಿದ್ದ ಒಂದು ಸ್ಕ್ರಿಪ್ಟನ್ನು ಅವರು ಹರಿದುಹಾಕಿದ್ದೂ ಇದೆ. ನಾಯಕಿಯರ ಆಯ್ಕೆಯಲ್ಲೂ ಅಯಾನ್ ಮನಸ್ಸು ಚಂಚಲ. ‘ಯೇ ಜವಾನಿ ಹೈ ದಿವಾನಿ’ ಚಿತ್ರದ ಅರ್ಧ ಸ್ಕ್ರಿಪ್ಟ್ ಬರೆದ ಮೇಲೆ ಅವರಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಸೂಕ್ತ ಎನಿಸಿತು.

ಅವರನ್ನು ಸಂಪರ್ಕಿಸಿದಾಗ, ಸ್ವಲ್ಪ ಡೇಟ್ಸ್ ಸಮಸ್ಯೆ ಇತ್ತು. ಕೆಲವು ದಿನಗಳ ನಂತರ ದಿಢೀರನೆ ಕತ್ರಿನಾ ಕೈಫ್ ಕೂಡ ಆ ಪಾತ್ರಕ್ಕೆ ಹೊಂದಬಹುದು ಎನಿಸಿದ್ದೇ, ಅವರಿಗೂ ಸಂಕ್ಷಿಪ್ತ ಚಿತ್ರಕಥೆಯನ್ನು ಹೇಳಿದರು. ಆದರೆ ಕತ್ರಿನಾ ಆ ಚಿತ್ರದಲ್ಲಿ ನಟಿಸಲು ಆಗಲಿಲ್ಲ. ಕೊನೆಗೆ ದೀಪಿಕಾ ಪಡುಕೋಣೆಗೇ ಆ ಪಾತ್ರ ಸಿಕ್ಕಿತು.

ದೀಪಿಕಾ ಕೂಡ ಅಯಾನ್ ಪಾತ್ರಪೋಷಣೆ ಮಾಡುವ ರೀತಿಯನ್ನು ಶ್ಲಾಘಿಸಿದ್ದಾರೆ. ಕಷ್ಟದ ಬಾಲ್ಯ, ಕಡುಕಷ್ಟದ ಪ್ರೌಢಾವಸ್ಥೆ, ಗೊಂದಲದ ಯೌವನದ ದಿನಗಳಲ್ಲಿಯೇ ಅಯಾನ್ ತಮ್ಮೊಳಗಿನ ಸೃಜನಶೀಲನನ್ನು ಪದೇಪದೇ ಎಚ್ಚರದಿಂದ ಇಟ್ಟುಕೊಂಡಿರುವುದು ಅವರ ಆಪ್ತರಿಗೂ ಸೋಜಿಗ. ವಿಕ್ಷಿಪ್ತ ಎನ್ನಿಸುವ ವ್ಯಕ್ತಿ ಇಷ್ಟು ಕಮರ್ಷಿಯಲ್ ಆಗಿಯೂ ಯೋಚಿಸುವುದು ಹೇಗೆ ಸಾಧ್ಯ ಎಂದು ಅವರೆಲ್ಲಾ ಮಾತಾಡಿಕೊಳ್ಳುತ್ತಾರೆ. ಏಕಾಂತ ಇಷ್ಟಪಡುವ ಅಯಾನ್‌ಗೆ ಸಿನಿಮಾ ಸೆಟ್‌ನ ಲೋಕಾಂತವೂ ಪ್ರಿಯವೇ.
–ಎನ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT