ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದಲ್ಲಿ ಸೂತ್ರಧಾರ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಮರ್ ಸಿಂಗ್‌ಗೆ ಅದೃಷ್ಟ ಕೈಕೊಟ್ಟಿದೆ. `ದೊಡ್ಡವರ ಸಹವಾಸ~ ಅವರ ನೆರವಿಗೆ ಬಂದಿಲ್ಲ. ಮುಟ್ಟಿದೆಲ್ಲವೂ ಮಣ್ಣಾಗುತ್ತಿದೆ. ಅದಕ್ಕೇ ಅವರು ಮೊನ್ನೆ `ತಿಹಾರ್~ಗೆ ತೆರಳುವ ಮೊದಲು ಬೆರಳಿನಲ್ಲಿದ್ದ ಉಂಗುರ ಬಿಚ್ಚಿಟ್ಟಿದ್ದರು. ಅದೇನೇ ಇರಲಿ, `ವೋಟಿಗಾಗಿ ನೋಟು~ ಹಗರಣದಲ್ಲಿ ಅಮರ್ ಆರೋಪಿ. ಮೂರು ವರ್ಷಗಳ ಹಿಂದಿನ ಈ ಹಗರಣ `ಗುಣಿ~ಯೊಳಗಿಂದ ಎದ್ದು ಬಂದು ಅಮರ್‌ಸಿಂಗ್ `ಹಣೆ ಬರಹ~ ಬದಲಾಯಿಸಿದೆ.

`ವೋಟಿಗಾಗಿ ನೋಟು~ ಅವಿಶ್ವಾಸದ ಸುಳಿಗೆ ಸಿಲುಕಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರವನ್ನು ಸಂಕಷ್ಟದಿಂದ ಪಾರು ಮಾಡಲು ಬಿಜೆಪಿ ಸಂಸದರ `ಖರೀದಿ~ಗೆ ನಡೆದ ಹಗರಣ. ಅಮೆರಿಕ ಜತೆ ಅಣು ಒಪ್ಪಂದಕ್ಕೆ ಮುಂದಾದ ಮನಮೋಹನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂದೆ ಪಡೆದ ಬಳಿಕ ಕಂಟಕ ಎದುರಾಗಿತ್ತು. ಸರ್ಕಾರದ ಪರ ಮತಹಾಕಲು ಮೂವರು ಸಂಸದರಿಗೆ ಹಣ ನೀಡಲಾಗಿತ್ತು. ಈ ಹಗರಣವನ್ನು `ಸಿಎನ್‌ಎನ್ ಐಬಿಎನ್~ ಸುದ್ದಿ ವಾಹಿನಿ ರಹಸ್ಯ ಕಾರ್ಯಾಚರಣೆ~ (ಸ್ಟಿಂಗ್ ಆಪರೇಷನ್) ನಡೆಸಿ ಬಯಲಿಗೆಳೆದಿತ್ತು.
ಅಮರ್ ಈ ಹಗರಣದ ಪ್ರಮುಖ ಸೂತ್ರದಾರ ಎಂದು ಭಾವಿಸಲಾಗಿದೆ. ಅವರ ನಿಕಟವರ್ತಿ ಸಂಜೀವ್ ಸಕ್ಸೇನಾ ಮೂವರು ಸಂಸದರಿಗೆ  ಒಂದು ಕೋಟಿ ರೂಪಾಯಿ ಹಸ್ತಾಂತರ ಮಾಡ್ದ್ದಿದರು ಎಂದು ಹೇಳಲಾಗುತ್ತಿದೆ. ಅಶೋಕ್ ಆರ‌್ಗಲ್, ಎಫ್.ಎಸ್. ಕುಲಸ್ತೆ ಮತ್ತು ಮಹಾವೀರ್ ಬಾಗೋರ ಈ ಹಣದ ಕಂತೆಗಳನ್ನು ಲೋಕಸಭೆಗೆ ತಂದು ಪ್ರದರ್ಶಿಸಿದರು.
ರಾಜಕೀಯ ವಲಯದಲ್ಲಿ `ಡೀಲ್ ಫಿಕ್ಸರ್~ ಎಂದೇ ಗುರುತಿಸಲ್ಪಡುವ ಅಮರ್‌ಸಿಂಗ್ ಇದೇ ಹಗರಣದಿಂದ ಜೈಲು ಸೇರಿದ್ದಾರೆ. ಅವರ ಜತೆಗೆ  ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹೆಸರೂ ತಳಕು ಹಾಕಿಕೊಂಡಿದೆ. ಅವರಿನ್ನೂ `ಅಂಕ~ ಪ್ರವೇಶಿಸಿಲ್ಲ.
ಎಂಥ ವಿಪರ್ಯಾಸ! `ಕಿಂಗ್ ಆಫ್ ಸ್ಟಿಂಗ್~ (ರಹಸ್ಯ ಕಾರ್ಯಾಚರಣೆ ಸರದಾರ) ಅಮರ್ ಸಿಂಗ್ ಈಗ ಸ್ಟಿಂಗ್‌ಗೆ ಕೊರಳೊಡ್ಡಿದ್ದಾರೆ. ಇತ್ತೀಚೆಗೆ ಅಣ್ಣಾ ಹಜಾರೆ ಅವರ ನಿರಶನದ ಸಂದರ್ಭದಲ್ಲಿ ಅಮರ್, ಹಿರಿಯ ವಕೀಲ ಶಾಂತಿಭೂಷಣ್ ಅವರ ಸಂಭಾಷಣೆ ಇರುವ ಧ್ವನಿಮುದ್ರಿಕೆ ತಮ್ಮ ಬಳಿ ಇದೆ ಎಂದು ಬಹಿರಂಗಪಡಿಸಿದ್ದರು. ಹೀಗೆ ಖ್ಯಾತನಾಮರ ಸಂಭಾಷಣೆ ಧ್ವನಿ ಮುದ್ರಿಸುವ, ನಡವಳಿಕೆ ಚಿತ್ರಿಸುವ ಅಭ್ಯಾಸ ಅಮರ್ ಸಿಂಗ್‌ಗೆ ಇತ್ತು.
ಬಿಜೆಪಿ ಸ್ಟಿಂಗ್‌ನಲ್ಲಿ ಅಮರ್‌ಸಿಂಗ್ ಕಾಣುವುದಿಲ್ಲ. ಅವರ ಧ್ವನಿ ಕೇಳುವುದಿಲ್ಲ. ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಅವರನ್ನು ಬಂಧಿಸಲಾಗಿದೆ. ಸಂಜಯ್ ಸಕ್ಸೇನ ಮತ್ತು ಬಿಜೆಪಿ ಮುಖಂಡರ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು `ಫಿಕ್ಸ್~ ಮಾಡಲಾಗಿದೆ.
ಈ ಹಗರಣ ಕುರಿತು ವಿಚಾರಣೆ ನಡೆಸಿದ ಕಿಶೋರ್‌ಚಂದ್ರದೇವ್ ನೇತೃತ್ವದ ಸಂಸದೀಯ ಸಮಿತಿ `ಅಮರ್‌ಸಿಂಗ್ ಮತ್ತು ಅಹಮದ್ ಪಟೇಲ್ ವಿರುದ್ಧ ಯಾವುದೇ ಪುರಾವೆಗಳಿಲ್ಲ~ ಎಂದು `ಕ್ಲೀನ್‌ಚಿಟ್~ ನೀಡಿ ಕೈ ತೊಳೆದುಕೊಂಡಿದೆ. ಬಿಜೆಪಿ ಮುಖಂಡರ ಪಾತ್ರ ಕುರಿತು ಸೂಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದೆ. ಈಗ ಸುಪ್ರೀಂಕೋರ್ಟ್ ಪೊಲೀಸರ ಮೇಲೆ ಚಾಟಿ ಬೀಸಿರುವುದರಿಂದ ಹಗರಣ ತಾರ್ಕಿಕ ಅಂತ್ಯ ಕಾಣಬಹುದೇನೋ?
ವಿವಾದಗಳು- ಹಗರಣಗಳು ಅಮರ್‌ಸಿಂಗ್‌ಗೆ ಹೊಸವಲ್ಲ. ಸದಾ ಪ್ರಚಾರದಲ್ಲಿರಲು ಬಯಸುವ ಅವರಿಗೂ ಇವೆಲ್ಲ ಬೇಕು. ಜಯಪ್ರದಾ ಅವರೊಂದಿಗೆ `ಸ್ನೇಹ~, ದೂರವಾಣಿಯಲ್ಲಿ ಬಿಪಾಷಾ ಜತೆ `ಲಲ್ಲೆ~ ಎಲ್ಲವನ್ನೂ ಎಂಜಾಯ್ ಮಾಡುವ ಶೋಕಿಲಾಲ್ ಈ ಅಮರ್‌ಸಿಂಗ್. ಬಾಲಿವುಡ್ ಬಿಗ್ `ಬಿ~ ಅಮಿತಾಬ್, ಉದ್ಯಮಿ ಅನಿಲ್ ಅಂಬಾನಿಯಥ ಅವರಂತಹ ದೊಡ್ಡ ದೊಡ್ಡ ಸೆಲಬ್ರಿಟಿಗಳ ಸಹವಾಸಕ್ಕೆ ಹಾತೊರೆಯುವ ಮನುಷ್ಯ.
ಮೂಲತಃ ಉತ್ತರ ಪ್ರದೇಶ ಅಲಿಗಢ ಜಿಲ್ಲೆಯ ಅಮರ್ ಕೋಲ್ಕತ್ತಾದ ಸೇಂಟ್ ಝೇವಿಯರ್ ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ. ಕೋಲ್ಕತ್ತಾದ `ಹಾರ್ಡ್‌ವೇರ್~ ವ್ಯಾಪಾರಿ.  ಭೋಪಾಲ್‌ನಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಮಾಧವರಾವ್ ಸಿಂಧಿಯಾ ಸಂಪರ್ಕಕ್ಕೆ ಬಂದ ಬಳಿಕ ಆರಂಭವಾದ ಅವರ ಯಾತ್ರೆ ಈಗ ದೆಹಲಿ ರಾಜಕಾರಣದ `ಸೆಂಟರ್ ಸ್ಟೇಜ್~ಗೆ ತಂದು ನಿಲ್ಲಿಸಿದೆ.
ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಹತ್ತಿರವಾಗಲು ಅಮರ್ ಬಯಸಿದ್ದರು. ರಾಜ್ಯದಲ್ಲಿ ವಿದ್ಯುತ್ ಯೋಜನೆ ಆರಂಭಿಸುವ ನೆಪದಲ್ಲಿ ಗೌಡರ ಭೇಟಿ ಮಾಡಿದ್ದರು. ಮುಲಾಯಂ ಸ್ನೇಹ ಅಮರ್‌ಸಿಂಗ್ ಅವರ ರಾಜಕೀಯ ಜೀವನವನ್ನು ಉಜ್ವಲಗೊಳಿಸಿತು.

ರಾಜಸಭೆ ಸದಸ್ಯರೂ ಆದ ಅಮರ್ ಬರೀ ರಾಜಕಾರಣಿಯಲ್ಲ. ನಟರೂ ಹೌದು. ಅಭಿನಯ ಅವರಿಗೆ ಕರಗತವಾಗಿದೆ. ಮೂತ್ರಪಿಂಡ ಜೋಡಣೆಗಾಗಿ ಸಿಂಗಪುರಕ್ಕೆ ಹೋಗುವ ಮುನ್ನ ಹಲವು ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ದೇವಾನಂದ್ ಅವರ `ಚಾರ್ಜ್ ಶೀಟ್~ ಚಿತ್ರದಲ್ಲಿ ಗೃಹಮಂತ್ರಿ ಪಾತ್ರದಲ್ಲಿ ಮಿಂಚಿದ್ದಾರೆ. ಪಾಪ ಈಗ ಅವರೇ `ವೋಟಿಗಾಗಿ ನೋಟು ಹಗರಣ~ದ `ಚಾರ್ಜ್‌ಶೀಟ್‌ನ ಭಾಗವಾಗಿದ್ದಾರೆ.

ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರರಾಗಿದ್ದ ಅಮರ್‌ಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಪಕ್ಷದೊಳಗೆ ಎರಡನೇ ಹಿರಿಯ ನಾಯಕರಾಗಿದ್ದವರು. ಜಯಪ್ರದಾ, ಜಯಾ ಬಚ್ಚನ್, ಅನಿಲ್ ಅಂಬಾನಿ ಮತ್ತಿತರರನ್ನು ಪಕ್ಷದ ತೆಕ್ಕೆಗೆ ಎಳೆದು ತಂದ್ದು ಅವರೇ.

ಅಮರ್ ಅವರಿಂದಾಗಿ ಬಹಳಷ್ಟು ನಾಯಕರು ಸಮಾಜವಾದಿ ಪಕ್ಷ ತೊರೆದಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಹಿಂತಿರುಗಿ ಬಂದಿದ್ದಾರೆ. ಮುಲಾಯಂ ಕುಟುಂಬದ ಸದಸ್ಯರೇ ಅವರನ್ನು ವಿರೋಧಿಸಿದ್ದರು. ಮುಸ್ಲಿಮರ ನಾಯಕ  ಅಜಂಖಾನ್ ಪಕ್ಷ ತೊರೆದಿದ್ದರು. ಸಮಾಜವಾದಿ ಹಿನ್ನೆಲೆಯ ಮೋಹನ್‌ಸಿಂಗ್ ಪಕ್ಷದಿಂದ ದೂರ ಉಳಿದಿದ್ದರು. ಬೇನಿ ಪ್ರಸಾದ್ ವರ್ಮ ಅವರೂ ಮುಲಾಯಂ ಅವರ ಕೈ ಬಿಟ್ಟರು. ಇದರಿಂದ ಪಕ್ಷ ಭಾರಿ ಬೆಲೆ ತೆರಬೇಕಾಯಿತು. ಅಂತಿಮವಾಗಿ 2010ರ ಜನವರಿಯಲ್ಲಿ ಪಕ್ಷಕ್ಕೆ ಅಮರ್‌ಸಿಂಗ್ ವಿದಾಯ ಹೇಳಿದರು.

ಸಮಾಜವಾದಿ ಪಕ್ಷ ಬಿಟ್ಟ ಅಮರ್‌ಸಿಂಗ್ ಅವರನ್ನು ಜಯಪ್ರದಾ ಬಿಟ್ಟರೆ ಬೇರಾರೂ ಹಿಂಬಾಲಿಸಲಿಲ್ಲ. ಜಯಾ ಬಚ್ಚನ್ ರಾಜೀನಾಮೆ ಕೊಡಲಿಲ್ಲ.

 `ನಾನು ಮುಲಾಯಂ ಸಿಂಗರ ಸಮಾಜವಾದಿ ಪಕ್ಷಕ್ಕಾಗಿ ಎರಡೂ ಮೂತ್ರಪಿಂಡಗಳನ್ನು ಕಳೆದುಕೊಂಡೆ. ಪ್ರತಿಯಾಗಿ ನನಗೇನೂ ಸಿಗಲಿಲ್ಲ~ ಎಂದು ಅಮರ್ ಅಲವತ್ತುಕೊಂಡಿದ್ದಾರೆ. ಸಿಂಗಪುರದ ಆಸ್ಪತ್ರೆಯಲ್ಲಿದ್ದಾಗ ಮಿತ್ರರು- ಬಂಧುಗಳನ್ನು ಹೊರತುಪಡಿಸಿದರೆ ನನ್ನಿಂದ ಲಾಭ ಪಡೆದ ರಾಜಕಾರಣಿಗಳ್ಯಾರೂ ಬರಲಿಲ್ಲ ಎಂದು ವಿಷಾದದ ಮಾತುಗಳನ್ನು ಅವರು ಆಡಿದ್ದರು.

ಅಮರ್‌ಸಿಂಗ್‌ಗೆ ಏನೇ ಕೆಲಸ ಹೇಳಿದರೂ ಅದು ಆಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಪ್ರಚಲಿತ. ಹೀಗಾಗಿ ಯಾರಿಗೇನೇ ಆಗಬೇಕಾದರೂ ಅವರು ಬೇಕು. ಬಹುಶಃ ಇದೇ ಮನೋಭಾವವೇ `ವೋಟಿಗಾಗಿ ನೋಟು~ ಹಗರಣಕ್ಕೂ ಕಾರಣವಾಗಿರಬಹುದು. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನು ಹತ್ತಿರ ತರಲು ಅಮರ್ `ಕುದುರೆ ವ್ಯಾಪಾರ~ದ ಹೊಣೆ ಹೊತ್ತಿರಬಹುದು. ನಂತರದ ದಿನಗಳಲ್ಲಿ ಅವರು ಮುಲಾಯಂ ಸಿಂಗ್‌ರಿಂದ ದೂರವಾದರು.

ಅಮರ್‌ಸಿಂಗ್‌ಗೆ ಕಾಂಗ್ರೆಸ್ ಆಶ್ರಯ ಅನಿವಾರ್ಯವಾಗಿರಬಹುದು. ಆದರೆ, ಕಾಂಗ್ರೆಸ್‌ಗೆ ಅವರ ಅನಿವಾರ್ಯತೆ ಇದ್ದಂತಿಲ್ಲ. ಮೊದಲಿಂದಲೂ ಅವರನ್ನು ದೂರವೇ ಇಡಲಾಗಿದೆ. ಈ ಹಗರಣದ ಬಳಿಕವಂತೂ ಹತ್ತಿರದ ಮಾತು ಎಲ್ಲಿಂದ ಬಂತು? ಈಗಂತೂ ಅವರಿಂದ ದೂರ ಉಳಿಯಲು ಕಾಂಗ್ರೆಸ್ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದೆ.

ಸದ್ಯ ಅಮರ್‌ಸಿಂಗ್ ಕಷ್ಟದಲ್ಲಿದ್ದಾರೆ. ಆದರೆ, ವೋಟಿಗಾಗಿ ನೋಟು ಹಗರಣದ ಪ್ರಗತಿ ಕೆಲವರ ಎದೆ ಬಡಿತ ಹೆಚ್ಚಿಸಿದೆ. ಅಮರ್ ಬಾಯಿ ಬಿಟ್ಟರೆ ಗತಿಯೇನು ಎಂಬ ಆತಂಕ ಎದುರಾಗಿದೆ. ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಸ್ಥಾನ ಪಡೆದಿರುವ ಕೆಲವರು `ತಿಹಾರ್~ ಜೈಲಿಗೆ ಪರೇಡ್ ಮಾಡಲಿದ್ದಾರೆ.

ವೋಟಿಗಾಗಿ ನೋಟು ಹಗರಣದ `ಸ್ಟಿಂಗ್ ಆಪರೇಷನ್~ ತನ್ನದೇ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಇದರಿಂದ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ. ಎಲ್ಲರ ಕಣ್ಣು, ಕಿವಿ ತಿಹಾರ ಜೈಲಿನತ್ತ ತಿರುಗಿದೆ. ಅಮರ್‌ಸಿಂಗ್ ಏನಾದರೂ ಹೇಳುವರೇ ಎಂದು ತುದಿಗಾಲಲ್ಲಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT