ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಅಧ್ಯಯನ- ತಮಿಳುನಾಡಿಗೆ ಹೊರಟ ಬೆಟ್ಟ ಹಲಸೂರು ಸದಸ್ಯರು

Last Updated 16 ಅಕ್ಟೋಬರ್ 2012, 19:05 IST
ಅಕ್ಷರ ಗಾತ್ರ

ದುಬಾರಿ ಯಾತ್ರೆ ವಿವಾದಕ್ಕೆ ನಾಂದಿ

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿಯ ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿಯ ಸದಸ್ಯರು ಕಸ ನಿರ್ವಹಣೆ ವ್ಯವಸ್ಥೆ ಕುರಿತಂತೆ  ಅಧ್ಯಯನ ನಡೆಸಲು ಬುಧವಾರ ಕೈಗೊಳ್ಳಲಿರುವ ತಮಿಳುನಾಡು ಪ್ರವಾಸ ವಿವಾದವನ್ನು ಹುಟ್ಟುಹಾಕಿದೆ.

ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ವೊಲ್ವೊ ಬಸ್ ಮೂಲಕ ಪ್ರವಾಸ ಹೊರಟಿರುವುದೇ ಈ ವಿವಾದಕ್ಕೆ ಕಾರಣವಾಗಿದೆ. `ಗ್ರಾಮ ಪಂಚಾಯಿತಿಯಲ್ಲಿ ಒಟ್ಟಾರೆ 17 ಜನ ಸದಸ್ಯರಿದ್ದು, ಕುಟುಂಬದ ಸದಸ್ಯರ ಜೊತೆ ಅವರೆಲ್ಲ ಮೋಜಿನ ಯಾತ್ರೆ ಕೈಗೊಂಡಿದ್ದಾರೆ. ಇದರಿಂದ ಗ್ರಾಮದ ಕಸ ವಿಲೇವಾರಿಗೆ ಒಂದಿನಿತೂ ಪ್ರಯೋಜನ ಇಲ್ಲ~ ಎಂದು ಬೆಟ್ಟ ಹಲಸೂರಿನ ಮುತ್ತಲಮ್ಮ ಪರಿಸರ ವೇದಿಕೆ ಸದಸ್ಯರು ಆರೋಪಿಸಿದ್ದಾರೆ.ಯಾತ್ರೆಯಲ್ಲಿ ಊಟದ ವ್ಯವಸ್ಥೆ ಮಾಡಲು ಐವರು ಅಡುಗೆ ತಯಾರಕರನ್ನೂ ಜೊತೆಯಲ್ಲಿ ಕರೆದೊಯ್ಯಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.

 `ಗ್ರಾಮದಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ನೀರು ಕೂಡ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪ್ರವಾಸದ ಬದಲು ಅದೇ ಹಣವನ್ನು ಗ್ರಾಮಕ್ಕೆ ಬೇಕಾದ ಸೌಲಭ್ಯ ಕಲ್ಪಿಸಲು ಬಳಸಬಹುದು. ಆದರೆ, ಸದಸ್ಯರಿಗೆಲ್ಲ ಮೋಜಿನ ಯಾತ್ರೆಯೇ ಬೇಕಾಗಿದೆ~ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದರೂ ಪ್ರವಾಸವನ್ನು ತಡೆಯುವಂತಹ ಯಾವ ಪ್ರಯತ್ನಗಳೂ ನಡೆದಿಲ್ಲ. ಕಸದ ಅಚ್ಚುಕಟ್ಟಾದ ನಿರ್ವಹಣೆ ಕುರಿತಂತೆ ತಿಳಿಯಲು ದೇವನಹಳ್ಳಿ ವ್ಯಾಪ್ತಿಯಲ್ಲೇ ಸಾಕಷ್ಟು ಮಾದರಿಗಳಿದ್ದವು~ ಎಂದು ಅವರು ತಿಳಿಸಿದ್ದಾರೆ.

ಈ ವಿಷಯವಾಗಿ ಬೆಟ್ಟ ಹಲಸೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಮತಾ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಬುಧವಾರ ಸದಸ್ಯರು ಅಧ್ಯಯನ ಪ್ರವಾಸಕ್ಕೆ ಹೊರಟಿರುವುದು ನಿಜ~ ಎಂದು ಸ್ಪಷ್ಟಪಡಿಸಿದರು.

`17 ಜನರ ಯಾತ್ರೆಗೆ ದೊಡ್ಡ ಬಸ್ಸಿನ ಅಗತ್ಯವಿತ್ತೆ~ ಎಂದು ಕೇಳಿದಾಗ, `ಕೇವಲ ಗ್ರಾಮ ಪಂಚಾಯಿತಿ ಸದಸ್ಯರಲ್ಲದೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಸಹ ಪ್ರವಾಸ ಹೊರಟಿದ್ದಾರೆ. ಪ್ರವಾಸಕ್ಕೆ ಹೊರಟ ಜನರ ಸಂಖ್ಯೆ 45 ದಾಟಿದ್ದರಿಂದ ದೊಡ್ಡ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ~ ಎಂದು ತಿಳಿಸಿದರು.
ಪ್ರವಾಸಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬುದೂ ಸೇರಿದಂತೆ ಉಳಿದ ವಿವರಗಳನ್ನು ನೀಡಲು ಅವರು ನಿರಾಕರಿಸಿದರು.

ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಗ್ರಾಮಗಳಿದ್ದು, ನಾಲ್ಕು ಸಾವಿರ ಮನೆಗಳಿವೆ ಎಂಬ ಅಂದಾಜಿದೆ. ಕಸ ಉತ್ಪಾದನೆ ಆಗುತ್ತಿದ್ದರೂ, ಅದರ ನಿರ್ವಹಣೆಗೆ ಅಧ್ಯಯನ ಪ್ರವಾಸ ಅಗತ್ಯವಿತ್ತೇ ಎನ್ನುವುದು ಪ್ರಶ್ನೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT