ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹದಿಂದ ವಾಸನೆ: ಬಿಜೆಪಿ ಸದಸ್ಯರಿಂದ ಪ್ರತಿಭಟನೆ

Last Updated 1 ಜೂನ್ 2011, 10:45 IST
ಅಕ್ಷರ ಗಾತ್ರ

ಮೈಸೂರು: ಎಕ್ಸೆಲ್ ಪ್ಲಾಂಟ್‌ನಲ್ಲಿ ಕಸ ಸಂಗ್ರಹ ಮಾಡುತ್ತಿರುವುದರಿಂದ ವಿದ್ಯಾರಣ್ಯಪುರಂ ಸುತ್ತಮುತ್ತ ವಾಸಿಸುತ್ತಿರುವ ಜನರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಮಂಗಳವಾರ ಮುಂದುವರೆದ ಕೌನ್ಸಿಲ್  ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು.

ಈ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ಮ.ವಿ.ರಾಮಪ್ರಸಾದ್, `ಚಾಮುಂಡಿಪುರಂವರೆಗೂ ಎಕ್ಸೆಲ್ ಪ್ಲಾಂಟ್‌ನಿಂದ ವಾಸನೆ ಬರುತ್ತಿದೆ. ವಾರ್ಡ್‌ಗೆ ಹೋದರೆ ಜನರು ಘೇರಾವ್ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು. ಇವರಿಗೆ  ವಿರೋಧ ಪಕ್ಷದ ನಾಯಕ ನಂದೀಶ್ ಪ್ರೀತಂ, ಸದಸ್ಯರಾದ ಎಂ.ಡಿ.ಪಾರ್ಥಸಾರಥಿ, ವಿದ್ಯಾ ಅರಸ್, ಸುನಂದಾ ಪಾಲನೇತ್ರ ಸೇರಿದಂತೆ ಇತರರು  ಬೆಂಬಲಿಸಿ ಸೂಚಿಸಿ ಬಾವಿಗೆ ತೆರಳಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.

`ಪ್ರತಿಭಟನೆಯನ್ನು ನಿಲ್ಲಿಸಿ ಚರ್ಚೆಗೆ ಅವಕಾಶ ಮಾಡಿಕೊಡಿ~ ಎಂದು ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಬಿಜೆಪಿ ಸದಸ್ಯರ ಕ್ರಮವನ್ನು ಖಂಡಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಮತ್ತಷ್ಟು ಗದ್ದಲ ಉಂಟಾಯಿತು.

`ವಾಸನೆ ತಡೆಗಟ್ಟಲು ಈಗಾಗಲೇ ರೂ.75 ಲಕ್ಷ ಖರ್ಚು ಮಾಡಲಾಗಿದೆ. ಮತ್ತೆ ಅದಕ್ಕೆ ಹಣವನ್ನು ಹಾಕುವುದು ಸರಿಯಲ್ಲ~ ಎಂದು ಸದಸ್ಯ ಕೆ.ಟಿ.ಚಲುವೇಗೌಡ ತಿಳಿಸಿದರು. ಇದಕ್ಕೆ ಮಾಜಿ ಮೇಯರ್ ಅಯೂಬ್ ಖಾನ್, ಪಿ.ದೇವರಾಜ್, ಟಿ.ದೇವರಾಜ್ ಇತರರು ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ಕೆ.ಎಸ್. ರಾಯ್ಕರ್ `15 ವರ್ಷದಿಂದ ಕಸ ಶೇಖರಣೆ ಮಾಡಿದ್ದು ಇಷ್ಟೆಲ್ಲಾ ಸಮಸ್ಯೆಗೆ ಕಾರಣ. ಬೆಟ್ಟದಂತೆ ಕಸದ ಗುಡ್ಡೆ ಇದೆ. ದ್ರವ ತ್ಯಾಜ್ಯ ಘನ ತ್ಯಾಜ್ಯದೊಂದಿಗೆ ಬೆರೆಸುತ್ತಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಪ್ರತ್ಯೇಕವಾಗಿ ಕಸ ವಿಲೇವಾರಿ ಮಾಡಬೇಕಿತ್ತು.

ಬಡಾವಣೆಯ ಅಲ್ಲಲ್ಲೇ ಕಸ ಸಂಗ್ರಹ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿ ಶೂನ್ಯ ಕಸ ನಿರ್ವಹಣೆಯನ್ನು ಕೆಸರೆ, ಕುಂಬಾರಕೊಪ್ಪಲು ಸೇರಿದಂತೆ ಆರು ಕಡೆ ತರಲಾಗುತ್ತಿದೆ. ಜೂನ್ ತಿಂಗಳಲ್ಲಿ ಇವುಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಮುಂದೆ ಸಮಸ್ಯೆ ಉದ್ಭವಿಸುವುದಿಲ್ಲ~ ಎಂದು ತಿಳಿಸಿದರು.

`ಸುಮಾರು 250 ಟನ್ ಕಸ ಸಂಗ್ರಹ ಆಗಿರುವ ಸ್ಥಳದಲ್ಲಿ ವಾಸನೆ ಬರದಂತೆ ನೋಡಿಕೊಳ್ಳಲು ರಾಸಾಯನಿಕ ಸಿಂಪಡಿಸಲು ಟೆಂಡರ್ ನೀಡಲಾಗಿದೆ. ಈಗಾಗಲೇ ಕೆಲಸ ಪ್ರಾರಂಭ ಮಾಡಲಾಗಿದ್ದು, ಇನ್ನು ಎರಡು ತಿಂಗಳಲ್ಲಿ ಜನರು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುವ ಪರಿಸ್ಥಿತಿ ಬರುತ್ತದೆ~ ಎಂದು ತಿಳಿಸಿದರು.

ಒಳಚರಂಡಿ ಸೇವಾ ಶುಲ್ಕ: ಒಳಚರಂಡಿ ಸೇವಾ ಶುಲ್ಕವನ್ನು ಶೇ.25ರಿಂದ ಶೇ.50 ಕ್ಕೆ ಏರಿಸುವುದನ್ನು ಸಭೆಯ ಆರಂಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ವಿರೋದಿಸಿದರು.

ಸದಸ್ಯ ಅಯೂಬ್ ಖಾನ್ ಒಳಚರಂಡಿ ಸೇವಾ ಶುಲ್ಕವನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು. ಇದರಿಂದ ಜನರಿಗೆ ಹೊರೆಯಾಗಲಿದೆ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಟಿ.ದೇವರಾಜ್ `ಜನರ ಮೇಲೆ ತೆರಿಗೆ ಹಾಕುವುದನ್ನು ಬಿಟ್ಟು ಪಾಲಿಕೆ ಜನರಿಗೆ ಯಾವ ಕೆಲಸ ಮಾಡುತ್ತಿದೆ ಎಂದುದನ್ನು ಅರಿಯಬೇಕು~ ಎಂದರು.

`ಜನರ ಮೇಲೆ ಹೊರೆ ಹಾಕಿ ಎಂದು ನಾವು ಹೇಳುತ್ತಿಲ್ಲ. ಸರ್ಕಾರದಿಂದ ಹೆಚ್ಚು ಹಣ ತರಿಸಿಕೊಂಡು ಈ ಕೆಲಸಕ್ಕೆ ಬಳಸಿ~ ಎಂದು ಸದಸ್ಯ ನಂದೀಶ್ ಪ್ರೀತಂ ಸಲಹೆ ನೀಡಿದರು. `ಶೇ.50ಕ್ಕೆ ಶುಲ್ಕ ಹೆಚ್ಚಳ ಮಾಡಲು ರಾತ್ರಿ 10 ಗಂಟೆಗೆ ಸಹಿ ಹಾಕಲಾಗಿದೆ~ ಎಂದು ಸದಸ್ಯ ಚಲುವೇಗೌಡ ಹೇಳಿದಾಗ ಇದಕ್ಕೆ ಸದಸ್ಯ ಸಂದೇಶ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ಕೆ.ಎಸ್.ರಾಯ್ಕರ್ ಮಾತನಾಡಿ, `ಇದುವರೆಗೆ ಒಳಚರಂಡಿಗೆ ರೂ.12 ಕೋಟಿ ವೆಚ್ಚ ಮಾಡಲಾಗಿದೆ~ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಪಿ.ದೇವರಾಜ್ `ಯಾವ ವಾರ್ಡ್‌ನಲ್ಲಿ ಒಳಚರಂಡಿ ಕೆಲಸ ಆಗಿದೆ. ಹಣವನ್ನು ಎಲ್ಲಿಗೆ ಖರ್ಚು ಮಾಡಿದ್ದೀರಿ. ಜನರು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ~ ಎಂದು ತರಾಟೆಗೆ ತೆಗೆದುಕೊಂಡರು.

ಸದಸ್ಯರ ಚರ್ಚೆ ಆಲಿಸಿದ ಮೇಯರ್, `ಒಳಚರಂಡಿ ಶುಲ್ಕವನ್ನು ಶೇ.50 ಕ್ಕೆ ಹೆಚ್ಚಳ ಮಾಡುವುದನ್ನು ರದ್ದು ಮಾಡಿ ಈ ಹಿಂದಿನ ಶುಲ್ಕ ಶೇ.25ನ್ನು ಮುಂದುವರೆಸಲಾಗುವುದು. ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಬಾರದೆ ಯಾವುದೇ ವಿಷಯವನ್ನು ದಾಖಲು ಮಾಡಬಾರದು~ ಎಂದು ಕೌನ್ಸಿಲ್ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದರು.
ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಉಪ ಮೇಯರ್ ಎಂ.ಜೆ.ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT