ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸುರಿಯಲು ಊರೂರು ತಿರುಗುವ ನಗರಸಭೆ

Last Updated 17 ಸೆಪ್ಟೆಂಬರ್ 2013, 9:00 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ವಿಲೇವಾರಿ ಮಾಡಲಾಗದ ನಗರಸಭೆ ಊರೂರು ಹುಡುಕಿ ಕದ್ದುಮುಚ್ಚಿ ಕಸ ಸುರಿದು ಬರುತ್ತಿದೆ.
ನಗರಸಭೆ ಆಯುಕ್ತ, ಶಾಸಕ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಬಗ್ಗೆ ಸಂಪೂರ್ಣ ಅರಿವಿದ್ದು, ನಗರದ ಸಮೀಪದ ಗ್ರಾಮಗಳ ಖಾಲಿ ಸ್ಥಳ, ರಸ್ತೆಗಳ ಇಕ್ಕೆಲಗಳಲ್ಲಿ ಕಸ ಸುರಿಯಲು ಅನುವು ಮಾಡಿಕೊಟ್ಟಿರುವುದು ಚೋದ್ಯವಾಗಿದೆ. ಪರಿಸರ, ಜನರ ಆರೋಗ್ಯ ಕಾಪಾಡಬೇಕಾದ ಇಲಾಖೆಗಳ ಉನ್ನತ ಅಧಿಕಾರಿ­ಗಳ ನಡೆ ಅನುಮಾನಕ್ಕೆ ಕಾರಣವಾಗಿದೆ.

ಕಸ ವಿಲೇವಾರಿಗೆ ಮೂರು ವರ್ಷಗಳಿಂದ ಸೂಕ್ತ ಜಾಗ ಗುರುತಿಸಲಾಗದೇ ಸೋತಿರುವ ನಗರಸಭೆ ಈಗ ಕಸವನ್ನು ಊರೂರುಗಳ ಮೇಲೆ ಸುರಿದು ಬರುತ್ತಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ಗ್ರಾಮದಲ್ಲಿ ಒಂದೇ ಕಡೆ ಕಸ ಸುರಿಯವುದರಿಂದ ವಿರೋಧ ವ್ಯಕ್ತವಾಗ­ಬಹುದು ಎಂಬ ಮುಂದಾಲೋಚನೆ ಕಾರಣ ಒಂದೊಂದು ಲಾರಿ ಕಸವನ್ನಷ್ಟೇ ಕಳ್ಳದಾರಿಯಲ್ಲಿ ಸುರಿದು ಬರಲಾಗುತ್ತಿದೆ. ರಸ್ತೆ, ಕೆರೆ, ಶಾಲೆ ಏನನ್ನು ನೋಡದೇ ಎಲ್ಲಿ ಬೇಕೆಂದರೆ ಅಲ್ಲಿ ಕಸ ಸುರಿಯುವ ಚಾಳಿಯನ್ನು ಬೆಳೆಸಿಕೊಂಡಿದೆ.

‘ಗ್ರಾಮಗಳಲ್ಲಿ ಇದ್ದಕ್ಕಿಂದಂತೆ ಕಸದ ರಾಶಿ ಬೀಳುತ್ತಿ­ರುವುದು ನೋಡಿ ಜನತೆ ಕಂಗಾಲಾಗಿ­ದ್ದಾರೆ. ತುಮಕೂರು– ಕುಣಿಗಲ್‌ ರಸ್ತೆಯ ಹೊನ್ನುಡಿಕೆ ­ಹ್ಯಾಂಡ್‌ಪೋಸ್ಟ್‌ ಬಳಿ ಮುಂದಕ್ಕೆ ಕೊಳೆತು ನಾರುತ್ತಿ­ರುವ ಕಸವನ್ನು ರಸ್ತೆಗೆ ಸುರಿಯಲಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತವೆ. ಇಡೀ ವಾತಾವರಣ ದುರ್ನಾತ ಬೀರುತ್ತಿದೆ. ಇದರಿಂದ ರೋಗರುಜಿನಗಳು ಹರಡಲಿವೆ. ಮಳೆ ಬೀಳುತ್ತಿರುವ ಕಾರಣ ವಾಸನೆ ಇನ್ನೂ ಜೋರಾಗಿದೆ. ನಗರಸಭೆ ಆಯುಕ್ತರಿಗೆ ಹತ್ತಕ್ಕೂ ಹೆಚ್ಚು ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಯುಕ್ತರ ಹುದ್ದೆಯ ಅಧಿಕಾರಿಯೇ ಇಂಥ ವರ್ತನೆ ತೋರಿದರೆ ಹೇಗೆ’ ಎಂದು ಹೆಸರು ಹೇಳಲಿಚ್ಛಿದ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಕೊಳೆತ ಕಸವನ್ನು ಗ್ರಾಮದ ಜಾಗಗಳಲ್ಲಿ ಸುರಿಯುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಕಸ ವಿಲೇವಾರಿ ಮಾಡಲು ಸ್ಥಳ ಇಲ್ಲದ ಕಾರಣ ನಗರಸಭೆ ಹೀಗೆ ಮಾಡುತ್ತಿದೆ ಎನ್ನುತ್ತಾರೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮುರುಳೀಧರ. ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುತ್ತಿರುವು­ದರಿಂದ ಪರಿಸರ ಮಾಲಿನ್ಯ ಅಧಿಕವಾಗು­ವುದ­ರೊಂದಿಗೆ, ಸಾಂಕ್ರಾಮಿಕ ರೋಗಗಳು ಹೆಚ್ಚುವ ಸಾಧ್ಯತೆ ಇದೆ. ಇದೂ ನನ್ನ ಗಮನಕ್ಕೂ ಬಂದಿದೆ. ಅಜ್ಜಗೊಂಡನಹಳ್ಳಿಯ ಉದ್ದೇಶಿತ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿದಿಲ್ಲ. ನಗರಸಭೆ ಗಮನಕ್ಕೆ ತಂದರೂ ಸರಿಯಾಗಿಲ್ಲ. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದೂ ಪ್ರತಿಕ್ರಿಯಿಸಿದರು.

ಹೆಬ್ಬಾಕ ಬಳಿ ರಾಸಾಯನಿಕ ಕಸ: ನಗರಕ್ಕೆ ಕುಡಿಯುವ ನೀರು ಪೂರೈಸುವ ಹೆಬ್ಬಾಕ ಕೆರೆ ಬಳಿ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಟ್ರ್ಯಾಕ್ಟರ್‌, ಲಾರಿಗಳಲ್ಲಿ ಚೀಲ­ಗಳಲ್ಲಿ ತುಂಬಿ ತಂದು ಇಲ್ಲಿಟ್ಟು ಹೋಗ­ಲಾಗುತ್ತಿದೆ. ಈ ಹಿಂದೆ ಬಿಸ್ಕತ್‌ ಕಾರ್ಖಾನೆ­ಯೊಂದರ ಹಳೆ ದಾಸ್ತಾನನ್ನು ತಂದು ಇಲ್ಲಿ ಸುರಿಯಲಾಗಿತ್ತು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT