ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟ್ಟಿಯಾದ ಕ್ರೀಡಾಂಗಣ

ಉಂಡು ಹೋದರು, ಬಿಟ್ಟು ಹೋದರು
Last Updated 6 ಫೆಬ್ರುವರಿ 2013, 5:53 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನೆಲದ ಮೇಲೆ ಚೆಲ್ಲಾಡಿದ್ದ ಆಹಾರ ಪದಾರ್ಥ, ಎಲ್ಲೆಲ್ಲೂ ಪೇಪರ್ ತಟ್ಟೆ, ಪ್ಲಾಸ್ಟಿಕ್ ಕವರ್, ನೆಲದ ಮೇಲೆ ಬಿದ್ದ ಅನ್ನ ಮುಕ್ಕಲು ಬಂದ ಕಾಗೆ, ಬೀದಿ ನಾಯಿಗಳು... ಇದು ಸೋಮವಾರ ಪಟ್ಟಣದ ನೆಹರೂ ಕ್ರೀಡಾಂಗಣ ಕಂಡು ಬಂದ ರೀತಿ.

ಭಾನುವಾರ ನಡೆದ ರಾಜಕೀಯವೊಂದರ ಸಮಾವೇಶಕ್ಕೆ ಅಪಾರ ಜನರು ಹಾಜರಿದ್ದರು. ಆದರೆ ಸೋಮವಾರ ಅದಕ್ಕಿಂತ ಹೆಚ್ಚಾಗಿ ತ್ಯಾಜ್ಯ ಅಲ್ಲಿತ್ತು. ಹೇಳಿದ್ದು ಒಂದಾದರೆ; ಇಲ್ಲಿ ನಡೆದಿರುವುದು ಮತ್ತೊಂದು ಎಂದು ಪಟ್ಟಣದ ನಾಗರಿಕರು ದೂರಿದರು.

ಕ್ರೀಡಾಂಗಣದ ತುಂಬಾ ಸಮಾವೇಶದ ತ್ಯಾಜ್ಯವೇ ತುಂಬಿದ್ದರಿಂದ ಸೋಮವಾರ ಮುಂಜಾನೆ ವಾಯು ವಿಹಾರಕ್ಕೆಂದು, ಕ್ರೀಡಾಭ್ಯಾಸಕ್ಕೆಂದು ಬಂದ ವಾಯುವಿಹಾರಿಗಳು, ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದರು. ಬೇಸರದಿಂದ ಅಭ್ಯಾಸ ನಡೆಸದೆ ವಾಪಸ್ ಹೋದರು.

ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವರು ಬಾಡಿಗೆ ಹಣವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ನೀಡಬೇಕು. ಕಾರ್ಯಕ್ರಮ ನಡೆಸಿದ ನಂತರ ಸ್ವಚ್ಛಗೊಳಿಸಬೇಕು. ಆದರೆ ನಿನ್ನೆ ಸಮಾವೇಶ ನಡೆಸಿದವರು ಕ್ರೀಡಾಂಗಣವನ್ನು ಗಬ್ಬೆಬ್ಬಿಸಿ ಹೋಗಿದ್ದಾರೆ. ಕ್ರೀಡಾಂಗಣಕ್ಕೆ ಉಸ್ತುವಾರಿ ಎಂದು ನನ್ನೊಬ್ಬನ್ನನ್ನು ನೇಮಿಸಿದ್ದಾರೆ. ಕಸ ಗುಡಿಸುವರು, ರಾತ್ರಿ ಕಾವಲುಗಾರರು ಇಲ್ಲಿ ಯಾರೂ ಇಲ್ಲ. ಸರಿಯಾದ ಗೇಟ್ ಇಲ್ಲದೆ ಇಲ್ಲಿ ಮೊದಲೇ ನಾಯಿಗಳ ಕಾಟವಿತ್ತು.

ಈಗ ಇವರು ಮಾಡಿರುವ ಗಲೀಜಿನಿಂದ ಇನ್ನಷ್ಟು ನಾಯಿ, ಕಾಗೆ ಮುತ್ತಿಕೊಂಡಿವೆ ಎಂದು ಕ್ರೀಡಾಂಗಣದ ಉಸ್ತುವಾರಿ ಶಿಕ್ಷಕ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಂಗಣದಲ್ಲಿ ಈಗಾಗಲೇ ಹಲ ಸಮಸ್ಯೆಗಳಿವೆ. ಶೌಚಾಲಯ, ನೀರಿನ ವ್ಯವಸ್ಥೆ ಅಗತ್ಯವಿದೆ. ಸೂಕ್ತ ಗೇಟ್ ಮಾಡಿಸಬೇಕಿದೆ. ಕ್ರೀಡಾಂಗಣ ಸ್ವಚ್ಛವಾಗಿದ್ದಾಗ ಮಾತ್ರ ಕ್ರೀಡಾಪಟುಗಳು, ವ್ಯಾಯಾಮ ಮಾಡುವವರಿಗೆ ಅನುಕೂಲವಾಗುತ್ತದೆ.

ಈ ಕಾರ್ಯಕ್ರಮ ನಡೆಸಿದವರು ಕ್ರೀಡಾಂಗಣ ಸ್ವಚ್ಛಗೊಳಿಸಿ ಕೊಡಬೇಕು. ದಿನವೂ ಮಹಿಳೆಯರು-ಪುರುಷರು ಕ್ರೀಡಾಂಗಣಕ್ಕೆ ವ್ಯಾಯಾಮಕ್ಕೆ, ವಾಯುವಿಹಾರಕ್ಕೆ ಆಗಮಿಸುವರು. ಅವರೆಲ್ಲ ಈ ದಿನ ಶಪಿಸುವಂತಾಯಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT