ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ರಾಶಿಯಲ್ಲ, ವಿಷ ಕಾರುವ ಅಗ್ನಿ ಕುಂಡ!

Last Updated 23 ಜನವರಿ 2016, 9:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತ್ಯಾಜ್ಯ ನಿರ್ವಹಣೆ ಸಮಸ್ಯೆಯ ಜತೆಗೆ ಕಸದ ರಾಶಿಗೆ ಬೆಂಕಿ ಹಾಕುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹ ಮಾಡದೇ ಇರುವುದರಿಂದ ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಪ್ರದೇಶಗಳಲ್ಲಿ ರಾಶಿ ಬೀಳುವ ಕಸಕ್ಕೆ ಬೆಂಕಿ ಹಾಕುವುದು ಕಂಡು ಬರುತ್ತಿದೆ.

ಮಿಶ್ರಿತ ತ್ಯಾಜ್ಯದ ರಾಶಿಗೆ ಬೆಂಕಿ ಹಾಕುವುದರಿಂದ ಅದು ಸರಿಯಾಗಿ ಉರಿಯದೇ ಹೊಗೆಯಾಡುತ್ತಾ ನಗರದ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂಬುದು ನಗರದ ನಾಗರಿಕರ ದೂರು.

`ಬಿಬಿಎಂಪಿ ಸಮರ್ಪಕವಾಗಿ ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ರಸ್ತೆ ಬದಿಗಳಲ್ಲಿ ಹಾಗೂ ಬಡಾವಣೆಗಳ ಖಾಲಿ ಜಾಗಗಳಲ್ಲಿ ಕಸ ರಾಶಿ ಬೀಳುತ್ತಿದೆ. ಕಸದ ರಾಶಿಯಲ್ಲಿರುವ ಪ್ಲಾಸ್ಟಿಕ್ ಹಾಗೂ ಕಾಗದ ವಸ್ತುಗಳು ಹಾರಿ ಹೋಗದಂತೆ ಹಾಗೂ ಬೆಂಕಿ ಹಾಕಿದರೆ ಕಸ ಸಂಪೂರ್ಣವಾಗಿ ಉರಿದು ಬೂದಿಯಾಗುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಕಸಕ್ಕೆ ಬೆಂಕಿ ಹಾಕುತ್ತಾರೆ~ ಎಂದು ಟಿ.ದಾಸರಹಳ್ಳಿ ಬಳಿಯ ಕೆಂಪೇಗೌಡ ನಗರದ ನಿವಾಸಿ ಕೆ.ಎಸ್.ಭರತ್ ಅಸಮಾಧಾನ ವ್ಯಕ್ತಪಡಿಸಿದರು.

`ನಗರದ ಅನೇಕ ಕಡೆ ಕಸದ ರಾಶಿಗಳು ಯಾವಾಗಲೂ ಹೊಗೆಯಾಡುತ್ತಲೇ ಇರುತ್ತವೆ. ಆದರೆ, ಕಸದ ರಾಶಿಗಳಿಗೆ ಬೆಂಕಿ ಹಾಕುವವರು ಯಾರು ಎಂಬುದು ಗೊತ್ತಾಗುವುದಿಲ್ಲ. ಇದನ್ನು ನಿಯಂತ್ರಿಸಲು ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.

`ಕಸದ ರಾಶಿಗಳು ನಿರಂತರವಾಗಿ ಹೊಗೆಯಾಡುವುದರಿಂದ ಬಡಾವಣೆ ಪೂರ್ತಿ ಕೆಟ್ಟ ಹೊಗೆ ತುಂಬುತ್ತದೆ. ಕೆಲವೊಮ್ಮ ಉಸಿರಾಡುವುದೇ ಕಷ್ಟವಾಗುವಷ್ಟು ಹೊಗೆ ತುಂಬಿಕೊಳ್ಳುತ್ತದೆ. ಕೆಲವು ಕಡೆ ಪೌರ ಕಾರ್ಮಿಕರೇ ಕಸದ ರಾಶಿಗೆ ಬೆಂಕಿ ಹಾಕುತ್ತಾರೆ. ಕೆಲವು ಕಡೆಗಳಲ್ಲಿ ವಿಲೇವಾರಿಗೆಂದು ಸಂಗ್ರಹಗೊಂಡ ಕಸದ ರಾಶಿಗೆ ಯಾರೋ ವಿನಾಕಾರಣ ಬೆಂಕಿ ಹಾಕುತ್ತಾರೆ~ ಎಂದು ಕಂಠೀರವನಗರದ ಬಳಿಯ ಪರಿಮಳನಗರ ನಿವಾಸಿ ರಾಮಕೃಷ್ಣ ಹೇಳಿದರು.

`ಕಸದ ರಾಶಿ ನಿರ್ಮಾಣವಾಗದಂತೆ ಬಿಬಿಎಂಪಿ ನೋಡಿಕೊಳ್ಳಬೇಕು. ಕಸ ಸಂಗ್ರಹ ಸರಿಯಾಗಿ ಆಗುತ್ತಿದೆಯೇ ಎಂಬ ಬಗ್ಗೆ ವಲಯ ಮಟ್ಟದ ಅಧಿಕಾರಿಗಳು ನಿಗಾ ವಹಿಸಬೇಕು. ಆದರೆ, ಈ ಕೆಲಸ ಸರಿಯಾಗಿ ಆಗುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಸಮಸ್ಯೆಗೆ ಮೂಲ~ ಎಂದು ಅವರು ದೂರಿದರು.

ಅಪಾಯಕಾರಿ
`ಮಿಶ್ರಿತ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಜತೆಗೆ ಅನೇಕ ರಸಾಯನಿಕ ವಸ್ತುಗಳೂ ಸೇರಿರುತ್ತವೆ. ಈ ಕಸಕ್ಕೆ ಬೆಂಕಿ ಹಾಕುವುದರಿಂದ ವಿಷಕಾರಿ ಅನಿಲಗಳು ಹೊರಬರುತ್ತವೆ. ಈ ವಿಷಕಾರಿ ಅನಿಲಗಳು ಆರೋಗ್ಯಕ್ಕೆ ಅಪಾಯಕಾರಿ. ಹಾಕಿದ ಬೆಂಕಿ ಸರಿಯಾಗಿ ಉರಿಯದೇ ನಿರಂತರವಾಗಿ ಹೊಗೆಯಾಡುವುದರಿಂದ ವಿಷಕಾರಿ ಅನಿಲ ವಾತಾವರಣ ಸೇರುತ್ತದೆ. ಇದರಿಂದ ಆಸ್ತಮಾ ಸೇರಿದಂತೆ ವಿವಿಧ ರೀತಿಯ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಈ ಹೊಗೆ ಕಾರಣವಾಗುತ್ತದೆ~
-ಡಾ.ಕೆ.ಎಸ್.ನಟರಾಜ್, ತಜ್ಞ ವೈದ್ಯರು

ಅರಿವು ಮೂಡಿಸಬೇಕು
`ತ್ಯಾಜ್ಯಕ್ಕೆ ಬೆಂಕಿ ಹಾಕುವುದು ತಪ್ಪಬೇಕು. ಆದರೆ, ಬೆಂಕಿ ಹಾಕುವವರನ್ನು ಗುರುತಿಸುವುದು ಕಷ್ಟ. ಪ್ಲಾಸ್ಟಿಕ್ ಉರಿಯುವುದರಿಂದ ಹೊರಬರುವ ಫುರನ್ಸ್ (ಊ್ಠ್ಟಚ್ಞ) ಕಣಗಳು ಉಸಿರಾಟದ ಮೇಲೆ ಹೆಚ್ಚಿನ ದುಷ್ಟರಿಣಾಮ ಬೀರುತ್ತವೆ. ಕಸದ ರಾಶಿಗೆ ಬೆಂಕಿ ಹಾಕುವವರನ್ನು ಗುರುತಿಸಿ ಶಿಕ್ಷಿಸುವುದು ಕಷ್ಟ. ಹೀಗಾಗಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು~
-ಡಾ.ವಾಮನ ಆಚಾರ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಕ್ರಮ ಕೈಗೊಳ್ಳಲಾಗುವುದು
`ಕಸದ ರಾಶಿಗಳಿಗೆ ಬೆಂಕಿ ಹಾಕಿರುವ ಬಗ್ಗೆ ಬಿಬಿಎಂಪಿಗೆ ಈ ವರೆಗೆ ಯಾವುದೇ ದೂರುಗಳು ಬಂದಿಲ್ಲ. ನಗರದಲ್ಲಿ ಯಾವ ಯಾವ ಭಾಗಗಳಲ್ಲಿ ಈ ಸಮಸ್ಯೆಯಿದೆ ಎಂಬುದನ್ನು ಪರಿಶೀಲಿಸಲಾಗುವುದು. ಕಸ ಸಂಗ್ರಹ ಸರಿಯಾಗಿ ಆದರೆ ಈ ಸಮಸ್ಯೆ ಇರುವುದಿಲ್ಲ. ಹೀಗಾಗಿ ಸಮರ್ಪಕ ಕಸ ಸಂಗ್ರಹಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಸದ ರಾಶಿಗಳಿಗೆ ಪೌರ ಕಾರ್ಮಿಕರೇ ಬೆಂಕಿ ಹಾಕುತ್ತಿದ್ದರೆ, ಅದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು~
-ಎಸ್.ವೆಂಕಟೇಶ್ ಬಾಬು, ಅಧ್ಯಕ್ಷರು, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT