ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಲಾರಿಗಳ ಮೇಲೆ ಕಲ್ಲು ತೂರಾಟ

Last Updated 21 ಅಕ್ಟೋಬರ್ 2012, 18:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ಕಸ ತುಂಬಿಕೊಂಡು ಹೊರಟಿದ್ದ ಲಾರಿಗಳ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ ಘಟನೆ ಭಾನುವಾರ ಮಧ್ಯಾಹ್ನ ಆನೇಕಲ್ ತಾಲ್ಲೂಕು ಬೆಟ್ಟದ ದಾಸನಪುರ ಮತ್ತು ಎಸ್. ಬಂಗಿಪುರ ಗ್ರಾಮಗಳಲ್ಲಿ ನಡೆದಿದೆ. ಘಟನೆಯಲ್ಲಿ ಐದು ಲಾರಿಗಳ ಗಾಜು ಪುಡಿ ಪುಡಿಯಾಗಿದ್ದು, ಒಬ್ಬ ಚಾಲಕನ ತಲೆಗೂ ಪೆಟ್ಟುಬಿದ್ದಿದೆ.

ಕರಣಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಠಾಣೆ ಪೊಲೀಸರು 50ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು. ಆವಲಹಳ್ಳಿ-ಮಂಡೂರು ಬಳಿಯೂ ಕಸದ ತುಂಬಿದ ಲಾರಿಗಳನ್ನು ಪ್ರತಿಭಟನಾಕಾರರು ಅಡ್ಡಗಟ್ಟಿದರು. ಇದರಿಂದ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪ್ರತಿಭಟನಾಕಾರರ ಮನ ಒಲಿಸುವ ಯತ್ನ ವಿಫಲವಾಗಿದ್ದರಿಂದ ಆಲವಳ್ಳಿ ಪೊಲೀಸರು 30ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದರು.

ಆವಲಳ್ಳಿಯಲ್ಲಿ ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆದಿದ್ದರಿಂದ ರಸ್ತೆಯುದ್ದಕ್ಕೂ 60ಕ್ಕೂ ಅಧಿಕ ಕಸದ ಲಾರಿಗಳು ಸಾಲುಗಟ್ಟಿ ನಿಂತಿದ್ದವು. `ಗ್ರಾಮಸ್ಥರೊಂದಿಗೆ ನಡೆಸಿದ ಚರ್ಚೆ ಫಲಪ್ರದವಾಗಿದ್ದು, ಮಂಡೂರಿನ ಕಸ ಸಂಗ್ರಹಣಾ ಪ್ರದೇಶಕ್ಕೆ ತ್ಯಾಜ್ಯವನ್ನು ಒಯ್ದು ಸುರಿಯಲು ಯಾವುದೇ ಸಮಸ್ಯೆ ಇಲ್ಲ ಎನ್ನುವ ಭರವಸೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ನೀಡಿದ್ದರು. ಆದರೆ, ಇಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಅದರ ಬಿಸಿ ನಮಗೆ ತಟ್ಟಿದೆ~ ಎಂದು ಲಾರಿ ಚಾಲಕರು ನೋವು ತೋಡಿಕೊಂಡರು.

ಈ ಮಧ್ಯೆ ಪ್ರತಿಭಟನೆಗೆ ಬಗ್ಗದ ಬಿಬಿಎಂಪಿ, ಕಸದ ಲಾರಿಗಳನ್ನು ಭಾನುವಾರ ರಾತ್ರಿಯಿಂದಲೇ ಮತ್ತೆ ಮಂಡೂರಿನ ಕಡೆಗೆ ಕಳುಹಿಸಲು ನಿರ್ಧರಿಸಿದೆ. `ಸರ್ಕಾರವು ಬಿಬಿಎಂಪಿ ಬೆಂಬಲಕ್ಕೆ ನಿಂತಿದ್ದು, ಕಸ ಸಾಗಿಸಲು ತೊಂದರೆ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಮಂಡೂರಿಗೆ ಬೇಕಾದ ಸೌಲಭ್ಯ ನೀಡಿದ್ದರಿಂದ ಗ್ರಾಮಸ್ಥರು ಕಸ ಸಾಗಾಟಕ್ಕೆ ವಿರೋಧಿಸುತ್ತಿಲ್ಲ~ ಎಂದು ಬಿಬಿಎಂಪಿ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.
`ಕಸದ ಸಂಗ್ರಹಣೆಗೆ ಪರ್ಯಾಯ ಸ್ಥಳಗಳನ್ನೂ ಗುರುತಿಸಲಾಗಿದ್ದು, ಶನಿವಾರ ರಾತ್ರಿಯಿಂದಲೇ ಆ ಪ್ರದೇಶಗಳಿಗೂ ಕಸ ಸಾಗಿಸಲಾಗುತ್ತಿದೆ~ ಎಂದು ಅವರು ಹೇಳಿದರು.

ಸಮರೋಪಾದಿಯಲ್ಲಿ ಕಸ ಸಾಗಾಟ ಮಾಡಲಾಗುತ್ತಿದೆ ಎಂಬುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದರೂ ನಗರದ ಪ್ರಮುಖ ಪ್ರದೇಶಗಳಲ್ಲಿ ಕಸದ ರಾಶಿಗಳು ಇನ್ನೂ ಹಾಗೇ ಉಳಿದುಕೊಂಡಿವೆ. ಭಾನುವಾರವೂ ತುಂತುರು ಮಳೆ ಮುಂದುವರಿದ ಕಾರಣ ಕಸ ಕೊಳೆಯತೊಡಗಿದ್ದು, ಗಬ್ಬುನಾತ ಎಲ್ಲೆಡೆ ಹರಡುತ್ತಿದೆ.

ಮಳೆ ನೀರಿನೊಂದಿಗೆ ಹೊಲಸೂ ಬಸಿದು ಬರುತ್ತಿದೆ. ಬಸವನಗುಡಿ, ಸೇಂಟ್ ಮಾರ್ಕ್ಸ್ ರಸ್ತೆ, ಶಿವಾಜಿನಗರ, ಇಂದಿರಾನಗರ, ರೆಸಿಡೆನ್ಸಿ ರಸ್ತೆ, ಕೋರಮಂಗಲ, ಬಿಟಿಎಂ ಲೇಔಟ್, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಶಾಂತಿನಗರ, ಯಶವಂತಪುರ ಮತ್ತಿತರ ಪ್ರದೇಶಗಳಲ್ಲಿ ತ್ಯಾಜ್ಯ ತುಂಬಿಕೊಂಡಿತ್ತು.

ಸಾವಿರಾರು ಟನ್ ಕಸ ನಗರದಲ್ಲಿ ಇನ್ನೂ ಕೊಳೆಯುತ್ತಾ ಬಿದ್ದಿದೆ ಎಂದು ಬಿಬಿಎಂಪಿ ಮೂಲಗಳೇ ಹೇಳುತ್ತಿವೆ.
ಆದರೆ, ರಾತ್ರಿಯಿಂದಲೇ ಕಸ ಸಾಗಾಟ ಶುರುವಾಗಲಿದೆ ಎಂದು ಆ ಮೂಲಗಳು ಸ್ಪಷ್ಟಪಡಿಸುತ್ತವೆ. ಅಗತ್ಯವಾದರೆ ಕಸ ಸಾಗಾಟಕ್ಕೆ ಪೊಲೀಸರ ರಕ್ಷಣೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT