ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಹೊಸ ಚಿತ್ತಾರ ನೋಡ...

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೈನಂದಿನ ಜೀವನದಲ್ಲಿ ಉಪಯೋಗಕ್ಕೆ ಬಾರದ ಅನೇಕ ವಸ್ತುಗಳನ್ನು ಕಸದ ತೊಟ್ಟಿಗೆ ಎಸೆಯುವುದು ಸಾಮಾನ್ಯ. ಇದರಲ್ಲಿ ಪುನರ್ಬಳಕೆ ಮಾಡಬಹುದಾದ ಎಷ್ಟೋ ವಸ್ತುಗಳು ಕೂಡ ಸೇರಿರುತ್ತವೆ. ಆದರೆ ಅದ್ಯಾವುದನ್ನು ಗಮನಿಸದೇ ಕಸ ಎಸೆದು `ಮನೆಯೊಳಗಿನ ಶನಿ ತೊಲಗಿತಪ್ಪ~ ಎಂದು ನಿರಾಳರಾಗುತ್ತೇವೆ.

ಸಾಮಾನ್ಯ ಜನರ ಈ ಮೇಲಿನ ದಿನಚರಿಗೆ ವ್ಯತಿರಿಕ್ತವಾಗಿರುವವರು ದಾಕ್ಷಾಯಿಣಿ ರಾಮಚಂದ್ರ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಕಾರ್ಯದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ತಮ್ಮ ಮನೆ ಹಾಗೂ ಸುತ್ತಮುತ್ತ ಕಂಡುಬರುವ ಪುನರ್‌ಬಳಕೆ ಮಾಡಬಹುದಾದ ತ್ಯಾಜ್ಯಗಳನ್ನು ಒಂದೆಡೆ ಕಲೆಹಾಕುತ್ತಾ ಕಣ್ಮನ ಸೆಳೆಯುವಂತೆ ಅವುಗಳಿಗೆ ಹೊಸದಾದ ರೂಪ ಕೊಡುವ ಮೂಲಕ `ಕಸದಿಂದ ರಸ ತೆಗೆಯುವ~ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾವು ಸಂಗ್ರಹಿಸುವ ತ್ಯಾಜ್ಯದಿಂದ ವಿಭಿನ್ನವಾದ ಗಿಫ್ಟ್‌ಗಳು, ಬೊಂಬೆಗಳು, ದೇವರ ಮೂರ್ತಿಗಳು, ಫೈಲ್‌ಗಳು, ಬ್ಯಾಗ್‌ಗಳು, ಆಟಿಕೆಗಳು, ಮನೆಯ ಹಾಲ್‌ನ ಸೌಂದರ್ಯವನ್ನು ಹೆಚ್ಚಿಸುವ ಷೋ ಪೀಸ್‌ಗಳು, ವಾಸ್‌ಗಳು, ಪರ್ಸ್‌ಗಳು, ಕೈಚೀಲಗಳು, ಕೃತಕ ಹೂಗುಚ್ಛಗಳು, ಬಾಗಿಲಿನ ತೋರಣಗಳು, ಸಿ.ಡಿ.ಗಳ ಮೇಲೆ ಆಕರ್ಷಕ ರಂಗೋಲಿಯ ಚಿತ್ತಾರ ಒಳಗೊಂಡಂತೆ ಅಸಂಖ್ಯಾತ ಮಾದರಿಗಳನ್ನು ನಿರ್ಮಿಸುವ ಅಮೂರ್ತ ಕಲೆ ಅವರದು.

ಇವರ ಈ ವಿಭಿನ್ನ ಹವ್ಯಾಸಕ್ಕೆ ಪೇಪರ್, ಪ್ಲಾಸ್ಟಿಕ್, ಹರಿದ ಬಟ್ಟೆಗಳು, ನೋಟ್ ಪುಸ್ತಕಗಳು, ರಟ್ಟುಗಳು, ಬಾಟಲಿಗಳು, ಚಾಕೋಲೆಟ್ ರ‌್ಯಾಪರ್, ಪ್ಲಾಸ್ಟಿಕ್ ತಟ್ಟೆಗಳು, ಪೈಪ್ ತುಂಡುಗಳು, ಪೇಯಿಂಟ್ ಡಬ್ಬ, ಕಾರ್ಡ್ ಬೋರ್ಡ್, ಗಾಜಿನ ಚೂರುಗಳು, ಮರದ ತುಂಡುಗಳು, ಹಳೆಯ ನಿಯತಕಾಲಿಕೆಗಳು, ಬಾಕ್ಸ್‌ಗಳು, ಚಿಪ್ಪುಗಳು, ಒಡೆದ ಪಾಟ್‌ಗಳು, ಹರಿದ ಹಾಸಿಗೆ ಹಾಗೂ ಇ-ತ್ಯಾಜ್ಯಗಳೇ ಕಚ್ಚಾ ವಸ್ತುಗಳು.

ಚಿಕ್ಕವರಿರುವಾಗ ತಮ್ಮ ಮನೆಯಲ್ಲಿ ಬೇಡದೇ ಬಿಸಾಡುತ್ತಿದ್ದ ವಸ್ತುಗಳನ್ನು ಬಳಸಿಕೊಂಡು ಅವಕ್ಕೆ ಸುಂದರ ಸ್ವರೂಪ ಕೊಡುತ್ತಿದ್ದ ತಮ್ಮ ಅಜ್ಜಿಯ ಕಲೆಗಾರಿಕೆಯನ್ನು ಗಮನಿಸುತ್ತಿದ್ದ ದಾಕ್ಷಾಯಿಣಿ, ಕಾಲ ಕ್ರಮೇಣ ತಾವೂ ಅದನ್ನು ರೂಢಿಸಿಕೊಂಡರು.

ತ್ಯಾಜ್ಯವನ್ನು ಬಳಸಿಕೊಂಡು ಪರಿಸರಕ್ಕೆ ಪೂರಕವಾಗುವಂತಹ ವಸ್ತು, ಗಿಫ್ಟ್ ಮತ್ತು ಆಟಿಕೆಗಳನ್ನು ತಯಾರಿಸುವುದರಲ್ಲಿ ಈಗಾಗಲೇ ನಿಷ್ಣಾತರಾಗಿರುವ ಇವರು, ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅನೇಕ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಾ ಪರಿಸರ ಜಾಗೃತಿ, ತ್ಯಾಜ್ಯ ವಸ್ತುಗಳ ಪುನರ್‌ಬಳಕೆ ಕುರಿತು ಅರಿವನ್ನು ಮೂಡಿಸುತ್ತಿದ್ದಾರೆ.

ಬೆಂಗಳೂರು ಹಬ್ಬ ಸೇರಿದಂತೆ ನಗರದಾದ್ಯಂತ ನಡೆಯುವ ಅನೇಕ ಆಚರಣೆಗಳು, ಮೇಳಗಳಲ್ಲಿ ತ್ಯಾಜ್ಯದಿಂದ ಇದುವರೆಗೂ ತಾವು ತಯಾರಿಸಿರುವ ಕರಕುಶಲ ವಸ್ತುಗಳನ್ನು ಪ್ರದರ್ಶನ ಮಾಡಿದ್ದಾರೆ.

ಪ್ರದರ್ಶನದಲ್ಲಿ ವಸ್ತುಗಳನ್ನು ವೀಕ್ಷಿಸಿದವರ ಪೈಕಿ ಬಹುಪಾಲು ಜನ, ಸಂಘ- ಸಂಸ್ಥೆ ಹಾಗೂ ಕಂಪೆನಿಗಳು `ಪರಿಸರಕ್ಕೆ ಪೂರಕವಾದ ಈ ನಿಮ್ಮ ವಸ್ತುಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದರೆ ನಾವು ಕೊಂಡುಕೊಳ್ಳುತ್ತೇವೆ~ ಎಂಬ ಪ್ರತಿಕ್ರಿಯೆಗಳಿಂದ ಉತ್ತೇಜಿತರಾಗಿರುವ ದಾಕ್ಷಾಯಿಣಿ ತಮ್ಮ ಈ ಹವ್ಯಾಸಕ್ಕೆ ಸ್ವಂತ ಉದ್ದಿಮೆ ಸ್ವರೂಪ ಕೊಡುವ ಹುರುಪಿನಲ್ಲಿದ್ದಾರೆ.

ಈ ನಿಟ್ಟಿನಲ್ಲಿ ಬಿಬಿಎಂಪಿ ನಗರದಲ್ಲೆಡೆ ಸಂಗ್ರಹಿಸುವ ತ್ಯಾಜ್ಯದಲ್ಲಿ ಕಂಡುಬರುವ ಪುನರ್ಬಳಕೆ ಮಾಡಬಹುದಾದ ವಸ್ತುಗಳನ್ನು ಆರಿಸಿ ಕೊಂಡುಕೊಳ್ಳಲು ನಿರ್ಧರಿಸಿದ್ದಾರೆ. ಅಲ್ಲದೆ ತಮ್ಮ ಈ ಅಪೂರ್ವ ಸೃಜನಶೀಲ ಕಲೆಯನ್ನು ಇತರರಿಗೂ ಧಾರೆಯೆರೆಯುವ ಉತ್ಸಾಹದಲ್ಲಿರುವ ಅವರು ಆಸಕ್ತ ಮಹಿಳೆಯರು, ವಯಸ್ಕರು ಮತ್ತು ಮಕ್ಕಳಿಗೆ ಅಲ್ಲಲ್ಲಿ ತರಬೇತಿ ನೀಡುತ್ತಿದ್ದಾರೆ.

ಮನೆಯ ತ್ಯಾಜ್ಯ ಬಳಸಿಕೊಂಡ ಹೊಸ ವಸ್ತು ಸೃಷ್ಟಿಸುವ ಕಲೆಯನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಇಚ್ಛೆ ನಿಮಗಿದ್ದರೆ ದ್ರಾಕ್ಷಾಯಿಣಿ ಅವರ ದೂರವಾಣಿ: 9739034827 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT