ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಲ್ಲಿ ಮಿಂದೆದ್ದ ನೈಸರ್ಗಿಕ ಕಬ್ಬು

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೃಷಿಕರು ಹೆಚ್ಚು ಇಳುವರಿ ಪಡೆಯಲು ಸಾಮಾನ್ಯವಾಗಿ ಮೊರೆ ಹೋಗುವುದು ಅಧಿಕ ಪೋಷಕಾಂಶಯುಕ್ತ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳತ್ತ. ಆದರೆ ಕೇವಲ ‘ಜೀವಾಮೃತ’ ಬಳಸುವ ಮೂಲಕವೇ ಲಾಭದಾಯಕ ಕೃಷಿಕರಾಗಿ ಹೊರಹೊಮ್ಮಿದ್ದಾರೆ ಬೆಳಗಾವಿ ಜಿಲ್ಲೆ ಗೋಕಾಕಿನ ರೈತ ಕೆಂಪಣ್ಣ ಚೌಗಲಾ.

2006ರಲ್ಲಿ ಗೋಕಾಕ ನಗರದಲ್ಲಿ ಕೃಷಿ ತಜ್ಞ ಪಾಳೇಕರ ಅವರು ನೀಡಿದ ಐದು ದಿನಗಳ ಕೃಷಿ ತರಬೇತಿ ಪಡೆದ ಚೌಗಲಾ ಕುಟುಂಬ, ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸದಿರಲು ತೀರ್ಮಾನಿಸಿತು. ಅಂದಿನಿಂದ ಇಂದಿನವರೆಗೂ ಇವರ ಹೊಲದಲ್ಲಿ ನೈಸರ್ಗಿಕದ ಕಂಪು. ಇವರ ಬಳಿ ಇರುವುದು ಎಂಟು ಎಕರೆ ಭೂಮಿ. ಇದರಲ್ಲಿ ಅರ್ಧದಷ್ಟು ಕ್ಷೇತ್ರ ಕೃಷಿ ಉಳುಮೆಗೆ ಸೂಕ್ತ, ಇನ್ನುಳಿದದ್ದು ಕಲ್ಲು ಮಿಶ್ರಿತ. ಬಹುತೇಕ ಭಾಗ ಮಳೆಯಾಶ್ರಿತ ಹಾಗೂ ನೀರಿನ ಮೂಲ ಬೋರ್‌ವೆಲ್‌.

ಕೃಷಿ ಚಟುವಟಿಕೆಗಳಿಗೆ ಅಷ್ಟೇನು ಲಾಭದಾಯಕವಲ್ಲದ ಭೂಮಿಯಲ್ಲಿ ನಿತ್ಯ ಸಂಗ್ರಹಗೊಳ್ಳುವ ಸಗಣಿ ಹಾಗೂ ಗೋಮೂತ್ರವನ್ನು ಶೇಖರಿಸಿ ‘ಜೀವಾಮೃತ’ ತಯಾರಿಸಿಕೊಂಡರು. ಬೋರ್‌ವೆಲ್‌ ಮೂಲಕ ಜಮೀನಿಗೆ ನೀರನ್ನು ಹರಿಸುವ ವೇಳೆ ಪ್ಲಾಸ್ಟಿಕ್‌ ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಲಾದ ಜೀವಾಮೃತವನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿ ಭೂಮಿಗೆ ಹರಿಸಿದಾಗ ಇಡೀ ಹೊಲದಲ್ಲೆಲ್ಲಾ ಕಸ ಬೆಳೆದುಕೊಂಡಿತು. ಕಸವನ್ನು ತೆಗೆಯುವ ಗೋಜಿಗೆ ಇವರು ಹೋಗಲಿಲ್ಲ. ಇದರಿಂದಾಗಿ ಕಸದ ಅಡಿಯಲ್ಲಿ ಬಿಸಿಲಿನ ತಾಪಕ್ಕೆ ತೇವಾಂಶ ಆರಿಹೋಗದೇ ಹಾಗೆಯೇ ಉಳಿದುಕೊಂಡಿತು.

ಇದರಿಂದ ಉತ್ತೇಜಿತರಾದ ಚೌಗಲಾ ಕುಟುಂಬದ ಸಹೋದರರು ಕೆಂಪಣ್ಣ ಮತ್ತು ಅಪ್ಪಣ್ಣ, ಪ್ರತಿ ಎಕರೆ ಭೂಮಿಯಲ್ಲಿ ಕಬ್ಬು ಬೆಳೆದರು. ಇದು ಅವರಿಗೆ 50 ಟನ್‌ ಕಬ್ಬಿನ ಇಳುವರಿ ನೀಡಿತು. ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸಿದ ಕೃಷಿಕರು ಬೆಳೆಯುವ ಸರಾಸರಿ ಪ್ರಮಾಣಕ್ಕೆ ಹೋಲಿಕೆ  ಮಾಡಿದಾಗ, ಜೀವಾಮೃತ ಬಳಕೆಯಿಂದ ಕೃಷಿ ಉಳುಮೆ ವೆಚ್ಚ ಕಡಿತಗೊಳ್ಳುವುದು ಎಂಬುದು ರುಜುವಾತು ಆಯಿತು ಎನ್ನುತ್ತಾರೆ ಚೌಗಲಾ.

ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ 632 ನಮೂನೆಯ ಕಬ್ಬಿನ ತಳಿಯನ್ನು ಅದೇ ಜೀವಾಮೃತ ಬಳಕೆ ಮಾಡುವ ಮೂಲಕ ಸುಮಾರು 4 ಎಕರೆ ಭೂಮಿಯಲ್ಲಿ ಬೆಳೆದು ಬಂಪರ್‌ ಆದಾಯವನ್ನೂ ಇವರು ಪಡೆದಿದ್ದಾರೆ. ‘ಇದೇ ರೀತಿ ಉಳುಮೆ ಮಾಡಲಾದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ರವಾನಿಸದೇ ಗಾಣ ಮಾಡಿ ಬೆಲ್ಲವನ್ನು ತಯಾರಿಸಿ ಮಾರುಕಟ್ಟೆಗೆ ಕೊಂಡೊಯ್ದಾಗ ಅದರ ಕಪ್ಪು ಬಣ್ಣ ಕಂಡ ವರ್ತಕರು ಮೊದಲು ಮೂದಲಿಸಿದರು.

ನಂತರ ಅದರ ರುಚಿಯನ್ನು ಸವಿದು ಖರೀದಿಸಲು ತಾಮುಂದು, ನಾಮುಂದು ಎಂದು ಪೈಪೋಟಿಗೆ ಇಳಿದರು’ ಎನ್ನುತ್ತಾರೆ ಶಿವಾನಂದ. ಇದೇ ಜೀವಾಮೃತ ಬಳಸಿ ಅವರು ಭತ್ತ, ಅರಿಶಿಣ, ಗೋವಿನ ಜೋಳವನ್ನೂ ಉಳುಮೆ ಮಾಡಿ ಲಾಭ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ‘ಜೀವಾಮೃತ’ ಆಧರಿತ ಕೃಷಿ ಚಟುವಟಿಕೆಗಳ ಕುರಿತ ಹೆಚ್ಚಿನ ವಿವರಕ್ಕಾಗಿ ಕೆಂಪಣ್ಣ ಅವರನ್ನು 9739970885 ಸಂಪರ್ಕಿಸಬಹುದು.
–ರಾಮೇಶ್ವರ ಕಲ್ಯಾಣಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT