ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ.ಸಾ.ಪ ಅಧ್ಯಕ್ಷ ಸ್ಥಾನ ತೃಪ್ತಿ ತಂದಿದೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಮೂರೂವರೆ ವರ್ಷಗಳ ಅವಧಿಯಲ್ಲಿ ಮಾಡಿರುವ ಕೆಲಸ ನನಗೆ ತೃಪ್ತಿ ತಂದಿದೆ~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಹೇಳಿದರು.

ನಗರದಲ್ಲಿ ಗುರುವಾರ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ನಿಘಂಟುಗಳ ಕೆಲಸವೂ ಸೇರಿದಂತೆ ಪರಿಷತ್ತಿನಲ್ಲಿ ನಾನು ಮಾಡಿರುವ ಕೆಲಸಗಳ ಬಗ್ಗೆ ಸಮಾಧಾನವಿದೆ. ನನ್ನ ಅವಧಿಯಲ್ಲಿ ನಡೆದ ನಾಲ್ಕು ಸಾಹಿತ್ಯ ಸಮ್ಮೇಳನಗಳ ಯಶಸ್ಸಿನ ಬಗ್ಗೆ ಸಂತಸವಿದೆ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಹೀಗಾಗಿ ಇಲ್ಲಿ ನಾನು ನಿಮಿತ್ತ ಮಾತ್ರನಾಗಿ ಕೆಲಸ ಮಾಡಿದ್ದೇನೆ. ಪರಿಷತ್ತಿನ ಕೆಲಸಕ್ಕೆ ಸಂಘಟಿತ ಪ್ರಯತ್ನ ಅಗತ್ಯ. ಯಾರೇ ಪರಿಷತ್ತಿನ ಅಧ್ಯಕ್ಷರಾದರೂ ಅವರೊಂದಿಗೆ ನುಡಿ ಕಟ್ಟುವ ಕೆಲಸದಲ್ಲಿ ನಾನು ಸಹಕರಿಸುತ್ತೇನೆ~ ಎಂದರು.

`ಕೇವಲ ಪರಿಷತ್ತಿನ ಅಧ್ಯಕ್ಷನಾಗಿಯೇ ಕನ್ನಡ ಸೇವೆ ಮಾಡಬೇಕೆಂಬ ಕಟ್ಟು ಪಾಡುಗಳೇನೂ ಇಲ್ಲ. ಅಧ್ಯಕ್ಷ ಸ್ಥಾನದಿಂದ ದೂರವಿದ್ದೂ ನಾಡು ನುಡಿಯ ಸೇವೆ ಮಾಡಲು ಅವಕಾಶವಿದೆ. ಮೂರೂವರೆ ವರ್ಷಗಳ ಹಿಂದೆ `ನಿಮ್ಮ ಮುಡಿಗೆ ಹೂವ ತರುವೆನಲ್ಲದೇ, ಹುಲ್ಲ ತರಲಾರೆ~ ಎಂಬ ಮಾತನ್ನಾಡಿದ್ದೆ. ಅದನ್ನು ನಿಜ ಮಾಡಿದ ಹೆಮ್ಮೆ ನನಗಿದೆ~ ಎಂದು ಅವರು ಭಾವುಕರಾದರು.

`ಸಾಹಿತ್ಯ ಪರಿಷತ್ತು ಕೇವಲ ಇಟ್ಟಿಗೆ, ಕಲ್ಲುಗಳ ಕಟ್ಟಡವಲ್ಲ. ಅದು ಕನ್ನಡ ಜನತೆಯ ಸಾಂಸ್ಕೃತಿಕ ಜಗತ್ತು. ಈ ಸಾಂಸ್ಕೃತಿಕ ಜಗತ್ತಿನಿಂದ ನಾನು ಗುರುತಿಸಿಕೊಂಡಿದ್ದು ಸಂತೋಷ ತಂದಿದೆ. ಇಷ್ಟು ದಿನ ಕನ್ನಡ ಜನತೆ ಕೊಟ್ಟ ಪ್ರೀತಿ, ವಿಶ್ವಾಸಗಳು ನನ್ನ ಮನಸ್ಸಿನಲ್ಲಿ ಬೆಚ್ಚಗೆ ಉಳಿದುಕೊಂಡಿವೆ~ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ತಾ.ಸಿ.ತಿಮ್ಮಯ್ಯ ಅವರ `ನನ್ನ ಪಾಡು ನಿನ್ನ ಹಾಡು~ ಕವನ ಸಂಕಲನ ಹಾಗೂ `ಓದಿ ದೊಡ್ಡವನಾಗು~ ಮಕ್ಕಳ ಪುಸ್ತಕದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಂ.ಆರ್.ಅನಂತಮೂರ್ತಿ, ಎಚ್.ಅನಸೂಯ, ಆದಿವಾಲ ಗಂಗಮ್ಮ, ಆದೆಪ್ಪ ಪಾಸೋಡಿ ಮತ್ತಿತರರು ತಮ್ಮ ಕವನಗಳನ್ನು ವಾಚಿಸಿದರು. ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, `ಕನ್ನಡ ನುಡಿ~ ಪತ್ರಿಕೆಯ ಸಂಪಾದಕ ಡಾ.ಕೋ.ವೆಂ.ರಾಮಕೃಷ್ಣೇಗೌಡ, ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ರಾಮಣ್ಣ ಕೋಡಿಹೊಸಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT