ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಸ್ವಾಯತ್ತವಾಗಲಿ: ದೊಡ್ಡಮೇಟಿ

Last Updated 14 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಪಂಡಿತ ಭೀಮಸೇನ್ ಜೋಶಿ ಮಹಾಮಂಟಪ (ಗಜೇಂದ್ರಗಡ):  ‘ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಘಟಕಗಳೂ ಸ್ವಾಯತ್ತವಾಗಬೇಕು. ಯಾರ ಹಂಗು ಇರಬಾರದು’ ಎಂದು ಗದಗ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜ್ಞಾನದೇವ ದೊಡ್ಡಮೇಟಿ ಆಶಯ ವ್ಯಕ್ತಪಡಿಸಿದರು.

ಇಲ್ಲಿನ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ವೇದಿಕೆಯಲ್ಲಿ ಭಾನುವಾರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ದೊಡ್ಡಮೇಟಿ, ತಮ್ಮ ಎಂದಿನ ಹಾಸ್ಯ ಮಿಶ್ರಿತ ವ್ಯಂಗ್ಯಭರಿತ ಧಾಟಿಯಲ್ಲಿಯೇ ಪ್ರಸ್ತುತ ಸಾಹಿತ್ಯದ ಸ್ಥಿತಿ-ಗತಿಗಳ ಬಗ್ಗೆ ವಾರೆನೋಟ ಬೀರಿದರು.

‘ಸಾಹಿತ್ಯ ಸರ್ಕಾರಿ ಕಚೇರಿ ಮುಟ್ಟಬಾರದು. ಸರ್ಕಾರದ ಅಂಗ ಸಂಸ್ಥೆಗಳು ಸಾಹಿತ್ಯ ವಲಯಕ್ಕೆ ಮಧ್ಯ ಪ್ರವೇಶಿಸುವುದರಿಂದ ಸಾಹಿತ್ಯ ಸಂಸ್ಕೃತಿ ನಾಶವಾಗುತ್ತದೆ’ ಎಂದರು.
‘ಮಠ-ಮಾನ್ಯಗಳ ಕಡೆಗೂ ತಮ್ಮ ಗಮನ ಹರಿಸಿದ ಅಧ್ಯಕ್ಷರು, ಮಠಗಳು ಧಾರ್ಮಿಕ ಕೇಂದ್ರಗಳಾಗಿ ಇರಬೇಕೇ ಹೊರತು ಸರ್ಕಾರಿ ಪಾಲಕರಾಗಬಾರದು. ಮಠದಲ್ಲಿ ವಾಸಮಾಡುವವರು ಮನುಷ್ಯರೇ ಆಗಿರುವುದರಿಂದ ಸರ್ಕಾರದ ಹಂಗಿಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಮಠಗಳು ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸದಲ್ಲಿ ನಿರತವಾಗಬೇಕು. ರಾಜಕೀಯ ಹರಣವಾಗಬಾರದು’ ಎಂದರು.

ಸಾಹಿತ್ಯಗಳ ನಡುವೆ ಇರುವ ಮತ್ಸರ ಕುರಿತು ಮಾತನಾಡಿದ ಜ್ಞಾನದೇವ, ‘ರಾಜಕಾರಣಿಗಳಿಗಿಂತಲೂ ಸಾಹಿತಿಗಳಲ್ಲಿ ಮತ್ಸರ ಹೆಚ್ಚಾಗಿರುತ್ತದೆ ಎನ್ನುವ ಮಾತು ಜನಜನಿತವಾಗಿದೆ. ಸಾಹಿತ್ಯದ ಮನೆಯಲ್ಲಿ ಒಲವಿನ ಬೆಳಕಿಂಡಿ ಇರಬೇಕು ಜೊತೆಗೆ ಮತ್ಸರದ ಹೊಗೆ ಮನೆಯನ್ನು ತುಂಬಿಕೊಳ್ಳದ ರೀತಿ ಹೊಗೆಕಿಂಡಿಯೂ ಇರಬೇಕು. ಸಾಹಿತ್ಯದಲ್ಲಿ ವಿಡಂಬನೆ ಇರಲಿ; ವಿಕಾರಬೇಡ’ ಎಂದರು.

ತಮ್ಮ ಭಾಷಣದ ಕೊನೆಯಲ್ಲಿ ಚನ್ನವೀರ ಕಣವಿಯವರ ‘ವೇದಿಕೆ ಪೀಠದಲ್ಲಿ ಉಪದೇಶ....’ ಎನ್ನುವ ಕವನವನ್ನು ವಾಚನ ಮಾಡಿ ಮಾತನ್ನು ಮಗಿಸಿದರು.ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿದ್ದ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಗಜೇಂದ್ರಗಡದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸಾಹಿತ್ಯ ಸ್ಮಾರಕ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು.

ಸ್ವಾಗತ ಸಮೀತಿ ಅಧ್ಯಕ್ಷ ಕಳಕಪ್ಪ ಬಂಡಿ ಸಮ್ಮೇಳನಾಧ್ಯಕ್ಷ ಜ್ಞಾನದೇವ ದೊಡ್ಡಮೇಟಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎ.ಬಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಜಿ.ಪಂ.ಉಪಾಧ್ಯಕ್ಷ ಬೀರಪ್ಪ ಬಂಡಿ, ಜಿಲ್ಲಾಧಿಕಾರಿ ಶಂಕರ ನಾರಾಯಣ, ಜಿ.ಪಂ.ಸಿ.ಇ.ಓ. ವೀರಣ್ಣ ತುರಮರಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಬಿ.ಎ.ಕೆಂಚರಡ್ಡಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚಿಂಚಣಿ ಸಿದ್ಧಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ, ಟಕ್ಕೇದ ಹಜರತ್ ಮೆಹಬೂಬ ಆಲಿಷಾ ಪೀರಾಂ, ಡಾ.ಅರವಿಂದ ಸಜ್ಜನರ, ಜ್ಞಾನದೇವ ಡಬಾಲಿ, ಪುಂಡಲೀಕ ಕಲ್ಲಿಗನೂರ, ನೀಲಗಂಗಯ್ಯ ಪೂಜಾರ, ಅಯ್ಯಪ್ಪ ಮಸಗಿ, ದ್ಯಾಮಣ್ಣ ಕಟ್ಟಿಮನಿ, ಗಂಗಾಧರ ಸ್ವಾಮಿ, ಶರಣಪ್ಪ ಭಜಂತ್ರಿ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT