ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪಕ್ಕೆ ಆಡಳಿತಾಧಿಕಾರಿಯ ಮೇಲ್ವಿಚಾರಣೆ ಅನಿವಾರ್ಯ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರ ಆಡಳಿತ ಅವಧಿ ಮುಂದಿನ ತಿಂಗಳ 26ಕ್ಕೆ ಕೊನೆಗೊಳ್ಳಲಿದೆ. ಆದರೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಅಧಿಸೂಚನೆ ಇನ್ನೂ ಪ್ರಕಟವಾಗದ ಕಾರಣ, ಡಾ. ಪ್ರಸಾದ್ ಅವರ ಅವಧಿಯ ನಂತರ ಪರಿಷತ್ತು ಕೆಲವು ಕಾಲ ಆಡಳಿತಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಲಿದೆ.

ಸಾಹಿತಿ ಡಾ. ಚಂದ್ರಶೇಖರ ಪಾಟೀಲ (ಚಂಪಾ) ಅವರ ನಂತರ ಕಸಾಪ ಅಧ್ಯಕ್ಷರಾದ ಡಾ. ಪ್ರಸಾದ್ ಅವರ ಮೂರು ವರ್ಷಗಳ ಅವಧಿ ಕಳೆದ ಆಗಸ್ಟ್‌ನಲ್ಲಿ ಕೊನೆಗೊಂಡಿತ್ತು. ಅವರ ಆಡಳಿತಾವಧಿಯನ್ನು ಆರು ತಿಂಗಳು ವಿಸ್ತರಿಸಿ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆ ನಿರ್ಣಯ ಕೈಗೊಂಡಿತ್ತು. ವಿಸ್ತರಣೆಗೊಂಡ ಅವಧಿ ಫೆ. 26ಕ್ಕೆ ಕೊನೆಗೊಳ್ಳುತ್ತಿದೆ. ಅಧ್ಯಕ್ಷರ ಅವಧಿಯನ್ನು ಎರಡನೆಯ ಬಾರಿ ವಿಸ್ತರಿಸಲು ಪರಿಷತ್ತಿನ ಉಪನಿಯಮದಲ್ಲಿ (ಬೈಲಾ) ಅವಕಾಶ ಇಲ್ಲ.

ಪದ್ಧತಿಯಂತೆ ಫೆ. 27ರಂದು ಹೊಸ ಅಧ್ಯಕ್ಷರು ಪರಿಷತ್ತಿನ ಅಧಿಕಾರ ವಹಿಸಿಕೊಳ್ಳಬೇಕು. ಆದರೆ ಪರಿಷತ್ತಿನ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡ ನಂತರವಷ್ಟೇ ಚುನಾವಣಾ ಅಧಿಸೂಚನೆ ಹೊರಬೀಳುತ್ತದೆ. `ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಸೂಚನೆ ಹೊರಡಿಸಿದ ನಂತರ ಕನಿಷ್ಠ 75 ದಿನಗಳ ಅವಕಾಶ ಅಗತ್ಯ. ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯ ಈಗ ಪ್ರಗತಿಯಲ್ಲಿರುವುದರಿಂದ ಚುನಾವಣಾ ಅಧಿಸೂಚನೆ ಯಾವಾಗ ಹೊರಡಿಸಲಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ~ ಎಂದು ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಚುನಾವಣಾ ಅಧಿಕಾರಿ ಎಸ್.ಟಿ. ಮೋಹನ್ ರಾಜು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಕಸಾಪ ಸದಸ್ಯರ ಪೈಕಿ ಅಂದಾಜು 1.08 ಲಕ್ಷ ಮಂದಿಗೆ ಮತದಾನದ ಹಕ್ಕು ಇದೆ. ಮತದಾರರ ಕರಡು ಪಟ್ಟಿ ಸಿದ್ಧಪಡಿಸಿ, ಅದಕ್ಕೆ ಆಕ್ಷೇಪಗಳನ್ನು ಕರೆಯಲಾಗುತ್ತದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಮತದಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅದಾದ ನಂತರವೇ ಮತದಾರರ ನಿರ್ದಿಷ್ಟ ಸಂಖ್ಯೆ ದೊರೆಯುತ್ತದೆ. ಕನಿಷ್ಠ 100 ಮಂದಿ ಮತದಾರರಿರುವ ಊರಿನಲ್ಲಿ ಮತಗಟ್ಟೆಯನ್ನು ತೆರೆಯಬೇಕು ಎಂದು ಪರಿಷತ್ತಿನ ಉಪನಿಯಮ ಹೇಳುತ್ತದೆ.  ಒಂದು ವೇಳೆ ತಕ್ಷಣಕ್ಕೆ ಚುನಾವಣಾ ಅಧಿಸೂಚನೆ ಹೊರಬಿದ್ದರೂ, ಏಪ್ರಿಲ್ ಮೊದಲ ವಾರದವರೆಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರುವರಿ 27ರ ನಂತರ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ.

ಪರಿಷತ್ತಿನ ಚುನಾವಣೆಗೆ ದಿನಾಂಕ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿನ ಯಾವುದೇ ಉಪ ಚುನಾವಣೆ, ವಿಧಾನ ಪರಿಷತ್ತಿನ ಕೆಲವು ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ನಡೆಯಲಿರುವ ಚುನಾವಣೆಗಳು ಪರಿಷತ್ತಿನ ಚುನಾವಣೆಯ ದಿನ ಇರಬಾರದು. ಅಲ್ಲದೆ ಏಪ್ರಿಲ್, ಮೇ ತಿಂಗಳಿನಲ್ಲಿ ವಿವಿಧ ಪರೀಕ್ಷೆಗಳೂ ನಡೆಯುತ್ತವೆ. ಇವನ್ನೆಲ್ಲ ಗಮನದಲ್ಲಿರಿಸಿಕೊಂಡು ದಿನಾಂಕ ನಿಗದಿ ಮಾಡಬೇಕು. ಚುನಾವಣಾ ಆಯೋಗದಿಂದ ಈ ಕುರಿತ ಪ್ರತಿಕ್ರಿಯೆ ಬರಬೇಕಿದೆ ಎಂದು ಮೋಹನ್ ರಾಜು ಅವರು ಮಾಹಿತಿ ನೀಡಿದರು.

ಎರಡು ಮತಗಳು: ಪರಿಷತ್ತಿನ ಅಧ್ಯಕ್ಷರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನಕ್ಕೆ (ಕೆಲವೆಡೆ ಗಡಿನಾಡ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ) ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಮೂರು ವರ್ಷ ಪೂರೈಸಿರುವ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುತ್ತದೆ. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಚುನಾವಣಾ ಆಯೋಗ ನೀಡಿದರೆ, ಅವುಗಳನ್ನು ಬಳಸುವ ಆಲೋಚನೆ ಇದೆ. ಇಲ್ಲವಾದರೆ ಹಿಂದಿನಂತೆ ಮತಪತ್ರಗಳನ್ನು ಬಳಸಿಯೇ ಚುನಾವಣೆ ನಡೆಸಲಾಗುವುದು ಎಂದು ಅವರು ಹೇಳಿದರು.
 

ಚಾಲ್ತಿಯಲ್ಲಿರುವ ಹೆಸರುಗಳು...

ಬೆಂಗಳೂರು: ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರ ಪೈಕಿ ಸಾಹಿತಿ ಡಾ. ಚಂದ್ರಶೇಖರ ಪಾಟೀಲ, ಪರಿಷತ್ತಿನ ಹಾಲಿ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ ಗೌಡ, ಸಾಹಿತಿ ಜರಗನಹಳ್ಳಿ ಶಿವಶಂಕರ್, ಶೇಖರಗೌಡ ಮಾಲೀಪಾಟೀಲ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಡಾ. ಚಂಪಾ ಅವರು ಹಿಂದೆ ಕಸಾಪದ ಅಧ್ಯಕ್ಷ ಸ್ಥಾನದಲ್ಲಿದ್ದವರು. ಹಾಲಂಬಿ ಅವರೂ ಹಲವಾರು ವರ್ಷಗಳಿಂದ ಕಸಾಪ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿರುವವರು.

ವ.ಚ. ಚನ್ನೇಗೌಡ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದು ತೋರಿದ್ದರು. ಆದರೆ ಈ ಬಾರಿ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸದೆ, ಶಿವಶಂಕರ್ ಅವರಿಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT