ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪದ ಸೇವಕ: ಹಾಲಂಬಿ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 24ನೇ ಅಧ್ಯಕ್ಷರಾಗಿ  ಪುಂಡಲೀಕ ಹಾಲಂಬಿ (62) ಅವರು ಗುರುವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು. ಪರಿಷತ್ತಿನ ಆಡಳಿತಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರು ಹಾಲಂಬಿ ಅವರಿಗೆ ಕನ್ನಡ ಧ್ವಜವನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.
 

ತಿರುಗೇಟು
`ಹಾಲಂಬಿ ಒಳ್ಳೆಯ ಆಡಳಿತಗಾರ. ಆದರೆ, ಪರಿಷತ್ತಿನ ಅಧ್ಯಕ್ಷ ಆಗಲು ಇಷ್ಟೇ ಸಾಲದು. ಕನ್ನಡ ಸಾಹಿತ್ಯದ ಆಳ ಪರಿಚಯ ಇರಬೇಕು. ಸ್ವಲ್ಪವಾದರೂ ಬರವಣಿಗೆ ಇರಬೇಕು. ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ವ್ಯವಹಾರ ಮಾಡಲು ಲಿಪಿಕಾರ ಬೇಕಿರುವುದು ದುರಂತ~ ಎಂದು ಚಂಪಾ ಅವರು ನೀಡಿರುವ ಹೇಳಿಕೆಗೆ ಹಾಲಂಬಿ ಅವರು `ಖಡಕ್~ ಆಗಿ ತಿರುಗೇಟು ನೀಡಿದರು!
`ನಾನು ಸಾಹಿತಿ ಅಲ್ಲದಿರಬಹುದು. ಆದರೆ, ಕನ್ನಡವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ್ದೇನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇನೆ. ಸಾಕಷ್ಟು ಪತ್ರ ವ್ಯವಹಾರ ನಡೆಸಿದ್ದೇನೆ. ನನಗೆ ಸಾಹಿತ್ಯ ರಚಿಸಲು ಬಾರದಿದ್ದರೂ, ಪತ್ರ ವ್ಯವಹಾರ ನಡೆಸುವ ಸಾಮರ್ಥ್ಯ ಇದೆ. ನನಗೆ ಲಿಪಿಕಾರನ ಅಗತ್ಯ ಇಲ್ಲ. ಒಂದು ವೇಳೆ ಅಂಥ ಅಗತ್ಯ ಕಂಡುಬಂದರೆ, ಅದಕ್ಕೆ ಚಂಪಾ ಅವರನ್ನೇ ನೇಮಕ ಮಾಡಿಕೊಳ್ಳುತ್ತೇನೆ~ ಎಂದು ಹಾಲಂಬಿ  ಹೇಳಿದರು.


`ಇದು ಅಧಿಕಾರ ಸ್ವೀಕಾರ ಎಂದು ನಾನು ಭಾವಿಸಿಲ್ಲ. ಇದನ್ನು ಸೇವಾದೀಕ್ಷೆಯ ದಿನ ಎಂದು ಭಾವಿಸಿರುವೆ. ನಾಡಿನ ಆರು ಕೋಟಿ ಕನ್ನಡಿಗರು ಈ ಸಂಸ್ಥೆಯ ಅಧ್ಯಕ್ಷರು. ನಾನು ಇದರ ಸೇವಕ ಮಾತ್ರ. ಈ ಸಂಸ್ಥೆಯನ್ನು ಜಾತ್ಯತೀತವಾಗಿ ಮುನ್ನಡೆಸುತ್ತೇನೆ~ ಎಂದರು.

`ಇಂಗ್ಲಿಷ್ ಎಂಬ ಗಿಡುಗನ ಎದುರು ತೊಯ್ದು ತೊಪ್ಪೆಯಾಗಿರುವ ಗುಬ್ಬಿಯ ಸ್ಥಿತಿ ಕನ್ನಡಕ್ಕೆ ಎದುರಾಗಿದೆ. ಕನ್ನಡಕ್ಕೆ ಆಪತ್ತು ಬಂದಾಗ ಪರಿಷತ್ತು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತದೆ. ನಾನು ಸಾಮರಸ್ಯಕ್ಕೆ ಆದ್ಯತೆ ನೀಡುತ್ತೇನೆ, ಸಂಘರ್ಷಕ್ಕೆ ಆಸ್ಪದ ನೀಡಲಾರೆ~ ಎಂದು ಹೇಳಿದರು.

`ಪರಿಷತ್ತು ಆರ್ಥಿಕವಾಗಿ ಸದೃಢವಾಗಲು ಬಳಿಗಾರ್ ಅವರೂ ಕಾರಣ. ಪರಿಷತ್ತಿನ ಜೊತೆ ಅವರಿರುತ್ತಾರೆ ಎಂಬುದೇ ಧೈರ್ಯ ತರುವ ಸಂಗತಿ. ಸೇವಾವಧಿ ಪೂರ್ಣಗೊಳ್ಳುವವರೆಗೂ ಸರ್ಕಾರ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲೇ ಇರಿಸಿಕೊಳ್ಳಬೇಕು~ ಎಂದು ಮನವಿ ಮಾಡಿದರು.

`ಜನರ ದುಡ್ಡು~: `ಪರಿಷತ್ತಿಗೆ ಸರ್ಕಾರದಿಂದ ಹಣ ಕೋರುವ ಕುರಿತು ಯಾರೂ ಮುಜುಗರಕ್ಕೆ ಒಳಗಾಗಬೇಕಿಲ್ಲ. ಸರ್ಕಾರದಲ್ಲಿರುವುದು ಜನರೇ ನೀಡಿರುವ ಹಣ. ಪರಿಷತ್ತಿಗೆ ಬೇಕಿರುವ ಅನುದಾನ ಕುರಿತು ಹಾಲಂಬಿ ಅವರು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಜೊತೆ ಚರ್ಚಿಸಲಿ~ ಎಂದು ಬಳಿಗಾರ್ ಸಲಹೆ ನೀಡಿದರು.

ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ನಲ್ಲೂರು ಪ್ರಸಾದ್, ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ)  ಪಾಲ್ಗೊಂಡಿದ್ದರು. ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳ ಸಂಘ ರೂ 10 ಸಾವಿರ, ರಾಣೆಬೆನ್ನೂರಿನ ವಾಸಣ್ಣ ರೂ 5 ಸಾವಿರ   ಹಾಗೂ ಜಗದೀಶ ಪೈ   5,555 ರೂಪಾಯಿಗಳನ್ನು ಪರಿಷತ್ತಿನ `ಕನ್ನಡ ನಿಧಿಗೆ~   ದೇಣಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT