ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಬ್ ಗಲ್ಲು ಶಿಕ್ಷೆ ಎತ್ತಿಹಿಡಿದ ಮುಂಬೈ ಹೈಕೋರ್ಟ್‌

Last Updated 21 ಫೆಬ್ರುವರಿ 2011, 9:50 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಮೇಲೆ ನಡೆದ 26/11 ಭಯೋತ್ಪಾದಕರ ದಾಳಿಯಲ್ಲಿ ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಾಬ್‌ನಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ  ಮರಣದಂಡನೆ ಶಿಕ್ಷೆಯನ್ನು ಸೋಮವಾರ ಮುಂಬೈ ಹೈಕೋರ್ಟ್ ಎತ್ತಿಹಿಡಿಯುವ ಮೂಲಕ ಅಪರಾಧಿಯ ‘ಶಿಕ್ಷೆಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

ವಿಡಿಯೊ ಕಾನ್ಪರೆನ್ಸ್‌ನ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ದೇಸಾಯಿ ಮತ್ತು ಆರ್.ವಿ.ಮೊರೆ ಒಳಗೊಂಡ ಪೀಠವು ‘ಅಪರೂಪದ ಈ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆಯನ್ನು ಹೈಕೋರ್ಟ್ ಪರಿಷ್ಕರಿಸುವುದಾಗಲಿ ಅಥವಾ ಆತನಿಗೆ ಆಶ್ರಯ ಕಲ್ಪಿಸುವುದು ಸಾಧ್ಯವಿಲ್ಲ.  ಆತನಿಗೆ ಮರಣದಂಡನೆ ನೀಡಲೇ ಬೇಕು’ ಎಂದು ಹೇಳಿದೆ. 

ಬಿಳಿ ಕುರ್ತಾ ತೊಟ್ಟ ಗಡ್ಡಧಾರಿ ಕಸಾಬ್‌ನೊಂದಿಗೆ ವಿಡಿಯೊ ಕಾನ್ಪರೆನ್ಸ್‌ನಲ್ಲಿ ಮಾತನಾಡಿದ ನ್ಯಾಯಮೂರ್ತಿ ದೇಸಾಯಿ ’ನಿಮ್ಮ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಲಾಗಿದೆ, ನೀವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು’ ಎಂದು ಹೇಳಿದರು. 2008ರ ನವೆಂಬರ್26 ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವಂತ ಸೆರೆಹಿಡಯಲಾದ 24 ವಯಸ್ಸಿನ ಉಗ್ರ ಕಸಾಬ್‌ನಿಗೆ ಕಳೆದ ವರ್ಷ ಮೇ 6 ರಂದು ವಿಚಾರಣಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಕಸಾಬ್ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಒಂಬತ್ತು ತಿಂಗಳ ವಿಚಾರಣೆ ನಂತರ ಕೆಳನ್ಯಾಯಾಲಯದ ಶಿಕ್ಷೆಯನ್ನು ಹೈಕೋರ್ಟ್ ಧೃಢೀಕರಿಸಿದೆ. ಕಸಾಬ್‌ನ ಮೇಲೆ ಹಲವು ಕೊಲೆ ಆರೋಪ ಒಳಗೊಂಡಂತೆ ರಾಷ್ಟ್ರದ ವಿರುದ್ಧ ಸಂಚು ಮತ್ತು ಯುದ್ಧ ನಡೆಸಿದ ಆರೋಪಗಳಿವೆ.

ಇದೇ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಗೆ ನೆರವು ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಭಾರತೀಯರಾದ ಫಾಹೀಮ ಅನ್ಸಾರಿ ಮತ್ತು ಸೋಹಾಬುದ್ದಿನ್ ಅಹಮ್ಮದ್ ಅವರನ್ನು ದೋಷಮುಕ್ತಗೊಳಿಸಬೇಕೆಂದು ಮಹಾರಾಷ್ಟ್ರ ಸರ್ಕಾರವು ಸಲ್ಲಿಸಿದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ.‘ನಾವು ವಿಚಾರಣಾ ನ್ಯಾಯಾಲಯವನ್ನು ಗಮನಿಸಿದಾಗ ಅಪರಾಧ ಕೃತ್ಯದಲ್ಲಿ ಅನ್ಸಾರಿ ಮತ್ತು ಅಹಮ್ಮದ್ ಅವರ ಪಾತ್ರವಿರುವುದಾಗಿ ಧೃಢೀಕರಿಸಬಹುದಾದ ಯಾವುದೇ ಸಾಕ್ಷ್ಯ ದೊರೆತಿಲ್ಲ’ ಎಂದು ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT