ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಬ್ ಗಲ್ಲು ಶಿಕ್ಷೆಗೆ ಅರ್ಹ: ಸಮರ್ಥನೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ದಾಳಿ ಪ್ರಕರಣದಲ್ಲಿ ಸೆರೆಸಿಕ್ಕ ಏಕೈಕ ಆರೋಪಿ ಅಜ್ಮಲ್ ಕಸಾಬ್‌ಗೆ ಶಿಕ್ಷೆ ನೀಡುವ ವಿಷಯದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂಬ ಆರೋಪವನ್ನು ಅಲ್ಲಗಳೆದಿರುವ ಮಹಾರಾಷ್ಟ್ರ ಸರ್ಕಾರ, ಗಲ್ಲುಶಿಕ್ಷೆಗೆ ಆತ ಅರ್ಹನಾಗಿದ್ದ ಎಂದು ಸಮರ್ಥಿಸಿಕೊಂಡಿದೆ.

ಕಸಾಬ್ ಜೈಲಿನಲ್ಲಿರುವಾಗ ಅಧಿಕಾರಿಗಳು ಆತನಿಗೆ ಚಿತ್ರಹಿಂಸೆ ನೀಡುವುದಾಗಲಿ, ದೂಷಿಸುವುದಾಗಲಿ ಮಾಡಿರಲಿಲ್ಲ. ಮಾತ್ರವಲ್ಲ, ಆತನ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯೂ ನಡೆದಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಸಿ.ಕೆ.ಪ್ರಸಾದ್ ಅವರನ್ನು ಒಳಗೊಂಡ ಪೀಠದ ಮುಂದೆ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಮ್ ಸ್ಪಷ್ಟನೆ ನೀಡಿದರು.

ದಾಳಿಯ ಸಂಚನ್ನು ಲಷ್ಕರ್- ಎ- ತೊಯ್ಬಾ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ರೂಪಿಸಿತ್ತು. ಒಂದು ವೇಳೆ ಕಸಾಬ್ ಜೀವಂತವಾಗಿ ಸೆರೆಸಿಕ್ಕದೇ ಹೋಗಿದ್ದಲ್ಲಿ ದಾಳಿಯ ಹಿಂದಿನ ಹೊರಗಿನ ಶಕ್ತಿಗಳ ಕೈವಾಡ ಗೋಚರಿಸುತ್ತಿರಲಿಲ್ಲ ಎಂದು ಒತ್ತಿ ಹೇಳಿದರು.

ಇದೇ ವೇಳೆ ಲಷ್ಕರ್- ಎ- ತೊಯ್ಬಾ ನಡೆಸಿದ ದೇಶವಿರೋಧಿ ಚಟುವಟಿಕೆಯ ಸಂಚು ರೂಪಿಸುವಲ್ಲಿ ಕಸಾಬ್ ಭಾಗಿಯಾಗಿರಲಿಲ್ಲ ಎಂದು ಆತನ ಪರ ವಾದ ಮಂಡಿಸಲು ಸರ್ಕಾರ ನೇಮಿಸಿರುವ ಹಿರಿಯ ವಕೀಲ ರಾಜು ರಾಮಚಂದ್ರನ್ ನ್ಯಾಯಾಲಯಕ್ಕೆ ಹೇಳಿದರು. ಧರ್ಮದ ಮೇಲಿನ ಜನರ ನಂಬಿಕೆಯನ್ನು ಭಯೋತ್ಪಾದಕ ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ತಪ್ಪು ಸಿದ್ಧಾಂತಗಳ ಮೂಲಕ ಅವರನ್ನು ಹಾದಿ ತಪ್ಪಿಸುತ್ತಿವೆ. ಕಸಾಬ್ ಕೂಡ ಅದರಲ್ಲಿ ಬಲಿಪಶುವಾಗಿದ್ದಾನೆ. ಆತನ ವಯಸ್ಸನ್ನು ಗಣನೆಗೆ ತೆಗೆದುಕೊಂಡು ಅವನ ಬಗ್ಗೆ ಅನುಕಂಪ ತೋರಬೇಕು ಎಂದು ಅವರು ಕೋರಿದರು.

ಕಸಾಬ್ ವಿಷಯದಲ್ಲಿ ಊಹೆಯನ್ನು ಹೊರತುಪಡಿಸಿ ಆತನ ನಿಜವಾದ ಅಪರಾಧವನ್ನು ಬಯಲಿಗೆಳೆಯಲು ಫಿರ್ಯಾದುದಾರರು ವಿಫಲವಾಗಿದ್ದಾರೆ, ವಿಚಾರಣೆಯ ವೇಳೆ ಆತನಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶವನ್ನು ನಿರಾಕರಿಸುವ ಮೂಲಕ ಅವನ ಸಾಂವಿಧಾವಿಕ ಹಕ್ಕುಗಳ ಉಲ್ಲಂಘನೆ ನಡೆಸಲಾಗಿದೆ ಎಂದೂ ಅವರು ಹೇಳಿದರು.

ದೇವರ ಹೆಸರಿನಲ್ಲಿ ಈ ಕಾರ್ಯವನ್ನು ನಡೆಸಲು ತನ್ನನ್ನು ರೋಬೋಟ್‌ನಂತೆ ಬಳಸಿಕೊಳ್ಳಲಾಯಿತು ಎಂದು, ಮುಂಬೈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ವಿಶೇಷ ರಜಾ ಕಾಲದ ಅರ್ಜಿಯಲ್ಲಿ ಕಸಾಬ್ ಮನವಿ ಮಾಡಿಕೊಂಡಿದ್ದಾನೆ.

ತನ್ನ ಪ್ರಾಯವನ್ನು ಪರಿಗಣಿಸಿ, ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಬೇಕೆಂದು ಸಹ 24 ವರ್ಷದ ಕಸಾಬ್ ಕೋರಿದ್ದಾನೆ.

ಸ್ಫೋಟ ನಡೆಸುವ ಸಲುವಾಗಿ ಕಸಾಬ್ ಒಂಬತ್ತು ಮಂದಿ ಪಾಕಿಸ್ತಾನಿ ಪ್ರಜೆಗಳೊಂದಿಗೆ ಕಡಲ ಮಾರ್ಗವಾಗಿ ಮುಂಬೈ ತಲುಪಿದ್ದ. 2008 ನವೆಂಬರ್ 26ರಂದು ನಡೆದ ಬಾಂಬ್ ಸ್ಫೋಟದಲ್ಲಿ 166 ಮಂದಿ ಸಾವನ್ನಪ್ಪಿದ್ದರು. ಭದ್ರತಾ ಪಡೆಗಳೊಂದಿಗೆ ನಡೆದ ಉಗ್ರರ ಕಾದಾಟದಲ್ಲಿ ಕಸಾಬ್ ಹೊರತುಪಡಿಸಿ ಉಳಿದೆಲ್ಲ ಭಯೋತ್ಪಾದಕರೂ ಸಾವನ್ನಪ್ಪ್ದ್ದಿದರು.

ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಕಸಾಬ್‌ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮುಂಬೈ ಹೈಕೋರ್ಟ್ ಎತ್ತಿಹಿಡಿದಿತ್ತು. ಬಳಿಕ ಕಸಾಬ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಕಳೆದ ಅಕ್ಟೋಬರ್ 10ರಂದು ಆತನ ಮರಣದಂಡನೆ ಶಿಕ್ಷೆಗೆ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT