ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಿ ತಜ್ಞರ ಕಾರ್ಯಾಗಾರ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾವು, ಹಲಸು ಮತ್ತಿತರ ಹಣ್ಣಿನ ಬೀಜಗಳನ್ನು ನೆಟ್ಟು ಗಿಡಗಳನ್ನು ಬೆಳೆಸುವ ಕ್ರಮ ಹಳೆಯದು. ಅಂತಹ ಗಿಡಗಳಲ್ಲಿ  ತಾಯಿ ಗಿಡದ ಗುಣ ಲಕ್ಷಣಗಳು ಅಷ್ಟಾಗಿ ಕಂಡುಬರುವುದಿಲ್ಲ. ಗಿಡಗಳಿಗೆ ಸಸಿ ಕಟ್ಟಿ ಸಸ್ಯಾಭಿವೃದ್ಧಿ ಮಾಡುವ ಪದ್ಧತಿ ಈಗ ಜನಪ್ರಿಯವಾಗುತ್ತಿದೆ. ಕಸಿ ಕಟ್ಟಿದ ಗಿಡಗಳು ಬೇಗ ಫಲ ಕೊಡುತ್ತವೆ. ಸಸ್ಯ ವೈವಿಧ್ಯತೆಯನ್ನು ಉಳಿಸಿಕೊಳ್ಳಲು  ಕಸಿ ಕಟ್ಟುವ ತಂತ್ರ ಈಗ ಹೆಚ್ಚು ಪ್ರಯೋಜನಕಾರಿ.

ಮಲೆನಾಡಿನ ರೈತರಿಗೆ ಕಸಿ ಕಟ್ಟುವುದು ಒಂದು ಹವ್ಯಾಸ. ತಮಗೆ ಬೇಕಾದ ಮರದ ಕುಡಿಗಳನ್ನು ತಂದು ಕಸಿ ಕಟ್ಟುವುದು ಅನೇಕರ ಹವ್ಯಾಸ. ಆದರೆ ಅವರ ಅನುಭವಗಳನ್ನು ಆಸಕ್ತರೊಡನೆ ಹಂಚಿಕೊಳ್ಳಲು ಸೂಕ್ತ ವೇದಿಕೆ ಇರಲಿಲ್ಲ. ಕಸಿ ಕಟ್ಟುವ ತಂತ್ರಜ್ಞಾನ ಈಗ ಸಾಕಷ್ಟು ಬೆಳೆದಿದೆ. ಅನೇಕರ ಪರಿಕರಗಳು ಬಂದಿವೆ. ಕಸಿ ಕಟ್ಟುವ ವಿಧಾನ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ. ಆದರೆ ಕಸಿ ಕಟ್ಟುವವರಿಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಶಿರಸಿಯ ಅರಣ್ಯ ಮಹಾ ವಿದ್ಯಾಲಯ ಇತ್ತೀಚೆಗೆ ಮಲೆನಾಡು ಕಸಿ ತಜ್ಞರ ಕಾರ್ಯಾಗಾರವನ್ನು ಸಂಘಟಿಸಿತ್ತು.

  ಪಶ್ಚಿಮ ಘಟ್ಟ ಕಾರ್ಯ ಪಡೆ, ಕದಂಬ ಆರ್ಗ್ಯಾನಿಕ್ ಆಂಡ್ ಮಾರ್ಕೆಟಿಂಗ್ ಟ್ರಸ್ಟ್ ಮತ್ತು ನಬಾರ್ಡ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಾಗಾರ ಸಂಘಟಿಸಲಾಗಿತ್ತು. ಅದರಲ್ಲಿ ಸುಮಾರು ನೂರೈವತ್ತು ಮಂದಿ ರೈತರು ಭಾಗವಹಿಸಿದ್ದರು. ರಿಪ್ಪನ್ ಪೇಟೆಯ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿ  ಮತ್ತು ಶಿರಸಿಯ ಸುಬ್ರಾಯ ಹೆಗಡೆ ಕಸಿ ಕಟ್ಟುವ ಪ್ರಾತ್ಯಕ್ಷಿಕೆ ನೀಡಿದರು.

 ಕಾರ್ಯಾಗಾರದಲ್ಲಿ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಸಿ ತಜ್ಞರು ಹಾಗೂ ರೈತರನ್ನು ಒಳಗೊಂಡ `ಕಸಿ ಕೂಟ~ಗಳನ್ನು ರಚಿಸಲು ತೀರ್ಮಾನಿಸಲಾಯಿತು. ಸ್ಥಳೀಯ ಹಾಗೂ ವಿಶೇಷ ಹಣ್ಣಿನ ಮರಗಳನ್ನು ಗುರುತಿಸಿ, ಅವುಗಳನ್ನು ಕಸಿ ಕಟ್ಟಿ ಬೆಳೆಸಲು ಬೇಕಾಗುವ ಹಣಕಾಸಿನ ನೆರವನ್ನು ನಬಾರ್ಡ್ ಕಸಿ ಕೂಟಗಳಿಗೆ ನೀಡುತ್ತದೆ.

ವಿವಿಧ ಇಲಾಖೆಗಳು ಈ ಕಸಿ ಕೂಟಗಳು ಬೆಳೆಸಿದ ಹಣ್ಣಿನ ಗಿಡಗಳನ್ನು ಖರೀದಿಸಿ ರೈತರಿಗೆ ಹಂಚುತ್ತವೆ. ಅರಣ್ಯ ಮಹಾವಿದ್ಯಾಲಯದ ವಾಸುದೇವ್ ಅವರ ಪ್ರಕಾರ ಪಶ್ಚಿಮ ಘಟ್ಟದ ಅರಣ್ಯದಲ್ಲಿರುವ ಅಪ್ಪೆ ಮಿಡಿ ಮಾವು, ಉಪ್ಪಾಗೆ, ಮುರುಗಲು, ವಾಟೆ ಹುಳಿ ಮುಂತಾದ ಹುಳಿ ಹಣ್ಣಿನ ತಳಿಗಳ ಅಭಿವೃದ್ಧಿಗೆ ಕಸಿ ಕೂಟಗಳು ಕೈಜೋಡಿಸಲಿವೆ.


ಕದಂಬ ಸಂಸ್ಥೆಯ ವಿಶ್ವೇಶ್ವರ ಭಟ್ ಅವರು ಅಳಿವಿನ ಅಂಚಿನಲ್ಲಿರುವ ಅಪರೂಪದ ಹಲಸಿನ ತಳಿಗಳನ್ನು ಉಳಿಸಲು ಕಸಿ ಕೂಟ ಆದ್ಯತೆ ನೀಡಲಿದೆ ಎಂದರು. ಕಸಿ ಕಟ್ಟುವ ಕುರಿತಂತೆ ಆಗಾಗ ಕಾರ್ಯಾಗಾರಗಳು ನಡೆಯಬೇಕೆಂದು ಉಡುಪಿಯ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT