ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸುಬುದಾರಿಕೆಯಿಲ್ಲದ ಕಷ್ಟ! (ಚಿತ್ರ: ಓಬವ್ವ)

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನ್ಯಾಯ, ನಿಷ್ಠೆಗೆ ಹೆಸರಾದ ನಾಯಕ. ಖಳರ ಕಾರಣಕ್ಕೆ ಅವನ ಬದುಕಿನಲ್ಲೊಂದು ದುರಂತ. ಆಮೇಲೆ ಸೇಡು. ನಡುವೆ ಪ್ರೀತಿಯೆಂಬ ಉಪ್ಪಿನಕಾಯಿ. ಅದಕ್ಕೆ ಹಾಡುಗಳ ಒಗ್ಗರಣೆ- ಈ ಹಂದರದ ಸಿನಿಮಾಗಳು ಭಾರತೀಯ ಚಿತ್ರ ರಂಗದಲ್ಲಿ ಲೆಕ್ಕವಿಲ್ಲದಷ್ಟು ಸಿಗುತ್ತವೆ.

ಕನ್ನಡದಲ್ಲೂ ಈ ಚೌಕಟ್ಟಿನ ಚಿತ್ರಗಳನ್ನು ಲೆಕ್ಕಹಾಕತೊಡಗಿದರೆ ಪಟ್ಟಿ ಉದ್ದವಾಗುತ್ತದೆ. ಆಗೀಗ ಜಾಣ ನಿರ್ದೇಶಕರು ನಾಯಕನ ಈ ಗುಣಗಳನ್ನು ನಾಯಕಿಗೆ ಅನ್ವಯಿಸಿ ಸಿನಿಮಾಗಳನ್ನು ಮಾಡಿದರು. ಟೈಗರ್ ಪ್ರಭಾಕರ್ ಆ್ಯಕ್ಷನ್ ಟ್ರೆಂಡ್ ಇದ್ದ ಕಾಲದಲ್ಲಿ `ಹೊಸ ಇತಿಹಾಸ~ ಎಂಬ ಸಿನಿಮಾ ಬಂದಾಗ, ಸೇಡು ತೀರಿಸಿಕೊಳ್ಳುವ ನಾಯಕಿಯಾಗಿ ಜಯಮಾಲಾ ಮಿಂಚಿದ್ದನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ರಾಕೇಶ್ ರೋಷನ್ ಹಿಂದಿಯಲ್ಲಿ 1988ರಲ್ಲಿ ನಿರ್ಮಿಸಿದ್ದ `ಖೂನ್ ಭರಿ ಮಾಂಗ್~ ಚಿತ್ರದಲ್ಲಿ ರೇಖಾ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ಮಿಂಚಿದ ನಂತರವಂತೂ ದಕ್ಷಿಣ ಭಾರತದ ಚಿತ್ರಗಳಲ್ಲೂ ನಾಯಕಿಯನ್ನೇ ನಾಯಕನ ರೂಪದಲ್ಲಿ ಕಾಣಿಸುವ ಯತ್ನಕ್ಕೆ ಅನೇಕರು ಕೈಹಾಕಿದರು. ಆದರೆ, ಆ ಪೋಷಾಕಿನಲ್ಲಿ ಹೆಚ್ಚು ಛಾಪು ಮೂಡಿಸಿದ್ದು ವಿಜಯಶಾಂತಿ ಹಾಗೂ ಮಾಲಾಶ್ರೀ. `ಚಾಲ್‌ಬಾಜ್~ ಚಿತ್ರದಲ್ಲಿ ಶ್ರೀದೇವಿ ಕೂಡ ಮೋಡಿ ಮಾಡಿದ್ದನ್ನು ಮರೆಯುವ ಹಾಗಿಲ್ಲ.

ಈಗಲೂ ಕನ್ನಡದಲ್ಲಿ ಮಹಿಳಾ ಆ್ಯಕ್ಷನ್ ಚಿತ್ರ ಅಂದೊಡನೆ ನೆನಪಾಗುವುದು ಮಾಲಾಶ್ರೀ. ಪ್ರಿಯಾ ಹಾಸನ್ ಕೂಡ ಹಗ್ಗ ಕಟ್ಟಿಕೊಂಡು ವಿಪರೀತ ಜಿಗಿದು, ನಾಯಕನ ಗುಣ ತುಂಬಿಕೊಂಡ ನಾಯಕಿಯಾಗಲು ಯತ್ನಿಸುತ್ತಿದ್ದಾರೆ. ತೆಲುಗು ಮೂಲದ ಅಯೇಷಾ ತಮಗೆ ಸಿದ್ಧಿಸಿರುವ ಕರಾಟೆ ವಿದ್ಯೆಯನ್ನೇ ಬಂಡವಾಳವಾಗಿಟ್ಟುಕೊಂಡು ಕನ್ನಡಲ್ಲೆಗ ಆ್ಯಕ್ಷನ್ ನಾಯಕಿಯಾಗಿದ್ದಾರೆ. `ಜೈಹಿಂದ್~ ಹಾಗೂ `ಚೆನ್ನಮ್ಮ ಐಪಿಎಸ್~ ಚಿತ್ರಗಳ ಕುರಿತು ಕೇಳಿಬಂದ ಒಳ್ಳೆಯ ಮಾತುಗಳ ಕೆಟ್ಟ ಪರಿಣಾಮವೇ ಈ `ಓಬವ್ವ~.

ಕಥಾಹಂದರವನ್ನು ಹೇಳದೆ ಚಿತ್ರವನ್ನು ಬಿಡಿಸಿ ನೋಡುವುದರಲ್ಲಿ ಅರ್ಥವಿಲ್ಲ: ನಾಯಕ ಆಟೋ ಚಾಲಕ. ಅವನು ಬಾಡಿಗೆಗೆ ಇರುವ ಮನೆಯಲ್ಲೇ ನಾಯಕಿ ಉಂಟು. ಇಬ್ಬರ ನಡುವೆ ಪ್ರೇಮ. ಗುಣದಲ್ಲಿ ನಾಯಕ ಬಂಗಾರ. ಆಟೋದೊಳಗೆ ಸಾಹಿತಿಗಳ ಫೋಟೋಗಳನ್ನು ಹಾಕಿಕೊಂಡು ಕನ್ನಡ ಭಾಷೆಯ ಮಹತ್ವ ಸಾರಿಕೊಂಡು ಓಡಾಡುವುದು ಆತನ ಜಾಯಮಾನ. ತುಂಡು ಬಟ್ಟೆ ತೊಡುವ ಹುಡುಗಿಗೆ ಬುದ್ಧಿ ಹೇಳುವುದು, ಅಕಸ್ಮಾತ್ತಾಗಿ ಸಾಹಿತಿ ಆಟೋ ಹತ್ತಿದರೆ ಅವರನ್ನು ಸ್ತುತಿಸುವುದು ನಾಯಕನಿಗೆ ಇಷ್ಟವಾದ ಕೆಲಸ.

`ಸೈಲೆಂಟಾಗಿದ್ರೆ ಅನಂತ್‌ನಾಗ್, ವಯಲೆಂಟ್ ಆದ್ರೆ ಶಂಕರ್‌ನಾಗ್~ ಎಂಬುದು ಯಾರಾದರೂ ಕೆಣಕಿದಾಗ ನಾಯಕ ಹೊಡೆಯುವ ಡೈಲಾಗ್. ಆತನ ಸಾಹಿತ್ಯ ಪ್ರೀತಿಗೂ, ಕುತ್ತಿಗೆಯನ್ನು ಒಂದು ಸುತ್ತು ತಿರುಗಿಸಿ ಖಳರನ್ನು ಹೊಡೆಯುವ ಸ್ವಭಾವಕ್ಕೂ ಸರಿಯಾದ ಸಂಬಂಧವೇ ಇಲ್ಲ. ಈ ಗುಣಗಳ ನಾಯಕ ಮಧ್ಯಂತರದ ಹೊತ್ತಿಗೆ ಖಳರು ಬೆನ್ನಲ್ಲಿ ಹಾಕುವ ಚೂರಿಯಿಂದ ಸಾಯುತ್ತಾನೆ. ಆಮೇಲೆ ನಾಯಕಿ ದೇಹ ಪ್ರವೇಶಿಸಿ ಸೇಡು ತೀರಿಸಿಕೊಳ್ಳುತ್ತಾನೆ. ಎರಡನೇ ಅರ್ಧದಲ್ಲಿ ರಿಲೀಫ್‌ಗೆಂದು ಒಂದು ಐಟಂ ಗೀತೆಯನ್ನು ಅಡಕಮಾಡಿದ್ದರೂ, ಅದು ರಿಲೀಫ್ ಕೊಡುವ ಗುಣಮಟ್ಟ ಪಡೆದಿಲ್ಲ.

ನಿರ್ದೇಶಕ ಆನಂದ್ ಪಿ. ರಾಜು ಹಳೆಯ ಒರಳುಕಲ್ಲಿನ ಮುಂದೆ ಕುಳಿತು ಹದವಿಲ್ಲದ ಚಟ್ನಿ ರುಬ್ಬಿದ್ದಾರೆ. ಸಿನಿಮಾ ಕಥನ ಸಂವಹನದ ಧಾಟಿ ಬದಲಾಗಿರುವ ಈ ದಿನಮಾನದಲ್ಲಿಯೂ ಅವರು `ಕಪ್ಪು-ಬಿಳುಪು~ ತಂತ್ರದ ನಿರೂಪಣೆಗೆ ಜೋತುಬಿದ್ದಿದ್ದಾರೆ. ಕಥೆ ತೆಳುವಾಗಿದ್ದರೂ ಆ್ಯಕ್ಷನ್ ದೃಶ್ಯಗಳಲ್ಲಿ ಅದ್ದೂರಿತನ ತರುವ ಮೂಲಕವಾದರೂ ಲವಲವಿಕೆ ಮೂಡಿಸುವ ಸಾಧ್ಯತೆ ಇದೆ. ಆದರೆ, `ಓಬವ್ವ~ನಲ್ಲಿ ಅದೂ ಇಲ್ಲ.

ಬಿಲ್ಲಿನಂತೆ ಶರೀರ ಬಾಗಿಸಬಲ್ಲ ಅಯೇಷಾ ಸಾಹಸ ಕ್ಷಮತೆ ಈ ಚಿತ್ರದಲ್ಲಿ ಸದ್ಬಳಕೆಯಾಗಿಲ್ಲ. ಪಾತ್ರ ಪೋಷಣೆಯ್ಲ್ಲಲಿ ತೀವ್ರತೆ ಇಲ್ಲದಿರುವುದರಿಂದ ಹೊಡೆದಾಟಗಳಲ್ಲಿ ಸಹಜತೆ ಮಾಯವಾಗಿದೆ. ಹಾಗಿದ್ದೂ ಅಯೇಷಾ ದೇಹಭಾಷೆ ಚೆನ್ನಾಗಿದೆ. ನಾಯಕ ದೀಪಕ್ ನಟಿಸಲು ತುಂಬಾ ಕಷ್ಟ ಪಟ್ಟಿದ್ದಾರೆ. ಆಟೋ ಓಡಿಸುವ ನಾಯಕನ ಕಣ್ಣುಗಳು ನೀಲಿಯಾಗಿರುವುದನ್ನು ತಮಾಷೆಯಾಗಿಯಷ್ಟೆ ನೋಡಲು ಸಾಧ್ಯ.

ಸ್ವಸ್ತಿಕ್ ಶಂಕರ್ ನೇತೃತ್ವದ ಖಳರ ಪಡೆಯಲ್ಲಿ ಶೋಭರಾಜ್ ಮಾತ್ರ ಸಣ್ಣ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದವರ ಮಾತು-ವರ್ತನೆಗೂ ನಗೆಯುಕ್ಕಿಸುವ ಗುಣವಿರುವುದು ದುರಂತ. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಗೂ ಛಾಯಾಗ್ರಾಹಕ ಗೌರಿ ವೆಂಕಟೇಶ್ ಕಸುಬುದಾರಿಕೆಗೆ ಈ ಚಿತ್ರದಲ್ಲಿ ಹೆಚ್ಚು ಉದಾಹರಣೆಗಳು ಸಿಗುವುದಿಲ್ಲ.

ಆ್ಯಕ್ಷನ್ ಮಾಡಬಲ್ಲ ನಾಯಕಿಯಷ್ಟೇ ಇದ್ದರೆ ಒಳ್ಳೆಯ ಸಿನಿಮಾ ಸಾಧ್ಯವಿಲ್ಲವೆಂಬುದನ್ನು `ಓಬವ್ವ~ ತಲೆಮೇಲೆ ತಟ್ಟಿದಂತೆ ಹೇಳುತ್ತದೆ. ಇಷ್ಟಕ್ಕೂ ಓಬವ್ವ ಎಂಬ ನಾಯಕಿಯ ಹೆಸರು ಇನ್ನೊಂದು ತಮಾಷೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT