ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್‌ ವರದಿ ಜಾರಿಗೆ ವಿರೋಧ

ಕೊಡಗಿನ ಗ್ರಾಮ ಪಂಚಾಯಿತಿಗಳ ನಿರ್ಣಯ
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಡಿಕೇರಿ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಡಾ.ಕೆ. ಕಸ್ತೂರಿರಂಗನ್‌ ಸಮಿತಿಯು ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕೊಡಗು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ­ಗಳು ನಿರ್ಣಯ ಕೈಗೊಳ್ಳಲು ಆರಂಭಿಸಿವೆ.

ಜಿಲ್ಲೆಯ ದೇವರಪುರ, ತಿತಿಮತಿ, ಮಾಯ­ಮುಡಿ, ಕಾನೂರು, ಕುಟ್ಟ, ಬಾಳೆಲೆ, ಬೆಟ್ಟಗೇರಿ, ಬಿಟ್ಟಂಗಾಲ, ನಾಪೋಕ್ಲು, ನಿಟ್ಟೂರು ಹಾಗೂ ಭಾಗಮಂಡಲ ಗ್ರಾಮ ಪಂಚಾಯಿತಿಗಳು  ನಿರ್ಣಯ ಕೈಗೊಂಡಿದ್ದು, ಬಾಕಿ ಉಳಿದಿರುವ ಗ್ರಾಮ ಪಂಚಾಯಿತಿಗಳೂ ನಿರ್ಣಯ ಕೈಗೊ­ಳ್ಳಲು ಚಿಂತನೆ ನಡೆಸಿವೆ.

ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಗೆ ಜಿಲ್ಲೆಯ 55 ಕಂದಾಯ ಗ್ರಾಮಗಳನ್ನು ಸೇರ್ಪಡೆಗೊಳಿಸ­ಲಾಗಿದ್ದು, ಈ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕಸ್ತೂರಿರಂಗನ್‌ ಸಮಿತಿಯ ವರದಿಯಲ್ಲಿ ಗುರುತಿಸಲಾಗಿದೆ. ಅಲ್ಲದೇ, ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಅಭಿವೃದ್ಧಿ ಕಾಮ­ಗಾರಿಗಳನ್ನು ಕೈಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ಈ ವರದಿಯ ಶಿಫಾರಸುಗಳು ಅನುಷ್ಠಾನಗೊಂಡರೆ ಇಲ್ಲಿನ ಜನರ ಜೀವನ ಅಸ್ತ­ವ್ಯಸ್ಥವಾಗಲಿದೆ ಎಂದು ಗ್ರಾಮ ಪಂಚಾಯಿತಿ ಜನ­ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಸ್ತೂರಿರಂಗನ್‌ ವರದಿಯನ್ನು ಕೇಂದ್ರ ಸರ್ಕಾರವು ಅಂಗೀಕರಿಸಿದ್ದು, ವರದಿಯ ಶಿಫಾ­ರ­ಸು­­ಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊ­ಳ್ಳು­­ವಂತೆ ಕರ್ನಾಟಕ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿ­ಯ 6 ರಾಜ್ಯಗಳ ಸರ್ಕಾರಕ್ಕೆ ಸೂಚಿಸಿದೆ. ವರದಿಯನ್ನು ವಿರೋಧಿಸಿ ನೆರೆಯ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈಗ ಕೊಡಗಿನಲ್ಲೂ ಪ್ರತಿರೋಧದ ಅಲೆ ಕೇಳಿ ಬರುತ್ತಿದೆ.

ಚರ್ಚೆಗೆ ಒತ್ತಾಯ: ‘ಸ್ಥಳೀಯರ ಗಮನಕ್ಕೆ ತರದೇ ಈ ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿಸಲಾಗಿದೆ. ಸಮಿತಿಯ ಶಿಫಾರಸು­ಗಳ ಬಗ್ಗೆ ಆಳವಾಗಿ ಅಧ್ಯಯನವಾಗಿಲ್ಲ. ಸಾರ್ವಜನಿಕವಾಗಿಯೂ ಚರ್ಚಿಸಿಲ್ಲ, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಆಲಿಸಿಲ್ಲ’ ಎಂದು ಬೆಟ್ಟಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಪ್ಪುರನ ಮೇದಪ್ಪ ದೂರುತ್ತಾರೆ.

‘ಸಮಿತಿಯ ಶಿಫಾರಸುಗಳು ಜಾರಿಯಾದರೆ ಅರಣ್ಯ ಕಾನೂನುಗಳು ಬಿಗಿಯಾಗುತ್ತವೆ. ಈ ಪ್ರದೇಶದ ಜನರಿಗೆ ವಾಸಿಸಲು ಅಸಾಧ್ಯ ಎನ್ನುವಂತಹ ವಾತಾವರಣ ಸೃಷ್ಟಿಯಾಗುತ್ತದೆ. ಕ್ವಾರಿ (ಕಲ್ಲು ಗಣಿಗಾರಿಕೆ) ಮಾಡಬಾರದು, ಮರಳು ತೆಗೆಯಬಾರದು ಎನ್ನುವ ನಿರ್ಬಂಧ­ವನ್ನು ಹೇರಿದರೆ ಇಲ್ಲಿ ಯಾವ ಕಾಮಗಾರಿ­ಗಳನ್ನು ಕೈಗೊಳ್ಳಲು ಸಾಧ್ಯ? ಮನೆ ಕಟ್ಟಲು ಕೂಡ ಸಾಧ್ಯವಾಗುವುದಿಲ್ಲ. ಅರಣ್ಯ ರಕ್ಷಣೆಯ ಹೆಸರಿ­ನಲ್ಲಿ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು. 

‘ನಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ವರದಿ­ಯನ್ನು ಅನುಷ್ಠಾನಗೊಳಿಸದಂತೆ ಕೈಗೊಳ್ಳಲಾ­ಗಿರುವ ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ವರದಿಯನ್ನು ಅನುಷ್ಠಾನಗೊಳಿ­ಸುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವರಿಕೆ ಮಾಡಿಕೊಡಲಿ’ ಎಂದರು.

ಗ್ರಾಮ ಪಂಚಾಯಿತಿಗಳಲ್ಲದೇ, ಕೊಡವ ಸಮಾ­ಜ, ಗೌಡ ಸಮಾಜ, ಆದಿವಾಸಿಗಳ ಸಂಘ­ಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

ಮುಕ್ತ ಚರ್ಚೆಯಾಗಲಿ: ‘ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯಗಳನ್ನು ಹೊಂದಿರುವ ಪಶ್ಚಿಮ ಘಟ್ಟದ ರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಕಸ್ತೂರಿ ರಂಗನ್‌ ವರದಿಯ ಶಿಫಾರಸುಗಳ ಬಗ್ಗೆ ಚರ್ಚೆ­ಯಾಗಲಿ. ಇದರಲ್ಲಿರುವ ಒಳ್ಳೆಯ ಅಂಶಗಳನ್ನು ಒಪ್ಪಿಕೊಂಡು, ನಕಾರಾತ್ಮಕ ಅಂಶಗಳ ಬಗ್ಗೆ ಚರ್ಚಿಸಬೇಕಾಗಿದೆ’ ಎಂದು ಕೂರ್ಗ್‌ ವೈಲ್ಡ್‌­ಲೈಫ್‌ ಸೊಸೈಟಿ ಅಧ್ಯಕ್ಷ ಕರ್ನಲ್‌ (ನಿವೃತ್ತ) ಸಿ.ಪಿ. ಮುತ್ತಣ್ಣ ಹೇಳಿದರು. 

ವರದಿಯನ್ನು ವಿರೋಧಿಸುತ್ತಿರುವ ಬಹಳಷ್ಟು ಜನರು ಈ ವರದಿಯನ್ನು ಓದಿಲ್ಲ. ಯಾರೋ ಒಬ್ಬರು ವಿರೋಧಿಸುತ್ತಿದ್ದಾರೆ ಎಂದು ಇವರೂ ವಿರೋಧಿಸುತ್ತಿದ್ದಾರೆ. ವರದಿಯ ಶಿಫಾರಸುಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಮಡಿಕೇರಿ­ಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂತಹದೊಂದು ಚರ್ಚಾ­ಗೋಷ್ಠಿ ಆಯೋಜಿಸಿದರೆ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಅವರು ನುಡಿದರು.

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ?
ಮಡಿಕೇರಿಯಲ್ಲಿ ಜನವರಿ ಏಳ­ರಿಂದ ಮೂರು ದಿನಗಳ ಕಾಲ ನಡೆಯ­ಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಚರ್ಚಾಗೋಷ್ಠಿ­ಯಲ್ಲಿ ಕೊಡಗಿನ ಪರಿಸರ ಸಂರಕ್ಷಣೆ ಕುರಿತು ಚರ್ಚಿಸಲು ಅವಕಾಶ ದೊರೆ­ಯುವ ಸಾಧ್ಯತೆ ಇದೆ’ ಎಂದು ಸಮ್ಮೇಳನ­ದ ಆತಿಥ್ಯ ವಹಿಸಿರುವ ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ತಿಳಿಸಿದರು.

ಚರ್ಚಾಗೋಷ್ಠಿಯ ವಿಷಯಗಳನ್ನು ರಾಜ್ಯ ಸಮಿತಿ ನಿರ್ಧರಿಸಲಿದ್ದು, ಕೊಡಗಿ­ಗೆ ಸಂಬಂಧಿಸಿದಂತೆ ಪರಿಸರ ರಕ್ಷಣೆ, ಪ್ರವಾಸೋದ್ಯಮ ಕುರಿತು ಚರ್ಚೆಗೆ ಅವಕಾಶ ‘ಚರ್ಚಾಗೋಷ್ಠಿ­ಯಲ್ಲಿ ಪರ ಹಾಗೂ ವಿರೋಧ ಎರಡೂ ಕಡೆಯಿಂದ ಚರ್ಚೆ ನಡೆಯು­ತ್ತವೆ. ಇಂತಹ ಸಂದರ್ಭದಲ್ಲಿ ಸಂಘರ್ಷ­ಕ್ಕೆ ಎಡೆಮಾಡದೆ, ತಾಳ್ಮೆ­ಯಿಂದ ಎರಡೂ ಕಡೆಯ ವಾದ­ಗಳನ್ನು ಸಭಿಕರು ಆಲಿಸಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT