ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಹಿ ಮರೆಸಿದ ಜನರ ಪ್ರೀತಿ: ಡಿಸೋಜ

Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಆ ಮೂರು ದಿನ ಕೋಟಿ ಕನ್ನಡಿಗರು ಹರಿಸಿದ ಪ್ರೀತಿಯ ಹೊಳೆಯಲ್ಲಿ ನನ್ನೆಲ್ಲಾ ಕಹಿಗಳು ಮೇಲೆಳದಂತೆ ಮುಳುಗಿ ಹೋದವು. ಲಕ್ಷಾಂತರ ಜನ ಅಪ್ಪಿಕೊಂಡಿದ್ದು, ಕೈ ಕುಲುಕಿದ್ದು, ಫೋಟೊ ತೆಗೆಸಿ­ಕೊಂಡಿದ್ದು, ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುರಿಸಿದ್ದು, ಇವೆಲ್ಲವೂ ಸಮ್ಮೇಳನದಲ್ಲಿನ ಸಣ್ಣಪುಟ್ಟ ಕಹಿ ಘಟನೆಗಳನ್ನು ಮರೆ­ಯುವಂತೆ ಮಾಡಿವೆ. ಮತ್ತೆಂದೂ ಅವುಗಳನ್ನು ಕೆದಕುವುದಿಲ್ಲ’ ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ­ರಾಗಿದ್ದ ಸಾಹಿತಿ ನಾ.ಡಿಸೋಜ ಶುಕ್ರವಾರ ತವರು ಜಿಲ್ಲೆ ಶಿವಮೊಗ್ಗಕ್ಕೆ ಹಿಂತಿ­ರುಗಿದಾಗ ಸಮ್ಮೇಳನವನ್ನು ಅವಲೋಕಿಸಿದ್ದು ಹೀಗೆ.

ಸಣ್ಣ ಊರಿನಲ್ಲಿ ಊಟ–ವಸತಿಗೆ ತೊಂದರೆ­ಯಾಗದಂತೆ ಸಣ್ಣ ಅಪಸ್ವ­ರವೂ ಏಳದೆ ಅಚ್ಚುಕಟ್ಟಾಗಿ ಮಾಡಿದ್ದು ಸಾಹಸವೇ ಸೈ ಎಂದ ಅವರು, ‘ಜನರ ಪ್ರೀತಿ ನನ್ನನ್ನು ಕಟ್ಟಿ ಹಾಕಿದೆ. ನನ್ನ ಜವಾಬ್ದಾರಿ ಹೆಚ್ಚಾಗಿದೆ. ಸಾಹಿತಿಗಳಿಂದ ಜನ ಬಹಳಷ್ಟು ನಿರೀಕ್ಷೆ ಮಾಡುತ್ತಾರೆ  ಎನ್ನುವುದು ಇನ್ನಷ್ಟು ಬಲವಾಗಿದೆ’ ಎಂದರು.

‘ಪರಿಸರದ ವಿಷಯದಲ್ಲಿ ಮಧ್ಯಂತರ ಮಾರ್ಗ ಕಂಡುಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ. ಅದನ್ನೇ ಸಮ್ಮೇಳನದಲ್ಲಿ ಮಂಡಿಸಿದೆ. ಪಶ್ಚಿಮಘಟ್ಟ ಕುರಿತಂತೆ ಡಾ.ಕಸ್ತೂರಿ ರಂಗನ್‌ ವರದಿ ಬರಲು ಕಾರಣಗಳೇನು ಎಂಬುದನ್ನು ಪ್ರಸ್ತಾಪ ಮಾಡಿದೆ. ಇದನ್ನು ಬಹಳಷ್ಟು ಜನ ಒಪ್ಪಿದ್ದಾರೆ. ಫೋನ್‌ ಮೂಲಕ, ಸಮ್ಮೇಳನದಲ್ಲಿ ಸಿಕ್ಕಾಗ ಸಹಮತವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಸಮ್ಮೇಳನ­ದಲ್ಲಿ ಡಾ.ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಬೇಡ ಎಂಬ ನಿರ್ಣಯ ಕೈಗೊಂಡಿದ್ದು ಪರಿಷತ್ತಿನ ತೀರ್ಮಾನ’ ಎಂದು ಡಿಸೋಜ ಸೂಚ್ಯವಾಗಿ ನುಡಿದರು.

ಮೆರವಣಿಗೆ ಸಮಯ ಬದಲು: ‘ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣಕ್ಕೆ ಸಮಯ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸಮ್ಮೇಳನದ ಸ್ವರೂಪದಲ್ಲೇ ಕೆಲ ಬದಲಾವಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾ­ಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ­ಯನ್ನು ಉದ್ಘಾಟನೆ ದಿನದ ಸಂಜೆ ಹಮ್ಮಿ­ಕೊಳ್ಳಲು ಪರಿಷತ್ತು ಚಿಂತನೆ ನಡೆಸಿದೆ. ಇದನ್ನು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ಕೂಡ ಹೇಳಿದ್ದಾರೆ. ಇದು ನನಗೂ ಸರಿ ಕಾಣಿಸುತ್ತಿದೆ’ ಎಂದು ಬದಲಾವಣೆಗೆ ಅವರು ಸಹಮತ ವ್ಯಕ್ತಪಡಿಸಿದರು.

‘ಸಮ್ಮೇಳನದ ನಿರ್ಣಯಗಳ ಅನುಷ್ಠಾನದ ಅವಲೋಕನ ನಡೆಸುವ ಬಗ್ಗೆಯೂ ಸಾಹಿತ್ಯ ಪರಿಷತ್ತು ಗಂಭೀರವಾಗಿ ಚಿಂತನೆ ನಡೆಸಿದೆ. ಶೀಘ್ರ­ದಲ್ಲೇ ಅದಕ್ಕೆ ಚಾಲನೆ ಸಿಗಬೇಕು ಎಂಬುದು ನನ್ನ ಒತ್ತಾಸೆ. ಹಾವೇರಿ­ಯಲ್ಲಿ ನಡೆಯಲಿರುವ ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ನಿರ್ಣಯಗಳ ಅನುಷ್ಠಾನದ ಬಗ್ಗೆಯೂ ಚರ್ಚೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ನನ್ನನ್ನು ಬೆಳೆಸಿದ್ದು ಸಾಗರ, ಶಿವಮೊಗ್ಗ ಜಿಲ್ಲೆ. ಇದಕ್ಕೆ ಹೆಸರು ತರಬೇಕು. ಕರ್ನಾಟಕದಲ್ಲಿ ಇದರ ಪರಂಪರೆ ಹೆಚ್ಚು ಗುರುತಿಸುವಂತಾ­ಗಬೇಕೆಂಬ ದೊಡ್ಡ ಆಸೆ ಇತ್ತು. ಅದು ಈಗ ಈಡೇರಿದೆ. ಇದು ಬಹಳ ಸಂತೋಷದ ವಿಷಯ. ಒಬ್ಬ ಸಾಹಿತಿಗೆ ಇದಕ್ಕಿಂತ ಇನ್ನೇನು ಬೇಕು’ ಎಂದು ಅವರು ಹೆಮ್ಮೆಯಿಂದ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT