ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗರೂ ಮುಂದೆ ಕಂಗೆಟ್ಟ ಕೀನ್ಯಾ

Last Updated 13 ಮಾರ್ಚ್ 2011, 16:30 IST
ಅಕ್ಷರ ಗಾತ್ರ

ಬೆಂಗಳೂರು: ಅದೇ ರಾಗ, ಅದೇ ಹಾಡು. ಗೆಲುವು ಪಡೆದ ಆಸ್ಟ್ರೇಲಿಯಾಕ್ಕೆ ಆ ಹಾಡು ಇಂಪಾಗಿ ಕೇಳಿಸಿದರೆ, ಸೋಲಿನ ಕಹಿ ಅನುಭವಿಸಿದ ಕೀನ್ಯಾಕ್ಕೆ ಕರ್ಕಶ ಶಬ್ದದಂತೆ ಬಂದಪ್ಪಳಿಸಿತು. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಭಾನುವಾರ ರಿಕಿ ಪಾಂಟಿಂಗ್ ಬಳಗ ನಿರೀಕ್ಷಿತ ಗೆಲುವು ಪಡೆಯಿತು. ಸೋಲುವ ಮುನ್ನ ಅಲ್ಪ ಪೈಪೋಟಿ ನಡೆಸಿದ್ದು ಮಾತ್ರ ಕೀನ್ಯಾ ತಂಡದ ಸಾಧನೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 60 ರನ್‌ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿತು. ಮತ್ತೊಂದೆಡೆ ಕೀನ್ಯಾ ಈ ಟೂರ್ನಿಯಲ್ಲಿ ಸತತ ಐದನೇ ಸಲ ಮುಖಭಂಗ ಎದುರಿಸಿತು. ಈ ಜಯದೊಂದಿಗೆ ಕಾಂಗರೂ ನಾಡಿನವರು ‘ಎ’ ಗುಂಪಿನಲ್ಲಿ ನಾಲ್ಕು ಪಂದ್ಯಗಳಿಂದ ಏಳು ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಗೆಲುವಿಗೆ 325 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಕೀನ್ಯಾ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ಗೆ 264 ರನ್ ಗಳಿಸಲಷ್ಟೇ ಶಕ್ತವಾಯಿತು. ಕಾಲಿನ್ಸ್ ಒಬುಯಾ (ಔಟಾಗದೆ 98, 129 ಎಸೆತ, 9 ಬೌಂ, 3 ಸಿಕ್ಸರ್) ಮತ್ತು ತನ್ಮಯ್ ಮಿಶ್ರಾ (72, 89 ಎಸೆತ, 8ಬೌಂ, 1 ಸಿಕ್ಸರ್) ಅವರ ಪ್ರಯತ್ನ ಆಸೀಸ್ ಗೆಲುವಿನ ಓಟಕ್ಕೆ ತಡೆಯೊಡ್ಡುವಷ್ಟು ಸತ್ವ ಹೊಂದಿರಲಿಲ್ಲ.
 ಇದಕ್ಕೂ ಮೊದಲು ಆಸೀಸ್ ಮೈಕಲ್ ಕ್ಲಾರ್ಕ್ (93, 80 ಎಸೆತ, 7 ಬೌಂ, 1 ಸಿಕ್ಸರ್), ಬ್ರಾಡ್ ಹಡಿನ್ (65, 79 ಎಸೆತ, 9 ಬೌಂ, 1 ಸಿಕ್ಸರ್) ಮತ್ತು ಮೈಕ್ ಹಸ್ಸಿ (54, 43 ಎಸೆತ, 4 ಬೌಂ) ಅವರ ಬ್ಯಾಟಿಂಗ್ ಬಲದಿಂದ ಬೃಹತ್ ಮೊತ್ತ ಪೇರಿಸಿತ್ತು. 
ಆಸ್ಟ್ರೇಲಿಯಾ ತಂಡದ ಇನಿಂಗ್ಸ್ ಕೊನೆಗೊಂಡಾಗಲೇ ಪಂದ್ಯದ ಫಲಿತಾಂಶ ಸ್ಪಷ್ಟವಾಗಿತ್ತು. ಬೃಹತ್ ಮೊತ್ತ ಮುಂದಿದ್ದ ಕಾರಣ ಕೀನ್ಯಾ ಭಯದಿಂದಲೇ ಆಟ ಆರಂಭಿಸಿತು. 21 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ‘ಗೂಡು’ ಸೇರಿದರು. ಡೇವಿಡ್ ಒಬುಯಾ (12) ಮೂರನೇ ವಿಕೆಟ್ ರೂಪದಲ್ಲಿ ರನೌಟ್ ಆದಾಗ ಕೀನ್ಯಾ ಸ್ಕೋರ್ 46. ಉಳಿದ ವಿಕೆಟ್‌ಗಳು ಪಟಪಟನೆ ಉರುಳುವುದೆಂದು ನಿರೀಕ್ಷಿಸಲಾಗಿತ್ತು.

ಆದರೆ ಕಾಲಿನ್ಸ್ ಒಬುಯಾ ಹಾಗೂ ತನ್ಮಯ್ ಮಿಶ್ರಾ ಆಸೀಸ್ ಗೆಲುವನ್ನು ತಡವಾಗಿಸಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 115 ರನ್‌ಗಳ ಜೊತೆಯಾಟ ನೀಡಿದರು. ರನ್‌ರೇಟ್ ಹೆಚ್ಚಿಸಬೇಕೇ ಅಥವಾ ವಿಕೆಟ್ ಉಳಿಸಿಕೊಳ್ಳಬೇಕೇ ಎಂಬುದರ ಬಗ್ಗೆ ಇವರು ಗೊಂದಲಕ್ಕೆ ಸಿಲುಕಿದರು. ವಿಕೆಟ್ ಕಾಪಾಡಿಕೊಳ್ಳುವತ್ತ ಗಮನ ನೀಡಿದ್ದರಿಂದ ಪ್ರತಿ ಓವರ್ ಕಳೆದಂತೆ ಗಳಿಸಬೇಕಾದ ರನ್‌ರೇಟ್ ಹೆಚ್ಚುತ್ತಿತ್ತು. ಇದರಿಂದ ಇಬ್ಬರ ಮೇಲಿನ ಒತ್ತಡವೂ ಅಧಿಕವಾಯಿತು.

ಕೊನೆಯ 15 ಓವರ್‌ಗಳಲ್ಲಿ ಗೆಲುವಿಗೆ 170 ರನ್ ಬೇಕಿತ್ತು. ಈ ವೇಳೆ ಆಕ್ರಮಣಕಾರಿ ಆಟದ ಅಗತ್ಯವಿತ್ತು. ಇಲ್ಲದ ರನ್‌ಗಾಗಿ ಓಡಿ ಮಿಶ್ರಾ ರನೌಟ್ ಆದರು. ಮೈಕಲ್ ಕ್ಲಾರ್ಕ್ ಅವರ ನಿಖರ ಥ್ರೋ ನೇರವಾಗಿ ಸ್ಟಂಪ್‌ಗೆ ಬಡಿಯಿತು. ಆಗಲೇ ಕೀನ್ಯಾ ಮೇಲೆ ಸೋಲಿನ ಕಾರ್ಮೋಡ ಆವರಿಸಿತ್ತು. ಮಿಶ್ರಾ ಔಟಾದ ಬಳಿಕ ಅದು ಇನ್ನಷ್ಟು ದಟ್ಟೈಸುತ್ತಾ ಹೋಯಿತು. ‘ಪಂದ್ಯಶ್ರೇಷ್ಠ’ ಕಾಲಿನ್ಸ್ ಒಬುಯಾ ಕೊನೆಯವರೆಗೂ ಹೋರಾಟ ನಡೆಸಿದ್ದರಿಂದ ನೆರೆದ ಪ್ರೇಕ್ಷಕರಿಗೆ ಅಲ್ಪ ರಂಜನೆ ಲಭಿಸಿತು. ಆದರೆ ಅವರಿಗೆ ಶತಕ ಪೂರೈಸಲು ಆಗಲಿಲ್ಲ.

ಪ್ರತಿ ಪಂದ್ಯದ ಸೋಲಿನ ಬಳಿಕ ಜಿಮ್ಮಿ ಕಮಾಂಡೆ ಹೇಳುತ್ತಿದ್ದದ್ದು ಒಂದೇ ಮಾತು. ‘ಪೂರ್ಣ 50 ಓವರ್ ಆಡಿದರೆ ನಮಗೆ ಗೆಲುವು ಸಾಧ್ಯ’ ಎನ್ನುತ್ತಿದ್ದರು. ಭಾನುವಾರ ಕೀನ್ಯಾ ಪೂರ್ಣ 50 ಓವರ್ ಆಡಿತು. ಗೆಲುವು ಮಾತ್ರ ದಕ್ಕಲಿಲ್ಲ. ಕ್ಲಾರ್ಕ್, ಹಸ್ಸಿ ಆಸರೆ: ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಯಾರೂ ಶತಕ ಗಳಿಸಲಿಲ್ಲ. ಆದರೂ ತಂಡಕ್ಕೆ 6 ವಿಕೆಟ್ ಕಳೆದುಕೊಂಡು 324 ರನ್ ಪೇರಿಸಲು ಸಾಧ್ಯವಾಯಿತು. ಎಲ್ಲ ಬ್ಯಾಟ್ಸ್‌ಮನ್‌ಗಳ ಉಪಯುಕ್ತ ಆಟ ಇದಕ್ಕೆ ಕಾರಣ. ಬ್ರಾಡ್ ಹಡಿನ್ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರ ನೆರವಿನೊಂದಿಗೆ ಮೈಕಲ್ ಕ್ಲಾರ್ಕ್ ಮತ್ತು ಮೈಕ್ ಹಸ್ಸಿ ತಂಡವನ್ನು ದೊಡ್ಡ ಮೊತ್ತದತ್ತ ಮುನ್ನಡೆಸಿದರು.

ಶೇನ್ ವ್ಯಾಟ್ಸನ್ (21) ಮತ್ತು ಹಡಿನ್ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ ಸೇರಿಸಿದ್ದು 38 ರನ್. ಬೌಂಡರಿ, ಸಿಕ್ಸರ್‌ಗಳ ಮೂಲಕ ಧನಾತ್ಮಕ ಆರಂಭ ಪಡೆದಿದ್ದರೂ ವ್ಯಾಟ್ಸನ್ ದೊಡ್ಡ ಮೊತ್ತ ಗಳಿಸಲಿಲ್ಲ. ಒದಿಯಾಂಬೊ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ನಾಯಕ ರಿಕಿ ಪಾಂಟಿಂಗ್ (36, 54 ಎಸೆತ, 5 ಬೌಂ) ಮತ್ತು ಹಡಿನ್ ಎರಡನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟ ನೀಡಿದರು.

ಆದರೆ ಒಂದು ವಿಕೆಟ್‌ಗೆ 127 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್ 143 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಜಿಮ್ಮಿ ಕಮಾಂಡೆ (46ಕ್ಕೆ 2) ಮತ್ತು ನೆಹೆಮಿಯಾ ಒದಿಯಾಂಬೊ (57ಕ್ಕೆ 3) ಅವರ ಉತ್ತಮ ಪ್ರಯತ್ನ ಇದಕ್ಕೆ ಕಾರಣ. ಹಡಿನ್ ಸ್ಕೋರಿಂಗ್‌ನ ವೇಗ ಹೆಚ್ಚಿಸುವ ಪ್ರಯತ್ನದಲ್ಲಿ ರಾಕೆಪ್ ಪಟೇಲ್‌ಗೆ ಕ್ಯಾಚಿತ್ತರು. ಅದುವರೆಗೂ ಅವರು ರಕ್ಷಣೆ ಹಾಗೂ ಆಕ್ರಮಣವನ್ನು ಮೈಗೂಡಿಸಿಕೊಂಡು ಆಡಿದರು.

ಪಾಂಟಿಂಗ್‌ಗೆ ಕೂಡಾ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಆಗಲಿಲ್ಲ. ಕ್ಯಾಮರೂನ್ ವೈಟ್ ಮತ್ತೆ ವಿಫಲರಾದರು. ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಕಮಾಂಡೆ ಎಸೆತ ಸೊಗಸಾಗಿತ್ತು. ಆಫ್‌ಸ್ಟಂಪ್‌ನಿಂದ ತುಂಬಾ ಹೊರಗೆ ಬಿದ್ದ ಚೆಂಡನ್ನು ರಕ್ಷಣಾತ್ಮಕವಾಗಿ ಆಡಲು ವೈಟ್ ಪ್ರಯತ್ನಿಸಿದರು. ಆದರೆ ವೈಟ್ ಅವರ ನಿರೀಕ್ಷೆಯನ್ನು ಮೀರಿ ತಿರುವು ಪಡೆದ ಚೆಂಡು ಸ್ಟಂಪ್‌ಗೆ ಬಡಿಯಿತು. ಇದನ್ನು ವೈಟ್‌ಗೆ ನಂಬಲಿಕ್ಕಾಗಲಿಲ್ಲ.

ಬೆನ್ನುಬೆನ್ನಿಗೆ ಮೂರು ವಿಕೆಟ್‌ಗಳು ಉರುಳಿದವು. ಕೀನ್ಯಾ ತಂಡ ಮೇಲುಗೈ ಸಾಧಿಸುತ್ತದೆ ಎಂಬ ನಿರೀಕ್ಷೆ ಮೂಡಿದ ಕ್ಷಣ ಅದಾಗಿತ್ತು. ಆದರೆ ಕ್ಲಾರ್ಕ್ ಮತ್ತು ಹಸ್ಸಿ ಈ ಪರಿಸ್ಥಿತಿಯಲ್ಲಿ ಆಸರೆಯಾದರು. ಇವರಿಬ್ಬರು ಐದನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ಆಸೀಸ್‌ಗೆ ಸುಲಭವಾಗಿ 300ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣ ತನ್ನ ಅದೃಷ್ಟದ ತಾಣ ಎಂಬುದನ್ನು ಕ್ಲಾರ್ಕ್ ತೋರಿಸಿಕೊಟ್ಟರು. 2004 ರಲ್ಲಿ ಇದೇ ಅಂಗಳದಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದ್ದ ಕ್ಲಾರ್ಕ್ ಕೀನ್ಯಾ ಬೌಲರ್‌ಗಳನ್ನು ಕಾಡಿದರು. ಆಸೀಸ್ ತಂಡದಲ್ಲಿ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ತಾಕತ್ತು ಹೊಂದಿರುವ ಆಟಗಾರ ಕ್ಲಾರ್ಕ್. ಅದು ಮತ್ತೊಮ್ಮೆ ಸಾಬೀತಾಯಿತು.
ಆದರೆ ಶತಕ ಗಳಿಸುವ ಅದೃಷ್ಟ ಅವರಿಗಿರಲಿಲ್ಲ. ಏಳು ರನ್‌ಗಳ ಅವಕಶ್ಯತೆಯಿದ್ದಾಗ ಒದಿಯಾಂಬೊ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾದರು.

ಕ್ಲಾರ್ಕ್ ‘ಟಾಪ್ ಸ್ಕೋರರ್’ ಎನಿಸಿದರೂ, ಆಸೀಸ್ ಪರ ಗಮನ ಸೆಳೆದದ್ದು ಮೈಕ್ ಹಸ್ಸಿ. ಬದಲಿ ಆಟಗಾರನಾಗಿ ವಿಶ್ವಕಪ್ ತಂಡ ಸೇರಿಕೊಂಡ ಅವರು ತಮ್ಮ ಮೊದಲ ಪಂದ್ಯದಲ್ಲೇ ಮಿಂಚಿದರು. ‘ಮ್ಯಾಚ್ ಪ್ರಾಕ್ಟೀಸ್’ ಇಲ್ಲದೆಯೇ ಆಡಲಿಳಿದ ಅವರ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿಯಿತು. ತಂಡದ ಯಶಸ್ಸಿನಲ್ಲಿ ತನಗೆ ಪ್ರಮುಖ ಪಾತ್ರ ವಹಿಸಲಿಕ್ಕಿದೆ ಎಂಬುದನ್ನು ಅವರು ತೋರಿಸಿಕೊಟ್ಟರು.

ಬ್ಯಾಟಿಂಗ್ ಪವರ್‌ಪ್ಲೇ ಅವಧಿಯಲ್ಲಿ ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡು 42 ರನ್ ಗಳಿಸಿತು. ಆರಂಭದಲ್ಲಿ 5 ರಿಂದ 10ನೇ ಓವರ್‌ವರೆಗೆ ಪಾಂಟಿಂಗ್ ಬಳಗ ಗಳಿಸಿದ್ದು ಕೇವಲ ಒಂಬತ್ತು ರನ್. ಆ ಕಿರು ಅವಧಿಯನ್ನು ಬಿಟ್ಟರೆ ಇನಿಂಗ್ಸ್‌ನ ಉದ್ದಕ್ಕೂ ಆಸೀಸ್ ಬ್ಯಾಟ್ಸ್‌ಮನ್‌ಗಳ ದರ್ಬಾರ್ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT