ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮೈಲಾಪೂರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿಯ (ಟಿಎನ್‌ಸಿಸಿ) ಅಧ್ಯಕ್ಷ ಕೆ. ವಿ. ತಂಗಬಾಲು ಅವರ ಪತ್ನಿ ಜಯಂತಿ ತಂಗಬಾಲು ಅವರು ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡ ಘಟನೆ ನಡೆದಿದೆ. ನಾಮಪತ್ರ ಸ್ವೀಕಾರಕ್ಕೆ ಅಗತ್ಯವಾದ ಎರಡು ದಾಖಲೆ ಪತ್ರಗಳನ್ನು ಅವರು ಸಲ್ಲಿಸದೆ ಇದ್ದುದೇ ಈ ತಿರಸ್ಕಾರಕ್ಕೆ ಕಾರಣವಾಗಿದೆ.

ತಮ್ಮ ಪತ್ನಿಯ ನಾಮಪತ್ರದ ಜತೆಯಲ್ಲಿ ಡಮ್ಮಿ ರೂಪದಲ್ಲಿ ನಾಮಪತ್ರ ಸಲ್ಲಿಸಿದ ಕೆ. ವಿ. ತಂಗಬಾಲು ಅವರು ನಾಮಪತ್ರ ಸ್ವೀಕೃತವಾಗಿದೆ.

ಜಯಂತಿ ಅವರು ತಾವು ಮೆಗಾ ಟಿವಿ ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕಿ ಎಂಬುದನ್ನು ಮತ್ತು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದನ್ನು ಮುಚ್ಚಿಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಿಂದ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಗಾಮಿ ಅವರು ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ಪ್ರತಿಪಾದಿಸಿದರು.
 ಈ ಹಿನ್ನೆಲೆಯಲ್ಲಿ ಜಯಂತಿ ಅವರ ನಾಮಪತ್ರ ತಿರಸ್ಕೃತಗೊಂಡಿತು.  ‘ಸದ್ಯ ನಾನು ಅಭ್ಯರ್ಥಿಯಾಗಿದ್ದೇನೆ. ಜಯಂತಿ ಅವರು ಎಲ್ಲಾ ದಾಖಲೆಗಳನ್ನೂ ಇಟ್ಟಿದ್ದರು. ಆದರೆ ಅವು  ನಾಪತ್ತೆಯಾಗಿವೆ.

ಅದು ಹೇಗೆ ಎಂದು ನನಗೆ ಗೊತ್ತಿಲ್ಲ. ಈ ಬಗ್ಗೆ ನನ್ನ ಪತ್ನಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದಾರೆ’ ಎಂದು ತಂಗಬಾಲು ಬಳಿಕ ಪತ್ರಕರ್ತರಿಗೆ ತಿಳಿಸಿದರು.
ಭಾಷಣ ಕಲೆ ಸರ್ಕಾರವನ್ನು

ರಕ್ಷಿಸದು: ಚಾಂಡಿ
ತಿರುವನಂತಪುರ (ಪಿಟಿಐ): ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರ ಆಕರ್ಷಕ ಭಾಷಣ ಕಲೆ ಈ ಬಾರಿ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರವನ್ನು ಉಳಿಸಲು ಸಾಧ್ಯವಿಲ್ಲ. ಕೇರಳದ ಜನತೆ ಬದಲಾವಣೆ ಬಯಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಹೇಳಿದ್ದಾರೆ.

‘ಕಳೆದ ಐದು ವರ್ಷಗಳ ಎಲ್‌ಡಿಎಫ್ ಆಡಳಿತ ಹಲವು ಅವಕಾಶಗಳನ್ನು ಕಳೆದುಕೊಂಡಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಸಿಎಂ ಅಚ್ಯುತಾನಂದನ್ ಅವರು ಇದೀಗ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವ ಮತ್ತು ಲೈಂಗಿಕ ಶೋಷಕರನ್ನು ಜೈಲಿಗೆ ಅಟ್ಟುವ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳಿಗೆ ಮತದಾರರು ಮರುಳಾಗಲು ಸಾಧ್ಯವಿಲ್ಲ’ ಎಂದು ಯುಡಿಎಫ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಅವರು ಸೋಮವಾರ ಇಲ್ಲಿ ಪತ್ರಿಕಾ ಸಂವಾದದಲ್ಲಿ ತಿಳಿಸಿದರು.

‘2006ರಲ್ಲಿ ಅಚ್ಯುತಾನಂದನ್ ವಿರೋಧಿ ಸ್ಥಾನದಲ್ಲಿದ್ದರು. ಜನತೆ ಅವರ ಮಾತು ನಂಬಿ ಅಧಿಕಾರಕ್ಕೆ ತಂದರು. ಆದರೆ ಅವರು ಏನನ್ನೂ ಮಾಡಲಿಲ್ಲ. ಸ್ವತಃ ತಮ್ಮ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹತ್ತಿಕ್ಕಲು ಅವರಿಂದ ಸಾಧ್ಯವಾಗಲಿಲ್ಲ. ವಿರೋಧ ಪಕ್ಷಗಳು ಎತ್ತಿದ್ದ ಭ್ರಷ್ಟಾಚಾರ ಆರೋಪಗಳ ಬಗ್ಗೆ  ಉತ್ತರ ನೀಡುವ ಗೊಡವೆಗೂ ಅವರು ಹೋಗಲಿಲ್ಲ. ಜನತೆಗೆ ಇದೆಲ್ಲಾ ವಿಚಾರವೂ ಗೊತ್ತಿದೆ’ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆ: ಬಿಜೆಪಿ ಟೀಕೆ
ಗುವಾಹಟಿ (ಪಿಟಿಐ):
ಅಸ್ಸಾಂ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಹೊರತಂದಿರುವ ಪ್ರಣಾಳಿಕೆ ಸುಳ್ಳಿನ ಕಂತೆ ಎಂದು ಬಿಜೆಪಿ ಟೀಕಿಸಿದೆ.

‘ಕಳೆದ ಹತ್ತು ವರ್ಷಗಳಲ್ಲಿ ತಾನು ಈಡೇರಿಸಬೇಕಾಗಿದ್ದ ಭರವಸೆಗಳನ್ನೇ ಕಾಂಗ್ರೆಸ್ ಮತ್ತೆ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ. ಇವುಗಳನ್ನು ಈ 10 ವರ್ಷಗಳಲ್ಲಿ ಈಡೇರಿಸದ ಪಕ್ಷವು ಮತ್ತೆ ಅದೇ ಭರವಸೆ ಹೊತ್ತ ಪ್ರಣಾಳಿಕೆ ಹೊರತರುವ ನೈತಿಕ ಹಕ್ಕು ಕಳೆದುಕೊಂಡಿದೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 27 ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಮುಚ್ಚಿವೆ.  ಆದರೂ ಪಕ್ಷವು 9 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡುತ್ತಿದೆ ಎಂದು ಲೇವಡಿ ಮಾಡಿದ ಅವರು, ಈ ಬಾರಿ ಬಿಜೆಪಿಗೆ ಮುಸ್ಲಿಮರಿಂದಲೂ ಉತ್ತಮ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT