ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಈಗ ಪ್ರಬಲ ಶಕ್ತಿ: ಕಾಗೋಡು

Last Updated 14 ಏಪ್ರಿಲ್ 2013, 9:06 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಂಗ್ರೆಸ್ ಈಗ ಪ್ರಬಲ ಶಕ್ತಿಯಾಗಿ ಬೆಳೆದಿದೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗೋಣ. ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಗೆಲ್ಲಿಸಿ. ಬಡವರ, ಸಾಮಾನ್ಯರ ಸೇವೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಯಡಿಯೂರಪ್ಪ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೆಲವು ತನಿಖೆ ನಡೆಯುತ್ತಿವೆ. ಇನ್ನು ಕೆಲವು ನಡೆಯಬೇಕಿದೆ. ಅವರ ಕೈಗಳಿಗೆ ಕೋಳ ಬೀಳುವುದು ತಪ್ಪದೇ ಇರದು. ಬಿಜೆಪಿ - ಕೆಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಯಾವತ್ತು ಒಂದೇ. ಬಿಜೆಪಿಯಷ್ಟು ಕೆಟ್ಟ ರಾಜಕಾರಣ ಹಿಂದೆ ಯಾರೂ ಮಾಡಿಲ್ಲ ಮುಂದೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿದ್ಯುತ್ ಸಮಸ್ಯೆ ಬಗೆಹರಿಸದೆ ಜಿಲ್ಲೆಯನ್ನು ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಬಡವರಿಗೆ ಹೊಸ ಪಡಿತರ ಚೀಟಿ ನೀಡುವುದಾಗಿ ಹೇಳಿ ಇದ್ದ ಚೀಟಿ ಕಸಿದುಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದ್ದಾರೆ ಎಂದು ದೂರಿದರು.

ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ಮಾತನಾಡಿ, ಈಶ್ವರಪ್ಪ ಸೋಲಿನ ಭೀತಿಯಲ್ಲಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರು ಈಚೆಗೆ ಭಾಷಣದಲ್ಲಿ ಆಡಿದ ಮಾತುಗಳನ್ನು ಇಲ್ಲಿ ಹೇಳಲೂ ಅಸಹ್ಯವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಳೆದು ಹೋದ ನಮ್ಮ ಕ್ಷೇತ್ರವನ್ನು ಮತ್ತೆ ಪಡೆಯಲು ಪ್ರಯತ್ನಿಸೋಣ ಎಂದರು.

ಕಾಂಗ್ರೆಸ್ ಮುಖಂಡ ಕೆ. ದಿವಾಕರ್ ಮಾತನಾಡಿ, ನಾನು ಹಿಂದಿನಿಂದಲೂ ಕಾಂಗ್ರೆಸ್ ಕಾರ್ಯಕರ್ತ. 2004ರಲ್ಲಿ ಬಂಗಾರಪ್ಪ ಅವರೊಂದಿಗೆ ಬಿಜೆಪಿ ಸೇರಿದ್ದೆ. ಬಿಜೆಪಿಯಲ್ಲಿ ಇದ್ದರೂ ಘನತೆಗೆ ಧಕ್ಕೆ ಬರದಂತೆ ನೋಡಿಕೊಂಡಿದ್ದೇನೆ. ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಪ್ರಸನ್ನಕುಮಾರ್ ನಮ್ಮ ಪ್ರತಿನಿಧಿ. ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಈಶ್ವರಪ್ಪ ಹೇಳಿರುವಂತೆ ಬ್ರಾಹ್ಮಣ ಹುಡುಗಿಯರು ಮಾನಗೆಟ್ಟವರಲ್ಲ. ತಾವು ಗೆಲ್ಲಲ್ಲು, ಹಣ ಮಾಡಲು ಈಶ್ವರಪ್ಪ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಖಂಡಿಸಿದರು.

ಇದೇ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಸಮ್ಮುಖದಲ್ಲಿ ಅನೇಕರು ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ದಿನೇಶ್, ಎಐಸಿಸಿ ಸದಸ್ಯೆ ಬಲ್ಕಿಷ್ ಬಾನು, ಅಜೀಜ್ ಅಹ್ಮದ್ ಸಾಬ್, ಸಯ್ಯದ್ ವಾಹಿದ್ ಅಡ್ಡು, ರಾಮೇಗೌಡ, ಎಸ್.ಕೆ. ಮರಿಯಪ್ಪ, ರಂಗನಾಥ್, ರುದ್ರೇಶ್, ಎಸ್.ವಿ. ತಿಮ್ಮಯ್ಯ, ಇಮ್ತಿಯಾಜ್ ಖಾನ್, ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.

15ಕ್ಕೆ ನಾಮಪತ್ರ ಸಲ್ಲಿಕೆ
ಶಿವಮೊಗ್ಗ: ಏ
. 15ರಂದು ನಾಮಪತ್ರ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ತಿಳಿಸಿದರು. ಅಂದು ಬೆಳಿಗ್ಗೆ 10ಗಂಟೆಗೆ ಬಸ್‌ಸ್ಟ್ಯಾಂಡ್ ವೃತ್ತದಿಂದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ನಗರಸಭೆಯ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಇನ್ನೂ ಬಿ-ಫಾರಂ ನೀಡಿಲ್ಲ
ಮುಖಂಡ ಇಸ್ಮಾಯಿಲ್ ಖಾನ್ ಮಾತನಾಡಿ, ಪಕ್ಷ ಇನ್ನು ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಿಲ್ಲ. ಮಾಧ್ಯಮಗಳಲ್ಲಿ ಕೆ.ಬಿ. ಪ್ರಸನ್ನಕುಮಾರ್ ಹೆಸರು ಕೇಳಿ ಬರುತ್ತಿದೆ. ನಾನು ಅಲ್ಪಸಂಖ್ಯಾತ ಗುಂಪಿಗೆ ಸೇರಿದವನು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ತಮಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಸಿಗದಿದ್ದರೆ ಸಂಚು ರೂಪಿಸುವುದಿಲ್ಲ; ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. ದಿವಾಕರ್ ಅವರಿಗೆ ಟಿಕೆಟ್ ಸಿಗದಿರುವುದು ನನಗೆ ಸಂತೋಷ ತಂದಿದೆ. ಪಕ್ಷ ಹೊಸಬರಿಗೆ ಮಣೆ ಹಾಕದಿರುವುದು ಸ್ವಾಗತಾರ್ಹ ಕ್ರಮ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT