ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕೈಗೆ ಅಧಿಕಾರ: ಪರಮೇಶ್ವರ ವಿಶ್ವಾಸ

Last Updated 28 ಮೇ 2012, 9:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಮುಂದಿನ ವರ್ಷ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಭವಿಷ್ಯ ನುಡಿದರು.

ಜೂನ್ ಎರಡರಂದು ನಗರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಭಾನುವಾರ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
`ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದರ ಜೊತೆಗೆ ಯುವಕರನ್ನು ರಾಜಕೀಯದತ್ತ ಸೆಳೆಯಲು ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ~ ಎಂದರು.

`ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ (ಎನ್‌ಎಸ್‌ಯುಐ), ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೂತ್ ಮಟ್ಟದಿಂದ ಚುನಾಯಿತರಾದ 40,000ಕ್ಕೂ ಅಧಿಕ ಪ್ರತಿನಿಧಿಗಳನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಜೂನ್ ಎರಡರಂದು ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಿ ಮೂರರಂದು ದಾವಣಗೆರೆಯಲ್ಲಿ ನಡೆಯುವ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವರು~ ಎಂದು ಅವರು ಹೇಳಿದರು.

`ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಬಂದವು. ಚಿಕ್ಕಮಗಳೂರು-ಉಡುಪಿ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರೋತ್ಸಾಹ ಸಿಕ್ಕಿತು. ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಬರಲಿದೆ. ಸೋನಿಯಾ ಗಾಂಧಿ ನೇತೃತ್ವದ್ಲ್ಲಲೇ ಚುನಾವಣೆಯನ್ನು ಎದುರಿಸುತ್ತೇವೆ~ ಎಂದು ಹೇಳಿದರು.

ಸರ್ಕಾರ ಬೀಳಲಿ: `ರಾಜ್ಯದಲ್ಲಿಯ ಬಿಜೆಪಿ ಸರ್ಕಾರ ಬೀಳಲಿ ಎಂದು ಅಪೇಕ್ಷಿಸುತ್ತೇವೆ~ ಎಂದ ಅವರು, `ರಾಜ್ಯದಲ್ಲಿ ಕಾನೂನು ಹಾಗೂ ಆಡಳಿತ ಕುಸಿದಿರುವುದರಿಂದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜೀನಾಮೆ ಕೇಳುತ್ತಿದ್ದೆವು. ಈಗ ಮುಖ್ಯಮಂತ್ರಿಯಾಗಿರುವ ಡಿ.ವಿ. ಸದಾನಂದಗೌಡರನ್ನೂ ರಾಜೀನಾಮೆ ಕೇಳುತ್ತೇವೆ. ಸಮೃದ್ಧ ಕರ್ನಾಟಕ ಕಟ್ಟುತ್ತೇವೆಂದು ಹೇಳಿ ರಾಜ್ಯವನ್ನು ಹಾಳು ಮಾಡಿದರು. ಇನ್ನೊಂದು ವರ್ಷ ಪೂರೈಸಿದರೆ ಅಈಛಿ ಸರ್ಕಾರದ ಸಾಧನೆಯಾಗುತ್ತದೆ~ ಎಂದು ಅವರು ವ್ಯಂಗ್ಯವಾಡಿದರು.

`ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಮೂವರು ಮಾಜಿ ಮುಖ್ಯಮಂತ್ರಿಗಳ ಪರವಾಗಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿ ನೀಡಿದೆ ಎನ್ನುವ ವಾದವನ್ನು ಒಪ್ಪುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಅಕ್ರಮ ಎಸಗಿದವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಶಿಸ್ತು ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇವೆ~ ಎಂದರು.

ರಾಜ್ಯದಲ್ಲಿಯ ಪ್ರಸ್ತುತ ವಿದ್ಯಮಾನಗಳ ಕುರಿತು ರಾಜ್ಯಪಾಲರು ಮೌನವಾಗಿದ್ದಾರೆಂಬ ಪ್ರಶ್ನೆಗೆ ಅವರು, ರಾಜ್ಯಪಾಲರಿಗೂ ಮಿತಿಗಳಿವೆ. ಆದರೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಅವರೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆನ್ನುವ ಕುರಿತು ಸ್ಪಷ್ಟವಾಗಿ ಹೇಳದ ಅವರು, ಹಿಂದೊಮ್ಮೆ ಕಾಂಗ್ರೆಸ್‌ಗೆ ಅರ್ಜಿ ಹಾಕಲಿ ಎಂದಿದ್ದು ನಿಜ. ಆದರೆ ನಮ್ಮ ರಣನೀತಿಗಳನ್ನು ಮಾಧ್ಯಮದವರಿಗೆ ಹೇಳುವುದಿಲ್ಲ ಎಂದು ಅವರು ನಕ್ಕರು.

`ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರ್ಷದ್ ರಿಜ್ವಾನ್, ಕಾಂಗ್ರೆಸ್ ಮುಖಂಡರಾದ ಸಿ.ಎಸ್. ಶಿವಳ್ಳಿ, ಎ.ಎಂ. ಹಿಂಡಸಗೇರಿ, ಮಂಜುನಾಥ ಕುನ್ನೂರ, ಎಫ್.ಎಚ್. ಜಕ್ಕಪ್ಪನವರ, ಪ್ರಸಾದ ಅಬ್ಬಯ್ಯ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT