ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕೋಟೆಯಲ್ಲಿ ಸಮಸ್ಯೆಗಳೂ ಹಲವು

Last Updated 15 ಏಪ್ರಿಲ್ 2013, 7:09 IST
ಅಕ್ಷರ ಗಾತ್ರ

ಕಾರ್ಕಳ: ಐತಿಹಾಸಿಕ, ಸಾಂಸ್ಕೃತಿಕವಾಗಿ ದೇಶದಾದ್ಯಂತ ಗಮನ ಸೆಳೆದ ಕ್ಷೇತ್ರ ಕಾರ್ಕಳ. ಇಲ್ಲಿ ಹೇರಳವಾಗಿದ್ದ ಕರಿಕಲ್ಲಿನಿಂದ ಕಾರ್ಕಳ ಎಂಬ ಹೆಸರನ್ನು ಪಡೆದ ಈ ಊರಿಗೆ ಶಿಲ್ಪಕಲೆಯಲ್ಲಿ ಅಂತರರಾಷ್ಟ್ರೀಯ ಮನ್ನಣೆಯೂ ಇದೆ. ಇದು ರಾಜಕೀಯದಲ್ಲೂ ಮುಂಚೂ ಣಿಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಿಂದ ಸತತ 6 ಸಲ ಗೆದ್ದ ಎಂ.ವೀರಪ್ಪ ಮೊಯಿಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಸ್ತುತ ಕೇಂದ್ರ ಸರ್ಕಾರದ ಇಂಧನ ಸಚಿವರೂ ಆಗಿದ್ದಾರೆ. ಇದೇ ಕ್ಷೇತ್ರವನ್ನು ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಇಂದಿರಾಗಾಂಧಿ ಉಪ ಚುನಾವಣೆಯಲ್ಲಿ ಜಯಗಳಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರು.

1952ರಿಂದ ಈವರೆಗೆ ನಡೆದ 13 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ 10 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಹೀಗಾಗಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದೆ. 1952ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಎ.ಬಿ.ಶೆಟ್ಟಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಜಾ ಸೋಷಲಿಸ್ಟ್ ಪಕ್ಷದ ಆರ್.ದೇವರಾಯ ಶೆಣೈ ಅವರು ಶೆಟ್ಟರ ಎದುರಾಳಿಯಾಗಿ ಪ್ರಬಲ ಸ್ಪರ್ಧೆ ನೀಡಿದ್ದರು.

ಪ್ರಪ್ರಥಮ ಮಂತ್ರಿ ಮಂಡಲದಲ್ಲಿ ತಾಲ್ಲೂಕಿನ ಪ್ರತಿನಿಧಿ ಎ.ಬಿ.ಶೆಟ್ಟರಿಗೆ ಸಚಿವ ಸ್ಥಾನ ಒದಗಿಬಂದಿತ್ತು. 1967ರಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ನ ಕೆ.ಕೆ.ಹೆಗ್ಡೆ ಚುನಾಯಿತರಾದರು. ಪ್ರಜಾ ಸೊಷಲಿಸ್ಟ್‌ನ ಆರ್.ದೇವರಾಯ ಶೆಣೈ ಸ್ಪರ್ಧಿಸಿ ಸತತ ಎರಡನೇ ಬಾರಿ ಸೋಲನ್ನು ಅನುಭವಿಸಿದರು. ಕೆದಿಂಜೆಯ ಕೆ.ಕೆ. ಹೆಗ್ಡೆ ಅವರು ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಸ್ಥಾನ ಪಡೆದುಕೊಂಡರು. ಸತತ ಎರಡನೇ ಬಾರಿಗೆ ಈ ಕ್ಷೇತ್ರದ ಕಾಂಗ್ರೆಸ್ ಪ್ರತಿನಿಧಿಗೆ ಸಂಪುಟದಲ್ಲಿ ಸಚಿವ ಸ್ಥಾನ ದೊರಕಿತ್ತು.

1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಒಕ್ಕೂಟಗಳು ಸೇರಿ ಬೆಂಬಲಿಸಿದ ಪ್ರಜಾ ಸೋಷಲಿಸ್ಟ್ ಪಕ್ಷದ ದಯಾನಂದ ಕಲ್ಯಾ ಶಾಸಕರಾಗಿ ಚುನಾಯಿತರಾದರು. ಎರಡನೇ ಬಾರಿ ಶಾಸಕರಾಗುವ ಕಾಂಗ್ರೆಸ್ಸಿನ ಕೆ.ಕೆ.ಹೆಗ್ಡೆ ಅವರ ಕನಸು ಭಗ್ನವಾಯಿತು. ಇದರಿಂದ ಕಾಂಗ್ರೆಸ್ಸಿನ ಗೆಲುವಿನ ಓಟಕ್ಕೆ ವಿಪಕ್ಷಗಳು ಕಡಿವಾಣ ಹಾಕಿದ್ದವು. 1967ರಲ್ಲಿ ನಡೆದ ಚುನಾವಣೆಯಲ್ಲಿ ಜನಸಂಘದ ಬೋಳ ರಘುರಾಮ ಶೆಟ್ಟಿ ಆಯ್ಕೆಯಾದರು. ಅವರ ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಆಲಂಗಾರ್ ನಾರಾಯಣ ಹೆಗ್ಡೆ ಅವರು ಸೋತರು. ಹೀಗೆ ಸತತ ಎರಡನೇ ಬಾರಿಗೆ ಕಾಂಗ್ರೆಸಿನ ಹಿಡಿತ ಸಡಿಲವಾಯಿತು.

1972ರಲ್ಲಿ ವೀರಪ್ಪ ಮೊಯಿಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದರು. 10 ವರ್ಷಗಳವರೆಗೆ ವಿರೋಧ ಪಕ್ಷಗಳ ಕೈಯ್ಯಲಿದ್ದ ಈ ಕ್ಷೇತ್ರವನ್ನು `ಕೈ'ವಶ ಮಾಡುವಲ್ಲಿ ಮೊಯಿಲಿ ಸಫಲರಾಗಿದ್ದರು. 1972ರಿಂದ 1999ರವರೆಗೆ ಸತತ 6 ಅವಧಿ ಸೇರಿದಂತೆ 27  ವರ್ಷ ತಾಲ್ಲೂಕಿನಲ್ಲಿ ಕಾಂಗ್ರೆಸ್‌ನದ್ದೇ ಜಯಭೇರಿ. 6 ಬಾರಿ ಗೆದ್ದ ಮೊಯಿಲಿ ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದರು.

ಪಟ್ಟ ಶಿಷ್ಯನಿಗೆ ಕ್ಷೇತ್ರ ತೆರವು:  ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ವೀರಪ್ಪ ಮೊಯಿಲಿ ಅವರ ಗರಡಿಯಲ್ಲಿ ಪಳಗಿದ ಗೇಣಿದಾರರ ಕುಟುಂಬದ ಹೆಬ್ರಿಯ ಹುತ್ತುರ್ಕೆ ಗೋಪಾಲ ಭಂಡಾರಿಗೆ 1999ರಲ್ಲಿ ಕ್ಷೇತ್ರ ತೆರವು ಮಾಡಿಕೊಟ್ಟರು. ಪ್ರಥಮ ಬಾರಿಗೆ ಗೋಪಾಲ ಭಂಡಾರಿ ಅವರು 20,900 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಬಿಜೆಪಿಯ ಕೆ.ಪಿ.ಶೆಣೈ ಪ್ರತಿಸ್ಪರ್ಧಿಯಾಗಿದ್ದರು.

1999ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೋಪಾಲ ಭಂಡಾರಿ ಶಾಸಕರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಇದರೊಂದಿಗೆ ಕಾಂಗ್ರೆಸ್ ಸತತ ಏಳನೇ ಬಾರಿಗೆ ವಿಜಯದ ಪರಂಪರೆಯನ್ನು ಮುಂದುವರೆಸಿತು. 1999ರ ಚುನಾವಣೆಯಲ್ಲಿ ಚಲಾಯಿತ ಒಟ್ಟು ಮತಗಳಲ್ಲಿ 49,591 ಮತವನ್ನು ಗೋಪಾಲ ಭಂಡಾರಿ  ಪಡೆದರೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಪಿ.ಶೆಣೈ 28,857 ಮತ ಪಡೆದಿದ್ದರು.

ಕಾಂಗ್ರೆಸ್ಸಿನ ಭದ್ರಕೋಟೆಗೆ ಬಿರುಕು :
1972ರಿಂದ 2004 ಏಪ್ರಿಲ್ 28ರ ಚುನಾವಣೆವರೆಗೆ 32 ವರ್ಷಗಳ ಕಾಲ ಕಾಂಗ್ರೆಸ್ಸಿನ ನೆಲೆಯಾಗಿದ್ದ ಈ ಕ್ಷೇತ್ರವನ್ನು ಬಿಜೆಪಿಯ ವಿ.ಸುನಿಲ್ ಕುಮಾರ್ ಛಿದ್ರಗೊಳಿಸಿದರು. ಕಾರ್ಕಳ ಕ್ಷೇತ್ರದಲ್ಲಿ ಕಮಲ ಅರಳಿತು. 2004ರ ಚುನಾವಣೆಯಲ್ಲಿ ಬಿಜೆಪಿಯ ವಿ.ಸುನಿಲ್ ಕುಮಾರ್, ಎಚ್.ಗೋಪಾಲ ಭಂಡಾರಿ ಅವರನ್ನು 9795 ಮತಗಳ ಅಂತರದಿಂದ ಸೋಲಿಸಿದರು. ಸುನಿಲ್ ಕುಮಾರ್ 52061 ಮತಗಳಿಸಿ ಪ್ರಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.  ಕ್ಷೇತ್ರ ಪುನರ್‌ವಿಂಗಡಣೆಯ ತರುವಾಯ ಇಡೀ ತಾಲ್ಲೂಕನ್ನೊಳಗೊಂಡ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ವೃದ್ಧಿಯಾಯಿತು. 2008ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ ಬಲ ಹೆಚ್ಚಾಯಿತು. ಕಾಂಗ್ರೆಸ್‌ನ ಗೋಪಾಲ ಭಂಡಾರಿ, ಸುನಿಲ್ ಕುಮಾರ್ ಅವರನ್ನು ಸೋಲಿಸುವ ಮೂಲಕ ಕಳೆದುಕೊಂಡ ಕ್ಷೇತ್ರವನ್ನು ಮತ್ತೆ `ಕೈ' ತೆಕ್ಕೆಗೆ ಮರಳಿಸಿದರು.

2008ರ ಚುನಾವಣೆಯಲ್ಲಿ  ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿತ್ತು. ಕಾಂಗ್ರೆಸ್‌ನ ಗೋಪಾಲ ಭಂಡಾರಿ 56,529 ಮತ ಪಡೆದರೆ ಸುನಿಲ್ ಕುಮಾರ್ ಅವರು 54,992 ಮತ ಪಡೆದುಕೊಂಡರು.

1962, 1967, 2004 ಸೇರಿದಂತೆ 3 ಅವಧಿಯನ್ನು ಬಿಟ್ಟರೆ ಉಳಿದ 10 ಅವಧಿಯಲ್ಲಿ ಕಾಂಗ್ರೆಸ್  ಕ್ಷೇತ್ರವನ್ನು ಪ್ರತಿನಿಧಿಸಿದೆ. 2008ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮತದಾರರ ಸಂಖ್ಯೆ 15 ಸಾವಿರ ಹೆಚ್ಚಾಗುವ ಸಂಭವವಿದೆ. ಈ ಕ್ಷೇತ್ರದಲ್ಲಿ ಮಹಿಳಾ ಮತದಾರರರೇ ಪ್ರಾಬಲ್ಯ ಪಡೆದಿದ್ದಾರೆ. ಒಟ್ಟು ಬೂತ್‌ಗಳ ಸಂಖ್ಯೆ 187.

ಪ್ರಮುಖ ಸಮಸ್ಯೆಗಳು
ಎರಡು ವರ್ಷಗಳ ಹಿಂದೆ ಆರಂಭಗೊಂಡ ಮುಖ್ಯ ರಸ್ತೆ ವಿಸ್ತರಣೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಕೆಲವರು ಕಟ್ಟಡ ಬಿಟ್ಟುಕೊಟ್ಟರೆ ಕೆಲವೆಡೆ ಹಾಗೆಯೇ ಇವೆ.

 2.5 ಕೋಟಿ ರೂಪಾಯಿ ವಿನಿಯೋಗಿಸಿ ನಿರ್ಮಿಸಿದ ಬಂಡಿಮಠ ಬಸ್ ನಿಲ್ದಾಣ ಚರ್ಚೆಯ ವಿಷಯವಾಗಿ ಉಳಿದಿದೆ.

ಪಟ್ಟಣದ ಒಳಚರಂಡಿ ವ್ಯವಸ್ಥೆ ಕಾಮಗಾರಿ ಪೂರ್ಣವಾಗದೇ ಉಳಿದಿದೆ.

ತ್ಯಾಜ್ಯ ನೀರಿನ ಸಮಸ್ಯೆ:  ಪಟ್ಟಣದ ತ್ಯಾಜ್ಯ ನೀರು ಹರಿದು ಹೋಗುವ ಹವಲ್ದಾರಬೆಟ್ಟು ಪರಿಸರದವರಿಗೆ ಕಶ್ಮಲ, ವಾಸನೆ ಪೂರಿತ ನೀರಿನಿಂದಾಗಿ ಸಮಸ್ಯೆಯಾಗಿದೆ. ನೀರಿನ ಪುನರ್ಬಳಕೆ ಕುರಿತು ಯೋಜನೆ ಆಗಿಲ್ಲ.

 ಆನೆಕೆರೆಯ ಹೂಳೆತ್ತುವ ಕಾರ್ಯ ಆಗಾಗ ಅರ್ಧಂಬರ್ಧ ನಡೆಯುತ್ತಿದೆ.

 ಗ್ರಾಮೀಣ ಪ್ರದೇಶದ ರಸ್ತೆಗಳ ಕಾಮಗಾರಿ ಬಾಕಿಯಿವೆ. ತಾಲ್ಲೂಕಿನ ಸಾಣೂರಿನಲ್ಲಿ ಈ ವಿಷಯ ಮುಂದಿಟ್ಟುಕೊಂಡು ಇತ್ತೀಚೆಗೆ ಚುನಾವಣಾ ಬಹಿಷ್ಕಾರವೂ ನಡೆದಿತ್ತು.

ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಿದೆ. ತಾಲ್ಲೂಕಿನ ನಿಟ್ಟೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅರ್ಧಕ್ಕೆ ನಿಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT