ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಜಯಭೇರಿ: ವಿಶ್ವಾಸ

Last Updated 16 ಏಪ್ರಿಲ್ 2013, 12:22 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ಸಿನ ಅಭ್ಯರ್ಥಿಗಳಾದ ಕೆ.ಎಂ. ಲೋಕೇಶ್ ಹಾಗೂ ಬಿ.ಟಿ. ಪ್ರದೀಪ್ ಸೋಮವಾರ ನಾಮಪತ್ರ ಸಲ್ಲಿಸಿದರು.

ಮಡಿಕೇರಿ ವರದಿ: ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಮತದಾರರು ಪಕ್ಷದತ್ತ ಒಲವು ತೋರಿದ್ದು, ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಎಂ. ಲೋಕೇಶ್ ಹೇಳಿದರು.

ಇಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪಕ್ಷದ ವರಿಷ್ಠರು ನಡೆಸಿದ ಸಮೀಕ್ಷೆಯಂತೆ ನನಗೆ ಟಿಕೆಟ್ ದೊರೆತಿದ್ದು, ಎಲ್ಲರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಕಾರ್ಯಕರ್ತರ ನಂಬಿಕೆಗೆ ದ್ರೋಹ ಮಾಡಲಾರೆ ಎಂದರು.

ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ನಾನು ಕೂಡ ಮಡಿಕೇರಿ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಸಿಗದಿದ್ದರಿಂದ ನಾನು ಕೂಡ ನಿರಾಶೆಯಾಗಿದ್ದೆ. ಆದರೆ, ಈಗ ಹೈಕಮಾಂಡ್ ನಿರ್ಧಾರದಂತೆ ಲೋಕೇಶ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.

ಪಕ್ಷದ ಮುಖಂಡರಾದ ಹನೀಫ್, ಕೆ.ಕೆ. ಮಂಜುನಾಥ ಕುಮಾರ್, ನಟೇಶಗೌಡ್, ಟಿ.ಪಿ. ರಮೇಶ್, ಕೆ.ಎಂ. ಗಣೇಶ್, ಕುಮುದಾ ಧರ್ಮಪ್ಪ, ಚಂದ್ರಮೌಳಿ, ಯಾಕೂಬ್, ಹಾರೂನ್, ವೀಣಾ ಅಚ್ಚಯ್ಯ, ಇತರರು ಉಪಸ್ಥಿತರಿದ್ದರು.

`ಒಗ್ಗಟ್ಟಿನಿಂದ ಕೆಲಸ ಮಾಡೋಣ'
ವಿರಾಜಪೇಟೆ ವರದಿ: ಪಕ್ಷದ ವರಿಷ್ಠರು ಟಿಕೆಟ್ ನೀಡಿದ ಅಭ್ಯರ್ಥಿ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಅಭ್ಯರ್ಥಿಯನ್ನು ಗೆಲ್ಲಿಸೋಣವೆಂದು ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ಹೇಳಿದರು.

ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಟಿ. ಪ್ರದೀಪ್ ನಾಮಪತ್ರ ಸಲ್ಲಿಸಿದ ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷ ಜೆ.ಎ. ಕರುಂಬಯ್ಯ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ಸರ್ಕಾರ ರಚಿಸುವ ಎಲ್ಲ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕೋಮುವಾದಿ ಪಕ್ಷವನ್ನು ದೂರವಿಡುವ ನಿಟ್ಟಿನಲ್ಲಿ ಜಾತ್ಯತೀತ ಮತಗಳೆಲ್ಲವೂ ಒಂದಾಗಬೇಕಾಗಿದೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ನಿಜ. ಆದರೆ, ಈಗ ಭಿನ್ನಾಭಿಪ್ರಾಯಗಳೆಲ್ಲವೂ ಶಮನಗೊಂಡಿವೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಕೆಪಿಸಿಸಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಅರುಣ್ ಮಾಚಯ್ಯ ಹಾಗೂ ನಾನೂ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದರಿಂದ ಮತಗಳು ವಿಭಜನೆಗೊಂಡಿದ್ದವು. ಈಗ ನಾವೆಲ್ಲ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿರುವ ನಿಟ್ಟಿನಲ್ಲಿ ಬಿ.ಟಿ. ಪ್ರದೀಪ್ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.

ಅಭ್ಯರ್ಥಿ ಬಿ.ಟಿ. ಪ್ರದೀಪ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಅಲೆ ಕಾಣುತ್ತಿದೆ. ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT