ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಜೆಡಿಎಸ್ ಸತತ ಮೇಲಾಟ

ಬಿಜೆಪಿ, ಸಿಪಿಎಂಗೆ ತಳವೂರುವ ಸವಾಲು
Last Updated 3 ಏಪ್ರಿಲ್ 2013, 9:14 IST
ಅಕ್ಷರ ಗಾತ್ರ

ಕೋಲಾರ: ಮುಳಬಾಗಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೇಲಾಟವೇ ಇಲ್ಲಿನ ಏಳು ಅವಧಿಯ ಚುನಾವಣೆ ಚರಿತ್ರೆಯನ್ನು ಆವರಿಸಿದೆ. ದಶಕಗಳಿಂದಲೂ ಇಲ್ಲಿ ಬಿಜೆಪಿ ತಳವೂರುವ ಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಈ ಮೂರೂ ಪಕ್ಷಗಳ ನಡುವೆ ಸಿಪಿಎಂ ಕೂಡ ತನ್ನ ಅಸ್ತಿತ್ವಕ್ಕಾಗಿ `ಹೋರಾಟ' ನಡೆಸಬೇಕಾಗಿದೆ.

1983ರಿಂದ 2008ರವರೆಗೆ ನಡೆದಿರುವ ಏಳು ಚುನಾವಣೆಗಳ ಪೈಕಿ ಮೂರು ಬಾರಿ ಕಾಂಗ್ರೆಸ್ ಅಧಿಕಾರ ಪಡೆದಿದ್ದರೆ, ಕೇವಲ ಎರಡು ಬಾರಿ ಮಾತ್ರ ಜನತಾ ಪರಿವಾರಕ್ಕೆ ಆಯ್ಕೆಯಾಗುವ ಅವಕಾಶ ದೊರಕಿದೆ. ಒಮ್ಮೆ ಸಿಪಿಎಂ, ಮಗದೊಮ್ಮೆ ಸ್ವತಂತ್ರ ಅಭ್ಯರ್ಥಿ ಇಲ್ಲಿ ಆಯ್ಕೆಯಾಗಿರುವ ನಿದರ್ಶನಗಳಿವೆ.

ಏಳು ಚುನಾವಣೆಗಳ ಪೈಕಿ ಎರಡರಲ್ಲಿ ಮೂವರು ಮಹಿಳೆಯರೂ ಕಣಕ್ಕೆ ಇಳಿದಿರುವುದು ಇಲ್ಲಿನ ವಿಶೇಷ. 1985ರಲ್ಲಿ ಸ್ಪರ್ಧಿಸಿದ್ದ ಇಬ್ಬರು ಮಹಿಳೆಯರ ಪೈಕಿ ಎಂ.ವಿ.ಪ್ರಮೀಳಮ್ಮ ಸಿಪಿಎಂ ಅಭ್ಯರ್ಥಿ ವಿರುದ್ಧ ಸೋತರೂ ಸಮೀಪ ಸ್ಪರ್ಧಿಯಾಗಿ 20608 ಮತಗಳನ್ನು ಪಡೆದು ಗಮನ ಸೆಳೆದು ದಾಖಲೆ ನಿರ್ಮಿಸಿದ್ದಾರೆ. 2008ರಲ್ಲಿಯೂ ಮಹಿಳೆಯೊಬ್ಬರು ಸ್ಪರ್ಧಿಸಿದ್ದರು.

1983ರಲ್ಲಿ ಸ್ವತಂತ್ರ ಅಭ್ಯರ್ಥಿ ಬೀರೇಗೌಡರ ವಿರುದ್ಧ ಸೋತಿದ್ದ ಕಾಂಗ್ರೆಸ್, 1985ರ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ವೆಂಕಟರಾಮಯ್ಯ ವಿರುದ್ಧವೂ ಸೋಲನಭವಿಸಿದೆ. ಆಗ ಗೆದ್ದ ಸಿಪಿಎಂಗೆ ಇದುವರೆಗೂ ಗೆಲ್ಲಲು ಸಾಧ್ಯವಾಗಿಲ್ಲ. 22104 ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದ ಸಿಪಿಎಂಗೆ ನಂತರದಲ್ಲಿ ಅಂಥ ಗೆಲುವು ದಕ್ಕಿಲ್ಲ. ಇದು ಸಿಪಿಎಂಗೆ ಕ್ಷೇತ್ರದಲ್ಲಿ ಕುಗ್ಗಿದ ಜನಪ್ರಿಯತೆಯ ಕಡೆಗೂ ಗಮನ ಸೆಳೆಯುತ್ತದೆ
ವಿಶೇಷ ಎಂದರೆ ಅಂದಿನಿಂದ 2008ರವರೆಗಿನ ಚುನಾವಣೆಗಳಲ್ಲಿ ಗೆದ್ದವರು ಸಿಪಿಎಂನಷ್ಟು ಮತಗಳ ಅಂತರವನ್ನು ಉಳಿಸಿಕೊಂಡಿಲ್ಲ.

1989ರಿಂದ ಈಚೆಗೆ ನಡೆದ ಚುನಾವಣೆಗಳ ಚರಿತ್ರೆ ಜನತಾ ಪರಿವಾರ ಮತ್ತು ಕಾಂಗ್ರೆಸ್ ನಡುವಿನ ಮೇಲಾಟಗಳನ್ನೇ ಹೆಚ್ಚು ದಾಖಲಿಸಿದೆ. ಅದರಲ್ಲೂ ನಾಲ್ಕು ಚುನಾವಣೆಗಳಲ್ಲಿ ಎಂ.ವಿ.ವೆಂಕಟಪ್ಪ ಮತ್ತು ಆರ್.ಶ್ರೀನಿವಾಸ್ ನಡುವಿನ ಪೈಪೋಟಿಯೇ ಎದ್ದು ಕಾಣುತ್ತದೆ. ಒಮ್ಮೆ ಅವರು, ಒಮ್ಮೆ ಇವರು ಗೆದ್ದು ಸೋತಿದ್ದಾರೆ. 1994 ಮತ್ತು 2004ರಲ್ಲಿ ಆರ್.ಶ್ರೀನಿವಾಸ್ ಗೆದ್ದರೆ, 1989 ಮತ್ತು 1999ರ ಚುನಾವಣೆಗಳಲ್ಲಿ ಎಂ.ವಿ.ವೆಂಕಟಪ್ಪ ಗೆಲುವು ಸಾಧಿಸಿದ್ದಾರೆ. ಈ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ಸಾಕಷ್ಟು ಪ್ರಭಾವವನ್ನು ಕ್ಷೇತ್ರದಲ್ಲಿ ಸೃಷ್ಟಿಸಿಕೊಂಡಿವೆ.

2004ರ ಚುನಾವಣೆಯಲ್ಲಿ ಆರ್.ಶ್ರೀನಿವಾಸ್ ವಿರುದ್ಧ ವೈ.ಸುರೇಂದ್ರ ಅವರು 15478 ಮತಗಳ ಅಂತರದಲ್ಲಿ ಸೋತರೂ ಬಿಜೆಪಿಗೆ ನೆಲೆ ಒದಗಿಸುವ ಪ್ರಯತ್ನ ಮಾಡಿದ್ದು ಗಮನಾರ್ಹವಾಗಿತ್ತು. ಆನಂತರದಲ್ಲಿ ಹೆಚ್ಚು ಸದ್ದು ಮಾಡದಿದ್ದರೂ ಅವರು 2011ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಸ್ಪರ್ಧಿಸಿ ಗಮನ ಸೆಳೆದರು. ಆದರೆ ಸೋಲು ಅವರನ್ನು ಬಿಡಲಿಲ್ಲ.

2004ರವರೆಗೂ ಸಾಮಾನ್ಯ ಕ್ಷೇತ್ರವಾಗಿದ್ದ ಮುಳಬಾಗಲು 2008ರ ಚುನಾವಣೆ ವೇಳೆಗೆ ಮೀಸಲು ಕ್ಷೇತ್ರವಾಯಿತು. ಅದೇ ಕಾರಣದಿಂದ, ಆ ಹೊತ್ತಿಗೆ ಜನತಾ ಪರಿವಾರ ಪ್ರಮುಖ ನಾಯಕರಾಗಿ ಬೆಳೆದಿದ್ದ ಆರ್.ಶ್ರೀನಿವಾಸ್ ಅವರಿಗೆ ಸ್ಪರ್ಧಿಸುವ ಅವಕಾಶವೂ ಇಲ್ಲವಾಯಿತು. ಪರಿಣಾಮವಾಗಿ ಮುನಿ ಆಂಜಪ್ಪ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು.  ಆದರೆ ಕಾಂಗ್ರೆಸ್‌ನ ಅಮರೇಶ್ ವಿರುದ್ಧ ಅವರು 1828 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಗ್ರಾಮ ಪಂಚಾಯತ್‌ನ ಸಾಮಾನ್ಯ ಸದಸ್ಯರಾಗಿದ್ದ ಅಮರೇಶ್ ವಿಧಾನಸಭೆಗೆ ಆಯ್ಕೆಯಾಗಿದ್ದು ಕೂಡ ಒಂದು ದಾಖಲೆ.

ಈಗಿನ ಸ್ಥಿತಿ: ಕಳೆದ ಬಾರಿ ಕಡಿಮೆ ಮತಗಳ ಅಂತರದಲ್ಲಿ ಸೋತಿರುವ ಮುನಿಆಂಜಪ್ಪ ಸೇರಿದಂತೆ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವ ಆಕಾಂಕ್ಷೆಯುಳ್ಳವರ ಸಂಖ್ಯೆಯೂ ಹೆಚ್ಚಿದೆ. ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಕೆಲವು ಆಕಾಂಕ್ಷಿಗಳು ಜೆಡಿಎಸ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಶಿವಶಂಕರ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.

2008ರಲ್ಲಿ ಕಾಂಗ್ರೆಸ್‌ನಿಂದ ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ಕಸಬಾ ಹೋಬಳಿಯ ಸೊನ್ನವಾಡಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅಮರೇಶ್, ಇದೀಗ ಮತ್ತೊಂದು ಚುನಾವಣೆ ಬಂದಿರುವ ಹೊತ್ತಲ್ಲಿ, ಸಿದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಿದ ಭೂಹಗರಣದ ಆರೋಪದ ಪರಿಣಾಮ ಶಿಕ್ಷೆಗೆ ಗುರಿಯಾಗಿದ್ದಾರೆ.

ಅದೇ ಕಾರಣಕ್ಕೆ ಅವರಿಗೆ ಮತ್ತೆ ಟಿಕೆಟ್ ನೀಡಬಾರದು ಎಂಬ ಸ್ಥಳೀಯರ ಆಗ್ರಹವು `ಉಗ್ರ ಬಂಡಾಯ'ದ ರೂಪವನ್ನೂ ತಾಳಿದೆ. ಅವರಿಗೆ ಟಿಕೆಟ್ ನೀಡಿದರೆ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕೆಇಳಿಸುವುದಾಗಿ ಪಕ್ಷದ ಸ್ಥಳೀಯ ಮುಖಂಡರೇ ಘೋಷಿಸಿರುವುದು ಬಿಕ್ಕಟ್ಟನ್ನು ಸೃಷ್ಟಿಸಿದೆ. ಮೂರೂ ಪಕ್ಷಗಳಿಗೂ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT