ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಟಿಕೆಟ್: ಭುಗಿಲೆದ್ದ ಅಸಮಾಧಾನ

Last Updated 8 ಏಪ್ರಿಲ್ 2013, 7:03 IST
ಅಕ್ಷರ ಗಾತ್ರ

ಗದಗ: ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟಗೊಂಡ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಒಟ್ಟು 18 ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರು.

ಇದು ವರಿಷ್ಠರಿಗೆ ತಲೆನೋ ವಾಗಿತ್ತು. ಅಂತು ಹೈಕಮಾಂಡ್ ಅಳೆದು ತೂಗಿ ಮುಂಡರಗಿಯ ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿದೆ. ಇದು ಇತರೆ ಅಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಬಂಡಾಯ ಶಮನಗೊಳಿಸಲು ನಾಯಕರು ತೆರೆಮರೆಯಲ್ಲಿ ಪ್ರಯತ್ನ ಆರಂಭಿಸಿದ್ದಾರೆ.

2007ರ ಪುರಸಭೆ ಚುನಾವಣೆಯಲ್ಲಿ ರಾಮಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಅಣ್ಣಪೂರ್ಣ ದೇಸಾಯಿ ಅಧ್ಯಕ್ಷರಾಗಿ ನೇಮಕ ಮಾಡುವ ಸಂಬಂಧ ವಿಪ್ ಉಲ್ಲಂಘನೆ ಮಾಡಿದ ಆರೋಪ ರಾಮಕೃಷ್ಣ ಅವರ ಮೇಲಿದೆ.  ಪ್ರಬಲ ಆಕಾಂಕ್ಷಿಗಳಾದ ಭೀಮಸಿಂಗ್ ರಾಠೋಡ್, ಎಚ್.ಆರ್.ನಾಯಕ, ರಾಮಣ್ಣ ಲಮಾಣಿ, ದೇವಪ್ಪ ಲಮಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೀಪಕ್ ಲಮಾಣಿ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಅವರಿಗೆ ತೀವ್ರ ನಿರಾಸೆಯಾಗಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಹೆಸರು ಸಂಭವನೀಯರ ಪಟ್ಟಿಯಲ್ಲಿ ಪ್ರಕಟಗೊಂಡಿದ್ದರಿಂದ ಅವರಿಗೆ ಟಿಕೆಟ್ ದೊರೆಯಲಿದೆ ಎಂಬ ಲೆಕ್ಕಾಚಾರ ನಡೆದಿತ್ತು. ಆದರೆ ಹೈಕಮಾಂಡ್ ಮುಂಡರಗಿಯ ರಾಮಕೃಷ್ಣ ದೊಡ್ಡಮನಿಗೆ ಮನ್ನಣೆ ನೀಡಿರುವುದು ಅಚ್ಚರಿ ಮೂಡಿಸಿದೆ. ಅತೃಪ್ತರು ಮುಂದಿನ ನಡೆ ಕುರಿತು ತಮ್ಮ ಬೆಂಬಲಿಗರ ಜತೆ ಚರ್ಚೆಯಲ್ಲಿ ತೊಡಗಿದ್ದಾರೆ.

ಕೆಲವರು ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಕಾರ್ಯಕರ್ತರ ಹಾಗೂ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ರಾಮಕೃಷ್ಣ ದೊಡ್ಡಮನಿ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆ ಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಕರ್ನಾಟಕ ಜಾನಪದ ಕಲಾ ತಂಡ ಸೇರಿದಂತೆ ವಿವಿಧ ಪ್ರಕಾರದ ಕಲಾ ತಂಡಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಹಲವು ವರ್ಷಗಳಿಂದ ಕುರುಕ್ಷೇತ್ರ ನಾಟಕದಲ್ಲಿ  ಶ್ರಿ ಕೃಷ್ಣನ ಪಾತ್ರ ನಿರ್ವಹಿಸಿ ಜನಮನ ಗೆದ್ದಿದ್ದಾರೆ.

ಪಟ್ಟಿಯಲ್ಲಿ ಹೆಸರಿಲ್ಲ: ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿ ಹೆಸರು ಇಲ್ಲದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಆರಂಭದಲ್ಲಿ ಕೆಜೆಪಿ ಜತೆ ಗುರುತಿಸಿಕೊಂಡು ಮತ್ತೆ ಬಿಜೆಪಿಗೆ ಮರಳಿದರು.  ವರಿಷ್ಠರು ಟಿಕೆಟ್ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಎರಡನೇ ಪಟ್ಟಿಯಲ್ಲಿ ರಾಮಣ್ಣ ಲಮಾಣಿ ಹೆಸರು ಪ್ರಕಟಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದ ಜಯಶ್ರೀ ಹಳ್ಳೆಪ್ಪನವರ ಈ ಬಾರಿ ಬಿಎಸ್‌ಆರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕಳೆದ ಒಂದು ತಿಂಗಳುಗಳಿಂದ ಪ್ರಚಾರವನ್ನು ನಡೆಸುತ್ತಿದ್ದಾರೆ.
ಕೆಜಿಪಿ ಪಕ್ಷದಿಂದ ಪಿ. ಗಿರಿಧರ, ಶೋಭಾ ನಾಯಕ್, ಶಿವಪ್ಪ ಲಮಾಣಿ ನಡುವೆ ಪೈಪೋಟಿ ನಡೆದಿದೆ. ಜೆಡಿಎಸ್‌ನಿಂದ ಎಂ.ಕೆ. ಲಮಾಣಿ, ಗುರಪ್ಪ ವಡ್ಡರ, ರಾಜಶ್ರೀ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT