ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ಹಡಗು'

Last Updated 23 ಏಪ್ರಿಲ್ 2013, 8:54 IST
ಅಕ್ಷರ ಗಾತ್ರ

ಮುಧೋಳ/ಜಮಖಂಡಿ/ಮಹಾಲಿಂಗಪುರ: `ಕೇವಲ ಬಿಜೆಪಿ ಪಕ್ಷದ ಕುರಿತು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಾವಿಕನಿಲ್ಲದ ಹಡಗು' ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ ವ್ಯಂಗ್ಯವಾಡಿದರು. .

ಪಟ್ಟಣದ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
`ಕಾಂಗ್ರೆಸ್ ನಾಯಕರಲ್ಲಿ ಕೇವಲ ಕಾಲೆಳೆಯುವ ಕುತಂತ್ರದಿಂದ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅಸುಯೆ ಹೆಚ್ಚಾಗಿದೆ. ಆದರೆ ಬಿಜೆಪಿಯಲ್ಲಿ ಜಗದೀಶ ಶೆಟ್ಟರ್ ನಾಯಕರಾಗಿದ್ದು, ಮುಂದಿನ ಮುಖ್ಯಮಂತ್ರಿ ಎಂದು ಈಗಾಗಲೇ ಘೋಷಿಸಲಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ಕಾಂಗ್ರೆಸ್‌ಗೆ ಇಲ್ಲ' ಎಂದರು. `ಕಾಂಗ್ರೆಸ್‌ನ ನಾಯಕರು ಬಿಜೆಪಿಯ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಗುಜರಾತ್ ಚುನಾವಣೆ ಉತ್ತರ ನೀಡಿದೆ. ಕರ್ನಾಟಕದಲ್ಲೂ ಪ್ರಜ್ಞಾವಂತ ಮತದಾರಿದ್ದು, ಬಿಜೆಪಿಗೆ ಮತ ನೀಡಿ ಆಶಿರ್ವದಿಸುತ್ತಾರೆ ಎಂಬ ನಂಬಿಕೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಕ್ಷೇತ್ರದಲ್ಲಿ ಕಳೆದ 19 ವರ್ಷಗಳಿಂದ ಜಾತ್ಯತೀತವಾಗಿ ಎಲ್ಲ ಕೋಮುಗಳೊಂದಿಗೆ ಮಧುರ ಬಾಂಧವ್ಯ ಹೊಂದಿದ್ದಾರೆ. ಕ್ಷೇತ್ರಕ್ಕೆ ಅಭಿವೃದ್ಧಿಯ ಮಹಾಪುರವನ್ನೆ ಹರಿಸಿ ರಾಜ್ಯದಲ್ಲೆ ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ದಾಖಲೆ ಅಂತರದಿಂದ ಕಾರಜೋಳ ಅವರನ್ನು ಆಯ್ಕೆ ಮಾಡಬೇಕು' ಎಂದು ಮನವಿ ಮಾಡಿದರು.

ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಮತ ಬಿಜೆಪಿಗೆ ನೀಡುವಂತೆ ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, `ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನಾನು ಹೇಳಿಕೊಳ್ಳುವದಿಲ್ಲ. ಯಾಕೆಂದರೆ ಕ್ಷೇತ್ರದ ಮತದಾರರಿಗೆ ಆಗಿರುವ ಅಭಿವೃದ್ಧಿ ಕುರಿತು ತಿಳಿವಳಿಕೆ ಇದೆ' ಎಂದರು.  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ರಾಮಣ್ಣ ತಳೇವಾಡ, ಎಲ್.ಕೆ.ಬಳಗಾನೂರ, ಗುರುರಾಜ ಕಟ್ಟಿ, ರಾಜು ಪಾಲೋಜಿ ಉಪಸ್ಥಿತರಿದ್ದರು.

ತಾಲ್ಲೂಕು ಘಟಕದ  ಅಧ್ಯಕ್ಷ ಬಿ.ಎಚ್.ಪಂಚಗಾವಿ ಸ್ವಾಗತಿಸಿದರು. ರಾಜೇಂದ್ರ ಟಂಕಸಾಲಿ ನಿರೂಪಿಸಿದರು. ಬಸವರಾಜ ಮಾನೆ ವಂದಿಸಿದರು.

ಜಮಖಂಡಿ ವರದಿ
ಜಮಖಂಡಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ತೆರೆದಾಳ ಕ್ಷೇತ್ರದ ಅಭ್ಯರ್ಥಿ ಸಿದ್ಧು ಸವದಿ, ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಹಾಗೂ ಮುಧೋಳ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರ ಜಮಖಂಡಿ, ಮಹಾಲಿಂಗಪುರ, ಬೀಳಗಿ, ಅಮಿನಗಡ, ಗುಳೇದಗುಡ್ಡಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು.

ಪಟ್ಟಣದ ಬಸವ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. `ಅಟಲ್ ಬಿಹಾರಿ ವಾಜಪೇಯಿ ಈ ದೇಶದ ಮಾದರಿ ಪ್ರಧಾನಿ ಎನಿಸಿದ್ದರು. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಮಾದರಿ ಪ್ರಧಾನಿ ಆಗಲಿದ್ದಾರೆ. ಆದರೆ ಮನಮೋಹನ ಸಿಂಗ್ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದಾರೆ. ಹಗಲು ಹೊತ್ತಿನಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾತ್ರಿ ವೇಳೆಯಲ್ಲಿ ಮಾಯಾವತಿ, ಮಮತಾ ಬ್ಯಾನರ್ಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ನಿಯಂತ್ರಿಸುತ್ತಾರೆ' ಎಂದು ಲೇವಡಿ ಮಾಡಿದರು.

ವಿಧಾನಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಬಿಜೆಪಿ ಗ್ರಾಮೀಣ ಮಂಡಳ ಘಟಕದ ಅಧ್ಯಕ್ಷ ಮಹಾದೇವ ನ್ಯಾಮಗೌಡ, ಗುರುಪಾದ ಮೆಂಡಿಗೇರಿ, ಡಾ.ಸುಖದೇವ ಶರ್ಮಾ, ಸುರೇಶಗೌಡ ಪಾಟೀಲ, ರಾಜೇಸಾಬ್ ಕಡಕೋಳ ಇದ್ದರು. ಶಾಸಕ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಕೇಶ ಲಾಡ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT