ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷದಿಂದ ಕಟು ಟೀಕೆ: ಕಿರಣ್ ಬೇಡಿ ಸಮರ್ಥನೆ...

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಾವು ಅತಿಥಿಯಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರ ಸಂಘಟಕರಿಂದ ಹೆಚ್ಚುವರಿ ವಿಮಾನ ದರ ಪಡೆದ ಆರೋಪ ಅಣ್ಣಾ ಹಜಾರೆ ತಂಡದ ಕಿರಣ್ ಬೇಡಿ ವಿರುದ್ಧ ಕೇಳಿಬಂದಿದೆ.

ಕಾರ್ಪೊರೇಟ್ ಕಂಪೆನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೇಡಿ ವಿಮಾನದಲ್ಲಿ ತೆರಳಿದ್ದರು. ನಿವೃತ್ತ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಆ ಸಂದರ್ಭದಲ್ಲಿ ತಾವು ಶೌರ್ಯ ಪದಕ ಪುರಸ್ಕೃತೆ ಎಂಬುದನ್ನು ಬಳಸಿಕೊಂಡು ಏರ್ ಇಂಡಿಯಾ ವಿಮಾನ ದರದಲ್ಲಿ ಶೇ 75ರಷ್ಟು ರಿಯಾಯಿತಿ ಪಡೆದಿದ್ದರು.

ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದ ಅವರು ನಂತರ ಸಂಘಟಕರಿಂದ ಬಿಜಿನೆಸ್ ದರ ಪಡೆದಿದ್ದಾರೆ ಎಂಬುದು ಈಗ ಕೇಳಿಬಂದಿರುವ ದೂರು.

ಕಾಂಗ್ರೆಸ್ ಪ್ರಹಾರ
ಈ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಹಾರ ಮಾಡಿರುವ ಕಾಂಗ್ರೆಸ್, ಗಾಂಧಿವಾದಿಯ ಸಹಚರರ  ನಿಜವಾದ ಬಣ್ಣ ಬಯಲಾಗಿದೆ ಎಂದು ಟೀಕಿಸಿದೆ.ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮುನ್ನ ತಾವು ಸ್ವಚ್ಛ ಎಂಬುದನ್ನು ಬೇಡಿ ಸಾಬೀತುಪಡಿಸಬೇಕು.
 
ಒಂದೆಡೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇವರೇ ಹೀಗೆ ಮಾಡಿರುವುದು ವಿಪರ್ಯಾಸ.   ಈ ಪ್ರಕರಣದಲ್ಲಿ ತಾವು ನಿರ್ದೋಷಿ ಎಂಬುದನ್ನು ಬೇಡಿ ಸಾಬೀತುಪಡಿಸಬೇಕು ಎಂದು ಪಕ್ಷದ ವಕ್ತಾರ ರಷೀದ್ ಅಲ್ವಿ ಸವಾಲು ಹಾಕಿದ್ದಾರೆ.

ಅಣ್ಣಾ ತಂಡದ ಒಬ್ಬರು, ಜಮ್ಮು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎನ್ನುತ್ತಾರೆ. ಮತ್ತೊಬ್ಬರು ಸಂಸತ್ತಿಗಿಂತ ಅಣ್ಣಾ ಮೇಲು ಎನ್ನುತ್ತಾರೆ. ಇದೀಗ ಕಿರಣ್ ಬೇಡಿ ವಿರುದ್ಧ ಹೆಚ್ಚುವರಿ ವಿಮಾನ ದರ ಪಡೆದ ಆರೋಪ ಕೇಳಿಬಂದಿದೆ ಎಂದಿದ್ದಾರೆ.

ಅಣ್ಣಾ ತಂಡದ ವಿರುದ್ಧ ಮುಂಚಿನಿಂದಲೂ ಟೀಕಾಸ್ತ್ರ ಪ್ರಯೋಗಿಸುತ್ತಲೇ ಬಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಇದೊಂದು ಗಂಭೀರ ಆರೋಪ ಎಂದಿದ್ದಾರೆ.

ಆಪಾದನೆ ನಿರಾಕರಣೆ : ಆದರೆ, ತಮ್ಮ ವಿರುದ್ಧದ ಆರೋಪವನ್ನು ಬೇಡಿ ಅಲ್ಲಗಳೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದವರು ಬಿಜಿನೆಸ್ ದರ್ಜೆಯಲ್ಲಿ ಪ್ರಯಾಣಿಸಬಹುದೆಂದು ತಿಳಿಸಿದ್ದರು. 

ಹಣ ಉಳಿದರೆ ಅದನ್ನು ನಾನು ನಡೆಸುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ (ಇಂಡಿಯಾ ವಿಷನ್ ಪ್ರತಿಷ್ಠಾನ) ಕಾರ್ಯಕ್ಕೆ ಬಳಸಿಕೊಳ್ಳಬಹುದೆಂದು ಸ್ವಇಚ್ಛೆಯಿಂದ ಸಾಮಾನ್ಯ ದರ್ಜೆಯಲ್ಲೇ ಪ್ರಯಾಣಿಸಿದ್ದೆ. ಈ ಎರಡು ದರ್ಜೆಗಳ ವ್ಯತ್ಯಾಸದ ಹಣವನ್ನು ಸ್ವಂತಕ್ಕಾಗಿ ಬಳಸಿಕೊಂಡಿಲ್ಲ ಎಂದಿದ್ದಾರೆ.

`ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪಗಳನ್ನು ಸವಾಲಾಗಿ ಸ್ವೀಕರಿಸಲು ಬಯಸುತ್ತೇನೆ. ಉಪನ್ಯಾಸ ಹಾಗೂ ಪುಸ್ತಕಗಳಿಂದ ಗೌರವ ಸಂಭಾವನೆ ರೂಪದಲ್ಲಿ ನನಗೆ ಸಾಕಷ್ಟು ಹಣ ಬರುತ್ತದೆ. ಅದನ್ನು ಪ್ರತಿಷ್ಠಾನದ ಕಾರ್ಯಕ್ಕೇ ವಿನಿಯೋಗಿಸುತ್ತಿದ್ದೇನೆ~ ಎಂದು ಬೇಡಿ ವಿವರಿಸಿದ್ದಾರೆ.
 
`ನಾನು ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದು ಸಂಘಟಕರಿಗೂ ಗೊತ್ತಿತ್ತು. ಪ್ರತಿಷ್ಠಾನಕ್ಕಾಗಿ ಹಣ ಉಳಿಸಲು ನಾನು ಹೀಗೆ ಮಾಡಿದ್ದರ ಬಗ್ಗೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು~ ಎಂದೂ ತಿಳಿಸಿದ್ದಾರೆ.

ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಾದ ಸ್ವಂತ ಹೆಸರಿನಲ್ಲಿ ನಾನು ಹಣ ನಗದು ಮಾಡಿಕೊಳ್ಳುವುದಿಲ್ಲ. ಆಹ್ವಾನ ಪತ್ರಿಕೆ ಪ್ರತಿಷ್ಠಾನದ ಹೆಸರಿಗೇ ಬರುತ್ತದೆ. ಚೆಕ್ ಕೂಡ ಪ್ರತಿಷ್ಠಾನದ ಹೆಸರಿನಲ್ಲೇ ಇರುತ್ತದೆ.

ಹೀಗಾಗಿ ಹಣ ಉಳಿದರೂ ಅದು ಪ್ರತಿಷ್ಠಾನದ ನಿಧಿಗೇ ಹೋಗುತ್ತದೆ. ನನ್ನನ್ನು ಆಹ್ವಾನಿಸಬಯಸುವ ಕೆಲವು ಎನ್‌ಜಿಒಗಳಿಗೆ ವಿಮಾನ ದರ ಭರಿಸಲು ಕಷ್ಟವಾದಾಗ ಪ್ರತಿಷ್ಠಾನದ ಹಣದಿಂದಲೇ ತೆರಳುತ್ತೇನೆ ಎಂದಿದ್ದಾರೆ. ಈ ವಿವರಣೆಯಿಂದಾಗಿ, ನನ್ನ ವಿರೋಧ ಆರೋಪ ಮಾಡಲು ಹವಣಿಸುತ್ತಿರುವವರಿಗೆ ಹತಾಶೆಯಾಗಿರಬಹುದು ಎಂದು ಬೇಡಿ ಪ್ರತಿಕ್ರಿಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT