ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪರ ಮಲ್ಲಿಕಾರ್ಜುನ ಖರ್ಗೆ ಪ್ರಚಾರ

Last Updated 23 ಏಪ್ರಿಲ್ 2013, 8:50 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲೆ ಅನೇಕ ಸಜ್ಜನ ರಾಜಕಾರಣಿಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ. ಆದರೆ, ಇದೇ ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಜಿಲ್ಲೆಯ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ದೂರಿದರು.

ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಸೋಮವಾರ ಮಧ್ಯಾಹ್ನ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ರ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ  ಅವರು ಮಾತನಾಡಿದರು.

ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಡಳಿತ ಸಂಪೂರ್ಣವಾಗಿ ಹದಗೆಟ್ಟಿದೆ. ಕೇವಲ ಭ್ರಷ್ಟಾಚಾರ, ಲಂಚ, ಹಗರಣಗಳೇ ಬಿಜೆಪಿಯ ಸಾಧನೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೂ 3ಕ್ಕೆ ಪ್ರತಿ ಕೆಜಿಯಂತೆ ಪ್ರತಿ ಕುಟುಂಬಕ್ಕೆ ಮಾಸಿಕ 35 ಕೆಜಿ ಅಕ್ಕಿ ನೀಡುತ್ತಿದ್ದುದನ್ನು ಬಿಜೆಪಿ ಕಡಿಮೆ ಮಾಡಿದೆ. ಪ್ರಸಕ್ತ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 2 ರೂಪಾಯಿಗೆ ಪ್ರತಿ ಕೆಜಿಯಂತೆ 35 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಲಾಗಿದೆ ಎಂದರು.

ಬಿಪಿಎಲ್- ಎಪಿಎಲ್ ಕಾರ್ಡ್ ಹಂಚಿಕೆಯಲ್ಲಿ ಗೊಂದಲಗಳು ಮೂಡಿದ್ದು, ಶ್ರೀಮಂತರಿಗೆ ಬಿಪಿಎಲ್, ನಿಜವಾದ ಫಲಾನುಭವಿಗಳಿಗೆ ಎಪಿಎಲ್ ಕಾರ್ಡ್ ನೀಡುವ ಮೂಲಕ ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ದೂರಿದರು.

ಎಸ್.ಎಂ. ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ರಾಜ್ಯದಾದ್ಯಂತ 13 ಲಕ್ಷಕ್ಕೂ ಅಧಿಕ ಮನೆ ಕಟ್ಟಿಸಿಕೊಡಲಾಗಿದ್ದು, ಬಿಜೆಪಿ ಸರ್ಕಾರ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ. ಇಂದಿರಾ, ಅಂಬೇಡ್ಕರ್, ವಾಲ್ಮೀಕಿ ಆವಾಸ್ ಯೋಜನೆಗಳು ಜಾರಿಯಲ್ಲಿದ್ದರೂ, ನಿಜವಾದ ಫಲಾನುಭವಿಗಳೂ ಲಂಚ ನೀಡಬೇಕಾಗಿದೆ. ಬಂದ ಹಣವನ್ನೆಲ್ಲಾ ಶಾಸಕರೇ ನುಂಗಿದ್ದೂ ಅಲ್ಲದೇ, ಕೇವಲ ತಮ್ಮ ಬೆಂಬಲಿರಿಗೆ ಮಾತ್ರ ಯೋಜನೆಯಡಿ ಮನೆ ಮಂಜೂರು ಮಾಡಿದ್ದಾರೆ ಎಂದು ಅವರು ಮೂದಲಿಸಿದರು.

ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರ ದೊರೆಯಲಿಲ್ಲ ಎಂಬ ಅನುಕಂಪದಿಂದ 2008ರಲ್ಲಿ ಬಿಜೆಪಿಗೆ ಮತ ನೀಡಿದ ಜನ ಅವಕಾಶ ನೀಡಿದ್ದರು. ಆದರೆ, 5 ವರ್ಷದ ಅವಧಿಯಲ್ಲಿ ಪಕ್ಷವೇ ಮೂರು ಭಾಗವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಅಧಿಕಾರಕ್ಕಾಗಿ ಹಲವು ಪಕ್ಷಗಳು ಹುಟ್ಟಿಕೊಂಡು ಬಡಿದಾಡುತ್ತಿವೆ ಎಂದು ಅವರು ಟೀಕಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 130 ರಿಂದ140 ಸ್ಥಾನಗಳಲ್ಲಿ ಕಾಂಗ್ರೆಸ್  ಗೆಲುವು ಖಚಿತ. ಬಳ್ಳಾರಿಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬರುವ 6 ಜಿಲ್ಲೆಗಳ 40 ಸ್ಥಾನಗಳನ್ನು ಮತದಾರರು ಗೆಲ್ಲಿಸಿದಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 371ನೇ ಕಲಂನ ಸಂಪೂರ್ಣ ಅನುಷ್ಠಾನಕ್ಕೆ ಶಕ್ತಿ ನೀಡಿದಂತಾಗುತ್ತದೆ ಎಂದರು.

ಟಿಕೆಟ್ ಸಿಗಲಿಲ್ಲ ಎಂದು ಆಕಾಂಕ್ಷಿಗಳು ಮುನಿಸಿಕೊಳ್ಳದೆ, ಒಂದಾಗಿ ಜನರ ಬಳಿ ಬಂದು ಮತ ಯಾಚಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಅವರು ಮುಖಂಡರಿಗೆ ಸಲಹೆ ನೀಡಿದರು.

ಮಾಜಿ ಸಂಸದ ಕೋಳೂರು ಬಸವನಗೌಡ, ಬಿಜೆಪಿಯ ಮಲ್ಲಮ್ಮ ಅವರು ಇದೇ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರು.
ನಗರ ಮತ್ತು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಗಳಾದ ಅನಿಲ್ ಲಾಡ್, ಹೊನ್ನೂರಪ್ಪ (ವಂಡ್ರಿ), ಮಾಜಿಸಚಿವ ಅಲ್ಲಂ ವೀರಭದ್ರಪ್ಪ ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಮಾಜಿ ಸಚಿವ ಸಗೀರ್ ಅಹ್ಮದ್, ಅರುಣ್‌ಕುಮಾರ್, ವಿ.ಎನ್. ಗಿರಿಮಲ್ಲಪ್ಪ, ಆಂಧ್ರದ ರಾಜ್ಯಸಭೆ ಸದಸ್ಯ ಎಚ್.ಪಿ. ಬೈರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT