ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆಗಳ ಸುರಿಮಳೆ

Last Updated 17 ಡಿಸೆಂಬರ್ 2010, 13:05 IST
ಅಕ್ಷರ ಗಾತ್ರ

ಬೆಂಗಳೂರು:  ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲು ಗ್ರಾಮ ಪಂಚಾಯಿತಿಗೊಂದು ಟ್ರ್ಯಾಕ್ಟರ್, ಟಿಲ್ಲರ್, ಕೊಯಿಲು, ಒಕ್ಕಣೆ ಯಂತ್ರ; ಪ್ರತಿ ಗ್ರಾಮಕ್ಕೂ ಸಂಪರ್ಕ ರಸ್ತೆ; ರೈತ ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿಸುವ ಉದ್ದೇಶದ ಇ-ಮಾರುಕಟ್ಟೆ ಸೌಲಭ್ಯವನ್ನು ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಒದಗಿಸುವುದು; ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ...

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಈ ಭರವಸೆಗಳನ್ನು ನೀಡಲಾಗಿದೆ.

ಪಕ್ಷದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಅನೇಕ ಜನಪರ ಯೋಜನೆಗಳ ಅನುಷ್ಠಾನದ ಭರವಸೆ ನೀಡಿದರು. ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಪಡೆದರೆ ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸುವ ಆಶ್ವಾಸನೆ ನೀಡಿದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರವೇ ಖರೀದಿಸಿದ ಟ್ರ್ಯಾಕ್ಟರ್ ಇಟ್ಟು, ಅದನ್ನು ಕಡಿಮೆ ದರದಲ್ಲಿ ರೈತರಿಗೆ ಬಾಡಿಗೆಗೆ ನೀಡುವುದು. ಇದೇ ರೀತಿ ಟಿಲ್ಲರ್, ಕೊಯಿಲು, ಒಕ್ಕಣೆ ಯಂತ್ರಗಳನ್ನೂ ಇಟ್ಟು, ರೈತರಿಗೆ ಅನುಕೂಲ ಮಾಡುವ ಯೋಜನೆ ಜಾರಿ ಮಾಡಲಾಗುವುದು. ಗ್ರಾಪಂಗಳಿಗೆ ಈಗಿರುವ ನೇರ ಅನುದಾನವನ್ನು ರೂ 5ರಿಂದ 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರತಿ ಗ್ರಾಪಂ ಕಚೇರಿಯಲ್ಲೂ ಇ-ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುವುದು. ರೈತರೇ ತಮ್ಮ ಬಳಿಯ ಉತ್ಪನ್ನಗಳನ್ನು ನೇರವಾಗಿ ಆನ್‌ಲೈನ್ ಮೂಲಕ ಮಾರಾಟ ಮಾಡಲು ಅನುಕೂಲ ಮಾಡಲಾಗುವುದು ಎಂದರು.

ಪಂಚಾಯಿತಿ ವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸಲಾಗುವುದು. ಪ್ರತಿ ಬಾರಿಗೂ ಮೀಸಲಾತಿ ಬದಲಾಗುತ್ತಿದ್ದು, ಅದನ್ನು ಕನಿಷ್ಠ ಎರಡು ಅವಧಿಗೆ ನಿಗದಿಗೊಳಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಆಡಳಿತ ಕುರಿತ ಸಾರ್ವಜನಿಕ ದೂರುಗಳ ಪರಿಶೀಲನೆಗೆ ಲೋಕಾಯುಕ್ತ ಮಾದರಿಯಲ್ಲಿ ‘ಒಂಬುಡ್ಸ್‌ಮನ್’ ಸ್ಥಾಪಿಸಲಾಗುವುದು ಎಂದು ಹೇಳಿದರು.

ಹಳ್ಳಿಗಳಲ್ಲಿ ಸಾಮರಸ್ಯ ಕಾಪಾಡಲು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರನ್ನೊಳಗೊಂಡ ‘ಗ್ರಾಮ ರಕ್ಷಣಾ ದಳ’ ರಚಿಸಲಾಗುವುದು. ಗ್ರಾಮೀಣ ಭಾಗದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಇದು ನೆರವಾಗಲಿದೆ ಎಂದರು.

ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವುದಾಗಿಯೂ ಅವರು ಹೇಳಿದ್ದಾರೆ. ವಸತಿ ರಹಿತ ಸುಮಾರು 15 ಲಕ್ಷ ಕುಟುಂಬಗಳಿದ್ದು, ಎಲ್ಲರಿಗೂ ಮನೆ ನಿರ್ಮಿಸಿಕೊಡಲಾಗುವುದು. ಪ್ರತಿ ಹೋಬಳಿಯಲ್ಲೂ ವೃದ್ಧರ ರಕ್ಷಣಾ ಕೇಂದ್ರಗಳನ್ನು ತೆರೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರತಿ ಗ್ರಾಮಗಳಲ್ಲೂ ಹಂತ ಹಂತವಾಗಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುವುದು; ಗ್ರಾಮ ಅರಣ್ಯ ಸಮಿತಿಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವುದು; ಬಂಜರು ಭೂಮಿಯನ್ನು ಸ್ವಸಹಾಯ ಗುಂಪು ಮತ್ತು ಭೂರಹಿತ ಗುಂಪುಗಳಿಗೆ ಗುತ್ತಿಗೆ ಕೊಡುವುದರ ಮೂಲಕ ಜಮೀನು ರಕ್ಷಣೆ ಮಾಡುವುದು; ಐದು ವರ್ಷಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಸಂಪರ್ಕ ರಸ್ತೆ ನಿರ್ಮಿಸುವುದು; ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ಗಿರಿಜನರ ಬಸ್ತಿಗಳು ಮತ್ತು ಇನ್ನಿತರ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು ಎಂದು ವಿವರಿಸಿದರು.

2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ 64 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿಲ್ಲ. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರತಿ ಮನೆಗೂ ಶೌಚಾಲಯ ಒದಗಿಸುವ ಕೆಲಸ ಮಾಡುತ್ತೇವೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಕ್ರಮ. ಸಾಚಾರ್ ಸಮಿತಿಯ 15 ಅಂಶಗಳ ಜಾರಿಗೂ ಒತ್ತು ನೀಡಲಾಗುವುದು ಎಂದು ಹೇಳಿದರು.

ಕೃಷಿಗೆ ಪೂರಕವಾಗಿರುವ ಪಶುಸಂಗೋಪನೆ ಮತ್ತು ಕುರಿ ಸಾಕಾಣಿಕೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಮುಖಂಡರಾದ ಅಲ್ಲಂ ವೀರಭದ್ರಪ್ಪ, ಮೋಟಮ್ಮ, ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಪ್ರೊ ಬಿ.ಕೆ.ಚಂದ್ರಶೇಖರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ.ಎಲ್.ಶಂಕರ್ ಸೇರಿದಂತೆ ಇತರರು ಹಾಜರಿದ್ದರು.

ಕಾಂಗ್ರೆಸ್ ಬಿಡಲ್ಲ: ಸಿದ್ದರಾಮಯ್ಯ

ಬೆಂಗಳೂರು: ‘ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಈ ಕುರಿತು ಕೆಲವರು ಆಧಾರರಹಿತವಾದ ಮತ್ತು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

‘ಪಕ್ಷ ಬಿಡುತ್ತಾರೆಂದು ಗುಲ್ಲೆಬ್ಬಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿದರೆ ಮೂರ್ಖರಾಗುವುದು ಖಚಿತ’ ಎಂದು ವದಂತಿ ಹಬ್ಬಿಸುವವರಿಗೆ ತಿರುಗೇಟು ನೀಡಿದರು. ಪಕ್ಷದ ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಅವರು ‘ಬಂಗಾರಪ್ಪ ಪಕ್ಷ ಬಿಟ್ಟಿದ್ದರಿಂದ ಹೆಚ್ಚಿನ ಹಾನಿಯೇನೂ ಆಗುವುದಿಲ್ಲ’ ಎಂದರು.

‘ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕೆ.ಎ.ಎಸ್ ಅಧಿಕಾರಿಗಳನ್ನೇ ನೇಮಕ ಮಾಡಲಾಗುವುದು. ನಮ್ಮ ಪಕ್ಷ ಹೆಚ್ಚು ಕಡೆ ಗೆದ್ದರೆ, ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಹೇಳಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 4600 ಕೋಟಿ ರೂಪಾಯಿ ಹಂಚಿಕೆ ಮಾಡಿದ್ದು, ಇದರಲ್ಲಿ ಕೇವಲ ರೂ 492 ಕೋಟಿ ಮಾತ್ರ ಬಳಸಲಾಗಿದೆ. ಉಳಿದ ಹಣದ ಬಳಕೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT